ಶುಕ್ರವಾರ, ಜನವರಿ 14, 2011

ಸಂಕ್ರಾಂತಿ ಹಬ್ಬದ ಶುಭಾಶಯಗಳು...

ಸ್ವಾಗತ ಸಂಕ್ರಾಂತಿಯೇ!

ಸ್ವಾಗತ ಸಂಕ್ರಾಂತಿಯೇ
ಕಾಲ ತರುವ ಕ್ರಾಂತಿಯೇ,
ಹೊಸ ಬಾಳಿಗೆ ಹಸೆ ಹಾಸುವ
ಮಿತ್ರಾರುಣ ಕಾಂತಿಯೇ

ಬರಿಹೆಜ್ಜೆಗೆ ಕಿರುಗೆಜ್ಜೆಯ ಕಟ್ಟುವಂಥ ಕರವೆ,
ಬಳಲಿದ ಕಾಲಿಗೆ ಬಲವನ್ನು ಊಡುವಂಥ ವರವೆ,
ಕನಸಿನ ಹೆದೆ ಚಿಮ್ಮಿ ಬಂದ ಆಕಾಂಕ್ಷೆಯ ಶರವೆ,
ಬವಣೆಯ ಭಾರವ ನೀಗಿ, ಬಾ ಓ ಸಂಕ್ರಾಂತಿಯೇ!

ಕಾಣದೊಂದು ಪಥಕಳೆಯುವ ಅನಿರೀಕ್ಷಿತ ಪಯಣವೆ
ಹೊಸ ಕಾಣ್ಕೆಗೆ ಎವೆ ಬಿಚ್ಚುವ ಬೆಳಕಿನೊಂದು ನಯನವೆ
ಎಳ್ಳು ಬೆಲ್ಲ ಜಲ್ಲೆ ಕಬ್ಬು ನಾಂದಿಯಾದ ಅಯನವೆ
ಭಾವೀ ದಿನಗಳ ಭಾಗ್ಯದ ಕದತೆರೆಯುವ ಕಿರಣವೆ!

ಬರಿ ಗಾಳಿಯೇ? ಬರಿ ಜಲವೇ? ಬರಿ ಬೆಳಕೇ? ಅಲ್ಲ,
ಬದಲಾಗಲಿ ಮುಡಿಯ ತನಕ ಇಡೀ ದೇಶವೆಲ್ಲ,
ಸತ್ಯ ಸ್ವಾಭಿಮಾನಯುಕ್ತ, ಬೇಧಮುಕ್ತ ಮನವ
ನೀಡಲಿ ಈ ಸಂಕ್ರಾಂತಿ ನೀಡಲಿ ಹೊಸ ದಿನವ

                                                  - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಇಂದಿನ ಸಂಕ್ರಾಂತಿ

ಬಳಲಿದ ಬಾಳಿಗೆ ಭರವಸೆಯಾಗಲಿ
ಇಂದಿನ ಸಂಕ್ರಾಂತಿ
ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ
ಮೂಡಲಿ ಶುಭಶಾಂತಿ

ದಿಕ್ಕುಗಳೆಲ್ಲವು ಪ್ರಸನ್ನವಾಗಲಿ
ಬೀಸಲಿ ತಂಗಾಳಿ
ಬತ್ತಿದ ನದಿಗಳ ಪಾತ್ರವು ತುಂಬಲಿ
ಗಂಗೆಯೆ ಮೈತಾಳಿ
ತೂಗುತಿರಲಿ ಹೊಲಗದ್ದೆಗಳು
ತೆನೆಯ ಹಾರವಾಗಿ
ಹಣ್ಣು ತುಂಬಿ ಮರ ನಗುತಿರಲಿ
ಬಣ್ಣದ ತೇರಾಗಿ!

ಬಾ ಸಂಕ್ರಾಂತಿಯೇ ವರವಾಗಿ
ಜೀವಸ್ವರವಾಗಿ
ಸೋತ ದೇಹಗಳು ಚೇತನವ
ತುಂಬಲು ನೆರವಾಗಿ
ಬಡವರ ದೀನರ ಬಾಳಿನಲಿ
ತೃಪ್ತಿಯ ನಗೆಯಾಗಿ
ನನಸಾಗುವ ಹೊಸ ಕನಸುಗಳ
ಬಿತ್ತುವ ಕರವಾಗಿ

                                                       - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಗುರುವಾರ, ಜನವರಿ 13, 2011

ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ!
ಮಳೆ ಗಾಳಿಗೆ ನೆನೆನೆನೆದು
                  ಸೋರುತಿಹುದು ಮನೆಯ ಮಾಳಿಗಿ                ಪ

ಸೋರುತಿಹುದು ಮನೆಯ ಮಾಳಿಗಿ
ದಾರು ಗಾಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
                        ಮೇಲಕೇರಿ ಮೆಟ್ಟಲಾರದೇ                        

ಮುರಕ ತೊಲೆಯು ಹುಳಕ ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರಗಿಂಡಿ
                  ಮರೆತು ನಾನು ಮುಚ್ಚಲಾರದೇ                  

ಕರಿಕಿ ಕಸವು ಹುಲ್ಲ ಹತ್ತಿ
ದುರಿತ ಭವದ ಇರುವಿ ಮುತ್ತಿ
ಜಲದ ಭರದಿ ತಿಳಿಯ ಮಣ್ಣು
      ಒಳಗೆ ಹೊರಗೆ ಏಕವಾಗೀ    
             
ಕಾಂತೆ ಕೇಳ ಕರುಣದಿಂದ
ಬಂತು ಕಾಣೆ ಹುಬ್ಬೀ ಮಳೆಯು
ಈಗ ಶಿಶುವಿನಾಳ ಗ್ರಾಮಕ
                             ಮೇಘರಾಜ ಇಳಿದ ಮೇಲೆ                             

                                    - ಶಿಶುನಾಳ ಶರೀಫ ಸಾಹೇಬ
ಮೋಹನ ಮುರಲಿ

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು, ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

                                                             - ಎಂ. ಗೋಪಾಲಕೃಷ್ಣ ಅಡಿಗ

ಸೋಮವಾರ, ಜನವರಿ 10, 2011

ನೋಡಬಾರದು ಚೀಲದೊಳಗನು

ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ
ವ್ಯಾನಿಟಿ ಹೆಸರಿನಲ್ಲಿ ಏನೆಲ್ಲ ಇರಬಹುದು
ಬಯಲು ಮಾಡುವರೇ?

ಒಂದು ಕನ್ನಡಿ ಹಣಿಗೆ ಕಾಡಿಗೆ ಕರಡಿಗೆ
ಪೆನ್ನು ಪೌಡರು ಕ್ಲಿಪ್ಪು ಸೆಂಟು
ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು
ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.
ಇರಬಹುದು ಹುಣಿಸೆ ಬೀಜಗಳೂ!
ವ್ಯಾನಿಟಿ ಬ್ಯಾಗಿನಲ್ಲಿ ಬಟಾಣಿಯೇ ಇರಬೇಕೆಂದು
ಉಂಟೇ ಯಾರ ರೂಲು?
ಇದ್ದೀತು ಶುಂಠಿ ಪೆಪ್ಪರಮೆಂಟೂ, ಕಂಫಿಟ್ಟೂ.

ಒಣಗಿ ರೂಹುಗಳಾದ ಎಲೆ-ಹೂಗಳಿರಬಹುದು
ಇರಬಹುದು ಯಾರದೋ ಮನೆ ದಾರಿ ನಕ್ಷೆ
ಮರದ ಮುಚ್ಚಿಗೆಯಡಿಯ ಕೆಂಪು ನೆಲದ ತಂಪು
ತೇದಷ್ಟೂ ಸವೆಯದಾ ನೆನಪು
ಟಿಕ್ಕಿ ಎಲೆ ಪರಿಮಳ

ಮರಿ ಇಡುವ ನವಿಲುಗರಿ
ಕಾಪಿಟ್ಟಿರಬಹುದು ಪುಟ್ಟ ದಿನಗಳನ್ನು
ಇರಬಹುದು ಎಲ್ಲಿನದೋ ಮರಳು-ಮಣ್ಣು.

ಅರೆ ಬರೆದಿಟ್ಟ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
ಗುಸುಗುಟ್ಟುತಿರಬಹುದು ಗಂಟಲಲ್ಲೇ
ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು
ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
ಚಂದದಕ್ಷರ ಬಂಧದಲಿ
ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
ಉತ್ಕಂಠ ರಾಗದ ಮತ್ತು ಇರಬಹುದು
ಕರಿಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
ಹೆಸರಿಲ್ಲದ ಫೋಟೋ ಕೂಡ ಇರಬಹುದು!

ಬಾಲ್ಯ ಯೌವನ ವೃದ್ಧಾಪ್ಯ ನೆರಳುಗಳು
ಸೇರಿಕೊಂಡಿರಬಹುದು ಆ ಕೋಶದಲ್ಲಿ
ಗಾರ್ಹಸ್ಥ್ಯ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ
ಒಂದಕೊಂದಕೆ ಅರ್ಥಾಂತರವಿಲ್ಲದೆಯೂ
ಇಲ್ಲವೇ ಹಲವು ಜೊತೆಗಳು?
ಹಾಗೆಯೇ ಈ ಚೀಲದೊಳಗಿನ ಲೋಕಗಳು!

ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ
ಒಂದೇ ಎಂದೀಗ ತೂಗಿ ನೋಡುವಿರೇನು?
ಬೆಪ್ಪು ಕಾಪುರುಷರೇ
ವ್ಯರ್ಥ ಕೈ ನೋವೇಕೆ?
ತೂಗಲಾರಿರಿ ತಪ್ಪು ಸಮೀಕರಣವನು.

ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು. ಹುಡುಕಿ
ತೆಗೆಯಲಾರಿರಿ ಏನನೂ
ಇಣುಕಲಾದರೂ ಹಾಗೆ ಮಾಡಲಾಗದು ನೀವು
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು.

                                          - ವೈದೇಹಿ
ಒಂದು ಮಳೆಯ ಸಂಜೆ

ಮೋಡ ಕೂಡಿದ ಬಾನು; ವಿಪರೀತ ಧಗೆ ಕೂಡ.
ಒಮ್ಮೆಗೇ ಬೀಸುತ್ತಿದೆ ಮೋಡಗಾಳಿ
ಬಸ್ಸು ಹಿಡಿಯಲು ನಾನು ಸ್ಟಾಪಿನಲ್ಲಿದ್ದೇನೆ
ಪಕ್ಕದಲ್ಲೇ ಒಂದು ದೀಪ ಕಂಭ

ಎಲ್ಲಿದ್ದವೋ ಏನೊ ಒಮ್ಮೆಗೇ ಮುಕುರಿದವು
ದೀಪಕ್ಕೆ ನೂರಾರು ದೀಪದ ಹುಳು
ಮತ್ತೆ ಮರುಕ್ಷಣದಲ್ಲೆ ರೆಕ್ಕೆ ಕಳಚುದುರುತಿವೆ 
ರಸ್ತೆಯಗಲಕ್ಕೂನು ಮುಲು ಮುಲು ಮುಲು

ಮೊದಲೆ ಸಂಜೆ ಹೊತ್ತು, ಜತೆಗೆ ಮಳೆ ಬರುವಂಥ
ಸೂಚನೆಗೆ ಧಾವಂತ ವಾಹಕರಿಗೆ
ಭರ್ರನೋಡಿಸುತ್ತಾರೆ ರಿಕ್ಷ ಸ್ಕೂಟರು ಕಾರು
ಹಾರಿಬೀಳುವ ಹುಳದ ರಾಶಿ ಮೇಲೆ

ಕರುಳು ಹಿಂಡಿದ ಹಾಗೆ ನುಲಿಯುತಿದೆ. ಈ ಪಾಟಿ
ರಣಹಿಂಸೆ ಅನಿವಾರ್ಯವೆನ್ನುವಂತೆ
ಮಂದಿ ನೋಡಿಯು ನೋಡದಂತೆ ನಿಂತಿದ್ದಾರೆ
ತಾವೂನು ಕಂಭಗಳೆ ಎನ್ನುವಂತೆ.

ಹುಟ್ಟು ಸಾವಿನ ಲೀಲೆ ಕಣ್ಮುಂದೆ ನಡೆಯುತ್ತಿದೆ
ಕೊಲೆ, ಸಾವು ಎರಡು ಸಹ ಒಂದೆ ಎನಿಸಿ
ನಿರ್ಭಾವ ಯಂತ್ರಗಳ ಒಳಗೆ ಜನಸಮ್ಮರ್ದ
ತಮ್ಮೆಲ್ಲ ಭಾರ ಗಾಲಿಗೆ ದಾಟಿಸಿ.

ನಮ್ಮ ಬಸ್ಸೂ ಬಂತು. ಕೂತೆ ಸೀಟಿನ ಮೇಲೆ.
ಏನೊ ಚಿಟಿ ಚಿಟಿ ಸದ್ದು ಕಿವಿಯ ಒಳಗೆ
ಗಂಟಲನ್ನೊತ್ತುತ್ತಿದೆ ಜೀವ ಬಾಯಿಗೆ ಬಂದು
ವಿಲಿಗುಟ್ಟುವುದು ಪಾದ ಬಸ್ಸಿನೊಳಗೆ.

                                                - ಎಚ್.ಎಸ್. ವೆಂಕಟೇಶ ಮೂರ್ತಿ
                                               ' ನದೀತೀರದಲ್ಲಿ '
ಜಾಗರದ ಕೊನೆಗೆ

ರಾತ್ರಿ ಪಾಳಿ ಮುಗಿಸಿದ ದಾದಿ
ಬಸ್ಟಾಪಿನಲ್ಲಿದ್ದಾಳೆ. ಆಗಷ್ಟೇ ಊದಿನ ಕಡ್ಡಿ
ಹಚ್ಚಿಕೊಂಡ ರಿಕ್ಷಾ ಹಾಲಿನ ವ್ಯಾನು ಹಾದಿವೆ
ಎಮರ್ಜೆನ್ಸಿಗೆಂದು ಪಜಾಮದಲ್ಲೇ ಬಂದಿದ್ದ ಡಾಕ್ಟ್ರು
ಗೇಟಿನ ಬಳಿ ಹಾರ್ನು ಬಾರಿಸಿ ಹೊರಟಿದ್ದಾರೆ
ಕನಸಿನ ಸುರಂಗಗಳಲ್ಲೂ ಓಡಿ ಓಡಿ ದಣಿದವರು
ರಸ್ತೆ ಬದಿ ಮೆಲ್ಲಗೆ ವಿಗ್ರಹಗಳಂತೆ ಏಳುತ್ತಿದ್ದಾರೆ

ಟಿಫಿನ್ ಕ್ಯಾರಿಯರ್ ಗಳು ಹೂವಿನ ಅಂಗಡಿಗಳನ್ನು
ಹಲೋ ಅಂದಿವೆ. ಸೈಕಲ್ ಬೆಲ್ ಗಳು ಕೊಳದೊಳಗಿನ
ಪ್ಲಾಸ್ಟಿಕ್ ಕಮಲಗಳನ್ನು ಕರೀತಿವೆ.
ಸಿಪ್ಪೆಯನ್ನು ಕಿತ್ತಳೆಯೆಂದು ತಿಳಿದು
ಮೋಸ ಹೋಗಿದ್ದಾನೆ ಊದ್ದ ಕಸಬರಿಗೆಯ ವಾರ್ಡ್ ಬಾಯ್.
ಮಚ್ಚರದಾನಿಗೆಂದು ಯಾರೋ ರಾತ್ರಿ
ಆಕಾಶಕ್ಕೆ ಹೊಡೆದ ಮೊಳೆಗಳು ಹಾಗೇ ಇವೆ

ರೆಕ್ಕೆಗಳ ಫಡಫಡಿಸಿ ಮರ
ಕತ್ತಲ ಕೊಡವಿಕೊಳ್ಳುತ್ತಿದೆ

ಎಲ್ಲ ಆಸ್ಪತ್ರೆಗಳ ಬಾಗಿಲು ತೆರೆಯಲಿ
ಜ್ವರದ ಕಣ್ಣಿನ ಮಕ್ಕಳು ನನ್ನ ಮಡಿಲಿಗೆ ಬರಲಿ
ಕಿರಣ ಸೋಕಿದರೆ ಸಾಕು ಮಾಯಲಿ ಗಾಯ
ಒಡೆಯದಿರಲಿ ಕಂಬನಿಗೆ ಎದೆಯ ಹಾಲು

                                        - ಜಯಂತ ಕಾಯ್ಕಿಣಿ

ಬುಧವಾರ, ಜನವರಿ 5, 2011

ಗಜಲ್ ೧೦

ಹೋಗುವಾಗ ಕಂಬನಿಗಳ ತುಳುಕಿಸದಿರು ಎನ್ನುವನು
ಕಳೆದ ಕ್ಷಣಗಳ ಸವಿಯ ಬಾಡಿಸದಿರು ಎನ್ನುವನು

ಎಂದಿದ್ದರೂ ಮಳೆ ಬೆಟ್ಟಗಳ ಸಂಬಂಧ ನಮ್ಮದು
ಇನಿತಾದರೂ ದೊರೆತದ್ದು ಮರೆಯದಿರು ಎನ್ನುವನು

ಖುಷಿಯೂ ಉದಾಸವೂ ಆಗುವುದು ಅವನು ಬಂದಾಗ
ಕಳೆವ ಕೆಲ ಗಳಿಗೆಯಲಿ ದುಗುಡಗೊಳ್ಳದಿರು ಎನ್ನುವನು

ಸಂಜೆ ಕರಗಿ ಹೋಗುವುದು ನೋಡುನೋಡುತ್ತಿರುವಂತೆ
ಕೆಲವು ತಾಸುಗಳ ಮಿಲನವ ದೂರದಿರು ಎನ್ನುವನು

ಅವ್ಯಕ್ತ ನೋವಿನಲಿ ಅಯ್ಯೊ ದೀಪವೂ ಸುಯ್ಯುತಿದೆ  
ಗಲ್ಲ ತಟ್ಟುತ ಯಾಕೆ ಈ ನಿಟ್ಟುಸಿರು ಎನ್ನುವನು

ನೋವು ತರುವ ಇಂಥ ಪ್ರೀತಿ ಬೇಡವೇ ಬೇಡ
ಮುತ್ತಿಡುತ್ತ ಸಿಗದುದಕೆ ಮರುಗದಿರು ಎನ್ನುವನು

                                          - ಎಚ್.ಎಸ್. ಮುಕ್ತಾಯಕ್ಕ

ಮಂಗಳವಾರ, ಜನವರಿ 4, 2011

ಬೆರಣಿ ತಟ್ಟುವ ಹುಡುಗಿ ಮತ್ತು ಚಂದ್ರಾಮ ದೇವರು

ಕಾಯಕಷ್ಟದ ತರುಣಿ
ಬೆರಣಿ ತಟ್ಟುವಾಕೆ - ಈಗೀಗ ದಿನವೂ
ಎದೆನೋವು, ಆ ನೋವಿಗೆ
ಕಾಯಕವು ಕಾರಣವೇ ಅಲ್ಲ, ಹಾಗಾಗಿ
ಇದ್ದಬದ್ದವರಲ್ಲಿ ಮದ್ದು ಸಿಗಲಿಲ್ಲ.

ಮದ್ದುಂಟೆ ಎದೆನೋವಿಗೆ ಕೇಳುವಳು
ದಿನರಾತ್ರಿ ಆ ಹುಡುಗಿ
ಬಿದ್ದ ಕನಸುಗಳನ್ನು ಮತ್ತು
ಚಂದ್ರಾಮ ದೇವರನ್ನು.

ಒಂದು ಹುಣ್ಣಿಮೆ ಹಗಲು ಬೆರಣಿ ತಟ್ಟುತ್ತಿರಲು 
ಆ ಬೆರಣಿ ಬದಲು ಚಂದ್ರಾಮ ಕಾಣಿಸಿದ, ಕಾಣ
ಕಾಣುತ್ತಿದ್ದಂತೆ ಬೆಳ್ಳನಾಗಸವೇರಿದ.

ಬೆಳ್ಳನಾಗಸವೇರಿ ಮರೆನಿಂತ ಚಂದ್ರಾಮ
ಕಬ್ಬು ಜಲ್ಲೆಯನಿಳಿಸಿ ಕರೆದ - ಬಾ ಹುಡುಗಿ
ಮದ್ದುಂಟು ಎದೆನೋವಿಗೆ, ಎಲ್ಲ
ಮದ್ದಲ್ಲ ಎದೆನೋವಿಗೆ.

ಕಾಯಕಷ್ಟದ ಹುಡುಗಿ ಬೆವರಿನಾ ತವರು
ಬೆರಳ ಚಡಿಯಲ್ಲಿಯೂ ಸೆಗಣಿ ನಾರು
ಉಟ್ಟ ಉಡುಗೆಗೆ ಉಜ್ಜಿ - ಕೈ
ತಟ್ಟಿ ಕುಣಿದಾಡಿದಳು - ಸುತ್ತ
ಯಾರಿಲ್ಲವಾದರೂ
ನೋಡಿ ಚಂದ್ರಾಮ ದೇವರು!
ಎದೆನೋವು ಮದ್ದು ಅರೆದು ತಂದಿರುವಂಥ
ಮೋಡಿ ಚಂದ್ರಾಮ ದೇವರು!
ಕಬ್ಬು ಜಲ್ಲೆಯನೇರಿ ಬರುವೆನೋ ಚಂದ್ರಾಮ
ನಿಂತಲ್ಲೇ ಕೊಂಚ ನಿಂತಿರು
ತಗ್ಗು ಮೋಡವನೇರಿ ತೇಲಿ ಬರುವೇನೋ ದೇವ
ನಿಂತಲ್ಲೇ ನೀನು ನಿಂತಿರು.

ತಬ್ಬಿ ಎದೆನೋವನ್ನೇ ಕಬ್ಬು ಜಲ್ಲೆಯನೇರಿ
ಬರುತ್ತಿದ್ದಂತೆ ಆಕಾಶ ಲೋಕಕ್ಕೆ
ತಗ್ಗು ಮೋಡದ ಮೇಲೆ ಹಿಗ್ಗು ಹೆಜ್ಜೆಯನಿತ್ತು
ನಡೆದಂತೆ ಚಂದ್ರಾಮನುಪ್ಪರಿಗೆಗೆ
ನಿಂತಂತೆ ನಿಂತಿದ್ದ ಚಂದ್ರಾಮ ದೇವರು
ಉರುಟುರುಟು ಬೆರಣಿಯಾಗಿ
ನೆಲಕುರುಳಿ ಚೂರಾಗಿ ಚೆಲ್ಲಿ ಹೋದ!

ಮನಸು ನೆಡುವಾ ಹುಡುಗಿ ಎದೆಯೊಡೆದ ಸದ್ದು
ಕೇಳಿಸಿತೆ ಯಾರಿಗಾದರೂ? ಅದು
ಒಡೆದ ನೋವಿನ ಟಿಸಿಲು
ನಮ್ಮೂರ ಕಡಲು. ಅರ್ಥವಾಗದೆ
ಅಚ್ಚರಿಗೊಂಡರು.

ಎಂತಿದ್ದರೂ ಆಕೆ ಕಾಯಕಷ್ಟದ ಬಾಲೆ
ಹಾಡುಹಗಲಿನ ಗಂಟಲೊತ್ತಿ ಹಿಡಿದು
ಕಾದ ಬಿಸಿಲಲಿ ಬತ್ತಿ ಕೆಳಗಿಳಿದಳು
ಚೂರುಗಳ ಸೇರಿಸಿ ನೆತ್ತಿಯಲಿ ಹೊತ್ತು
ಬಾಯಾರು ಒಲೆಗೆ ತುಂಬಿದಳು

ಆಹ! ನೀಲಿ ಜ್ವಾಲೆ!
ತಣಿದು ಘಮದ ವಿಭೂತಿ!
ಇದು ಯಾವ ಭ್ರಾಂತಿ! ಕಣ್ಣುಜ್ಜಿ ಕೇಳಿದಳು
ಉಂಟೇ ಇಂಥ ಚಂದ್ರಾಮ ಪ್ರೀತಿ ಎಲ್ಲಾದರೂ?

ಹಗಲ ಬಾಗಿಲ ಸರಿಸಿ ವಿಹಾರ ಬಂದ ಚಂದ್ರಾಮ
ಆಚೀಚೆ ತಾರೆ ನಿಹಾರೆ ರೋಹಿಣಿ
ಕಾಣುವಳೇ ಆತನಿಗೆ ಸಣ್ಣ ಗುಡಿಸಲ ಒಳಗೆ
ಚಿಮಿಣಿ ದೀಪದ ವಿರಹಿಣಿ?

ಚಂದ್ರಾಮ ದೇವರಿಗೂ ಬೇಕು ಬಣ್ಣದ ನಡಿಗೆ!
ಸಲ್ಲ ಅವಳಂಥ ಬರಿ ಹುಡುಗಿಗೆ
ಬರಿ ಸಿರಿಯ ಹುಡುಗಿ ಎಷ್ಟು ಕರೆದರೆ ಏನು?
ಕಾಡಿಗುಂಟೇ ಬೆಳದಿಂಗಳು? ಎಂದಿಗೂ
ಕಾಣಿಸದು ಗಾಢ ಮರುಳು

ಕಾದು ಬಾಡಿದ ಹುಡುಗಿ
ತಟ್ಟುತಿರುವಳು ಬೆರಣಿ - ನಿತ್ಯವೂ
ಅನ್ನಕಾಗಿ
ಎದೆನೋವಿನಾ ಮದ್ದು ಹಣೆಗಿರಿಸಿಕೊಂಡೆನೋ
ಕರೆಯ ಬೇಡಿರಿ ನನ್ನ ವೈರಾಗಿ

ಎಂದು ಹಾಡುವಳು - ಸುತ್ತ
ಯಾರಿಲ್ಲವಾದರೂ.

                                      - ವೈದೇಹಿ
ನಾವು ಹುಡುಗಿಯರೇ ಹೀಗೆ...

-೧-
ಹೌದು ಕಣೆ ಉಷಾ
ನಾವು ಹುಡುಗಿಯರೇ ಹೀಗೆ...
ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
ಹೇಳಲೇಬೇಕು ಎನಿಸಿದ್ದನ್ನು
ಹೇಳಹೋಗಿ ಹೆದರಿ ಏನೇನೋ ತೊದಳುತ್ತೇವೆ
'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು
ಬೇರೆ ಏನೇನೋ ದಾರಿ ಹುಡುಕಿ
ಸಂದೇಶ ಮುಟ್ಟಿಸಲು ಹೆಣಗುತ್ತೇವೆ.
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗರು ಕೈ ತಪ್ಪಿದಾಗ
ಮುಸು ಮುಸು ಅಳುತ್ತೇವೆ.
ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
ನಾವೇ ದುರಂತ ನಾಯಕಿಯರೆಂದು
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.
ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.
ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.
ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
ಅರಳುವುದೇ ಇಲ್ಲ ಉಷಾ...

-೨-
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಕೈಗೊಂದು ಕಾಲಿಗೊಂದು ಮಕ್ಕಳಾಗಿ
ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ
'ಅವನು' ಸಿಗುತ್ತಾನೆ.
ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ
ಅಂತ ರೋಷ ತಾಳುತ್ತೇವೆ.
ಆದರೆ ಮೇಲೆ ನಗುನಗುತ್ತಾ 'ಅವನ'
ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.
ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?
ನಾವು ಹುಡುಗಿಯರೇ ಹೀಗೆ...

                                       - ಪ್ರತಿಭಾ ನಂದಕುಮಾರ್

ಶನಿವಾರ, ಜನವರಿ 1, 2011

ಹೊಸವರ್ಷದ ಹಾರ್ದಿಕ ಶುಭಾಶಯಗಳು....

ಮೂಡಿ ಬರಲಿ ಹೊಸ ವರುಷ

ಮೂಡಿ ಬರಲಿ ಹೊಸ ವರುಷದ
ಹೊಸ ಕಾಂತಿಯ ತಾರೆ
ಸಾಗಿ ಬರಲಿ ಮೇಲಿನಿಂದ
ಹೊಸ ಬೆಳಕಿನ ಧಾರೆ

ಹಸಿದ ಪುಟ್ಟ ಕಂದಮ್ಮಗೆ
ಹೊಟ್ಟೆ ತುಂಬ ಹಾಲು
ದುಡಿವೆ ಎನುವ ಕೈ ಕಾಲಿಗೆ
ಕೆಲಸವಿರುವ ಬಾಳು
ಹಬ್ಬುತಿರುವ ಬಳ್ಳಿಗಳಿಗೆ
ಹಂಬಿನ ಆಧಾರ
ಆಗಲಿ ಈ ಹೊಸವರುಷ
ಸಮೃದ್ಧಿಯ ತೀರ

ಬಾಯಿ ತೆರೆದ ಕೆರೆಗಳಿಗೆ
ಕುಡಿವಷ್ಟೂ ನೀರು
ಮುಡಿಬಿಚ್ಚಿದ ಗಿಡಗಳಿಗೆ
ತೊಡುವಷ್ಟೂ ಹೂವು
ಒಣಮಡಿಕೆಯ ಗದ್ದೆಗಳಿಗೆ
ತೆನೆದೂಗುವ ಬಾಳು
ಕರುಣಿಸಲೀ ಹೊಸವರುಷ
ಕವಿತೆಗೆ ಹೊಸ ಸಾಲು

                                           - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಹಾಡುವ ಹಕ್ಕಿಗೆ ಹೂವಿನ ರೆಂಬೆ

ಹಾಡುವ ಹಕ್ಕಿಗೆ ಹೂವಿನ ರೆಂಬೆ
ಕಂದನ ಕೈಗೆ ಬಣ್ಣದ ಗೊಂಬೆ
ಆಶೀರ್ವದಿಸಲಿ ಈ ಹೊಸ ವರ್ಷ
ಪ್ರಾಯದ ಗಂಡಿಗೆ ಪ್ರೀತಿಯ ರಂಭೆ

ಖಾಲಿ ಆಗಸಕೆ ಕಪ್ಪನೆ ಮೋಡ
ಬೆಂದ ಜೀವಕೆ ಬೆಚ್ಚನೆ ಗೂಡ
ಬಾಗಿನ ನೀಡಲಿ ಈ ಹೊಸ ವರ್ಷ
ಕವಿ ಕಲ್ಪನೆಗೆ ಹೊಸ ಹೊಸ ಹಾಡ

ನಲ್ಲಿಯ ಬಾಯಿಗೆ ನಿಲ್ಲದ ನೀರು
ಹೊತ್ತು ಹೊತ್ತಿಗೆ ತಪ್ಪದೆ ಹಾಲು
ಸಿಗುವಂತಾಗಲಿ ಈ ಹೊಸ ವರ್ಷ
ಬಡವರಿಗೂ ಮೈ ತುಂಬಾ ನೂಲು

ಬಿರಿದ ಭೂಮಿಗೆ ಸುರಿಯುವ ಧಾರೆ
ಮಿರಿ ಮಿರಿ ಮಿಂಚಿನ ಗದ್ದೆಯ ಮೋರೆ
ತರುವಂತಾಗಲಿ ಈ ಹೊಸ ವರ್ಷ
ಮೆರೆಯಲಿ ನಾಡಿನ ಭಾಗ್ಯದ ತಾರೆ

                                           - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ