ಮಂಗಳವಾರ, ಜನವರಿ 4, 2011

ಬೆರಣಿ ತಟ್ಟುವ ಹುಡುಗಿ ಮತ್ತು ಚಂದ್ರಾಮ ದೇವರು

ಕಾಯಕಷ್ಟದ ತರುಣಿ
ಬೆರಣಿ ತಟ್ಟುವಾಕೆ - ಈಗೀಗ ದಿನವೂ
ಎದೆನೋವು, ಆ ನೋವಿಗೆ
ಕಾಯಕವು ಕಾರಣವೇ ಅಲ್ಲ, ಹಾಗಾಗಿ
ಇದ್ದಬದ್ದವರಲ್ಲಿ ಮದ್ದು ಸಿಗಲಿಲ್ಲ.

ಮದ್ದುಂಟೆ ಎದೆನೋವಿಗೆ ಕೇಳುವಳು
ದಿನರಾತ್ರಿ ಆ ಹುಡುಗಿ
ಬಿದ್ದ ಕನಸುಗಳನ್ನು ಮತ್ತು
ಚಂದ್ರಾಮ ದೇವರನ್ನು.

ಒಂದು ಹುಣ್ಣಿಮೆ ಹಗಲು ಬೆರಣಿ ತಟ್ಟುತ್ತಿರಲು 
ಆ ಬೆರಣಿ ಬದಲು ಚಂದ್ರಾಮ ಕಾಣಿಸಿದ, ಕಾಣ
ಕಾಣುತ್ತಿದ್ದಂತೆ ಬೆಳ್ಳನಾಗಸವೇರಿದ.

ಬೆಳ್ಳನಾಗಸವೇರಿ ಮರೆನಿಂತ ಚಂದ್ರಾಮ
ಕಬ್ಬು ಜಲ್ಲೆಯನಿಳಿಸಿ ಕರೆದ - ಬಾ ಹುಡುಗಿ
ಮದ್ದುಂಟು ಎದೆನೋವಿಗೆ, ಎಲ್ಲ
ಮದ್ದಲ್ಲ ಎದೆನೋವಿಗೆ.

ಕಾಯಕಷ್ಟದ ಹುಡುಗಿ ಬೆವರಿನಾ ತವರು
ಬೆರಳ ಚಡಿಯಲ್ಲಿಯೂ ಸೆಗಣಿ ನಾರು
ಉಟ್ಟ ಉಡುಗೆಗೆ ಉಜ್ಜಿ - ಕೈ
ತಟ್ಟಿ ಕುಣಿದಾಡಿದಳು - ಸುತ್ತ
ಯಾರಿಲ್ಲವಾದರೂ
ನೋಡಿ ಚಂದ್ರಾಮ ದೇವರು!
ಎದೆನೋವು ಮದ್ದು ಅರೆದು ತಂದಿರುವಂಥ
ಮೋಡಿ ಚಂದ್ರಾಮ ದೇವರು!
ಕಬ್ಬು ಜಲ್ಲೆಯನೇರಿ ಬರುವೆನೋ ಚಂದ್ರಾಮ
ನಿಂತಲ್ಲೇ ಕೊಂಚ ನಿಂತಿರು
ತಗ್ಗು ಮೋಡವನೇರಿ ತೇಲಿ ಬರುವೇನೋ ದೇವ
ನಿಂತಲ್ಲೇ ನೀನು ನಿಂತಿರು.

ತಬ್ಬಿ ಎದೆನೋವನ್ನೇ ಕಬ್ಬು ಜಲ್ಲೆಯನೇರಿ
ಬರುತ್ತಿದ್ದಂತೆ ಆಕಾಶ ಲೋಕಕ್ಕೆ
ತಗ್ಗು ಮೋಡದ ಮೇಲೆ ಹಿಗ್ಗು ಹೆಜ್ಜೆಯನಿತ್ತು
ನಡೆದಂತೆ ಚಂದ್ರಾಮನುಪ್ಪರಿಗೆಗೆ
ನಿಂತಂತೆ ನಿಂತಿದ್ದ ಚಂದ್ರಾಮ ದೇವರು
ಉರುಟುರುಟು ಬೆರಣಿಯಾಗಿ
ನೆಲಕುರುಳಿ ಚೂರಾಗಿ ಚೆಲ್ಲಿ ಹೋದ!

ಮನಸು ನೆಡುವಾ ಹುಡುಗಿ ಎದೆಯೊಡೆದ ಸದ್ದು
ಕೇಳಿಸಿತೆ ಯಾರಿಗಾದರೂ? ಅದು
ಒಡೆದ ನೋವಿನ ಟಿಸಿಲು
ನಮ್ಮೂರ ಕಡಲು. ಅರ್ಥವಾಗದೆ
ಅಚ್ಚರಿಗೊಂಡರು.

ಎಂತಿದ್ದರೂ ಆಕೆ ಕಾಯಕಷ್ಟದ ಬಾಲೆ
ಹಾಡುಹಗಲಿನ ಗಂಟಲೊತ್ತಿ ಹಿಡಿದು
ಕಾದ ಬಿಸಿಲಲಿ ಬತ್ತಿ ಕೆಳಗಿಳಿದಳು
ಚೂರುಗಳ ಸೇರಿಸಿ ನೆತ್ತಿಯಲಿ ಹೊತ್ತು
ಬಾಯಾರು ಒಲೆಗೆ ತುಂಬಿದಳು

ಆಹ! ನೀಲಿ ಜ್ವಾಲೆ!
ತಣಿದು ಘಮದ ವಿಭೂತಿ!
ಇದು ಯಾವ ಭ್ರಾಂತಿ! ಕಣ್ಣುಜ್ಜಿ ಕೇಳಿದಳು
ಉಂಟೇ ಇಂಥ ಚಂದ್ರಾಮ ಪ್ರೀತಿ ಎಲ್ಲಾದರೂ?

ಹಗಲ ಬಾಗಿಲ ಸರಿಸಿ ವಿಹಾರ ಬಂದ ಚಂದ್ರಾಮ
ಆಚೀಚೆ ತಾರೆ ನಿಹಾರೆ ರೋಹಿಣಿ
ಕಾಣುವಳೇ ಆತನಿಗೆ ಸಣ್ಣ ಗುಡಿಸಲ ಒಳಗೆ
ಚಿಮಿಣಿ ದೀಪದ ವಿರಹಿಣಿ?

ಚಂದ್ರಾಮ ದೇವರಿಗೂ ಬೇಕು ಬಣ್ಣದ ನಡಿಗೆ!
ಸಲ್ಲ ಅವಳಂಥ ಬರಿ ಹುಡುಗಿಗೆ
ಬರಿ ಸಿರಿಯ ಹುಡುಗಿ ಎಷ್ಟು ಕರೆದರೆ ಏನು?
ಕಾಡಿಗುಂಟೇ ಬೆಳದಿಂಗಳು? ಎಂದಿಗೂ
ಕಾಣಿಸದು ಗಾಢ ಮರುಳು

ಕಾದು ಬಾಡಿದ ಹುಡುಗಿ
ತಟ್ಟುತಿರುವಳು ಬೆರಣಿ - ನಿತ್ಯವೂ
ಅನ್ನಕಾಗಿ
ಎದೆನೋವಿನಾ ಮದ್ದು ಹಣೆಗಿರಿಸಿಕೊಂಡೆನೋ
ಕರೆಯ ಬೇಡಿರಿ ನನ್ನ ವೈರಾಗಿ

ಎಂದು ಹಾಡುವಳು - ಸುತ್ತ
ಯಾರಿಲ್ಲವಾದರೂ.

                                      - ವೈದೇಹಿ

ಕಾಮೆಂಟ್‌ಗಳಿಲ್ಲ: