ಮಂಗಳವಾರ, ಡಿಸೆಂಬರ್ 24, 2013

ನನ್ನ ಹಣತೆ

ಹಣತೆ ಹಚ್ಚುತ್ತೇನೆ ನಾನೂ,
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ,

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯಾ" ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.

                            - ಜಿ. ಎಸ್. ಶಿವರುದ್ರಪ್ಪ
                               ’ ಗೋಡೆ ’ (೧೯೭೨)

5 ಕಾಮೆಂಟ್‌ಗಳು:

Ananda_KMR ಹೇಳಿದರು...

GSS ravaru hinde yaavagalo kotta sandarshanadalli ee kavitheya kone saalugallanna heliddanna monne TV9 nalli nodidde

ಬಾಬಾ ಹಿರೇಮನಿ ಹೇಳಿದರು...

Super

Unknown ಹೇಳಿದರು...

ಧನಾತ್ಮಕ ಚಿಂತನೆಯನ್ನು ಹೊಂದಿದ ಪದ್ಯ..

Hanamant ಹೇಳಿದರು...

ಇಲ್ಲಿ ಹಣತೆ ೩ಭಾಗವಾಗಿ ಕಾಣುತ್ತದೆ..
ಮೊದಲನೆ ನುಡಿಯಲ್ಲಿ ದೀಪವಾದರೆ, ಎರಡನೇ ನುಡಿಯಲ್ಲಿ ಜ್ಞಾನವಾಗುತ್ತದೆ..
ಕೊನೆಗೆ ಅದು ಪ್ರಾಣವಾಗಿ ಕಂಡು ಬರುತ್ತದೆ...


ಅದುವೇ ನನ್ನ ಹಣತೆ...

Crushed soul ಹೇಳಿದರು...

ಸಾರಾಂಶ ಎಲ್ಲಿ ಸಿಗುತ್ತದೆ