ಮಂಗಳವಾರ, ಫೆಬ್ರವರಿ 21, 2012

ಹಳೆಯ ಹಾಡು

ಹಾಡು ಹಳೆಯದಾದರೇನು
ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒಂದು ಸಾಧನ.

ಹಳೆಯ ಹಾಡ ಹಾಡು ಮತ್ತೆ
ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು
ಜೀವನವನೆ ಕಟ್ಟುವೆ.

ಹಾಡನೊಲಿದು ಕೇಳುವನಿತು
ತೆರೆದ ಹೃದಯ ನನಗಿದೆ
ಅಷ್ಟೆ ಸಾಕು; ಹಾಡು ನೀನು
ಅದನೆ ಕೇಳಿ ಸುಖಿಸುವೆ.

ಹಮ್ಮು ಬಿಮ್ಮು ಒಂದು ಇಲ್ಲ
ಹಾಡು, ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗ-
ಲೆನ್ನ ಮನವು ಕಾದಿದೆ.

                            - ಜಿ. ಎಸ್. ಶಿವರುದ್ರಪ್ಪ
                              'ಸಾಮಗಾನ'
ಕಾವ್ಯಕೆ ನಮನ

ಆ ಕನಸಿನ ಮೂರ್ತಿ
ನನಸಿನೊಳೂ ತಾನಾಯಿತು ಸ್ಫೂರ್ತಿ!

ಆ ಅಮೃತದ ಬಿಂದು
ಈ ಮೊಗ್ಗಿನ ಕಣ್ಗಳ ತೊಳೆದರಳಿಸಿತಿಂದು!

ಆ ಮಂದಾರದ ಗಂಧ
ಈ ಮರ್ತ್ಯದ ಹೂಗಿಳಿಯಿತು ತುಂಬಿ ಸುಗಂಧ!

ಆನಂದದ ಸಿಂಧು
ಬಂದಿಳಿದಾಯಿತು ಸೌಂದರ್ಯದ ಬಿಂದು!

ಮನ ಗೋಡೆಯ ಸುತ್ತು
ಒಡೆಯುತ ಹುಡಿಯಾಗುತ ಬಿತ್ತು!

ನಾ ಬಯಲಲಿ ನಿಂದೆ
ಹಿರಿಯರ ಎದೆಬಾಗಿಲ ಬಳಿ ಬಂದೆ

ನನ್ನವರಾದರು ಎಲ್ಲ
ಇದು ಬಲು ಅಚ್ಚರಿಗೊಳಿಸುವುದಲ್ಲ!

ಜಗದೊಲವಿನ ನಂಟತನ
ಲಭಿಸಿತು, ಅದಕಾಗಿಯೆ ಕಾವ್ಯಕೆ ನಮನ!

                                         - ಜಿ. ಎಸ್. ಶಿವರುದ್ರಪ್ಪ
                                            'ಚೆಲುವು-ಒಲವು'
ತೃಪ್ತಿ 

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
                             
                                   - ಜಿ.ಎಸ್. ಶಿವರುದ್ರಪ್ಪ
                                      'ಸಾಮಗಾನ'

ಸೋಮವಾರ, ಫೆಬ್ರವರಿ 20, 2012

ಸ್ತ್ರೀ

ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ -

ಮರ ಗಿಡ ಹೂ ಮುಂಗುರಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ -

ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ -

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ?

                        - ಜಿ.ಎಸ್. ಶಿವರುದ್ರಪ್ಪ
                           ' ತೆರೆದ ದಾರಿ '
                                                                
ಅನ್ವೇಷಣೆ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ-ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ.

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೇ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ.

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!

                               - ಜಿ.ಎಸ್. ಶಿವರುದ್ರಪ್ಪ
                                 'ಗೋಡೆ'

ಬೆಸುಗೆ


ಮುಂಗಾರಿನ.ಅಭಿಷೇಕಕೆ
ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು.

ಬಾಯಾರಿದ ಬಯಕೆಗಳಲಿ
ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯಂಥ ಹಸಿರು.

ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿಯಿಂಪು
ನಾಳೆಗೆ ನನಸಾಗುವ ಕನಸಿನ
ಹೂವರಳುವ ಕಂಪು.

ಭರವಸೆಗಳ ಹೊಲಗಳಲ್ಲಿ
ನೇಗಿಲ - ಗೆರೆ ಕವನ
ಶ್ರಾವಣದಲಿ ತೆನೆದೂಗುವ
ಜೀವೋತ್ಸವ ಗಾನ.

                         - ಜಿ.ಎಸ್. ಶಿವರುದ್ರಪ್ಪ
                       'ಚಕ್ರಗತಿ'

ಶನಿವಾರ, ಫೆಬ್ರವರಿ 18, 2012

ನೆಲದ ಕರೆ

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನ ದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ.

ನನ್ನೆದೆಯ ಹಸಿರ ಉಸಿರು ಕುಗ್ಗಿದರು
ಬರಲಿಲ್ಲ ನಿಮಗೆ ಕರುಣ
ನನ್ನ ಹೃದಯದಲಿ ನೋವು ಮಿಡಿಯುತಿದೆ
ನಾನು ನಿಮಗೆ ಶರಣ.

ಬಡವಾದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೆ?
ನೀಲಗಗನದಲ್ಲಿ ತೇಲಿಹೋಗುತಿಹ
ನಿಮ್ಮನೆಳೆಯಬಹುದೆ?

ಬಾಯುಂಟು ನನಗೆ, ಕೂಗಬಲ್ಲೆ ನಾ
ನಿಮ್ಮೆದೆಯ ಪ್ರೇಮವನ್ನು
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು.

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ,
ನನ್ನೆದೆಗೆ ತಂಪ ತನ್ನಿ
ನೊಂದ ಜೀವರಿಗೆ ತಂಪನೀಯುವುದೆ
ಪರಮಪೂಜೆಯೆನ್ನಿ!

                                        - ಜಿ. ಎಸ್. ಶಿವರುದ್ರಪ್ಪ
                                         'ಸಾಮಗಾನ'

ಬುಧವಾರ, ಫೆಬ್ರವರಿ 15, 2012

ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ -
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಪ್ರೀತಿ ಇಲ್ಲದ ಮೇಲೆ -
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ -
ದಕ್ಷಿಣಾಫ್ರಿಕದ ಕಗ್ಗತ್ತಲಿಗೆ
ಬೆಳಕು ಮೂಡೀತು ಹೇಗೆ?
ಸೆರೆಮನೆಯ ಕಂಬಿಯ ನಡುವೆ
ಕಮರುವ ಕನಸು ಕೊನರೀತು ಹೇಗೆ?
ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ
ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ -
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?

                         - ಜಿ. ಎಸ್. ಶಿವರುದ್ರಪ್ಪ
                         'ಪ್ರೀತಿ ಇಲ್ಲದ ಮೇಲೆ'
ಬನ್ನಿ ನನ್ನ ಹೃದಯಕೆ 

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೇ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೇ
ಉಸಿರನಿಡುವೆ   
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೇ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೇ
ಬಿರುಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೇ
ಉಸಿರನಿಡುವೆ 
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ಶ್ರುತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿಯುದುರಿದ
ಹೊಂಗನಸಿನ ಮರಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

                        - ಜಿ. ಎಸ್. ಶಿವರುದ್ರಪ್ಪ
                           'ಪ್ರೀತಿ ಇಲ್ಲದ ಮೇಲೆ'
ಬುಧವಾರ, ಫೆಬ್ರವರಿ 1, 2012

ಶ್ರುತಿ ಮೀರಿದ ಹಾಡು 

ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು

ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು?
ತಳೆಯಿತೆ ಈ ನಿಲುವು?

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು!

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು

                               - ಬಿ. ಆರ್. ಲಕ್ಷ್ಮಣರಾವ್
ನಿಂಬೆ ಗಿಡ

ನಾ ಚಿಕ್ಕವನಾಗಿದ್ದ ಅಪ್ಪ ಹೇಳುತ್ತಿದ್ದರು;
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು;
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡ, ಮರಿ
ಆ ಪ್ರೇಮವೂ ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆಗಿಡ ತುಂಬಾ ಚೆಂದ, ನಿಂಬೆಯ ಹೂವು ತುಂಬಾ ಸಿಹಿ
ಆದರೆ ನಿಂಬೆಯ ಹಣ್ಣೊ, ಕಂದ, ತಿನ್ನಲು ಬಹಳ ಹುಳಿ, ಕಹಿ

ಯೌವನದಲ್ಲಿ ನಾನೂ ಒಂದು ಹುಡುಗಿಯ ಪ್ರೇಮಿಸಿದೆ
ಈ ಹುಡುಗಿಯು ನನಗೆ ಊಡಿಸುತ್ತಿದ್ದಳು ದಿನವೂ ಪ್ರೇಮ ಸುಧೆ
ಸೂರ್ಯನತ್ತಲೇ ಸೂರ್ಯಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ;
                                                    IIನಿಂಬೆಗಿಡ ತುಂಬಾ ಚೆಂದII

ನಿಂಬೆಯ ಗಿಡದ ರೆಂಬೆ ರೆಂಬೆಯಲೂ ನೂರು ನೂರು ಮುಳ್ಳು;
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು;
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿಯಿಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ, ಬುದ್ಧಿ ಬಂತೆ? ಎಂದು
                                                   IIನಿಂಬೆಗಿಡ ತುಂಬಾ ಚೆಂದII

                                                      - ಬಿ. ಆರ್. ಲಕ್ಷ್ಮಣರಾವ್
                                                        (ಸ್ಫೂರ್ತಿ: ' ಲೆಮನ್ ಟ್ರೀ' ಎಂಬ ಇಂಗ್ಲಿಷ್ ಹಾಡು)

ಮನಸೇ

ಮನಸೇ, ನನ್ನ ಮನಸೇ
ಏನಾಗಿದೆ ನಿನಗೆ?
ಏಕೆ ಅವಳ ಕಹಿ ನೆನಪೇ
ಜೇನಾಗಿದೆ ನಿನಗೆ?

ಬೇಡವೆಂದರೂ ಏಕೆ ತರುವೆ
ಕಣ್ಮುಂದೆ ಅವಳ ಚಿತ್ರ?
ಬೂಟಾಟಿಕೆ, ಆ ನಾಟಕ
ಅವಳ ವಿವಿಧ ಪಾತ್ರ

ಪದೇ ಪದೇ ಮತ್ತದೇ ಜಾಗಕ್ಕೆ
ನನ್ನ ಸೆಳೆವೆಯೇಕೆ?
ಕಂಡು ಮರುಗಲು ಕುಸಿದ ಅರಮನೆ
ಉರುಳಿದ ಪ್ರೇಮಪತಾಕೆ

ಮಣ್ಣಾಗಿದೆ ನನ್ನ ಪ್ರೀತಿ
ಹೃದಯದ ಗೋರಿಯಲ್ಲಿ
ಗೋರಿಯನ್ನೇಕೆ ಬಗೆಯುವೆ
ಮೋಹದ ಹಾರೆಯಲ್ಲಿ?

                                   - ಬಿ. ಆರ್. ಲಕ್ಷ್ಮಣರಾವ್

ನೀನಿಲ್ಲದಿರುವಾಗ

ನೀನಿಲ್ಲದಿರುವಾಗ, ನಲ್ಲ
ಒಬ್ಬಂಟಿ ನಾನು ಮನೆಯಲ್ಲಿ
ಮೂಡುವುದು ಚಿತ್ರ ಮನದಲ್ಲಿ :

ಭೋರ್ಗರೆದು ಮೊರೆಯುವುದು ಕಡಲು
ನೊರೆಗರೆದು ಕುದಿವ ಅಲೆಗಳು
ಮೇರೆಯರಿಯದ ಪ್ರೀತಿ ನಿನ್ನಲ್ಲಿ ನನಗೆ
ಅದಕೆಂದೆ ಕಡಲೆನ್ನ ಮನ ತುಂಬಿದೆ

ಏರು ಪರ್ವತ ಸಾಲು ಸಾಲು
ಹಿಮ ಕವಿದ ನುಣುಪು ಶಿಖರಗಳು
ಎಷ್ಟು ಎತ್ತರ ನನ್ನ ಪ್ರೀತಿ ನಿನ್ನಲ್ಲಿ!
ಅದಕೆಂದೆ ಪರ್ವತದ ಚಿತ್ರ ಮನದಲ್ಲಿ

ನನ್ನ ಪ್ರೀತಿಗೆ ಅಲೆಯ ಆತಂಕ ನೀಡಿರುವ
ಸಾಗರವೇ, ನಿನಗೆ ವಂದನೆ!
ನನ್ನ ಪ್ರೀತಿಗೆ ನಿನ್ನ ಶಿಖರ ಸೌಮ್ಯತೆ ಕೊಟ್ಟ
ಪರ್ವತವೆ, ನಿನ್ನ ಮರೆವೆನೆ?

                                         - ಬಿ. ಆರ್. ಲಕ್ಷ್ಮಣರಾವ್