ಶನಿವಾರ, ಅಕ್ಟೋಬರ್ 30, 2010

ಕವಿತೆಯ ಕಷ್ಟ

ಕೆಲವು ಕವಿತೆಗಳು
ಕರೆದ ಕೂಡಲೇ ಬಂದುಬಿಡುತ್ತವೆ
ಚಿಕ್ಕ ಮಕ್ಕಳ ಹಾಗೆ
ಇನ್ನು ಕೆಲವಂತೂ ಹೊಸಿಲು ದಾಟಿ ಹೊರಕ್ಕೆ
ಬರುವುದೇ ಇಲ್ಲ - ಹೊಸ ಮದುವೆ ಹೆಣ್ಣಿನ ಹಾಗೆ
ಅವಕ್ಕೆ ಮೈ ತುಂಬಾ ನಾಚಿಕೆ

ಕೆಲವು ಕವಿತೆಗಳು ಮುಂಜಾನೆ ಗಿಡದ ಮೈ ತುಂಬ
ಸಮೃದ್ಧವಾಗಿ ಅರಳಿರುವ ಹೂವು
ಇನ್ನೂ ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬರದ ಹಾವು 

ಮತ್ತೆ ಕೆಲವು ಮಬ್ಬುಗತ್ತಲಲ್ಲಿ ಮಲಗಿರುವ
ಆಕಾರವಿಲ್ಲದ ನೋವು.

ಕೆಲವು ಕವಿತೆಗಳು ಕಾರ್ತೀಕದಲ್ಲಿ
ಮನೆತುಂಬ ಕಿಲಕಿಲ ನಗುವ ಹಣತೆಗಳು
ಕೆಲವಂತೂ ಯಾವ ದುರ್ಬೀನಿಗೂ ಕಾಣದಂತಡಗಿರುವ
ಅಪರೂಪ ನಕ್ಷತ್ರಗಳು

ಕವಿತೆಯ ಕಷ್ಟ - ಸುಲಭದ ಮಾತು
ಹೀಗೆ ಎಂದು ಹೇಳಲಾಗುವುದಿಲ್ಲ.
ಒಂದೊಂದು ಸಲ ಸಲೀಸಾಗಿ ನೆಲಬಿಟ್ಟು
ಏರಿದ ವಿಮಾನ,
ಅಷ್ಟೇ ಸುಲಭವಾಗಿ ನೆಲಕ್ಕೆ ಇಳಿಯುವುದು
ತೀರಾ ಅನುಮಾನ.

ಹೀಗಾಗಿ ಇಲ್ಲಿ ಅಪಘಾತಗಳು
ಅಪರೂಪವೇನಲ್ಲ.

ಆದರೆ, ಹಾಗೇನಾದರೂ ಆದರೆ
ಕಂಪನಿಯವರು ಜವಾಬ್ದಾರರಲ್ಲ
                                           
                                                - ಜಿ. ಎಸ್. ಶಿವರುದ್ರಪ್ಪ

ಕಾಮೆಂಟ್‌ಗಳಿಲ್ಲ: