ಗುರುವಾರ, ಜನವರಿ 16, 2014

ಕುಶಲ ಪ್ರಶ್ನೆ

ಈ ವಾರದುದ್ದಕೂ ಇವನು ದಿನವೂ ಸಿಕ್ಕಿ
ಬಿಸಿಲಿಲ್ಲದಿದ್ದರೂ ನನಗೆ ಚತ್ರಿಯ ಹಿಡಿದು
ಜೇಬಿನಲ್ಲಿರದ ಕನ್ನಡಕವನ್ನು ಹುಡುಕುತ್ತ,
'ಕ್ಷೇಮವೇ?' ಎಂದು ಮೃದುವಾಗಿ ಕೇಳಿದ್ದಾನೆ.

ತಾನು ಯಾರೆಂದೆಲ್ಲ ತಿಳಿಸದಿದ್ದರೆ ಕೂಡ
(ನನ್ನ ತಪ್ಪೂ ಉಂಟು: ನಾನೂ ಕೇಳಲಿಲ್ಲ!)
ಅನೇಕ ವಿಷಯಗಳನ್ನು ನನಗೆ ಹೇಳಿದ್ದಾನೆ.
ನಾನು ಕಂಬದ ಹಾಗೆ ನಿಂತು ಕೇಳಿದ್ದೇನೆ.

ಇವನು ಹೇಳಿದ್ದಲ್ಲ ನನ್ನ ಸದ್ಯದ ಪ್ರಶ್ನೆ;
ಇವನು ಕೇಳಿದ್ದು, ಕುಶಲಪ್ರಶ್ನೆ, ನನ್ನನ್ನು
'ಕ್ಷೇಮವೇ?' ಎಂದು ಕೇಳಿದ್ದೆ ತಪ್ಪೆಂದೆಲ್ಲ,
ವಾರಕ್ಕೆ ಎರಡು ಸಲ ಬಹಳ ಸಾಕಾಗಿತ್ತು!

(ಕಂಡಾಗಲೆಲ್ಲ ಹೀಗೇಕೆ ಕೇಳುತ್ತಾನೆ?);
ಬಂತು ಸಂಶಯ ನನಗೆ ವಾರಾಂತ್ಯದಲ್ಲಿ
ಮನೆಯವರಿಗೀ ವಿಷಯ ಅರ್ಥವಾಗುವುದಿಲ್ಲ:
ಗೆಳೆಯರನ್ನೀಗ ಮಾತಾಡಿಸುವ ಹಾಗಿಲ್ಲ!

ಈ ಸಲದ ಆಷಾಢವೆಲ್ಲ ಹೀಗೆಯೆ ನನಗೆ:
ಮುಟ್ಟಿದರೆ ಮುಳ್ಳು. ಪರಿಹಾರಕ್ಕೆ ಇವನನ್ನೇ
ಕಾಣಬೇಕೆಂದು ಎದ್ದವನೆ ಬಂದಿದ್ದೇನೆ
ಹೂಮಾಲೆ ಹಿಡಿದು. ಕಣ್ಣಲ್ಲೆ ಅಳೆದಿದ್ದೇನೆ

ಒಂದಂಗಡಿಯ ಬಿಡದೆ. ಇವನಿಲ್ಲ, ಬಂದಿಲ್ಲ.
ಯಾರಿಲ್ಲವೆಂದು ಯಾರನ್ನು ಕೇಳುವುದಿಲ್ಲಿ?
ನನ್ನ ಕ್ಷೇಮದ ಕಡೆಗೆ ನನ್ನ ಗಮನವ ಸೆಳೆದ 
ಕರುಣಾಳುವಿಲ್ಲದೆಯು ಪೂರ್ತಿಯಾಗಿದೆ ಪೇಟೆ.

                                                   - ಕೆ. ಎಸ್. ನರಸಿಂಹಸ್ವಾಮಿ
                                                     'ತೆರೆದ ಬಾಗಿಲು'

ತನುವು ನಿನ್ನದು

ತನುವು ನಿನ್ನದು, ಮನವು ನಿನ್ನದು,
ಎನ್ನ ಜೀವನ ಧನವು ನಿನ್ನದು:
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೆ ನನ್ನದು!

ನೀನು ಹೊಳೆದರೆ ನಾನು ಹೊಳೆವೆನು;
ನೀನು ಬೆಳೆದರೆ ನಾನು ಬೆಳೆವೆನು;
ನನ್ನ ಹರಣದ ಹರಣ ನೀನು,
ನನ್ನ ಮರಣದ ಮರಣವು!

ನನ್ನ ಮನದಲಿ ನೀನೆ ಯುಕ್ತಿ,
ನನ್ನ ಹೃದಯದಿ ನೀನೆ ಭಕ್ತಿ,
ನೀನೆ ಮಾಯಾಮೋಹ ಶಕ್ತಿಯು,
ನನ್ನ ಜೀವನ ಮುಕ್ತಿಯು!

                 - ಕುವೆಂಪು
                    'ಅಗ್ನಿಹಂಸ'

ಸೋಮವಾರ, ಜನವರಿ 13, 2014

ಕವಿ-ವೇದಾಂತಿ

ವೇದಾಂತಿ ಹೇಳಿದನು:
ಹೊನ್ನೆಲ್ಲ ಮಣ್ಣು;
ಕವಿಯೊಬ್ಬ ಹಾಡಿದನು:
ಮಣ್ಣೆಲ್ಲ ಹೊನ್ನು!

ವೇದಾಂತಿ ಹೇಳಿದನು:
ಈ ಹೆಣ್ಣು ಮಾಯೆ;
ಕವಿಯು ಕನವರಿಸಿದನು:
ಓ ಇವಳೆ ಚೆಲುವೆ
ಇವಳ ಜೊತೆಯಲಿ ನಾನು
ಸ್ವರ್ಗವನೆ ಗೆಲುವೆ!

ವೇದಾಂತಿ ಹೇಳಿದನು:
ಈ ಬದುಕು ಶೂನ್ಯ,
ಕವಿ ನಿಂತು ಸಾರಿದನು:
ಇದು ಅಲ್ಲ ಅನ್ಯ,
ಜನ್ಮ ಜನ್ಮದಿ ಸವಿವೆ
ನಾನೆಷ್ಟು ಧನ್ಯ!

                                     - ಜಿ. ಎಸ್. ಶಿವರುದ್ರಪ್ಪ
                                       'ಕಾರ್ತೀಕ' (೧೯೬೧)
ಆವಾಹನೆ

ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರುಮಳೆಯಾಗಿ,
ತುಂಬಲಿ ತುಳುಕಲಿ ಬತ್ತಿದ ಹೊಳೆ ಕೆರೆ
ಹೊಸ ಹಸುರೇಳಲಿ ನವುರಾಗಿ!

ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತಗಳಾಗಿ,
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿರಿ ಚೆಲು ಬೆರಳಾಗಿ!

ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಬೊಗರಾಗಿ,
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳ ಹೊರಗನು ಬೆಳಗಿ.

ಎಲ್ಲೋ ದೂರದಿ ಚಿಕ್ಕೆಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೇ
ಬನ್ನಿ ನನ್ನೆದೆಗೆ, ಲಾಸ್ಯವನಾಡಿರಿ
ಚಿಮ್ಮಲಿ ನಲವಿನ ಬುಗ್ಗೆಗಳೇ.

                                    - ಜಿ. ಎಸ್. ಶಿವರುದ್ರಪ್ಪ
                                      'ಕಾರ್ತೀಕ' (೧೯೬೧)
ನಗೆದೀಪ ಕಣ್ಣಲಿರಿಸು

ನಗೆದೀಪ ಕಣ್ಣಲಿರಿಸು ಗೆಳೆಯ ನೀ
ನಗೆದೀಪ ಕಣ್ಣಲಿರಿಸು

ಮುರಿದ ಕನಸನು ಗುಡಿಸಿ
ಮನದ ಮೂಲೆಗೆ ಸರಿಸಿ
ಹೊಸಮಿಂಚು ಎದೆಗೆ ಕರೆಸು - ತಪ್ಪದೇ
ಹಳೆ ಕಹಿಯ ಉರಿಗೆ ಸಲಿಸು

ಆಸೆ ಫಲಿಸಲಿ ಎಂದು
ಆತುರದಿ ಹಾಯದಿರು
ಕಾಯುವುದ ಮನಕೆ ಕಲಿಸು - ಏನನೂ
ಕಾದು ಪಡೆಯುವುದೆ ಸೊಗಸು

ಹೊಸ ಹಾದಿಗಳ ಅರಸು
ಹೊಸ ಶಿಖರಗಳ ಜಯಿಸು
ಎದೆನೋವ ನಕ್ಕು ಮರೆಸು - ಎಂದಿಗೂ
ಹಸನಾಗಿ ಇರಲಿ ಮನಸು

                                                                  - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಕಾಗದದ ದೋಣಿಗಳು

ಕಾಗದದ ದೋಣಿಗಳು ತೇಲಿದರು ಏನಂತೆ
ಮಿನುಗದೇ ಮರಿ ಬೆಳಕು ಮಡಿಲಿನಲ್ಲಿ?
ತೆವಳಿದರು ಏನಂತೆ ಕಾಲು ಇಲ್ಲದ ಗಾಳಿ
ಚೆಲ್ಲದೇ ಕಂಪನ್ನು ದಾರಿಯಲ್ಲಿ?

ನಾರುತಿಹ ಗೊಬ್ಬರವು ಜೀವರಸವಾಗಿ
ಊರದೇ ಪರಿಮಳವ ಮಲ್ಲಿಗೆಯಲಿ?
ತಿಂದೆಸೆದ ಓಟೆಯೂ ಮರವಾಗಿ ಹರವಾಗಿ
ವರವಾಗದೇ ಹೇಳು ಹಣ್ಣಿನಲ್ಲಿ?

ಉಪ್ಪಾದರೂ ಕಡಲು ನೀರ ಒಡಲಲ್ಲಿಟ್ಟು
ಸೀನೀರ ಮೋಡಗಳ ತಾರದೇನು?
ಸಾಗರಕೆ ಬಿದ್ದ ಜಲ ಕೂಡಿಟ್ಟ ಅನ್ನ ಬಲ
ಕಾಯುವುದು ಸಮಯದಲಿ ಲೋಕವನ್ನು

ಒಂದೊಂದು ವಸ್ತುವಿಗೂ ಒಂದೊಂದು ಮಾಯೆ
ಒಂದೊಂದಕೂ ಸ್ವಂತ ಧಾಟಿ ನಡಿಗೆ
ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ
ನಗೆಗೀಡು ಏನಿಲ್ಲ ಸೃಷ್ಟಿಯೊಳಗೆ

                                                             - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಎಂದೂ ಕಾಣದಂಥ ಕನಸು

ಎಂದೂ ಕಾಣದಂಥ ಕನಸು
ಬಂದು ಮನವ ತಾಗಿತು
ಬಂದ ಗಳಿಗೆ ಎಂತೊ ಏನೊ
ಅಲ್ಲೆ ಮನೆಯ ಹೂಡಿತು

ನಿಂತ ಕಡೆಯೆ ಬೇರನೂರಿ
ಆಳ ಅಗಲ ಹರಡಿತು
ಧಗೆ ತುಂಬಿದ ನೆಲದ ಎದೆಗೆ
ಹಸಿರು ಮಾತ ಉಸುರಿತು

ತೀರುತಿರುವ ಹರುಷದಂತೆ
ಆರುತಿರುವ ದೀಪವು
ಮೀರಿ ಉರಿದು ಕೊರಗು ಹರಿದು
ಕೊನೆಯಾಯಿತು ಶಾಪವು

ಜೀವ ಭಾವ ಕಾವು ನಿಂತು
ಬೆರಗು ಮುಳ್ಳು ಕಲ್ಲಿಗೂ
ಕವಿತೆ ಬೆಳೆದ ಕಂಪು ಬಂತು
ಅಲ್ಲಿ ಇಲ್ಲಿ ಎಲ್ಲಿಗೂ

                                                         - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಶುಕ್ರವಾರ, ಜನವರಿ 10, 2014

ಅವ್ವ

ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟುಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ.

                                                 - ಪಿ. ಲಂಕೇಶ್
ನಿಲ್ಲಿಸದಿರು ವನಮಾಲಿ

ನಿಲ್ಲಿಸದಿರು ವನಮಾಲೀ
ಕೊಳಲ ಗಾನವ IIಪII
ನಿಲ್ಲಿಸೆ ನೀ ಕಳೆವುದೆಂತೊ
ಭವಭೀತಿಯ ಕೇಶವ IIಅ.ಪII

ಕ್ರೂರದೈವ ಬಲಿಗೆ ಎಂತು
ಕಾಯುತಿಹುದೊ ದೂರ ನಿಂತು
ಅಂತೆ ನಮ್ಮ ತುತ್ತುಗೊಳ್ಳೆ
ಹೊಂಚುತಿಹುದು ಭೀತಿಯಿಂತು - ನಿಲ್ಲಿಸದಿರು

ಊರಿದಲ್ಲ ಹಳುವು ಎಂಬ
ಹಗಲಿದಲ್ಲ ಇರುಳು ಎಂಬ
ಇಂತುಗೈದುದೊಳಿತೇ ಎಂಬ
ಭಯವಪ್ಪುದೊ ಬಗೆಯ ತುಂಬ - ನಿಲ್ಲಿಸದಿರು

ನಾನು ಸತಿ ಆತ ಪತಿ
ಅಣ್ಣ ಅಕ್ಕ ಏನು ಗತಿ
ಇಂತು ನಂಟತನವಿವೆಲ್ಲ
ಮರುಕೊಳಿಪವೊ ಮನದಿ ನಲ್ಲ - ನಿಲ್ಲಿಸದಿರು

ಹಿರಿಯರಿಟ್ಟ ನಯದ ನಡೆಯ
ಮೀರಿಹೆವೆಂದಹುದುರುಭಯ
ನಿನ್ನ ಕೊಳಲು ನೀಡಲಭಯ
ನಟ್ಟಿರುಳೊಳೆ ಬಂದೆವಯ್ಯ - ನಿಲ್ಲಿಸದಿರು

ನಮ್ಮ ಬಾಳಿನಾಳದಿಂದ
ಮತ್ಸ್ಯನಂತೆ ಮೇಲೆ ತಂದ
ಕೃಷ್ಣ ಈ ಚಿದಾನಂದ
ಮರಳಿ ಮುಳುಗಿ ಹೋಹುದಯ್ಯ - ನಿಲ್ಲಿಸದಿರು

ನೀರು ನಿಂತು ಕೊಳೆಯುವಂತೆ
ನಮಗಹುದೋ ನೂರು ಚಿಂತೆ
ಕೊಳಲುಲುಹಿನ ನೆರೆಯು ನುಗ್ಗಿ
ಜೀವ ಹರಿಯಲೆಂಥ ಸುಗ್ಗಿ - ನಿಲ್ಲಿಸದಿರು

ಭವದ ಮಾಯೆ ಅಡಗುವಂತೆ
ಅಹಂಕಾರ ಕರಗುವಂತೆ
ನಿನ್ನ ಗಾನದನುರಾಗವು
ಬದುಕ ತುಂಬಲನುಗಾಲವು
ನಿಲ್ಲಿಸದಿರು ವನಮಾಲೀ
ಕೊಳಲ ಗಾನವ

                                    - ಪು. ತಿ. ನರಸಿಂಹಾಚಾರ್
                                      ' ಗೋಕುಲ ನಿರ್ಗಮನ '

ಮಂಗಳವಾರ, ಜನವರಿ 7, 2014

ಸಾವಿರಾರು ನದಿಗಳು

ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು

ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ
ಇರುವೆಯಂತೆ ಹರಿದಸಾಲು ಹುಲಿಸಿಂಹದ ದನಿಗಳು
ಧಿಕ್ಕಾರ ಧಿಕ್ಕಾರ ಅಸಮಾನತೆಗೆ
ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ
ಲಕ್ಶಾಂತರ ನಾಗರಗಳು ಹುತ್ತಬಿಟ್ಟು ಬಂದಂತೆ
ಊರತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು
ಬೀದಿಯಲ್ಲಿ ಗಲ್ಲಿಯಲ್ಲಿ
ಬೇಲಿಮೆಳೆಯ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು

ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂಠ ಕೇಳಿದೊಡನೆ
ಅವರ ದನಿ ಇಂಗಿತು
ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ
ಛಡಿಯ ಏಟು ಹೊಡೆದವರ
ಕುತ್ತಿಗೆಗಳ ಹಿಡಿದರು.

ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರಪುರಾಣ ಬಂದೂಕದ ಗುಡಾಣ
ತರೆಗೆಲೆ ಕಸಕಡ್ಡಿಯಾಗಿ
ತೇಲಿತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು

                         - ಸಿದ್ಧಲಿಂಗಯ್ಯ

ಬುಧವಾರ, ಜನವರಿ 1, 2014

ಹೊಸ ವರ್ಷ ಹೊಸ ಹರ್ಷ ತರಲಿ.. :)


ಹಾಡುವ ಹಕ್ಕಿಗೆ ಹೂವಿನ ರೆಂಬೆ

ಹಾಡುವ ಹಕ್ಕಿಗೆ ಹೂವಿನ ರೆಂಬೆ
ಕಂದನ ಕೈಗೆ ಬಣ್ಣದ ಗೊಂಬೆ
ಆಶೀರ್ವದಿಸಲಿ ಈ ಹೊಸ ವರ್ಷ
ಪ್ರಾಯದ ಗಂಡಿಗೆ ಪ್ರೀತಿಯ ರಂಭೆ

ಖಾಲಿ ಆಗಸಕೆ ಕಪ್ಪನೆ ಮೋಡ
ಬೆಂದ ಜೀವಕೆ ಬೆಚ್ಚನೆ ಗೂಡ
ಬಾಗಿನ ನೀಡಲಿ ಈ ಹೊಸ ವರ್ಷ
ಕವಿ ಕಲ್ಪನೆಗೆ ಹೊಸ ಹೊಸ ಹಾಡ

ನಲ್ಲಿಯ ಬಾಯಿಗೆ ನಿಲ್ಲದ ನೀರು
ಹೊತ್ತು ಹೊತ್ತಿಗೆ ತಪ್ಪದೆ ಹಾಲು
ಸಿಗುವಂತಾಗಲಿ ಈ ಹೊಸ ವರ್ಷ
ಬಡವರಿಗೂ ಮೈ ತುಂಬಾ ನೂಲು

ಬಿರಿದ ಭೂಮಿಗೆ ಸುರಿಯುವ ಧಾರೆ
ಮಿರಿ ಮಿರಿ ಮಿಂಚಿನ ಗದ್ದೆಯ ಮೋರೆ
ತರುವಂತಾಗಲಿ ಈ ಹೊಸ ವರ್ಷ
ಮೆರೆಯಲಿ ನಾಡಿನ ಭಾಗ್ಯದ ತಾರೆ

                                                          - ಡಾ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಹೊಸ ವರ್ಷದ ಕೊಡುಗೆ

ನೀಡು ಬಾ, ನೀಡುಬಾ
ಹೊಸ ವರ್ಷಕೆ ಹೊಸ ಕೊಡುಗೆಯ
ಈ ನಾಡಿಗೆ ನೀಡು ಬಾ

ಚೆದುರಿ ಬಿದ್ದ ಚೂರುಗಳಿಗೆ
ಅಯಸ್ಕಾಂತ ಶಕ್ತಿಯ
ಮುರಿದು ಬಿದ್ದ ಬಯಕೆಗಳಿಗೆ
ಹಾರುವಂಥ ರೆಕ್ಕೆಯ
ಬತ್ತಿದಂಥ ಕಣ್ಣುಗಳಿಗೆ
ಭರವಸೆಗಳ ದೀಪವ-

ಉದುರಿದೆಲೆಯ ಕೊಂಬೆಗಳಿಗೆ
ಹೊಸ ವಸಂತ ಸ್ಪರ್ಶವ
ಬಾಯಾರುತ ಬಿದ್ದ ನೆಲಕೆ
ಹೊಸ ಮಳೆಗಳ ಹರ್ಷವ
ಕಣ್ಣ ತೆರೆವ ಬೀಜಗಳಿಗೆ
ಮೇಲೇಳುವ ತ್ರಾಣವ-

ಗಡಿ ಕಾಯುವ ಎಚ್ಚರಕ್ಕೆ
ಬೆಂಬಲಗಳ ರಕ್ಷೆಯ
ಪರಾಕ್ರಮಣದಾತುರಕ್ಕೆ
ಸಿಡಿಗುಂಡಿನ ಶಿಕ್ಷೆಯ
ಸ್ನೇಹ-ಪ್ರೀತಿ-ವಿಶ್ವಾಸಕೆ
ಮುಗುಳು ನಗೆಯ ಮಾಲೆಯ-

ದುಡಿದು ದಣಿದು ಮಲಗಿದೆದೆಗೆ
ಕೃತಜ್ಞತೆಯ ನಮನವ
ಸುತ್ತ ಉರಿವ ದೀಪಗಳಿಗೆ
ಹೊಸ ಬತ್ತಿಯ, ತೈಲವ,
ಹೊಸ ಗಾಡಿಗೆ ಹೊಸ ಗಾಲಿಯ
ಹೊಸ ಕುದುರೆಯ ಜೋಡಿಯ-

                                - ಜಿ. ಎಸ್. ಶಿವರುದ್ರಪ್ಪ
                                 ' ಗೋಡೆ ' (೧೯೭೨)