ಶನಿವಾರ, ಅಕ್ಟೋಬರ್ 30, 2010

ಕವಿತೆ

ಬಿಡುವು ಒಂದೇ ಸಾಕೆ ಪದ್ಯ ಬರೆಯುವುದಕ್ಕೆ
ಅದಕೆ ಕಾಗದ ಬೇಕು, ಕಪ್ಪುಮಸಿಯೂ ಬೇಕು.
ಭಾವಗಳು ತಾವಾಗಿ ಲೇಖನಿಗಿಳಿಯಬೇಕು
ಹೃತ್ಕಮಲದಿಂದ. ಬಾಳಿನ ನೋವು ನಲಿವುಗಳು
ಮಾತಿಗೆ ಒಲಿಯಬೇಕು. ಚೆಲುವು ಒಲವುಗಳು
ತಾನಾಗಿ ಅರಳಿರಬೇಕು. ದುಃಖ ಸೇತುವೆಯ
ದಾಟಿದ ಒಳದನಿಯ ಆಹ್ವಾನವೂ ಕವಿಗೆ
ಇರಬೇಕು. ನಡುಹೊಳೆಯಲ್ಲಿ ಬಂಡೆಯ ಮೇಲೆ
ಹಿಂದೊಮ್ಮೆ ಸ್ವಪ್ನದಲಿ ಕಂಡ ರಾಜಕುಮಾರಿ
ವೀಣೆಯನು ಮಿಡಿಯುತ್ತ ಹಾಡುತ್ತಲಿರಬೇಕು.
ಛಂದಸ್ಸು ಇರಬೇಕು ಕುದುರೆಗಳ ನಡೆಯಂತೆ.
ಕವಿತೆ ಆಲೋಚನಾಮೃತ; ರಸಿಕರೆದೆಯಲ್ಲಿ
ಹುಣ್ಣಿಮೆಯ ಹೊಂಬೆಳಕು; ಹನಿಯಲ್ಲಿ ಒಂದು ಹೊಳೆ.
ಕವಿತೆ ಮೂಡುವ ತನಕ ನಾವು ಕಾದಿರಬೇಕು.

                                                                         - ಕೆ. ಎಸ್. ನರಸಿಂಹ ಸ್ವಾಮಿ

ಕವಿ ಬರೆದ

ಕವಿ ಬರೆದ:
ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೇ ಇರಿದಿರಿದು.
ಆಂತರ್ಯ ಸಂಚಯಿತ ಬಾಧೆಯನೆ ಸುರಿದೆರೆದು.
ಬಾಳ ಕುಲುಮೆಗೆ ಸಂದು
ಸದ್ದಿರದೆ ಕಡು ಬೆಂದು
ಬೂದಿಯೊಲುಮೆಗಳ -
ಲೋಕದನ್ಯಾಯಕ್ಕೆ,
ಜಾತಿಮತವರ್ಗಗಳ ನಿಷ್ಕರುಣ ತುಳಿತಕ್ಕೆ
ನುಚ್ಚಾದ ನಲುಮೆಗಳ -
ಹೊಸ ನೆತ್ತರುಕ್ಕಿಂದ ಮೇಲೇರಿ ಬರುವಲ್ಲೆ,
ದಾರಿಗಾಣದೆ ಸುಯ್ದು ನೆಲದಾಳದಲ್ಲೆ
ಹಿಂಜರಿದ ನೂರಾರು ಯೌವನದ ಚಿಲುಮೆಗಳ -
ಮಾಸ, ಮಾಸದವರೆಗು ಭಾರವನು ತಾ ಹೊತ್ತು
ಹಗಲಿರುಳು ಯಾತನೆಯನನುಭವಿಸಿ ಅತ್ತು
ಕವಿ ಹೆತ್ತ ಕವಿತೆಯನು - ಜೀವವನೆ ತೆತ್ತು. 

ತನ್ನ ಕೃತಿ ಕೀಳಲ್ಲ,
ಬಿತ್ತಿದುದು ಬೀಳಲ್ಲ,
ಕಾವ್ಯಕೂ ಮಿಗಿಲಿಲ್ಲ ಕಲೆಯೊಳಗೆ ಎಂದೆನೆಸಿ -
ತನ್ನ ಸೃಷ್ಟಿಯ ಪದರ ಪದರವನೆ ಅಲೆದರಸಿ
ತಳದಾಣಿಮುತ್ತುಗಳ ಎಳೆತರುವ ಭಾವುಕನ
ಬರವನ್ನೆ ತಾ ಕನಸಿ,
ಬರೆದ ಕವಿ
ಲೋಕಾನುಭವಿ.

                                                   - ಕೆ. ಎಸ್. ನಿಸಾರ್ ಅಹಮದ್
ಕವಿತೆಯ ಕಷ್ಟ

ಕೆಲವು ಕವಿತೆಗಳು
ಕರೆದ ಕೂಡಲೇ ಬಂದುಬಿಡುತ್ತವೆ
ಚಿಕ್ಕ ಮಕ್ಕಳ ಹಾಗೆ
ಇನ್ನು ಕೆಲವಂತೂ ಹೊಸಿಲು ದಾಟಿ ಹೊರಕ್ಕೆ
ಬರುವುದೇ ಇಲ್ಲ - ಹೊಸ ಮದುವೆ ಹೆಣ್ಣಿನ ಹಾಗೆ
ಅವಕ್ಕೆ ಮೈ ತುಂಬಾ ನಾಚಿಕೆ

ಕೆಲವು ಕವಿತೆಗಳು ಮುಂಜಾನೆ ಗಿಡದ ಮೈ ತುಂಬ
ಸಮೃದ್ಧವಾಗಿ ಅರಳಿರುವ ಹೂವು
ಇನ್ನೂ ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬರದ ಹಾವು 

ಮತ್ತೆ ಕೆಲವು ಮಬ್ಬುಗತ್ತಲಲ್ಲಿ ಮಲಗಿರುವ
ಆಕಾರವಿಲ್ಲದ ನೋವು.

ಕೆಲವು ಕವಿತೆಗಳು ಕಾರ್ತೀಕದಲ್ಲಿ
ಮನೆತುಂಬ ಕಿಲಕಿಲ ನಗುವ ಹಣತೆಗಳು
ಕೆಲವಂತೂ ಯಾವ ದುರ್ಬೀನಿಗೂ ಕಾಣದಂತಡಗಿರುವ
ಅಪರೂಪ ನಕ್ಷತ್ರಗಳು

ಕವಿತೆಯ ಕಷ್ಟ - ಸುಲಭದ ಮಾತು
ಹೀಗೆ ಎಂದು ಹೇಳಲಾಗುವುದಿಲ್ಲ.
ಒಂದೊಂದು ಸಲ ಸಲೀಸಾಗಿ ನೆಲಬಿಟ್ಟು
ಏರಿದ ವಿಮಾನ,
ಅಷ್ಟೇ ಸುಲಭವಾಗಿ ನೆಲಕ್ಕೆ ಇಳಿಯುವುದು
ತೀರಾ ಅನುಮಾನ.

ಹೀಗಾಗಿ ಇಲ್ಲಿ ಅಪಘಾತಗಳು
ಅಪರೂಪವೇನಲ್ಲ.

ಆದರೆ, ಹಾಗೇನಾದರೂ ಆದರೆ
ಕಂಪನಿಯವರು ಜವಾಬ್ದಾರರಲ್ಲ
                                           
                                                - ಜಿ. ಎಸ್. ಶಿವರುದ್ರಪ್ಪ


ಕವಿತೆ
                                                                    
ಗೂಡಿಂದಾಚೆ  ಹಾರುತ್ತವೆ ಕವಿತೆಗಳು 
ನೀಲಿಮೆಯಲ್ಲಿ ರೆಕ್ಕೆ ಬಡಿಯುತ್ತ
ಅಗಾಧ ಕತ್ತಲೆಯಲ್ಲಿ ತಾರೆಗಳ ಜತೆಗೆ
ಕನಸು ಕಾಣುತ್ತ -

ಕುಣಿಯುತ್ತವೆ ಹರೆಯದೆದೆಯಲ್ಲಿ
ಚಂಡೆ ಮದ್ದಳೆ ದನಿಗೆ ಹೆಜ್ಜೆ ಹಾಕುತ್ತ,
ದ್ರೌಪದೀ ಸ್ವಯಂವರದಲ್ಲಿ
ಬಿಲ್ಲಿಗೆ ಹೆದೆಯೇರಿಸುತ್ತ -

ಹಾಯುತ್ತವೆ ಹತ್ತೂ ಕಡೆಗೆ ಕವಿತೆಗಳು
ಅಪರಂಪಾರ ಪಾರಾವರ -
ದಲೆಗಳ ಮೇಲೆ ಹಾಯಿ ಬಿಚ್ಚುತ್ತಾ,
ಮೇಘಮಾಲೆಗಳಾಗಿ ಆಕಾಶದಾದ್ಯಂತ
ಸಂಚರಿಸುತ್ತ, ಮಣ್ಣೊಳಗೆ
ಮಲಗಿರುವ ಬೀಜಗಳ ಕಣ್ಣು ತೆರೆಸುತ್ತ -

ಪುಟಿಯುತ್ತವೆ ಹದವಾದ ನೆಲದಲ್ಲಿ
ಗಿಡಗಿಡದ ತುಂಬಾ ಹೂವರಳಿ
ಕಂಪಿನ ಕಹಳೆಯೂದುತ್ತ,
ದುಂಬಿಗಳ ಕರೆದು ಟೊಂಗೆ ಟೊಂಗೆಗಳಲ್ಲಿ
ಜೇನು ಕಟ್ಟುತ್ತ -

                                                                      - ಜಿ. ಎಸ್. ಶಿವರುದ್ರಪ್ಪ   
ಕವಿ-ಸೃಷ್ಟಿ

ಗಾಳ ಬೀಸಿ ಕೊಳಕ್ಕೆ
ದಡದಲ್ಲಿ  ಕಾಯುತ್ತ
ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ.

ಸಾಕುಹಕ್ಕಿಯ ಮೇಲೆ ತೂರಿ,
ಹೊಸಹಕ್ಕಿಯನು
ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ.

ಹಿಂದೆ ಬಾವಿಗೆ ಜಾರಿ
ತಳಕಿಳಿದು ಮರೆತ
ಸರಕುಗಳ ತರುವ ಪಾತಾಳಗರಡಿ.

ಸ್ವಾತಿ ಹನಿ ಹೀರಿ
ಮುತ್ತನ್ನು ಬೆಳೆದ
ಚಿಪ್ಪುಗಳ ಎತ್ತಿ ಹೊರತರುವ ನೋಡಿ.

                                                                   ಡಾll ಎನ್. ಎಸ್ ಲಕ್ಷ್ಮಿನಾರಾಯಣ ಭಟ್ಟ       

ಪ್ರಾರಂಭಕ್ಕೆ ಮುನ್ನ....

 ಕನ್ನಡ ಕಾವ್ಯ ಪ್ರೇಮಿಗಳೆಲ್ಲರಿಗೂ ಆತ್ಮೀಯ ಸ್ವಾಗತ...

        ಯಾವುದೋ ಸಮಯದಲ್ಲಿ ನೆನಪಾಗಿಯೂ ನೆನಪಾಗದೆ ಕವನಗಳು ಕಾಡುವಾಗೆಲ್ಲ, ಬರಿ ಕವನಗಳೇ ತುಂಬಿರುವ, ಬೇಕೆಂದಾಗ ದೊರಕುವ ತಾಣವೊಂದಿದ್ದರೆ ಎಷ್ಟು ಚೆಂದ ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತಿದ್ದೆ. ಹೀಗಾಗಿ ಎಲ್ಲೇ ಉತ್ತಮ ಕವನಗಳು ಕಣ್ಣಿಗೆ ಬಿದ್ದರೂ, ಮನಸ್ಸಿಗೆ ಮುದ ನೀಡಿದರೂ ಬರೆದಿಟ್ಟುಕೊಳ್ಳುವ ಹುಚ್ಚು ಅಭ್ಯಾಸವನ್ನೂ ಬೆಳೆಸಿಕೊಂಡೆ. ಅವೆಲ್ಲವನ್ನೂ ಒಂದೆಡೆ ಸಂಗ್ರಹಿಸಿ, ಇತರರೂ ಓದುವಂತಾಗಬೇಕೆಂಬ  ಬಹುದಿನದ ಕನಸು ಇಂದು ನನಸಾಗಿದೆ..

         ಮನದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು, ಹೋಲಿಕೆ, ಪ್ರತಿಮೆ, ಛಂದಸ್ಸುಗಳಿಂದ ಸಿಂಗರಿಸಿ ಕಾವ್ಯವನ್ನಾಗಿಸುವ ಪ್ರತಿ ಕವಿ ಹೃದಯದೆಡೆಗೂ ನನಗೇಕೊ ಮೊದಲಿಂದಲೂ ಬೆರಗು ತುಂಬಿದ ಅಸೂಯೆ..

      ಯಾವುದೋ ಹಳೆಯ ಸಂಬಂಧ, ಕಳೆದುಹೋದ ವ್ಯಕ್ತಿ, ಮಣ್ಣಾದ ಆಸೆಗಳು, ಕಾಡುವ ಕಹಿ-ಸಿಹಿ ನೆನಪುಗಳು, ಕಹಿ ನಿರಾಶೆ-ಹತಾಶೆಗಳು... ಇವುಗಳ ಜೊತೆಗೂ ಮತ್ತೆ ಚಿಗುರುವ, ಹೊಸ ಗಮ್ಯದೆಡೆಗೆ ಸಾಗುವ ಭರವಸೆ, ಛಲ, ಆತ್ಮವಿಶ್ವಾಸ... ಇವೆಲ್ಲದಕೂ ಮೌನ ಧ್ವನಿಯಾಗುವ ಕವನಗಳೆಂದರೆ ಎಂಥದ್ದೋ ಸೆಳೆತ..

       ಅರೆ! ಇದು  ನನ್ನ ಮನದ ಭಾವನೆಯೇ ಅಲ್ಲವೇ?! ಎಂದು ಅಚ್ಚರಿ ಮೂಡಿಸುತ್ತಲೇ ಹೃದಯಕ್ಕೆ ಆಪ್ತವಾಗುವ, ಏಕಾಂತದಲ್ಲಿ ಜೊತೆಯಾಗುವ, ಮನದ ತುಮುಲಗಳನ್ನು ಹೊರಹಾಕುವ ಪರಿಣಾಮಕಾರಿ ಮಾಧ್ಯಮವೂ ಆಗುವ ಕವನಗಳ ಭಾವತೀವ್ರತೆ, ದೊರಕುವ ಭಾವಾನಂದವನ್ನು ಅನುಭವಿಸಿಯೇ ತೀರಬೇಕು..

       ಕನ್ನಡ ಸಾಹಿತ್ಯವನ್ನೋದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ನನ್ನ ಓದಿಗೆ ನಿಲುಕಿದ ಹಳೆ, ಹೊಸ ಕವಿಗಳ ಕವನಗಳು , ನಾನು ಗುನುಗುತ್ತಿದ್ದ ಭಾವಗೀತೆಗಳು ನಿಮ್ಮನ್ನೂ ಕಾಡಲಿ ಎಂಬ ಉದ್ದೇಶದಿಂದ ಈ ಬ್ಲಾಗನ್ನು ಪ್ರಾರಂಭಿಸುತ್ತಿದ್ದೇನೆ. ಜೊತೆಗೆ, ಕನ್ನಡ ಕಾವ್ಯ ಕಂಪನ್ನು ಪಸರಿಸುವಲ್ಲಿ ನಾನೂ ಕೊಂಚ ಅಳಿಲು ಸೇವೆ ಮಾಡೋಣವೆಂದಿದ್ದೇನೆ. ಮರೆತ ಕವನವನ್ನು ನೆನಪಿಸುವ, ಸಿಕ್ಕವುಗಳನ್ನು ರವಾನಿಸುವ ಮೂಲಕ ನನ್ನ ಪ್ರಯತ್ನಕ್ಕೆ ನಿಮ್ಮ ಸಹಾಯವೂ ದೊರೆತರೆ ನಾನು ತುಂಬಾ ಋಣಿ..

      ಕೋರಿಕೆಯಿಷ್ಟೇ: ದಯವಿಟ್ಟು ಈ ಬ್ಲಾಗನ್ನು ನಿಮ್ಮ ಆತ್ಮಿಯರಿಗೂ ಪರಿಚಯಿಸಿ. ಇಲ್ಲಿನ ಕವಿತೆಗಳು ಯುವ  ಕವಿಗಳಿಗೆ ದಾರಿ ದೀವಿಗೆಯಾಗಲಿ, ಹೊಸ ಸ್ಪೂರ್ತಿ ತುಂಬಲಿ.. ಕಾವ್ಯಪ್ರೇಮಿಗಳ ಹಂಬಲ ತುಸುವಾದರೂ ತಣಿಯಲಿ..

      ಮತ್ತೇನಿಲ್ಲ,
     ನಿಮ್ಮೆಲ್ಲರನ್ನೂ ಕವಿತೆಗಳು ಮತ್ತೆ ಮತ್ತೆ ಕಾಡಲಿ!!

     ಅಕ್ಕರೆಯಿಂದ,
     ಕನಸು..

ಸೋಮವಾರ, ಅಕ್ಟೋಬರ್ 11, 2010

ಎಂಥ ಮರುಳಯ್ಯ ಇದು?

ಎಂಥ ಮರುಳಯ್ಯ ಇದು ಎಂಥಾ ಮರುಳು?
ಬೆಳಗಿನ ಹಿಮದಂತೆ ಹರಿವ ನೆರಳು
ಥಳ ಥಳ ಮಿನುಗಿ
ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲ ತಿರುಳು

ಹರಿಯುವ ನದಿಗೆ ಯಾವ ಹೊಣೆ?
ಹಾರುವ ಹಕ್ಕಿಗೆ ಎಲ್ಲಿ ಮನೆ?
ಬಾಳಿನ ಕಡಲಿನ ತೆರೆಗಳ ಸೀಳಿ
ತಲುಪುವುದಾಚೆಯ ದಡದ ಕೊನೆ

ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಳೆ
ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ

                                                           - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ