ಮಂಗಳವಾರ, ಜನವರಿ 7, 2014

ಸಾವಿರಾರು ನದಿಗಳು

ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು

ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ
ಇರುವೆಯಂತೆ ಹರಿದಸಾಲು ಹುಲಿಸಿಂಹದ ದನಿಗಳು
ಧಿಕ್ಕಾರ ಧಿಕ್ಕಾರ ಅಸಮಾನತೆಗೆ
ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ
ಲಕ್ಶಾಂತರ ನಾಗರಗಳು ಹುತ್ತಬಿಟ್ಟು ಬಂದಂತೆ
ಊರತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು
ಬೀದಿಯಲ್ಲಿ ಗಲ್ಲಿಯಲ್ಲಿ
ಬೇಲಿಮೆಳೆಯ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು

ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂಠ ಕೇಳಿದೊಡನೆ
ಅವರ ದನಿ ಇಂಗಿತು
ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ
ಛಡಿಯ ಏಟು ಹೊಡೆದವರ
ಕುತ್ತಿಗೆಗಳ ಹಿಡಿದರು.

ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರಪುರಾಣ ಬಂದೂಕದ ಗುಡಾಣ
ತರೆಗೆಲೆ ಕಸಕಡ್ಡಿಯಾಗಿ
ತೇಲಿತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು

                         - ಸಿದ್ಧಲಿಂಗಯ್ಯ

2 ಕಾಮೆಂಟ್‌ಗಳು:

sunaath ಹೇಳಿದರು...

ನಿಮ್ಮ blog ಪರಿಚಯ ಇದೀಗ ಆಯಿತು. ಅನೇಕ ಕವಿಗಳ ಕವನಗಳನ್ನು ಸಂಕಲಿಸಿ ನೀಡಿದ ನಿಮಗೆ ಧನ್ಯವಾದಗಳು.

ಕನಸು.. ಹೇಳಿದರು...

ಧನ್ಯವಾದಗಳು.. ಓದುವ ಖುಶಿ ನಿಮ್ಮದಾಗಲಿ.. :)