ಗುರುವಾರ, ನವೆಂಬರ್ 11, 2010

ವಿರಹ ಚಿತೆ

ಕಣ್ಣಿನಲ್ಲಿಯೆ ಬೀಳುಕೊಟ್ಟು
ಮನಸಿನಲ್ಲಿಯೆ ಮುತ್ತು ಕೊಟ್ಟು
ತವರು ಮನೆಯೊಳಗವಳ ಬಿಟ್ಟು
ಮನಸಿಲ್ಲದ ಮನಸಿನಿಂದೆ
ಒಬ್ಬನೆ ಹಿಂತಿರುಗಿ ಬಂದೆ.
ಮರುಭೂಮಿಯ ಗಾಳಿಯಂತೆ
ಸುಯ್ದಲೆದಲೆದೂ
ಬಾಯಾರಿತು ವಿರಹ ಚಿಂತೆ
ದಾರಿಯುದ್ದಕೂ.

ನೆನಹಿನುರಿಯ ಬಯಲಿನಲ್ಲಿ
ಸಾಗಿತಿರುಳು ರೈಲಿನಲ್ಲಿ,
ನಿದ್ದೆಯೆಲ್ಲ ಬರಿಯ ಕನಸು
ಎದೆಯೊಳೇನೊ ಕಿಚ್ಚು, ಕಿನಿಸು.
ಯಾರ ಮೇಲೊ? ಏಕೊ? ಮುನಿಸು!
ಏನೊ ಇಲ್ಲ, ಏನೊ ಬೇಕು,
ಎಂಬ ಬಯಕೆ, ಕುದಿವು, ರೋಕು!
ಇಂತು ಸಾಗಿತು ಶನಿ ಇರುಳು ;
ಅರಿಲ ಬೆಳಕು ಬಾಡಿತು ;
ಚಿತೆಯಾಯಿತು ಕವಿಯ ಕರುಳು ;
ಹಗಲೋ ಹೆಣವೊ ಮೂಡಿತು!

ಪ್ರೇತದಂತೆ ನಡೆದೆ ಕೊನೆಗೆ,
'ಉದಯ ರವಿ'ಗೆ ನಮ್ಮ ಮನೆಗೆ.
ಮನೆಯೆ? ಅಯ್ಯೊ ಬರಿಯ ಸುಳ್ಳು :
ಗೋಡೆ ಸುತ್ತಿದೊಂದು ಟೊಳ್ಳು!
ಕಿಟಕಿ, ಬಾಗಿಲು, ಕಲ್ಲು, ಮಣ್ಣು ;
ಬುರುಡೆಯೆಲುಬಿಗೆ ತೂತುಗಣ್ಣು!
ಪ್ರೇಮ ಕುಣಪವಾಗಿ ನಿಂತೆ
ಚಿತೆಯಾಗಲ್ ವಿರಹ ಚಿಂತೆ!

ನಿನ್ನ ನೆನಪೊ ಮನೆ ತುಂಬಿದೆ ;
ಮನೆಯೆ ಮಾತ್ರ ನೀನಿಲ್ಲದೆ
ಸರ್ಪಶೂನ್ಯವಾಗಿದೆ :
ರಾಮಚಂದ್ರ, ಇಂತೆ ಕುದಿದೆ :
ಸೀತೆ ಕಳೆಯಲತ್ತು ಕರೆದೆ ;
ತಿಳಿಯಿತಿಂದು ನಿನ್ನೆದೆ!

ಹೇಮಲತೆ, ಪ್ರೇಮಲಕ್ಷ್ಮಿ,
ನನ್ನ ಪಂಚ ಪ್ರಾಣಲಕ್ಷ್ಮಿ,
ಗಾಳಿ ನೀನೆ ; ಬೆಳಕು ನೀನೆ ;
ಉಲ್ಲಾಸದ ಉಸಿರು ನೀನೆ ;
ನನಗೆ ಮನೆಗೆ ಎಲ್ಲ ನೀನೆ!
ನೀನೆ ಕವಿಗೆ ಹೃದಯ, ಭಾವ,
ಮೇಣಾತ್ಮಕೆ ರಸದ ಜೀವ!

ಗೃಹಿಣಿ, ನೀನೆ ಗೃಹದ ದೇವಿ ;
ನೀನು ದೂರ ಹೋದರೆ
ಮಸಣದೊಂದು ಹಾಳುಬಾವಿ
ಗೃಹವಿದು! ' ಮನೆ' ಎಂಬರೆ?

ತಪ್ಪಲು ಗೃಹಲಕ್ಷ್ಮಿಯ ಜೊತೆ
ಒಪ್ಪಿದ ಮನೆಯೆ ವಿರಹ ಚಿತೆ!
ಹೇಮಾಂಗಿನಿ, ಪ್ರೇಮಸತಿ,
ಕಾತರನತಿ ನಿನ್ನ ಪತಿ!
ಮರುಭೂಮಿಗೆ ಅಮೃತಧಾರೆ,
ಕಗ್ಗತ್ತಲೆಗೆಸೆವ ತಾರೆ,
ನನ್ನ ಹೃದಯ ತಾಪವಾರೆ
'ಉದಯ ರವಿ'ಗೆ ಬೇಗ ಬಾರೆ!
ಏದುತ್ತಿದೆ ಪ್ರಾಣಪಕ್ಷಿ
ವಿರಹಾತಪ ತಾಪಕೆ!
ಆಶೀರ್ವಾದವಾಗಿ ಬಾ
ವಿಯೋಗದೀ ಶಾಪಕೆ!

                               - ಕುವೆಂಪು
                                 ' ಜೇನಾಗುವಾ '


ಕಾಮೆಂಟ್‌ಗಳಿಲ್ಲ: