ಗುರುವಾರ, ನವೆಂಬರ್ 4, 2010

ನಿನ್ನ ಮೈತ್ರಿ


ನೂರಾರು ಅನುಭವದ ಅನುಯಾಯಿ ಆಗಿ ಮನ
ಕಂಗೆಟ್ಟು ಚಡಪಡಿಸಿ ನೋಯುತಿರಲು,
ಬಂಧು ಗೆಳೆಯರ ಆಸೆ ಧ್ರುವದೂರವಾಗಿರಲು,
ಸಾವೊಂದೆ ಶರಣೆಂದು ಬೇಯುತಿರಲು,
ನಿನ್ನೊಲವು ರೇವಾಗಿ ಬಳಿಕಂಡು 'ಬಾ'  ಎಂದು
ಸೆಳೆದು ಬಾಚುತ ತನ್ನ ಎದೆಗಪ್ಪಿತು ;
ಕಣ್ಣರಳಿ ನೋಡಿದರೆ ಸ್ವರ್ಗಸುಂದರ ನಗರಿ,
ಸೊಬಗು ಬೆಡಗಿನ ಸಿರಿಗೆ ಮೈ ನವಿರಿತು!

ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೊ ಸಲ
ಎನಿಸುವುದು ; ನನಗಿಂತ ಇಲ್ಲ ಧನ್ಯ.
ನಾನಪಾತ್ರನೋ ಏನೊ ನಿನ್ನಮಲ ಪ್ರೇಮಕ್ಕೆ
ನನಗಂತು ದಕ್ಕಿಹುದು ಜೀವದಾನ!

ಒಮ್ಮೊಮ್ಮೆ ಅಗಲಿಕೆಯ ಆಶಂಕೆ ಹದ್ದಾಗಿ
ಎರಗಿ, ಸುಖವನೆ ಕದ್ದು ಹಾರುವಂತೆ
ತೋರುತಿದೆ, ತೊರೆಯದಿರು; ಹರಿದಿರುವ ಜೀವನಕೆ
ಅಣೆಕಟ್ಟ ಬಿಗಿಯದಿರು ನಾರುವಂತೆ!

ಕಣ್ಣ ಬೆದರಿಸುತಿಹದು ತಿಮಿರಭಾರ
ಗುರಿಯ ಮಂದಿರ ದೂರ ; ನಾನಧೀರ -
ಬಾಳ ದುರ್ಗಮ ಪಥದ ಪಾದಯಾತ್ರಿ,
ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ!

                                                       - ಕೆ.ಎಸ್. ನಿಸಾರ್ ಅಹಮದ್
                                                            ' ಮನಸು ಗಾಂಧಿ ಬಜಾರು '

ಕಾಮೆಂಟ್‌ಗಳಿಲ್ಲ: