ಕಂಬಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಂಬಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಡಿಸೆಂಬರ್ 30, 2013

ಮದ್ದಲೆ ದನಿಗೆ ಎದ್ದು ಕುಣಿವ ಕವಿತೆಗಳು!



        'ಕಾಡು ಕುದರಿ ಓಡಿ ಬಂದಿತ್ತ' ಎಂಬ ಹಾಡನ್ನು ನಾನು ಕೇಳಿದ್ದೆನಾದರೂ ಅದೊಂದು ಜಾನಪದಗೀತೆ ಎಂದೇ ತಿಳಿದಿದ್ದೆ. ನಾಟಕಕಾರ, ಕಾದಂಬರಿಕಾರರಾಗಿ ನನಗೆ ಗೊತ್ತಿದ್ದ ಡಾ. ಚಂದ್ರಶೇಖರ ಕಂಬಾರರು ಕವಿಯೂ ಹೌದು ಎಂದು ನನಗೆ ತಿಳಿದದ್ದು ತಡವಾಗಿ! ಎಂಥ ಅದ್ಭುತ ಕವಿ!

         ಕಂಬಾರರ ಕಾವ್ಯಶೈಲಿಗೆ ಮನಸೋತು ನಾನೀಗಾಗಲೆ ಅವರ ಅಭಿಮಾನಿಯಾಗಿಬಿಟ್ಟಿದ್ದೇನೆ. ಉತ್ತರ ಕನ್ನಡದ ದೇಸಿ ಕನ್ನಡ ಸೊಗಡಿನ ಅವರ ಕವಿತೆಗಳ ಪ್ರತಿ ಪದವೂ ಅತ್ಯಂತ ನಿರಾಯಾಸವಾಗಿ, ಸಹಜವಾಗಿ ಜೋಡಿಸಿದಂತಿವೆ. ಅವರ ಕೆಲವು ಕವಿತೆಗಳನ್ನು ಓದುವಾಗ ನನಗೆ, ಮದ್ದಲೆ ದನಿ ಕೇಳಿ ಅವು ಎದ್ದು ಕುಣಿಯುತ್ತಿವೆಯೇನೋ ಎಂಬ ಭಾವವುಂಟಾಯಿತು. ಅಂಥ ಲಯಬದ್ಧತೆ, ಹುಮ್ಮಸ್ಸು ಅವರ ಕವಿತೆಗಳಲ್ಲಿವೆ. ಅಲ್ಲಲ್ಲಿ ಗದ್ಯದ ರೀತಿ ಕಂಡರೂ, ಸತ್ವಶಾಲಿಯಾದ ವಸ್ತು ನಮ್ಮನ್ನು ಹಿಡಿದಿಡುತ್ತದೆ.

         ಅವರ 'ಕಾಡುಕುದುರೆ'ಯಂತೂ ಹುಚ್ಚೆದ್ದ ಕುದುರೆಯೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. 'ರೆಕ್ಕೆಯ ಹುಳು' ಭ್ರಮೆಯಿಂದ ವಾಸ್ತವಕ್ಕಿಳಿಸಿದರೆ, ಇನ್ನು ’ಆ ಮರ ಈ ಮರ’ವು ಪ್ರತಿ ಓದಿನಲ್ಲೂ ಹೊಸ ಒಳಾರ್ಥದಿಂದ ಸೋಜಿಗಗೊಳಿಸಿ ನನ್ನ ನೆಚ್ಚಿನ ಕವಿತೆಯಾಗಿಬಿಟ್ಟಿದೆ.

        ಇಷ್ಟೆಲ್ಲಾ ಹೇಳಿ, ಕುತೂಹಲ ಮೂಡಿಸಿ ನಿಮ್ಮನ್ನು ಸುಮ್ಮನೆ ಬಿಟ್ಟರಾದೀತೆ? :)
        ಇಗೊ, ಇಲ್ಲಿವೆ ಅವರ ಕೆಲವು ಕವಿತೆಗಳು, ನಿಮ್ಮ ಓದಿಗಾಗಿ.. ಓದಿ, ಪ್ರತಿಕ್ರಿಯಿಸಿ..

ಅಕ್ಕರೆಯಿಂದ,
ಕನಸು..
ಆ ಮರ ಈ ಮರ

ನದಿಯ ದಂಡೆಯಲ್ಲೊಂದು ಮರ
ನದಿಯಲ್ಲಿ ಒಂದು ಮರ.

ಮೇಲೆ ನಿಜವಾದ ಮರ
ಕೆಳಗೆ ಬಿಂಬಿಸಿದ ಮರ.

ಮ್ಯಾಲಿನ ಮರದಲ್ಲಿ ಚಿಲಿಪಿಲಿ ಪ್ರಪಂಚ
ಗೀತಂಗಳ ಕುಕಿಲುತಾ
ರೆಕ್ಕೆಯಂಚುಗಳಿಂದ ಎಲೆಗಳ ಮ್ಯಾಲೆ
ಕನಸುಗಳ ಗೀಚುತಾ ಇದ್ದರೆ -
ಕೆಳಗೆ ಬೇರುಗಳಲ್ಲಿ
ಚಿಳಿಮಿಳಿ ಮೀನು ಆಳಸುಳಿಯುತಾ
ನೆರಳುಬೆಳಕಿನ ಬಲೆಯಲೀಜುತಾ
ನೆನಪುಗಳ ಕೆರಳಿಸುತಾವೆ.

ತೆರೆ ಎದ್ದಾಗ 
ಒಂದು ನಡುಗುತ್ತದೆ
ಇನ್ನೊಂದು ನಗುತ್ತದೆ.

ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒಂದೇ ಈ ಮರಗಳಿಗೆ.

ನೀನೊಂದು ಮರ ಹತ್ತಿದರೆ
ಇನ್ನೊಂದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ

ಮ್ಯಾಲೆ ನೀಲಿಯ ಬಯಲು
ಕೆಳಗದರ ನಕಲು
ಎರಡು ಬಯಲುಗಳಲ್ಲು ಒಂದೆ ಮೌನ

ಹತ್ತುತ್ತ ಹತ್ತುತ್ತ ಗಾಳಿಯಾಗುತ್ತಿ ಅಂತ ತಿಳಿ.
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂ
ಇಳಿಯೋದು ನಿನ್ನ ಕೈ ಮೀರಿದ್ದು.

ಹತ್ತಿದವರು ಸ್ವರ್ಗ ಸೇರುವರೆಂದು ಸುದ್ದಿ
ನಮಗದು ಖಾತ್ರಿಯಿಲ್ಲ.
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೋಬಹುದು.

ಈ ಕಥೆಯ ದುರಂತ ದೋಷ ಯಾವುದೆಂದರೆ:
ನಿಜವಾದ ಮರ ಮತ್ತು
ನೀರಿನ ಮರ
ಇವೆರಡೂ ಒಂದಾದ ಸ್ಥಳ
ಮಾಯವಾಗಿರೋದು.

ಅದಕ್ಕೇ ಹೇಳುತ್ತೇನೆ ಗೆಳೆಯಾ -
ಮ್ಯಾಲೆ ಹತ್ತಿದರೂ
ತಲೆ ಕೆಳಗಾಗಿ ನೇತಾಡುವುದು ತಪ್ಪಿದ್ದಲ್ಲ,
ಮ್ಯಾಲಿಂದ ಜಿಗಿದು
ತಳಮುಟ್ಟಿ
ಮಾಯವಾದ ನೆಲವ
ಹುಡುಕಬೇಕೋ ಹುಡುಕಿ ಬದುಕಬೇಕು.

                                         - ಡಾ. ಚಂದ್ರಶೇಖರ ಕಂಬಾರ
ನನ್ನ ಪಾತ್ರ

ನೋಡು ನೋಡುತ್ತಿದ್ದಂತೆ
ನನ್ನ ನಾಟಕದ ಆ ಪಾತ್ರ
ರಂಗದಿಂದಿಳಿದು ನೇರ ಬಳಿಗೇ ಬಂದ.
ಪಕ್ಕದ ಕುರ್ಚಿಯಲ್ಲಿ ಕೂತ.

ನಾನು ನಾಟಕ ನೋಡುತ್ತಿದ್ದರೆ
ಇವನು ನನ್ನ ಕಡೆ
ತನ್ನ ಕಣ್ಣು ಶಲಾಖೆಯೆಂಬಂತೆ
ಕಣ್ಣಿಂದ ನನ್ನೆದೆಯಲ್ಲಿ ತೂತು ಕೊರೆಯುತ್ತ ಕೂತ.

ತಗಲದ ಹಾಗೆ ಕಾಲು ಸರಿಸಿದರೆ ನಾನು
ಮುದ್ದಾಂ ಕಾಲು ತಗುಲಿಸಿ ಕೂತ.
ಭುಜ ಮುರಿಯುವಂತೆ ಕೈ ಹೇರಿದ.

ಎಲ್ಲರೂ ಸುಮ್ಮನಿದ್ದರೆ ಈತ ಖೊಕ್ಕೆಂದು ನಕ್ಕ.
ಅನಗತ್ಯ ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿದ.
ಈಗ ಎಲ್ಲರ ಕಣ್ಣು ಇವನ ಮೇಲೆ.
ಇವನ ಕಣ್ಣು ನನ್ನ ಮೇಲೆ.

ಇದ್ಯಾಕೋ ಸರಿಹೋಗಲಿಲ್ಲಂತ
ನಾಟಕ ಬಿಟ್ಟು ಮನೆಗೆ ಹೊರಟೆ.
ಬೆನ್ನು ಹತ್ತಿ ಬಂದ.

ಬಾಗಿಲು ತೆರೆದರೆ
ನನಗಿಂತ ಮೊದಲೇ ಒಳಹೊಕ್ಕ.

ಥರಾವರಿ ದೇಶಾವರಿ ನಗೆ ನಗುತ್ತ
ಕನ್ನಡಿಯಾಗಿ ಎದುರಿಗೇ ನಿಂತ!

ಎಷ್ಟೊಂದು ಸೌಜನ್ಯ ಕಲಿಸಿ ಕಳಿಸಿದ
ನನ್ನ ಪಾತ್ರಗಳು
ಹಿಂಗ್ಯಾಕೆ ಮಾಡುತ್ತವೆ?

                                      - ಡಾ. ಚಂದ್ರಶೇಖರ ಕಂಬಾರ
ಇಟ್ಟಿಗೆಯ ಪಟ್ಟಣ

ಹಸಿರನ್ನಲ್ಲ,
ಈ ಸಿಟಿಯಲ್ಲಿ ಬಿತ್ತಿ ಬೆಳೆಯುತ್ತಾರೆ
ಮಣ್ಣಿನಿಟ್ಟಿಗೆಯನ್ನ.
ಇಟ್ಟಿಗೆ ಬೆಳೆಯುತ್ತದೆ,
ಕಟ್ಟಡವಾಗುತ್ತದೆ.
ಕಟ್ಟಡ ಆಕಾಶದವಕಾಶವನ್ನ
ಚುಚ್ಚಿ ಬಿಸಿ ಮಾಡುತ್ತದೆ.
ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ
ಕಿಸಕ್ಕಂತ ಹಲ್ಲು ಕಿರಿದು ಹಳದಿ ನಗುತ್ತದೆ.

ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ
ಹಸಿರು ಇಣುಕಿದರೆ
ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ.
ಪಾಪಾತ್ಮ ಹಸಿರು ಹುತಾತ್ಮನಾಗದೆ
ಸಾಯುತ್ತದೆ.

ಗೊತ್ತೆ ನಿಮಗೆ? - ಈ ಸಿಟಿಯೊಳಗೆ
ಆತ್ಮದ ಮಾರ್ಕೆಟ್ಟಿದೆ.
ತಲೆಯ ಕೊಯ್ದು, ತೊಗಲ ಸುಲಿದು
ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ
ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ.
ತಲೆ ತಿಂಬವರಿಗೆ ಸೂಚನೆ:
ಅದು ಹಲ್ಕಿರಿದು ಅಣಕಿಸಿದರೆ
ಹೆದರಬೇಡಿರಿ.

                                  - ಡಾ. ಚಂದ್ರಶೇಖರ ಕಂಬಾರ
ತಕರಾರಿನವರು 

ತಕರಾರಿನವರು ಸ್ವಾಮೀ
ನಾವು ತಕರಾರಿನವರು

ಇಬ್ಬರ ತಕರಾರಿಗೆ ಹುಟ್ಟಿ
ಹಲವರ ತಕರಾರಿನಲ್ಲಿ
ಬೆಳೆದವರು.

ನಾವು ನಿಮ್ಮಂತೆ, ಹೋಗಲಿ
ಯಾರಂತಾದರೂ ಯಾಕಿಲ್ಲವೆಂದು
ಹಡೆದವರನಂದವರು.

ತಕರಾರನುಟ್ಟು ತಕರಾರ ತೊಟ್ಟು
ಮಸಡಿಗೆ ತೆರೆಗಣ್ಣು, ಕಿಸಬಾಯಿ
ಜೋಡಿಸಿ ನಕ್ಕು,
ಪುರಾಣದ ಹರಾಮತನದ
ಮನುವಿನ ಕಟ್ಟಡದ ಮೈಸಿರಿಗೆ
ಬೆದರಾಗಿ ನಿಂತು
ನಿಮ್ಮ ದೃಷ್ಟಿಗೂ
ತಕರಾರು ತೆಗೆದವರು
ಸ್ವಾಮೀ,
ನಾವು ತಕರಾರಿನವರು.

                                  - ಡಾ. ಚಂದ್ರಶೇಖರ ಕಂಬಾರ
ನೀನು-ನಾನು

ಆಣೆಯಲಿ ಮಾತಾಡಿ ಭರವಸೆಯನುಸಿರಾಡಿ
ತೆಕ್ಕೆಗೆಟುಕದ ತೆರೆಯ ನೆರಳು ನೀನು;
ನಂಬಿರುವ ಬರಿ ತೋಳ ಹುಂಬ ನಾನು.
ಗೀಸಿ ಅಗಲಿಸಿದ ತುಟಿ, ಅದರೊಳಚ್ಚೇರು ಬೆಳ-
ದಿಂಗಳನು ಸುರಿವ ಹುಸಿನಗೆಯು ನೀನು;
ಎರಡು ಕಣ್ಣುಳ್ಳ ಬಿಕನೇಸಿ ನಾನು.
ಮಲೆನಾಡ ಸಿರಿಮೈಗೆ ಹಸಿರೊರಸಿ, ಹೂ ಮೆತ್ತಿ
ಮುದ್ದಿಡುವ ಮನ್ಸೂನ ಮಳೆಯು ನೀನು;
ಬೆಳೆವಲದ ಉಸುಬಿನ ಮಸಾರಿ ನಾನು.
ಬ್ರಹ್ಮ ಮಗುವಿದ್ದಾಗ ಥೇಟು ಹೆಣ್ಣಿನ ಹಾಗೆ
ಪಾಟಿಯಲಿ ಬರೆದ ಹುಸಿ ಚಿತ್ರ ನೀನು;
ಅಂಕಲಿಪಿ ಓದಿರುವ ಜ್ಞಾನಿ ನಾನು.
ಇದ್ದಿಲ್ಲ, ಈಗಿಲ್ಲ, ಹಗಲೆಲ್ಲ ವರ್ಣಿಸಿದ
ಹಳೆಯ ಕಾವ್ಯಗಳ ಕವಿ ಸಮಯ ನೀನು;
ಏನೆ ಆದರು ಹೌದು ರಸಿಕ ನಾನು.
ಈಗಿದ್ದ ನದಿ ಮತ್ತೆ ಇನ್ನೊಂದು ಕ್ಷಣಕುಂಟೆ?
ಓ ಅದರ ಜೀವಂತ ವ್ಯಾಖ್ಯೆ ನೀನು;
ಅದ ಬರೆದ ಇಷ್ಟಗಲ ಹಾಳೆ ನಾನು.
ತುಟಿ ನೀಡಿ, ಮೈಸವರಿ, ನವಿರು ನವಿರಿಗೆ ಹೊಸದು,
ಮಾತಾಡಿ, ಮಟಾಮಾಯ-ಕನಸು ನೀನು;
ತುಟಿನೆಕ್ಕಿ ತುರುಸುತಿಹ ಪ್ರಾಯ ನಾನು.
ನೀ ಯಾರೊ, ಎಂತೊ, ಹೆಸರೇನೊ, ಸರಿ ಇತ್ತೀಚೆ
ನಾನೂನು ಅರಿತೆ; ಮೃತ ಸ್ಮರಣೆ ನೀನು;
ಅದ ಹುಗಿದು ಕಟ್ಟಿರುವ ಗೋರಿ ನಾನು.

                                           - ಡಾ. ಚಂದ್ರಶೇಖರ ಕಂಬಾರ
ಅಕ್ಕಕ್ಕು ಹಾಡುಗಳೇ

ಅಕ್ಕಕ್ಕು ಹಾಡುಗಳೇ
ಹಾಡಿನI ಅಚ್ಚಚ್ಚ ಕನಸುಗಳೇ IIಪII
ಬನ್ನಿರಿ ಇನ್ನಿಲ್ಲಿಗೆ IIಪII

ಬರಗಾಲ ಬಂತೆಂದು ಬರವೇನೊ ಹಾಡಿಗೆ
ಮನಸಿನ ನಿನ್ನ ಕನಸಿಗೆI
ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ
ಬಿಡಬೇಕೋ ತಮ್ಮಾ ಬಯಲಿಗೆI
ಆಕಾಶದಲಿ ಕೊನೆ ನಕ್ಷತ್ರ ಇರುವನಕ
ಕನಸು ಇರತಾವಂತ ಹಾಡಬೇಕೋII

ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕುI
ಕಲ್ಲಿನ ಎದೆಯಲ್ಲಿ ಜೀವಜಲ ಚಿಲ್ಲೆಂದು
ಚಿಮ್ಮುವಂಥಾ ಹಾಡ ಹಾಡಬೇಕುI
ಆಕಾಶದಂಗಳ ಬೆಳದಿಂಗಳೂ ಕೂಡಾ
ಕಂಗಾಲಾಗುವ ಹಾಡು ಹಾಡಬೇಕೊII

ತಂಗಾಳಿ ಪರಿಮಳಿಸಿ ತವಕಗೊಳ್ಳುವ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕೊI
ಚಿಗುರುವಾಸೆಯ ಬಿಟ್ಟ ಹಸಿರು ಕೆರಳುವ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕೊI
ನಾದಮಯ ಶಬ್ದದಲಿ ಹೂಬಿಡುವ ಕನಸುಗಳ
ಹಾಡಬೇಕೋ ತಮ್ಮಾ ಹಾಡಬೇಕೊII

                                     - ಡಾ. ಚಂದ್ರಶೇಖರ ಕಂಬಾರ
ಕಾಡುಕುದುರೆ

ಕಾಡುಕುದರಿ ಓಡಿ ಬಂದಿತ್ತII

ಊರಿನಾಚೆ ಊರ ದಾರಿ
ಸುರುವಾಗೊ ಜಾಗದಲ್ಲಿI
ಮೂಡಬೆಟ್ಟ ಸೂರ್ಯಹುಟ್ಟಿ
ಹಸರಿನ ಗುಟ್ಟ ಒಡೆವಲ್ಲಿI
ಮುಗಿವೇ ಇಲ್ಲದI
ಮುಗಿಲಿನಿಂದI
ಜಾರಿಬಿದ್ದ ಉಲ್ಕೀ ಹಾಂಗI
ಕಾಡಿನಿಂದ ಚಂಗನೆ ನೆಗೆದಿತ್ತII

ಮೈಯಬೆಂಕಿ ಮಿರಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತI
ಹೊತ್ತಿ ಉರಿಯೋ ಕೇಶರಾಶಿ
ಕತ್ತಿನಾಗ ಕುಣೀತಿತ್ತI
ಧೂಮಕೇತುI
ಹಿಂಬಾಲಿತ್ತI
ಹೌಹಾರಿತ್ತ ಹರಿದಾಡಿತ್ತI
ಹೈಹೈ ಅಂತ ಹಾರಿ ಬಂದಿತ್ತII

ಕಣ್ಣಿನಾಗ ಸಣ್ಣ ಖದ್ಗ
ಆಸುಪಾಸು ಝಳಪಿಸಿತ್ತI
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತI
ಬಿಗಿದ ಕಾಡI
ಬಿಲ್ಲಿನಿಂದI
ಬಿಟ್ಟ ಬಾಣಧಾಂಗ ಚಿಮ್ಮಿI
ಹದ್ದ ಮೀರಿ ಹಾರಿ ಬಂದಿತ್ತII

ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿI
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿI
ಹತ್ತಿದವರI
ಎತ್ತಿಕೊಂಡುI
ಏಳಕೊಳ್ಳ ತಿಳ್ಳೀ ಆಡಿI
ಕಳ್ಳೆಮಳ್ಳೆ ಆಡಿಸಿ ಕೆಡವಿತ್ತII

                                       - ಡಾ. ಚಂದ್ರಶೇಖರ ಕಂಬಾರ 
ರೆಕ್ಕೆಯ ಹುಳು

ರೆಕ್ಕೆಯ ಹುಳುವೊಂದು ಗಕ್ಕನೆ ನಿಂತಿತು
ಎದುರಿಗೊಂದು ಸೊಡರ
ಕಂಡಿತುI ಬಂಗಾರದ ಸದರI
ಉರಿಧಾಂಗI ಸುಖಗಳ ತುದಿಶಿಖರII
ದಳದಳ ಅರಳಿದೆ ಬೆಂಕಿಯ ಹೂವಾ
ತಿರುಗಲಿಲ್ಲ ನದರಾ
ಹಾರಿತುI ಹುಳುವಿನ ಮೈಖಬರಾII

ಏನ ಮಾದಕಾ ಬೆಳಕಿನೀ ಸುಖ
ಕೆರಳತಾವ ಕನಸ
ಕುದ್ದಾವI ಹುಳುವಿನ ಮೈಮನಸI
ಹೆಂಗರೆI ಮರೆತೆನಿಷ್ಟು ದಿವಸII
ಸೂರೆಹೋದವೋ ಮಿರಿಮಿರಿ ಬೆಳಕಿನ
ಸಿರಿಗೆ ನಮ್ಮ ಚಿತ್ತಾ
ವಿರಹಕI ಎದಿಹೊತ್ತಿತು ತುರತಾII

ಈ ಬೆಳಕಿನಾಳ ಅದು ಎಸೆವ ಗಾಳ
ಮೈಸೆಳೆವ ಸೂಜಿಗಲ್ಲಾI
ಬೆನ್ನಿನI ಹುರಿ ಬಿಗಿದವಲ್ಲಾI
ತೊಡೆಯಲಿi ಮಿಂಚು ಹರಿದವಲ್ಲಾII
ಅಂತರಂಗದಾ ಶಾಂತಸಾಗರ
ಕಲಕಿ ಹೋದವಲ್ಲಾ
ಹೊಸ ಧಗೆI ಬಾಯಿ ಬಿಡುವುದಲ್ಲಾII

ಹೊಟ್ಟೆಯೊಳಗೆ ಹೊಸ ಲೋಕವಿಟ್ಟು ಹೊಳೆ-
ದೀರಿ ಕ್ಷಿತಿಜಧಾಂಗ
ಕೈಮಾಡಿI ಕರೆಯತೀರಿ ನಮಗI
ಜೀರ್ಣಿಸI ಲಾರೆವಿಂಥ ಬೆರಗII
ಮುಳುಗಿ ಮುಳುಗಿ ನಾ ಏಳಬೇಕು ನಿಮ
ಬೆಳಕಿನಾಗ ಮೊದಲ
ಇಲ್ಲವೆI ನುಂಗಬೇಕು ನಿಮಗII

ಹಾರಿ ಹಾರಿ ಹೌಹಾರಿ ಏರಿ
ಸರಿಮಿಂಚತಾವ ಸೊಡರ
ಸೊಡರಿನI ಮ್ಯಾಲ ಹುಳದ ನದರ
ಅಡರುವ ಮುನ್ನವೆ ರೆಕ್ಕೆ ಸುಟ್ಟವೋ
ಹುಳಾ ಬಿತ್ತು ಕಳಚಿ
ಒಳಗಿನI ದೀಪ ಬಂತು ಬೆಳಗಿ.

                                     - ಡಾ. ಚಂದ್ರಶೇಖರ ಕಂಬಾರ