ಬುಧವಾರ, ಜನವರಿ 5, 2011

ಗಜಲ್ ೧೦

ಹೋಗುವಾಗ ಕಂಬನಿಗಳ ತುಳುಕಿಸದಿರು ಎನ್ನುವನು
ಕಳೆದ ಕ್ಷಣಗಳ ಸವಿಯ ಬಾಡಿಸದಿರು ಎನ್ನುವನು

ಎಂದಿದ್ದರೂ ಮಳೆ ಬೆಟ್ಟಗಳ ಸಂಬಂಧ ನಮ್ಮದು
ಇನಿತಾದರೂ ದೊರೆತದ್ದು ಮರೆಯದಿರು ಎನ್ನುವನು

ಖುಷಿಯೂ ಉದಾಸವೂ ಆಗುವುದು ಅವನು ಬಂದಾಗ
ಕಳೆವ ಕೆಲ ಗಳಿಗೆಯಲಿ ದುಗುಡಗೊಳ್ಳದಿರು ಎನ್ನುವನು

ಸಂಜೆ ಕರಗಿ ಹೋಗುವುದು ನೋಡುನೋಡುತ್ತಿರುವಂತೆ
ಕೆಲವು ತಾಸುಗಳ ಮಿಲನವ ದೂರದಿರು ಎನ್ನುವನು

ಅವ್ಯಕ್ತ ನೋವಿನಲಿ ಅಯ್ಯೊ ದೀಪವೂ ಸುಯ್ಯುತಿದೆ  
ಗಲ್ಲ ತಟ್ಟುತ ಯಾಕೆ ಈ ನಿಟ್ಟುಸಿರು ಎನ್ನುವನು

ನೋವು ತರುವ ಇಂಥ ಪ್ರೀತಿ ಬೇಡವೇ ಬೇಡ
ಮುತ್ತಿಡುತ್ತ ಸಿಗದುದಕೆ ಮರುಗದಿರು ಎನ್ನುವನು

                                          - ಎಚ್.ಎಸ್. ಮುಕ್ತಾಯಕ್ಕ

1 ಕಾಮೆಂಟ್‌:

arathi ghatikaar ಹೇಳಿದರು...

ಬಹಳ ಸುಂದರ ಕಾವ್ಯ , ಅದರ ಹರಿತ .ಮೊಗೆದಸ್ತು ಹೊಸ ಅರ್ಥ ಗಳ ಸುಳಿ . ಮುಕ್ತಾಯಕ್ಕ ನವರ ಈ ಘಜಲ್ ಗಳನ್ನು ಸಂಕಳಿಸಿ ಬ್ಲಾಗಿನಲ್ಲಿ ಹಾಕಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು . ಹಾಗೇನೆ ಹೆಸರಾಂತ ಕವಿಗಳ ಕವನಗಳನ್ನು ಓದಿ ರಸ ದೂಟ ಮಾಡಿದಸ್ತು ಸಂತಸವಾಯಿತು
ನಿಮ್ಮ ಪ್ರಯತ್ನ , ಸಾಹಿತ್ಯಾಭಿಮಾನ ಶ್ಲಾಘನೀಯ . ಶುಭಾಶಯಗಳು .
ಆದರೆ ನನ್ನ ಬ್ಲಾಗಿಗೂ ಭೇಟಿ ನೀಡಿ
www.bhaavatorana.blogspot.com