ಸೋಮವಾರ, ಡಿಸೆಂಬರ್ 30, 2013

ರೆಕ್ಕೆಯ ಹುಳು

ರೆಕ್ಕೆಯ ಹುಳುವೊಂದು ಗಕ್ಕನೆ ನಿಂತಿತು
ಎದುರಿಗೊಂದು ಸೊಡರ
ಕಂಡಿತುI ಬಂಗಾರದ ಸದರI
ಉರಿಧಾಂಗI ಸುಖಗಳ ತುದಿಶಿಖರII
ದಳದಳ ಅರಳಿದೆ ಬೆಂಕಿಯ ಹೂವಾ
ತಿರುಗಲಿಲ್ಲ ನದರಾ
ಹಾರಿತುI ಹುಳುವಿನ ಮೈಖಬರಾII

ಏನ ಮಾದಕಾ ಬೆಳಕಿನೀ ಸುಖ
ಕೆರಳತಾವ ಕನಸ
ಕುದ್ದಾವI ಹುಳುವಿನ ಮೈಮನಸI
ಹೆಂಗರೆI ಮರೆತೆನಿಷ್ಟು ದಿವಸII
ಸೂರೆಹೋದವೋ ಮಿರಿಮಿರಿ ಬೆಳಕಿನ
ಸಿರಿಗೆ ನಮ್ಮ ಚಿತ್ತಾ
ವಿರಹಕI ಎದಿಹೊತ್ತಿತು ತುರತಾII

ಈ ಬೆಳಕಿನಾಳ ಅದು ಎಸೆವ ಗಾಳ
ಮೈಸೆಳೆವ ಸೂಜಿಗಲ್ಲಾI
ಬೆನ್ನಿನI ಹುರಿ ಬಿಗಿದವಲ್ಲಾI
ತೊಡೆಯಲಿi ಮಿಂಚು ಹರಿದವಲ್ಲಾII
ಅಂತರಂಗದಾ ಶಾಂತಸಾಗರ
ಕಲಕಿ ಹೋದವಲ್ಲಾ
ಹೊಸ ಧಗೆI ಬಾಯಿ ಬಿಡುವುದಲ್ಲಾII

ಹೊಟ್ಟೆಯೊಳಗೆ ಹೊಸ ಲೋಕವಿಟ್ಟು ಹೊಳೆ-
ದೀರಿ ಕ್ಷಿತಿಜಧಾಂಗ
ಕೈಮಾಡಿI ಕರೆಯತೀರಿ ನಮಗI
ಜೀರ್ಣಿಸI ಲಾರೆವಿಂಥ ಬೆರಗII
ಮುಳುಗಿ ಮುಳುಗಿ ನಾ ಏಳಬೇಕು ನಿಮ
ಬೆಳಕಿನಾಗ ಮೊದಲ
ಇಲ್ಲವೆI ನುಂಗಬೇಕು ನಿಮಗII

ಹಾರಿ ಹಾರಿ ಹೌಹಾರಿ ಏರಿ
ಸರಿಮಿಂಚತಾವ ಸೊಡರ
ಸೊಡರಿನI ಮ್ಯಾಲ ಹುಳದ ನದರ
ಅಡರುವ ಮುನ್ನವೆ ರೆಕ್ಕೆ ಸುಟ್ಟವೋ
ಹುಳಾ ಬಿತ್ತು ಕಳಚಿ
ಒಳಗಿನI ದೀಪ ಬಂತು ಬೆಳಗಿ.

                                     - ಡಾ. ಚಂದ್ರಶೇಖರ ಕಂಬಾರ

ಕಾಮೆಂಟ್‌ಗಳಿಲ್ಲ: