ಸೋಮವಾರ, ಡಿಸೆಂಬರ್ 23, 2013

ಈ ಸುಂದರ ಸಂಜೆ ಬರಿ ಬಂಜೆ

ಈ ಸುಂದರ ಸಂಜೆ- 
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

ಹೊಲಗಳ ಸಿರಿಸೊಂಪು
ಕಣ್ಗಿಂಪು!
ಚೆಂಬಿಸಿಲಿನ ಶಾಂತಿ
ನಗೆ ಕಾಂತಿ!

ಕಣಿವೆಯ ತೋಪಿನಲಿ
ಪಸುರಿನಲಿ
ಕೋಗಿಲೆಯುಲಿಯುತಿದೆ;
ನಲಿಯುತಿದೆ!

ನೀಲಿಯ ದೂರದಲಿ
ಗಿರಿಪಂಕ್ತಿ
ಗಗನದ ತೀರದಲಿ
ದಿಗ್ದಂತಿ!

ದೆಸೆ ಏಳೂ ಸೊನ್ನೆ,
ಓ ರನ್ನೆ;
ಎಂಟನೆಯದು ಮಾತ್ರ
ಮಧುಪಾತ್ರ!

ಮನೆಯಿದೊ 'ಉದಯರವಿ'!
ವಿರಹಿ ಕವಿ!
ಪಶ್ಚಿಮದಸ್ತ ಛವಿ
ಪಾಳು ಗವಿ!

ಈ ಸುಂದರ ಸಂಜೆ-
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

                        - ಕುವೆಂಪು
                            ' ಪ್ರೇಮ ಕಾಶ್ಮೀರ '

ಕಾಮೆಂಟ್‌ಗಳಿಲ್ಲ: