ಮಂಗಳವಾರ, ನವೆಂಬರ್ 2, 2010

ಬಂದೇ ಬರುವುವು

ಬಂದೇ ಬರುವುವು ಬಂಗಾರದ
ಹೊಂಗಿರಣದ ನಾಳೆಗಳು
ಬಣ್ಣ ಬಣ್ಣದಾ ಬದುಕನು ಬರೆಯಲು
ತೆರೆದಿವೆ ಹಾಳೆಗಳು

ಎಲ್ಲೆಲ್ಲೂ ಹೊಗೆಯಾಡಿದೆ ನೋವೇ
ಅಳುಕದಿರಲಿ ಮನವು
ಕಲಕದೆ ಬಾಳು ತಿಳಿವುದೆ ಹೇಳು
ಜಗದ ದುಃಖ ನೋವು?

ನಾಳೆಯ ಬಾಳಿನ ಸವಿಯನು ಕನಸದ
ಜೀವವಿಲ್ಲ ಜಗದಿ;
ಆಸೆಯ ಅಮೃತದ ಸಿಂಚನವಾಗಲು
ಆಗದೆ ಕೆರೆ ಅಂಬುಧಿ?

ಬಂದೇ ಬರಲಿವೆ ನಾಳೆಗಳು
ಬೆಳಕಿನ ತಾರೆಗಳು
ಬಂದೇ ಬರಲಿವೆ ನಾಳೆಗಳು
ಹೊನ್ನಿನ ತೀರಗಳು
                                                      
                                                           -  ಡಾll ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ

ಕಾಮೆಂಟ್‌ಗಳಿಲ್ಲ: