ಬುಧವಾರ, ಮೇ 11, 2011

ವೀಣಾಗಾನ

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
 ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.

ತಂತಿಯಿಂಚರದಿ ವಿಪಂಚಿ
ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ
ಪ್ರಾಣ ಪುಳಕಿಸೆ.

                    - ಕುವೆಂಪು
                     ' ಪ್ರೇಮ ಕಾಶ್ಮೀರ '
ನೀನೆನ್ನ ಬಳಿಯಿರಲು

ನೀನೆನ್ನ ಬಳಿಯಿರಲು ಜಗ ತುಂಬಿ ತುಳುಕುವುದು;
ನೀನು ಹೋದರೆ ದೂರ ಶೂನ್ಯವಾಗುವುದು.
ನೀನೆನ್ನ ಜೀವನದ ಸರ್ವಸ್ವವಾಗಿರುವೆ;
ಓ ನನ್ನ ಪ್ರಿಯ ಮೂರ್ತಿ, ಎದೆಗೆ ಬಾರೈ.

ಬಿಸಿಲುರಿವ ಮರುಭೂಮಿಯಂದದಲಿ ನನ್ನೆದೆಯು
ವಿರಹದಿಂದುರಿದುರಿದು ಯೋಗಕೆಳಸುವುದು;
ಮಳೆಗರೆದು, ತಂಪಿತ್ತು, ಪರಿಹರಿಸಿ ಬೇಗೆಯನು,
ಪ್ರೇಮತೋಯದ ಮೂರ್ತಿ, ಎದೆಗೆ ಬಾರೈ.

ಅಗಲಿಕೆಯ ಸಹಿಸಲಾರೆನು ನಾನು; ನಿನ್ನನ್ನೆ
ಹಗಲಿರುಳು ನೆನೆದು ಬಗೆ ಕುದಿದು ಬೇಯುವುದು.
ಓ ನನ್ನ ಆನಂದ ಸತ್ಯಸುಂದರ ಮೂರ್ತಿ,
ಶೂನ್ಯವನು ಪೂರ್ಣಗೈ! ಎದೆಗೆ ಬಾರೈ!

                                      - ಕುವೆಂಪು
                                    ' ಪ್ರೇಮ ಕಾಶ್ಮೀರ '
ಹೂವಿನ ಕೋರಿಕೆ

ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ,
ಅಧರ ಚುಂಬನದಿಂದೆ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೆ, ನಿನಗೆ?
ವಂಚನೆಯದಿನಿತಿಲ್ಲ; ಬಾ, ಬೇಗ ಬಾ!

ಇರುಳೆಲ್ಲ ತಪಗೈದು ಎದೆಯ ಹೊಂಬಟ್ಟಲಲಿ,
ಅರುಣನುದಯಕೆ ನೀನು ಬರುವೆಯೆಂದು,
ಪ್ರಣಯ ರಸವನೆ ಎರೆದು, ಕಾದಿಹೆನು ತುಟಿ ತೆರೆದು,
ಪಾನಗೈ, ಓ ನನ್ನ ಭ್ರಮರ ಬಂಧು!

                                    - ಕುವೆಂಪು
                                   ' ಪ್ರೇಮ ಕಾಶ್ಮೀರ '