ಗುರುವಾರ, ನವೆಂಬರ್ 4, 2010

ನೆನಪಾಗಿ ಬಾರದಿರು

ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೆ -
ಎಂದೊ ನಲಿಸಿದ ನಗೆಯ ಸಂಚಿನಲ್ಲಿ ;
ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ -
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.

ಮರೆತ ಗೋರಿಯ ಕೆದಕಿ ಹಸಿ ಎಲುಬುಗಳನಾಯ್ದು
ತುಂಬದಿರು ಮುಂಬಾಳ ಮಂಚದಲ್ಲಿ ;
ಸಿಂಗರಿಸದಿರು ನನ್ನ ಚಿತೆಯ, ನಗೆಯನು ಹೊಯ್ದು
ನಾನೆ ಬೆಳೆಸಿದ ಹೂವ ಗೊಂಚಲಲ್ಲಿ.

ಯೌವನದ  ಹೊಸ್ತಿಲಲಿ ಕಟ್ಟಿದ್ದ ತೋರಣದ
ಕನಸ ತರಗೆಲೆಗಳನು ಬರಿದು ಮಾಡು ;
ಅದರ ಅಲುಗಾಟಕ್ಕೆ ನೆನಪು ಎಚ್ಚರವಾಗಿ
ಕೆದಕದಿರಲೆದೆ ತುಂಬ ಜೇನುಗೂಡು.

ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು :
ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ ;
ಹೃದಯದೊಳನೋವುಗಳ ಬಿರಿಸುವರೆಮರೆಮಾತು -
ಮಾಯ್ದ ಗಾಯವ ಮತ್ತೆ ಗೀಚಬೇಡ!

ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು
ಅಂದೆಂದೊ ಮುಗಿದಿರುವ ದೀಪಗಳನು ;
ಚಂದಾದ ರೂಪಗಳನೊಂದೊಂದೆ ತಂದೆಸೆದು
ಮನದಲ್ಲಿ ಬಿತ್ತದಿರು ತಾಪಗಳನು.

                                                                 - ಕೆ.ಎಸ್. ನಿಸಾರ್ ಅಹಮದ್
                                                                    ' ನಿತ್ಯೋತ್ಸವ '

ಕಾಮೆಂಟ್‌ಗಳಿಲ್ಲ: