ಮಂಗಳವಾರ, ನವೆಂಬರ್ 30, 2010

ಗೆಳೆತನ


ಕೊನೆಗಾಣದೆ ಬಿಗಿಮಾಣದೆ ತಳುವಬೇಕು - ಗೆಳೆತನ.
ತಳುವಬೇಕು - ನನಗೆ ನಿನಗೆ ಬರುವ ತನಕ ಕೊನೆದಿನ.
ತಳಿರ ತಳಿರ ತಳ್ಕೆಯಂತೆ ಮೃದುಲ ಮಧುರ ಜೀವನ.
ಮಲರ ಮಲರ ಮಾಳ್ಕೆಯಂತೆ ಮನದ ಮನದ ಮಿದುತನ.

ಒಂದೆ ಗಾನತಾನ ನನ್ನ ನಿನ್ನ ಹೃದಯ ಮಿಲನಕೆ.
ಒಂದೆ ಅಚ್ಚುಮೆಚ್ಚು ನಮ್ಮ ಭಾವ ಜೀವ ವಲನಕೆ.
ಒಂದೆ ಅಂಕೆಸಂಖ್ಯೆ ನಮ್ಮ ಸೌಖ್ಯದ ಸಂಕಲನಕೆ.
ಒಂದೆ ಗಮ್ಯಗತಿಯು ನಮ್ಮ ಜೀವನ ಸಂಚಲನಕೆ.

ಗುಡುಗು ಮಿಂಚಿನಂತೆ ಒಂದುಗೂಡಿ ಮೊಳಗಿ ಬೆಳಗುವಾ!
ಕಡಲುತಡಿಗಳಂತೆ ಒಂದನೊಂದು ತಡೆದು ತಡೆಹುವಾ
ಗಾಳಿ ಕಿಚ್ಚಿನಂತೆ ಕೂಡಿಯಾಡಿ ತಿರೆಯ ಬೆಳಗುವಾ!
ಬಾನುಬುವಿಗಳಂತೆ ಒಂದಕೊಂದು ಸೀಮೆ ಎನಿಸುವ!

ಮುಗಿಲ ಯುಗಲದಂತೆ ಬಂದು ಸೇರಿ ಸಾರಿ ಅಗಲದೆ,
ಹಗಲ ಮೊಗದ, ರಾಗದಂತೆ ಸಂಜೆಯೊಡನೆ ಜಗುಳದೆ
ಗಾಳಿಗೈಯ ತರಗಲಂತೆ ಕಲೆತು ತಿರುಗಿ ಕದಲದೆ
ಬಾಳಬೇಕು, ಬೆಳೆಯಬೇಕು ಸಖ್ಯ ಕ್ಷಣಿಕವೆನಿಸದೆ.

ನಿನ್ನೊಳೊಂದೆ ಭಿಕ್ಷೆ ಗೆಳತಿ, ಅದುವೆ ಹೃದಯದಾನವು!
ಜನ್ಮಮೃತ್ಯುಗಳಲು ನಗುವ ಪ್ರೇಮದಮೃತ ಪಾನವು.
ದುಃಖ ಸುಖಗಳನ್ನು ಮಿಗುವ ತ್ಯಾಗದ ಮರಗಾನವು
ಹೊಂದುವಳಿಕೆ ತವದ ಸೌಖ್ಯಯೋಗದ ಭ್ರಯಾನವು.

ನನ್ನ ನಿನ್ನ ಜೀವ, ಗೆಳತಿ, ಒಂದಕೊಂದು ಪೂರಕ,
ನನ್ನ ನಿನ್ನ ಭಾವ ಒಂದಕೊಂದು ಕಾಂತಿದಾಯಕ.
ಒಂದು ಹೃದಯ ಧನುವು, ಮೆಣದೊಂದು ನಿಶಿತ ಸಾಯಕ
ಒಂದು ಗಂಗೆ, ಒಂದು ಯಮುನೆ - ಏಕ ಮಾರ್ಗವಾಹಕ.

ಹೀಗೆ ಬಾಳ್ವೆನೆಂಬೆ ಬಯಕೆಯೊಂದದೇಕೆ ಹಿರಿದಿದೆ?
ಯೋಗವಿದು ನಿರರ್ಥ, ನಿನ್ನ ಹೃದಯ ಯೋಗ ಬರದಿರೆ.
ಬರಿಯ ಕೆಂಡ ಗಳಿಗೆಯೊಳಗೆ ನಂದಿ ಕಾಂತಿಯುಳಿಯದೆ?
ನೆರವು ಬರಲು ಗಾಳಿಯಿಂದ ಅದರ ಬಾಳು ಬೆಳಗದೆ?

                                                            - ಎಂ. ಗೋಪಾಲಕೃಷ್ಣ ಅಡಿಗ
                                                              ' ಕಟ್ಟುವೆವು ನಾವು '

ಶುಕ್ರವಾರ, ನವೆಂಬರ್ 26, 2010

ರೂಹಿಲ್ಲದ, ಕೇಡಿಲ್ಲದ

ಸಾವೇ ಓ ಸಾವೇ,
ನೀನು ರೂಹಿಲ್ಲದ ಕೇಡಿಲ್ಲದ
ಸಾವಿಲ್ಲದ ಚೆಲುವ ನನ್ನೊಲುಮೆ
ನಿನ್ನ ಮೇಲೆ ಹೆಚ್ಚಿದಷ್ಟೂ ನೀನು
ರಹಸ್ಯ. ಆದರೂ ರಹಸ್ಯವೇನಲ್ಲ
ಎಂಬ ಭ್ರಮೆಗಳ ಕೆದರಿ ಪ್ರಶ್ನೆಯೂ
ಗುತ್ತಿ, ಮುಖದಿರುವಿ ಹೋಗುವ
ಬದುಕಿಗೆ ಉತ್ತರವೂ ಕೂಡಾ
ನೀನಿರುವ ಜಗದಲಿ ಎಂಥ ಹೂ
ಹಣ್ಣು, ನಕ್ಷತ್ರ ಕನಸೊ ಎಂಬಂಥ
ಕುತೂಹಲ. ನಿನ್ನ ಹುಡುಕಿಕೊಂಡು
ನಾನೊಂದು ಬಾರಿ ರೈಲಿನಡಿ, ನೀರಿ
ನಾಳದಲಿ, ಗಣಿಯ ಎದೆಯೊಳು,
ಆಸ್ಪತ್ರೆಯ ಮೂಲೆಮೂಲೆಗಳಲಿ
ತುಂಬಿದ ಮನೆಗಳಲಿ, ನಗುವ
ಕಣ್ಣಿನಲಿ ಅಲೆದಾಡುತ್ತ ಸದ್ದಿಲ್ಲದೆ
ಅಡಗಿದ್ದೆ ನಿನ್ನನ್ನು ಕಂಡು
ಕೇಳಿದೆ; "ಸಾವೇ ನಿನಗೆ ಬಿಡು
ವಿರದ ಕೆಲಸ ಸರಿ ನನ್ನ ಮನೆಗೆಂದು
ಬರುವಿ? ನನ್ನ ಭಗ್ನ ಪ್ರೇಮಿಯಂತೆ
ನೋಡುವ ಈ ಬದುಕಿಗೆಂದು ವಿದಾಯ?"
ಸಾವು ನಗುನಗುತ್ತ ಉತ್ತರಿಸಿತು
"ಪ್ರಿಯೆ ನಿನ್ನಷ್ಟು ನನ್ನನ್ನು ಯಾರು 
ಪ್ರೀತಿಸುವರು? ಯಾರು ನೆನೆಯುವರು?
ಬೆಚ್ಚಗಿನ ಆ ಒಲವಿನಲಿ ನೆನೆಯಲಾಸೆ
ನನಗಿನ್ನೂ, ಆ ಪ್ರೀತಿ ಆ ಒಲವುಗಳ
ಸವಿ ಅನುಭವವಿರಲಿ ಇನ್ನೊಂದಿಷ್ಟು
ದಿನ, ನಿನ್ನ ಹೊರತು ನಾ ಇರಬಲ್ಲೆನೆ?
ಬದುಕಬಲ್ಲೆನೆ?" ನಗುನಗುತ್ತ
ಸಾವು ಹೊರಟು ಹೋಯಿತು - ನನಗೆ
ಬದುಕುವ ಹೊಸ ಉತ್ಸಾಹ ಹುಟ್ಟಿಸುತ್ತ!
ಹೌದು ನನಗೆ ಬದುಕುವ ಹೊಸ
ಉತ್ಸಾಹ ಹುಟ್ಟಿಸುತ್ತ.

                                      - ಎಚ್.ಎಸ್. ಮುಕ್ತಾಯಕ್ಕ

ಗಜಲ್

ಅವನು ಎದುರಿಗಿದ್ದರೂ ಅದೇಕೋ ನಾನು ನಂಬದೆ ಹೋದೆ.
ಜೀವನವು ಇಷ್ಟು ಕರುಣಾಳು ಎಂಬುದನು ನಚ್ಚದೆ ಹೋದೆ.

ಯಾರ ನೋವುಗಳನರಿಯುವುದು ಯಾರಿಗೂ ಬೇಕಾಗಿಲ್ಲ
ಎಲ್ಲರೂ ನನ್ನವರಲ್ಲವೆನ್ನುವುದನು ತಿಳಿಯದೆ ಹೋದೆ.

ಜನ್ಮಜನ್ಮಾಂತರದಿಂದಲೂ ಈ ಹೃದಯ ಒಬ್ಬಂಟಿಯೆ
ಯಾರು ಹೇಳಿದರೂ ಮುನ್ನವೀ ಸತ್ಯವ ಅರಿಯದೆ ಹೋದೆ.

ಇಂದು ಮಳೆಬಿಲ್ಲುಗಳ ಜಾತ್ರೆಯೇ ನೆರೆದಿದೆ ಇಳೆಯ ತುಂಬ
ಆ ಸೊಬಗನುಟ್ಟು ಬರುವಿಯೆಂಬ ಕಲ್ಪನೆಯು ಇರದೆ ಹೋದೆ.

ವಿಶ್ವಾಸವೆಂಬುದು ಬರಿ ಒಂದು ಸುಂದರ ಶಬ್ದ ಮಾತ್ರವು
ಆಣೆ ಭಾಷೆಯ ತಪ್ಪದವರನು ಎಲ್ಲೂ ಕಾಣದೆ ಹೋದೆ.

ಇಂಥ ಮಿಲನದಿರುಳು ವ್ಯರ್ಥ ಗತಿಸಿ ಹೋಗಿಹವು
ಈ ದಿನವೂ ಸಹ ಯಾಕೋ ಅವನ್ನೆಲ್ಲ ಮರೆಯದೆ ಹೋದೆ.

ನಿನ್ನ ದರ್ಶನದಿಂದ ಕತ್ತಲೆಯಲ್ಲೂ ಮನೆಯು ಬೆಳಗಿತು.
ನೋಡುತ್ತಲೇ ನಿಂತೆ ಒಳಗೆ ಬಾ ಎಂದು ಕರೆಯದೆ ಹೋದೆ.

                                                              - ಎಚ್ ಎಸ್. ಮುಕ್ತಾಯಕ್ಕ
ಗಜಲ್

ಅರ್ಧರಾತ್ರಿಯಲ್ಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು
ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು.

ಪ್ರೇಮವೆಂಬುದು ಎಂಥಾ ಮರುಳಾಟವೆಂದು ಭಾರವಾಯಿತು ಮನಸ್ಸು
ಬಿರುಗಾಳಿಯಲ್ಲಿ ದೀಪ ಉರಿಸಿದ್ದೇಕೆಂದು ಕಣ್ಣೆವೆಯು ಕೇಳಿತು

ನನ್ನೆರೆಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ
ಕೊನೆಗಳಿಗೆಯಲ್ಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು.

ಇರುಳ ತಂಪಿನಲಿ ನೆನಪಾಯಿತು ಬಿಸಿಯಪುಗೆಯ ಒಡನಾಟ ತಪ್ಪಿದ್ದು
ಇನ್ನೊಂದು ಬಟ್ಟಲನು ತುಂಬುವರಾರೆಂದು ಮಧುಪಾತ್ರೆಯು ಕೇಳಿತು.

ಯಾವುದೋ ನೋವೊಂದು ನಯನ ಹೂಗಳಲ್ಲಿ ಇಬ್ಬನಿಯ ಸುರಿಸುತಿಹುದು
ಕೊನೆಯಿಲ್ಲವೆ 'ಮುಕ್ತಾ' ಇದಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು.

                                                                - ಎಚ್.ಎಸ್. ಮುಕ್ತಾಯಕ್ಕ

ನಿನ್ನ ಸಂಗಾತಿ ಆಗಲಾರದ್ದಕ್ಕೆ

ಎಲ್ಲೆಡೆ ಚೈತ್ರ ಮುಂಗುರುಳ ಸರಿಸುತ್ತಾನೆ
ನನ್ನ ಮೊಗದಲ್ಲಿ ಮಾತ್ರ ಹಿಮಮಾರುತ!
ಮನೆಯ ತುಂಬೆಲ್ಲ ಎಂದೆಂದಿಗೂ ಪರಿಚಯ
ವಾಗಲೊಲ್ಲದ  ಅಪರಿಚಿತ ಮುಖಗಳು
ಭೂಕಂಪದಲಿ ಕುಸಿದ ಮನೆಯ ಅವಶೇ
ಷದಡಿ ಬದುಕಿರುವೆನೇನೋ ಎಂಬಂತೆ
ಗೆಳೆಯ ಮರುಗುತ್ತೇನೆ ನಿನ್ನವಳಾಗಲಾರದ್ದಕ್ಕೆ
ಹಕ್ಕಿಯಾಗಿ ಹಾರುತ್ತವೆ ನಿನ್ನ ಕವಿತೆಗಳು
ಬಾನ ತುಂಬೆಲ್ಲ ತೇಲುತ್ತವೆ - ನಾನು
ಮೋಡವಾಗಿದ್ದರೆ! ಹಂಬಲಿಸುತ್ತೇನೆ
ವಧುವಿನಂತೆ ಶೃಂಗಾರಗೊಂಡ ರಾತ್ರಿ
ಅವ್ಯಕ್ತ ಯಾತನೆಯ ಹೆಚ್ಚಿಸುತ್ತದೆ. ದಾರಿ
ತಪ್ಪಿದ ಯಾತ್ರಿಕನಂತೆ ಮನ ಬಂದಂತೆ
ಅಲೆದಾಡುತ್ತೇನೆ ನಿನ್ನ ಪಡೆಯಲಾರದ್ದಕ್ಕೆ.
ಈ ದುರಂತವನ್ನೇ ವೈಭವದಿಂದ ಬಾಳ
ಬೇಕಾದ ದೌರ್ಭಾಗ್ಯಕ್ಕೆ, ಆಕಾಶವೂ
ದುಃಖದಿಂದ ನೀಲಿಗಟ್ಟಿದೆ, ಬೆಳಗೂ ಕ್ಷಯ
ಗೊಂಡಿದೆ. ಸಾವು ಕೂಡಾ ದುಗುಡಗೊಂಡಿದೆ
ಇನಿಯ ಪರಿತಪಿಸುತ್ತೇನೆ ನಿನ್ನವಳಾಗದುದಕ್ಕೆ
ಮಳೆಗಾಲದಲ್ಲಿ ಹಳ್ಳಕೊಳ್ಳ ತುಂಬಿ ಹರಿಯುತ್ತವೆ
ಯಾವ ಎಲ್ಲೆ ಕಟ್ಟುಗಳಿಲ್ಲದೆಯೆ, ನಾನು ಸರಳು
ಗಳ ಹಿಂದೆ ಬಂದಿಯಾಗಿದ್ದೇನೆ. ನಾವಿಬ್ಬರೂ
ಎಂದಿಗೂ ಕೂಡೆವೆಂಬ ಬಿಕ್ಕಳಿಕೆ ಎದೆಯಲ್ಲಿ
ಪ್ರಿಯ, ಕಂಗೆಟ್ಟಿದ್ದೇನೆ ನಿನ್ನ ಪಡೆಯಲಾರದ್ದಕ್ಕೆ
ನಿನ್ನ ನೆನಪಿನಿಂದ ಮನೆಯನ್ನು ಶೃಂಗರಿಸುತ್ತೇನೆ
ನೀನಿರದ ನೋವನ್ನು ಕವಿತೆಗಳಲ್ಲಿ ತೋಡಿ
ಕೊಳ್ಳುವೆನು. ಬಲವಂತದ ನಗೆ ತುಟಿಯಂಚಿ
ನಲಿ, ಕಣ್ಣಿನಲಿ ಸಾವಿರ ನೋವಿನಲೆಗಳು
ನೀನಿಲ್ಲದೆ ಹಸಿರಿಲ್ಲ, ಉಸಿರಿಲ್ಲ ಒಳಗೇ
ಕೊರಗುತ್ತೇನೆ ಮುಖವಾಡಗಳ ಧರಿಸುತ್ತ,
ನನ್ನರಸ ಸಾವಬಯಸುತ್ತೇನೆ ಪ್ರತಿಕ್ಷಣ
ನಿನ್ನ ಸಂಗಾತಿ ಆಗಲಾರದ್ದಕ್ಕೆ.

                                              - ಎಚ್.ಎಸ್. ಮುಕ್ತಾಯಕ್ಕ

ನಮ್ಮ ಮುತ್ತಿನ ಹನಿಗಳು


ಎಂದು ನಾ ನಿನ್ನನು ಪಡಕೊಂಡೆನೋ
ಅಂದೇ ನಾ ನನ್ನ ಕಳಕೊಂಡೆನು
ಎಲ್ಲಿರುವೆ ನಾನೆಂದು ಹುಡುಕಿದಾಗ
ನಿನ್ನೊಳಗೆ ಬೆರೆತಿದ್ದ ನಾ ಕಂಡೆನು.

ಕತ್ತಲೆಯ ಆಳದಲ್ಲಿ ನಾ
ಕರಗಿ ಒಂದಾಗುತ್ತ
ನೂರಾರು ಕನಸುಗಳ
ಹೆಣೆ ಹೆಣೆಯುತ್ತಿರುವಂತೆ
ಅವು ಚೆಲ್ಲಾಪಿಲ್ಲಿ ಹರಡಿ
ನೋಡ ನೋಡುತ್ತಿದ್ದಂತೆ
ಪತಂಗಗಳಾಗಿ
ನನ್ನೆದುರೆ ಒಂದೊಂದಾಗಿ
ಸುಟ್ಟು ಬೀಳುವುವು.

ನಕ್ಷತ್ರಗಳಂತೆ
ಇಡೀ ರಾತ್ರಿ
ನಿದ್ದೆಗೆಟ್ಟು ಮಿನುಗುವ
ನನ್ನ ನಿನ್ನ ಕಣ್ಣುಗಳು
ಬೆಳಗು ಹರಿಯುತ್ತಿದ್ದಂತೆ
ರೆಪ್ಪೆ ಮುಚ್ಚುವುವು.

ನನ್ನ ಕಂಗಳು
ಕೆಂಡವಾಗಿ
ನಿನ್ನ ಸುಡುತ್ತಿರುವಾಗ
ಸುಡುವ ಬೆಂಕಿಯಲಿ
ನನಗೆ ಬೇಯುವ ಆಸೆ.

ಯುಗ ಯುಗಳಿಂದ
ಏಕಾಂಗಿಯಾಗಿ
ಬದುಕುತ್ತಿರುವ ಚಂದ್ರನ ಕಂಡು
ನನಗೆ
ಮರುಕ ಹುಟ್ಟುವುದು.

                                         - ಎಚ್.ಎಸ್. ಮುಕ್ತಾಯಕ್ಕ

ಗುರುವಾರ, ನವೆಂಬರ್ 25, 2010

ಹೇಗೆ ಬರಲಿ ಇನಿಯ ನಿನ್ನ ಬಳಿಗೆ?


ಧೋ ಎಂದು ಸುರಿಯುತಿದೆ ಭಾರಿ ಮಳೆ ಇಲ್ಲಿ,
ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ  ಹೊತ್ತಲ್ಲಿ.
ಹೇಗೆ ಬರಲಿ ನಿನ್ನ ಬಳಿಗೆ ಇನಿಯ?
ಕೇಳಬೇಕಿದೆ ನಿನ್ನ ಜೇನುದನಿಯ.

ಇಂಗಿ ಹೋಯಿತು ಸಂಜೆ ಇರುಳ ಸೆರಗಲ್ಲಿ,
ಭಂಗ ಪಡುತಿವೆ ತಾರೆ ಮುಗಿಲ ಮರೆಯಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ  ಹೊತ್ತಲ್ಲಿ.
ಹೇಗೆ ತಲುಪಲಿ ಹೇಳು ನಿನ್ನ ಮನೆಯ?
ಹೇಗೆ ಸೇರಲಿ ಪ್ರೀತಿಪಥದ ಕೊನೆಯ?

ಹಳ್ಳ ಕೂಗುತ್ತಲಿದೆ ತುಂಬಿ ಮಳೆಯಲ್ಲಿ,
ಮನವೊ ಕುದಿಯುತ್ತಲಿದೆ ನಿನ್ನ ನೆನಪಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ  ಹೊತ್ತಲ್ಲಿ.
ಹೇಗೆ ಬರಲಿ ಇನಿಯ ನಿನ್ನ ಬಳಿಗೆ?
ಕರಗಬೇಕೋ ನಿನ್ನ ಪ್ರೀತಿಯೊಳಗೆ!

                                                  - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
                                                     ' ಹಸಿರು ತುಂಬಿದ ಕಣಿವೆ '
ವೃದ್ಧಿ


ರಾತ್ರಿಯ ಹೊತ್ತು. ಮಳೆ ಬರುತಿತ್ತು.
ಒಮ್ಮೆಗೆ ಹೋದವು ದೀಪ.
ಕೊಡೆ ಹಿಡಿದದ್ದ ಮರದಡಿಯಲ್ಲಿ
ಯಾರೋ ಹುಡುಗಿಯು ಪಾಪ -

ನಿಂತಿದ್ದಾಳೆ ಸುರಿಯುವ ಸೋನೆ
ನಿಂತೀತೆಂದು ಬೇಗ
ಮಿಂಚಿತು ಮಿಂಚು. ಮರದಡಿ ಕಂಡನು :
ಒಬ್ಬ ಹುಡುಗ ಆವಾಗ!

ಝಲ್ಲೆಂದಿತು ಎದೆ. ಯಾರೋ ಸುಮ್ಮಗೆ
ಕಡ್ಡಿಯ ಗೀರಿದ ಹಾಗೆ
ಜುಂಜುಂ ಎನ್ನುವ ಏನೋ ಒಂದು
ಎದೆಯಲಿ ತಿರುಗಿದ ಹಾಗೆ.

"ರಾತ್ರಿಯ ಮಳೆ ಇದು ನಿಲ್ಲುವುದಿಲ್ಲ" -
ಎಂದನು ಪಕ್ಕದ ಹುಡುಗ.
ಏನು ಹೇಳುವುದೋ ತಿಳಿಯದೆ ಹುಡುಗಿ
ಸುಮ್ಮನೆ ನೋಡಿದಳಾಗ!

ಕತ್ತಲಿನಲ್ಲಿ ಎತ್ತರವಾಗಿ
ಕಪ್ಪಗೆ ನಿಂತಿದ್ದಾನೆ
ನಿಲ್ಲದ ಕಾರಿನ ಹಾಯುವ ಬೆಳಕು
'ಹುಡುಗನು ಹೇಗಿದ್ದಾನೆ?'

"ಎಲ್ಲಿ ನಿಮ್ಮ ಮನೆ? ಲೇಟಾದರೆ
ಆಟೋಗಳು ಸಿಗುವುದು ಕಷ್ಟ"
ಬಸವನಗುಡಿ ಎಂದಷ್ಟೆ ಹೇಳಿದಳು
ಹೆಣ್ಣೆ ಹಾಗೆ - ಅಸ್ಪಷ್ಟ.

ಒಬ್ಬಳೆ ಹುಡುಗಿ, ಚಾಲಕ ಹೇಗೋ!
ರಿಕ್ಷ ಹತ್ತುವುದು ಹೇಗೆ?
ಜೊತೆಗಿವನಿದ್ದರೆ ಎಷ್ಟೋ ಧೈರ್ಯ!
ಕುಳಿತಳು ರಿಕ್ಷಾದೊಳಗೆ.

ಸುರಿಯುವ ಮಳೆಯಲಿ ಓಡುವ ರಿಕ್ಷಾ
ಆಟೋದವನೂ ಹುಡುಗ!
ಹೀಗೇ ಕೇಳಿದ: "ಮಳೆಗೆ ಸಿಕ್ಕಿದಿರ
ಮದುವೆ ಮುಗಿಸಿ ಬರುವಾಗ?"

ಸುಮ್ಮನೆ ಇಳಿದರು ಹುಡುಗ ಹುಡುಗಿ
ಬಸವನ ಗುಡಿಯ ಬಳಿ
ಮತ್ತೆ ಸಿಕ್ಕೋಣ ಎಂದರು ನಿಲ್ಲದೆ
ಸುರಿಯುವ ಮಳೆಯಲ್ಲಿ.

ಹೀಗೆ ಒಂದಿರುಳು, ಒಂದು ಮಳೆ, ಆ
ಹಾದಿಯ ಒಂದು ಮರ
ಎರಡೆರಡಾದವು ಶಾಶ್ವತವಾಗಿ
ಅವರು ಅಗಲಿದಾಗ!

                                             - ಎಚ್.ಎಸ್. ವೆಂಕಟೇಶ ಮೂರ್ತಿ
                                           ' ಮೂವತ್ತು ಮಳೆಗಾಲ ' 

ಬುಧವಾರ, ನವೆಂಬರ್ 24, 2010

ಹಗಲಿರುಳು ಕಾಡಿದೆ ನೋವು


ಹಗಲಿರುಳು ಕಾಡಿದೆ ನೋವು ಅಗಲಿರಲು ಹೀಗೆ ನಾವು
ನನ್ನ ನಿನ್ನ ನಡುವೆ ಒಂದು ಕಣಿವೆ ಬಿದ್ದಿದೆ
ಆಚೆ ಕೋಟೆ ಎದ್ದಿದೆ II

ಬಿರುಬಿಸಿಲ ಹಗಲಲ್ಲಿ ಪಹರೆ ರಣಹದ್ದುಗಳು
ಕಾರಿರುಳ ಮರೆಯಲ್ಲಿ ಗೂಢಚಾರಿ ನೆರಳುಗಳು
ಎದ್ದ ಕೋಡುಗಲ್ಲುಗಳಲಿ ಬಂದೂಕಿನ ಕಣ್ಣುಗಳು
ಪ್ರಿಯತಮೆ ನಿನ್ನನು ಹೇಗೆ ಸೇರಲಿ? II

ಬೀಸುತಿರುವ ಗಾಳಿಯಲ್ಲಿ ಪಿಸುಮಾತಿನ ಸಂಚುಗಳು
ಚೂಪಾದ ಮುಳ್ಳಿನ ಮುಖಕೆ ಹೂವಿನ ಮುಖವಾಡಗಳು
ಮುರಿದು ಬಿದ್ದ ಸೇತುವೆ ಹಲವು ತಲೆ ಹೊಡೆದ ಕಂಭದ ಸಾಲು
ಪ್ರಿಯತಮೆ ನಿನ್ನನು ಹೇಗೆ ಸೇರಲಿ? II

                                                   - ಎಚ್.ಎಸ್. ವೆಂಕಟೇಶ ಮೂರ್ತಿ
                                                   ' ಗೀತ ಸಂಪದ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Vaasanti.php
ನನ್ನ ಹಳೆಯ ಹಾಡುಗಳೇ


ನನ್ನ ಹಳೆಯ ಹಾಡುಗಳೆ, ನನ್ನೊಳಿರಲಿ ನಿಮ್ಮ ದಯಾ
ನಾನು ಒಂಟಿ ನನ್ನೊಡನಿದೆ
ಚಡಪಡಿಸುವ ಒಂದು ಹೃದಯಾ II

ನೋಡಬೇಡಿ ತಿವಿಯುವಂತೆ
ಬಿಡದಿರಿ ಬಿಸಿಯುಸಿರು
ಕರೆಯಬೇಡಿ ಕಣ್ಣನೀರು
ಅಳಿಸುವಂತೆ ಹೆಸರು.

ಇರುಳಿನಲ್ಲಿ ಸುರಿವ ಮಳೆ
ಆಳದಲ್ಲಿ ಮೊರೆವ ಹೊಳೆ
ಇಳಿಸಬೇಡಿ ದೋಣಿ ಹೊಳೆಗೆ
ಉಕ್ಕುತಿರುವ ಇರುಳಿನೊಳಗೆ II

ನೀಡಬೇಡಿ ಭರವಸೆಗಳ
ಸೀಳಿದೆ ನಾ ನಿಂತ ನೆಲ
ನುಡಿಸಬೇಡಿ ಮತ್ತೆ ಕೊಳಲು
ಚಿಮ್ಮುವಂತೆ ಒಳಗಿನಳಲು II

                                             - ಎಚ್.ಎಸ್. ವೆಂಕಟೇಶ ಮೂರ್ತಿ
                                               ' ಗೀತ ಸಂಪದ '

ಮಂಗಳವಾರ, ನವೆಂಬರ್ 23, 2010

 ಎಲ್ಲಿ ಜಾರಿತೋ ಮನವು 


 ಎಲ್ಲಿ ಜಾರಿತೋ ಮನವು
ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ, ಏಕೆ
ನಿಲ್ಲದಾಯಿತೋ!

ದೂರದಿಂದ ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲೀ ಸಾಲ
ಮೀಟಿ ಹಳೆಯ ಮಧುರ ನೋವ

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಹಿಂದೆ ಯಾವ ಜನ್ಮದಲ್ಲೊ
ಮಿಂದ ಪ್ರೇಮ ಜಲದ ಕಂಪು
ಬಂದು ಕಾಡುತಿರಲು ಎದೆಯ
ಹೇಳಲಾರೆ ತಾಳಲಾರೆ

                                                         - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟನೀರ ಮೇಲಿನ ಲೀಲೆ

ನೀರ ಮೇಲಿನ ಲೀಲೆ ನಮ್ಮದೀ ಜೀವನ
ಗಾಳಿ ನೂಕಿದ ತೀರ ಸೇರಿ ಪಯಣ ಪಾವನ

ಯಾರಿಗೂ ತಿಳಿಯದಂಥ
 ನೂರುಗುಟ್ಟು ನೀರಲಿ
ಧೀರರಿಗೆ ಮಾತ್ರ ದೊರೆವ
ಮುತ್ತು ರತ್ನ ತಳದಲಿ
ದೂರದ ತಾರೆಯೆ ದೀಪ ನಮಗೆ ಇರುಳಲಿ

ತೀರವ ಬಿಟ್ಟ ಗಳಿಗೆ
ನೀರೇ ನಮ್ಮ ದೇವರು
ದಡ ಸೇರಿದ ಮೇಲೆ ಮಾತ್ರ
ಅಪ್ಪ ಅಮ್ಮ ಮನೆ ಮಾರು
ದಡದಲಿ ಕಾಯ್ವರು ಬೆದರುಗಣ್ಣ ಹೆಂಡಿರು

ಮನೆ ಸೇರಿ ಮಲಗುವಾಸೆ
ಉರಿವುದೆಮ್ಮ ಎದೆಯಲಿ
ಕುಣಿಯುವ ಚಿಣ್ಣರನು
ಎತ್ತುವಾಸೆ ಹೆಗಲಲಿ
ಸಲಿಸಲಿ ಈ ಆಸೆಯ ಕರುಣಿ ದೈವ ನಿಜದಲಿ

                                                  - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ನಿಂತ ನೀರ ಕಲಕಬೇಡಿ

ನಿಂತ ನೀರ ಕಲಕಬೇಡಿ ಕಲ್ಲುಗಳೇ
ಹೂ ದಳಗಳ ಇರಿಯಬೇಡಿ ಮುಳ್ಳುಗಳೇ
ಏನಿದೆಯೋ ನೋವು ಅವಕೆ ತಮ್ಮದೇ
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೇ

ಪಂಜರದಲಿ ನೂಕಬಹುದೆ ಗಿಳಿಯನು
ನೂಕಿ ಸುರಿದರಾಯ್ತೆ ರಾಶಿ ಕಾಳನು?
ತಿನುವುದೊಂದೆ ಗುರಿಯೆ ಹೇಳಿ ಬಾಳಿಗೆ
ಪರರ ಬಾಳು ಬಲಿಯೆ ನಮ್ಮ ಲೀಲೆಗೆ?

ಮರವ ತಬ್ಬಿ ಹಿಗ್ಗುತಲಿದೆ ಬಳ್ಳಿ
ಚಿಂತೆಯಿಲ್ಲ ಸರಿಸಿ ಅಲ್ಲಿ ಇಲ್ಲಿ
ಚಿವುಟಬೇಡಿ ಮಾತ್ರ ಅದರ ತುದಿಯ
ಕೊಲ್ಲಬೇಡಿ ಕಲ್ಲುಮಾಡಿ ಎದೆಯ

ಯಾವ ಜೀವ ಯಾವ ನೋವಿಗೀದೋ
ಯಾವ ಭಾವ ನೆಮ್ಮಿ ಅದರ ಪಾಡೋ?
ಮಾಡಲುಬಿಡಿ ತನ್ನ ಯಾತ್ರೆ ತಾನು
ನೀಡಲಿ ಅದು ತನ್ನೊಳಗಿನ ಜೇನು

                                                - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ನಡೆದಿದೆ ಪೂಜಾರತಿ ವಿಶ್ವದೇಹಿಗೆ


ನಡೆದಿದೆ ಪೂಜಾರತಿ ವಿಶ್ವದೇಹಿಗೆ 

ನಭದ ನೀಲ ತಳಿಗೆಯಲ್ಲಿ ಚುಕ್ಕಿ ಚೆಲ್ಲಿವೆ
ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿವೆ

ಚಂದನವನ ಚಾಮರ ಬೀಸುತಲಿದೆ ಪರಿಮಳ
ಭೂಕಂಠದಿ ಹೊಮ್ಮಿದೆ ಹಕ್ಕಿ ಕಲರವ

ಕೋಟಿ ಕೋಟಿ ಗಿಡ ಮರ ಚಿತ್ರಾಂಕಿತ ಕಂಬ
ರಾಶಿ ರಾಶಿ ಬಣ್ಣದ ಹೂ ತಾಳಿ ಮೈಯ ತುಂಬ

ಸಾಗಿದೆ ದಿನದಿನವೂ ನೀರವ ಧ್ಯಾನ
ಸತ್ಯರೂಪಿ ಶಿವನಿಗೆ ಭಕ್ತಿಯ ನಮನ

                                              - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ


ಈ ಬಾನು ಈ ಚುಕ್ಕಿ

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ
ತೇಲಿ ಸಾಗುವ ಮುಗಿಲು ಹರುಷವುಕ್ಕಿ,
ಯಾರು ಇಟ್ಟರು ಇವನು ಹೀಗೆ ಇಲ್ಲಿ
ತುದಿಮೊದಲು ತಿಳಿಯದೀ ನೀಲಿಯಲ್ಲಿ?

ಒಂದೊಂದು ಹೂವಿಗೂ ಒಂದೊಂದು ಬಣ್ಣ
ಒಂದೊಂದು ಜೀವಕೂ ಒಂದೊಂದು ಕಣ್ಣ
ಯಾವುದೋ ಬಗೆಯಲ್ಲಿ ಎಲ್ಲರಿಗು ಅನ್ನ
ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ

ನೂರಾರು ನದಿ ಕುಡಿದೂ ಮೀರದಾ ಕಡಲು
ಭೋರೆಂದು ಸುರಿಸುರಿದೂ ಆರದಾ ಮುಗಿಲು
ಸೇರಿಯೂ ಕೋಟಿ ತಾರೆ ತುಂಬದಾ ಬಯಲು
ಯಾರದೀ ಮಾಯೆ, ಯಾವ ಬಿಂಬದಾ ನೆರಳು?

ಹೊರಗಿರುವ ಪರಿಯೆಲ್ಲ ಅಡಗಿಹುದೆ ಒಳಗೆ
ಹುಡುಕಿದರೆ ಕೀಲಿಕೈ ಸಿಗದೆ ಎದೆಯೊಳಗೆ?
ತಿಳಿಯದೆಲ್ಲದರಲ್ಲಿ ಕುಳಿತಿರುವೆ ನೀನೆ
ಎನ್ನುವರು, ನನಗೀಗ ಸೋಜಿಗವು ನಾನೆ!

                                                              - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ
ನೀ ಯಾರೋ ನಾ ಯಾರೋ!


ನೀ ಯಾರೋ ನಾ ಯಾರೋ
ಚೂರೂ ಅರಿಯದವರು
ಕಂಡ ಕ್ಷಣವೆ ಆದೆವೇ ಜನ್ಮಾಂತರ ಗೆಳೆಯರು?

ಕ್ಷಣ ಕ್ಷಣವೂ ಆಕರ್ಷಿಸಿ
ಮನಮಿಡಿಯುವುದೇಕೆ?
ಕಾಣದಿರಲು ಈ ಲೋಕ
ಜಡ ಎನಿಸುವುದೇಕೆ?
ಧ್ಯಾನ ಸ್ಮರಣೆ ಜಪಗಳಲ್ಲು 
ತೂರಿ ಬರುವುದೇಕೆ?
ನಿನ್ನ ನಾನು ನನ್ನ ನೀನು ಹೀಗೆ ಕಾಡಬೇಕೆ?

ನಮ್ಮರಿವಿಗೆ ನಿಲುಕದಾ
ಯಾವ ಸ್ನೇಹ ನಮ್ಮದು?
ಬುದ್ಧಿ ಭಾವದಾಚೆಯ
ಯಾವ ದಾಹ ನಮ್ಮದು?
ಯಾಕೆ ಮುಖವ ಕಂಡೆವೋ
ಸ್ನೇಹದ ರುಚಿ ಉಂಡೆವೋ
ನಿನ್ನೊಳು ನಾ ನನ್ನೊಳು ನೀ ಎಂಬ ಥರದಿ ನಿಂದೆವೋ?

ಯಾಕೆ ಹೀಗೆ ದೂರ ಉಳಿದು
ಸದಾ ಕಾಯಬೇಕೋ?
ಸುತ್ತ ಇರುವ ಲೋಕ ಮರೆತು
ಸ್ವಪ್ನ ಕಾಣಬೇಕೋ?
ಯಾವ ಋಷಿಯ ಕೋಪಕೋ,
ಜನ್ಮಾಂತರ ತಾಪಕೋ,
ವಿರಹದಲ್ಲಿ ಬೇಯಿರೆಂದು ಪಡೆದುಬಂದ ಶಾಪಕೋ?

ನೀ ಯಾರೋ ನಾ ಯಾರೋ
ಚೂರೂ ಅರಿಯದವರು
ಕಂಡ ಕ್ಷಣವೆ ಆದೆವೇ ಜನ್ಮಾಂತರ ಗೆಳೆಯರು!
                                                             
                                                              - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಬನ್ನಿ ಭಾವಗಳೆ

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ

ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು
ಮೀಯುವ ಮುಗಿಲಿನಲಿ
ತವರಿನೆದೆಗೆ ತಂಪೆರೆಯುವ ಮೇಘದ
ಪ್ರೀತಿಯ ಧಾರೆಯಲಿ

ಲೋಕಕೆ ಹೊದಿಸಿದ ಕರಿತೆರೆ ಸರಿಸುವ
ಅರುಣೋದಯದಲ್ಲಿ
ಪಕ್ಷಕ್ಕೊಮ್ಮೆ ಬಿಳಿಪತ್ತಲ ನೇಯುವ
ಹುಣ್ಣಿಮೆ ಹಸ್ತದಲಿ

ಬನ್ನಿ ಬನ್ನಿ ನನ್ನೆದೆಯ ಬಯಲಿದು
ಬತ್ತದ ಕನ್ನೆ ನೆಲ
ಬೆಳೆಯಿರಿ ಇಲ್ಲಿ, ಬಗೆಬಗೆ ತೆನೆಯ
ನಮಿಸುವೆ ನೂರು ಸಲ
ನಿಮ್ಮನೆ ಕನವರಿಸಿ
ನಿಮಗೇ ಮನವರಿಸಿ
ಕಾಯುತ್ತಿರುವೆನು ಕ್ಷಣ ಕ್ಷಣವೂ
ಎದೆಯನು ಹದಗೊಳಿಸಿ

                                                - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

ಮಂಗಳವಾರ, ನವೆಂಬರ್ 16, 2010

ಬಾ ಬಾ ಒಲವೇ 

ಬಾ ಬಾ ಓ ಒಲವೇ 
ಬಂಜೆಯೆದೆಯಲ್ಲಿ ಬೆಳೆ
ಹರಿಸು ಹರುಷದ ಹೊಳೆ
ತೊಳೆದು ಬಾ ಕಳೆದು ಬಾ
ಎಲ್ಲ ಕಲ್ಮಶ ಕೊಳೆ

ಸಂಜೆಗೆಂಪು ಮೊಲ್ಲೆ ಕಂಪು
ನಿನ್ನ ದಾರಿಯಲಿ
ಬಣ್ಣ ಹಾಸಿದೆ ಮಣ್ಣ ಸವರಿವೆ
ಎಲ್ಲ ಮೂಲೆಯಲಿ

ಮಳೆಯ ನೀರಲಿ ತೊಳೆದ ಎಲೆಗಳ
ಎತ್ತಿ ಹಿಡಿದಿವೆ ಮರ
ಬರುವ ದಾರಿಗೆ ತಂಪು ಹಾಸಿವೆ
ಕಾಲು ಕಿತ್ತಿದ ಬರ

ತುಂಬು ಹುಣ್ಣಿಮೆ ಚಂದಿರ ತಂಗಾಳಿ
ಇಂಬು ನಿಲಿಸಿವೆ ಹೂ ಬಳ್ಳಿಗೆ ಬೇಲಿ
ಹರಸಿವೆ ಕರೆಸಿವೆ
ನಂದನವನೆ ಇಲ್ಲಿ

                                                          - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ
ಯಾವುದೀ ಹೊಸ ಸಂಚು?

ಯಾವುದೀ ಹೊಸ ಸಂಚು
ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು?
ಗಿರಿಕಮರಿಯಾಳದಲಿ
ತೆವಳಿದ್ದ ಭಾವಗಳ
ಮುಗಿಲ ಮಂಚದೊಳಿಟ್ಟು ತೂಗುತಿಹುದು?

ಸತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪವುರಿದು
ಬಾಳು ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ
ಮೈಯ ಕಣಕಣದಲ್ಲು ಹಿಗ್ಗು ಉರಿದು

ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪವೃಕ್ಷದ ಹಣ್ಣು ಹಿಳಿದ ರುಚಿಯ?
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಉಳಿಯದೆಯೆ ಸರಿದೀತು ಎಂಬ ವ್ಯಥೆಯ

                                                                    - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟಯಾಕೆ ಅರ್ಥ ಬಾಳಿಗೆ?

ಯಾಕೆ ಅರ್ಥ ಬಾಳಿಗೆ
ಯಾಕೆ ಅರ್ಥ ನಾಳೆಗೆ
ಅರ್ಥವೊಂದು ಯಾಕೆ ಬೇಕು ಅರಳಿ ನಗುವ ಹೂವಿಗೆ?

ಕಳೆದುಹೋದ ನಿನ್ನೆಗೆ
ಕಂಡು ಮರೆವ ನಾಳೆಗೆ
ಬರೆದುದೆಲ್ಲ ಅಳಿಸಿ ಹೋಗಿಬಿಡುವ ಖಾಲಿ ಹಾಳೆಗೆ

ತಿರುಗಿ ತಿರುಗಿ ಚಕ್ರ
ಹುಡುಕಿ ಹುಡುಕಿ ವ್ಯರ್ಥ
ಬಿಟ್ಟಲ್ಲೇ ಬಂದು ನಿಲುವ ಆಟವಷ್ಟೆ ಅರ್ಥ!

ನೋಟ ನೆಡಲಿ ಆಟದಿ
ಗೆಲುವ ಆಸೆ ಮನದಲಿ  
ಸೋತರೇನು ಆಟ ತಾನೆ ಎನುವ ಜಾಣ್ಮೆ ಕಾಯಲಿ

ನಗುತ ಬಾಳು ಜೀವವೇ
ಮಾವು ಬೇವು ದಾಳಿಗೆ
ನಗುತ ಬಾಳು ಜೀವವೇ, ಹುಳಿ ಬೆರೆಸದೆ ಹಾಲಿಗೆ 

                                                                         ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

ಶುಕ್ರವಾರ, ನವೆಂಬರ್ 12, 2010

'ಜೇನಾಗುವಾ' - ಕುವೆಂಪುರವರ ವಿಶಿಷ್ಟ ಕವನ ಸಂಕಲನ..

   'ರಸಿಕ ಕವಿ' ಎಂದೇ ಪ್ರಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಸತಿಯ ಕುರಿತಾಗಿ ಬರೆದ ಕವನಗಳು ಎಲ್ಲರಿಗೂ ಚಿರಪರಿಚಿತ. ಆದರೆ ಕುವೆಂಪುರವರು ತಮ್ಮ ಪ್ರಿಯ ಪತ್ನಿ ಹೇಮಾವತಿಯಿಂದ ಸ್ಪೂರ್ತಿಗೊಂಡು ಒಂದು ಕಾವ್ಯ ಸಂಕಲನವನ್ನೇ ಬರೆದಿರುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ! ಅವರ 'ಜೇನಾಗುವಾ' ಕವನ ಸಂಕಲನದಲ್ಲಿ ಅವರು ತಮ್ಮ ಮಡದಿಯ ಪ್ರೀತಿಯಿಂದ ರೋಮಾಂಚಿತರಾಗಿ ಬರೆದ ಸಾಲುಗಳಿವೆ ; ರಸಿಕ ಬಣ್ಣನೆಗಳಿವೆ; ವಿರಹ ಗೀತೆಗಳಿವೆ.. ಜೊತೆಗೆ, ತಮ್ಮ ಮುದ್ದಿನ ಮಗುವಿನ ತುಂಟಾಟಗಳ ಬಗೆಗೆ ಬರೆದ ಕವಿತೆಗಳೂ ಇವೆ.

   ಇಲ್ಲಿ, ಅದೇ ಸಂಕಲನದಿಂದಾಯ್ದ ಕೆಲವು ಕವನಗಳಿವೆ. ಚೆಲುವಿಗಿಂತ ಒಲವೆ ಮಿಗಿಲೆಂದು ಹೇಳುವ ಅದ್ಭುತ ಕವಿತೆಯಿದೆ. ಮಲಗಿರುವ ತನ್ನಾಕೆಯನೆಬ್ಬಿಸಲು ಬಂದ ಸೂರ್ಯನೆಡೆಗೆ ಹುಸಿ ಕೋಪ ತೋರಿ ಬರೆದಿರುವ ಕವಿತೆಯಂತೂ ಸೊಗಸಾಗಿದೆ.

  ಓದಿ, ಪ್ರತಿಕ್ರಿಯಿಸಿ..

  ಅಕ್ಕರೆಯಿಂದ,
  ಕನಸು..

ಗುರುವಾರ, ನವೆಂಬರ್ 11, 2010

ರವಿಗೆ ಕವಿಯ ಸರಸ ನಿಂದೆ


ಅದೊ ಬಂದನೊಂದಿನಿತು ತಡವಿಲ್ಲ! ಓ ರವಿ,
ಕೆಲಸವಲ್ಲದೆ ಬೇರೆ ಕೆಲಸವಿಲ್ಲವೆ ನಿನಗೆ?
ಅಥವಾ ಹಿಡಿದಿದೆಯೆ ಕರ್ತವ್ಯದ ಪಿಶಾಚಿ?
ಸ್ವಾತಂತ್ರವಿಲ್ಲದಾ ಯಂತ್ರ ಜೀವವ ಸುಡಲಿ!
ನೀನು ಬಾಹಿರನಲಾ ಸೋಮಾರಿತನವೆಂಬ
ರಸಿಕತೆಗೆ! - ರಸಿಕತೆಯೇ? ನಿನಗೆ ರಸಿಕತೆಯೆಲ್ಲಿ,
ಶ್ರಮಜೀವಿ? - ನಳಿ ತೋಳ್ ಸೆರೆಯೊಳಪ್ಪಿ, ತಡಮಾಡಿ
ಕಳುಹುವಾ ನಲ್ಲೆಯಿಲ್ಲವೆ ನಿನಗೆ? ಅಥವಾ
ಬರಿ ಬಣಗು ಬ್ರಹ್ಮಚಾರಿಯೊ ನೀನು? ಹಾಗಿದ್ದರೆ
ಬುದ್ಧಿ ಹೇಳುವೆ ಕೇಳು : ಬೇಗನೆ ಮದುವೆಯಾಗು!
ಉಷೆಯ ಊರೊಳು ಇನಿತು ತಳುವಿ ಬರಬಹುದಂತೆ! -

ಕವಿ, ಮೊದಲು, (ಮದುವೆಯಾಗುವ ಮೊದಲು), ನಿನ್ನನಾ
ಗಿರಿಶಿಖರದಲಿ ಇದಿರುಗೊಳುತಿದ್ದನ್ ; ಇಂದೇಕೆ
ತಳುವಿದನು? ಎಂದು ಕಿಟಕಿಯೊಳಿಣಿಕಿ ನೋಡುವೆಯಾ
ಕೋಣೆಯನು? ! ನಿನ್ನ ನಾಣಿಲಿತನಕೆ ಬೆಂಕಿ!
ಆವಾವ ವೇಷದಲಿ, ಆವಾವ ರೂಪದಲಿ,
ಆರಾರು ಆರಾರೊಡನೆ ಎಂತು ಎಂತಿಹರೆಂದು
ಆವುದನು ಲೆಕ್ಕಿಸದೆ ಕಂಡಿಯಲಿ ಬಂದಿಣಿಕಿ  
ನೋಡುವರೆ? - ನೋಡುವರೆ ನಿನ್ನಂಥ ದೊಡ್ಡವರು?
ನಿನ್ನ ಹಿರಿಮೆಗಿದು ತಕ್ಕುದೆ ಹೇಳು! - ಹೋಗಾಚೆ!
ಮುಚ್ಚಿದರವಿಂದದಲರನು ಬಿಚ್ಚು. ನಾನೊಲ್ಲೆ ;
ನಮ್ಮಪ್ಪುಗೆಯ ತಾವರೆಯ ಸಿರಿಯ ತೋಳ್ಸೆರೆಯ
ಮೊಗ್ಗನಲರಿಸಲೊಲ್ಲೆ! - ನಿದ್ದೆಯಿಲ್ಲದ ನಲ್ಲೆ
ಬಳಲಿ ಮಲಗಿಹಳೋ! ಎಚ್ಚರಿಸದಿರ್ ; ಎಚ್ಚರಿಕೆ!
ಮತ್ತೆಲ್ಲಿಯಾದರೂ ನನ್ನ ನಿನ್ನಯ ನೇಹ
ಕೆಟ್ಟೀತು! ಬಿರುಕು ಬಿಟ್ಟೀತು! ಸುಟ್ಟುರಿದೀತು!...

ಶುದ್ಧ ಭಂಡನೋ ನೀನು! ಎಷ್ಟು ಹೇಳಿದರೇನು?
ಮತ್ತೆ ಮತ್ತೆಯು ಹೊಳಪನುಕ್ಕಿಸಿ ನಗುವೆಯೇನು?

                                                         - ಕುವೆಂಪು
                                                            ' ಜೇನಾಗುವಾ '

'ಬಾಳ್ವುದು!'

ಬಾಳ ಬೇವು ಬೆಲ್ಲವಹುದೇ
ನಾವು ಮುನಿದ ಮಾತ್ರದಿ?
ಅಳೆಯಲಹುದೆ, ತೂಗಲಹುದೆ,
ಕಟ್ಟಲಹುದೆ ಬಹುಜೀವರ
ಜಗಜ್ಜೀವ ನಾಟಕವನ್ನು
ನಮ್ಮ ಸುಖದ ಸೂತ್ರದಿ!

ಔಷಧಿಯಹುದೆ ರುಜೆಗೆ ರುಜೆ?
ಮುನಿಸು ಮದ್ದೆ ನೋವಿಗೆ?
ಎಲ್ಲದಕೂ ಇಹುದು ಎಲ್ಲೆ ;
ಕವಿಯ ನುಡಿಯ ಕೇಳು, ನಲ್ಲೆ :
ಒಲುಮೆಯೊಂದೆ ಮಂತ್ರ, ಬಲ್ಲೆ,
ನೋವಿನ ಹೆಡೆಹಾವಿಗೆ!

ದುಃಖ ಸುಖದ ದಡದ ನಡುವೆ
ಹೊಳೆಹರಿವುದು ಬಾಳಿದು.
ಕುಳಿತು ಚೆಲುವಿನೋಡದಲ್ಲಿ,
ಒಲುಮೆ ಪಟವ ಬಿಚ್ಚಿ, ತಳ್ಳಿ,
ಕಳೆಯ ತೆಂಕಣೆಲರಿನಲ್ಲಿ
ಮುಂಬರಿವುದೆ  - 'ಬಾಳ್ವುದು!'

                          - ಕುವೆಂಪು
                              ' ಜೇನಾಗುವಾ '
ಪ್ರಿಯ ಸತಿಗೆ

ಸತಿ ಎಂಬ ಮಮತೆಯಲಿ ನಾ ನುತಿಸುವವನಲ್ಲ ;
ಮೇಣಲ್ಲವಿದು ಪತಿಯ ಮೋಹದ ಅತಿಶಯೋಕ್ತಿ.
ಅನುಭವವನಾಡುವೆನು : ನೀ ದೇವತಾ ವ್ಯಕ್ತಿ.
ಕಣ್ಣು ಕೊರೈಸುವಂತಹ ಮಿಂಚಿನಂತಲ್ಲ ;
ಧ್ರುವತಾರೆಯಂತೆ! ನಿಸ್ವಾರ್ಥೆ ಹೇ ಮಾ ಸತಿಯೇ,
ಧೀರೆ, ಸಂಯಮ ಶೀಲೆ, ರೂಪದಲಿ ಗುಣದಲ್ಲಿ
ನೀನೆ ದೇವತೆಯೆನಗೆ ; ತ್ಯಾಗ ಭೋಗಗಳಲ್ಲಿ
ನೀನೆ ದಿವ್ಯಾದರ್ಶವೆನಗೆ, ಓ ಪ್ರಿಯರತಿಯೆ!

ನೀನು ಮಾವನ ಮಗಳೇ? ಗುರುಕರುಣೆಯಿತ್ತ ಕೃಪೆ :
ಅವನ ಆಶೀರ್ವಚನವೀ ಚೆಲ್ವು ರೂಪದಿಂ
ಬಂದೆನ್ನನೆತ್ತುತಿದೆ ಕತ್ತಲೆಯ ಕೂಪದಿಂ
ಬೆಳಕಿನೆತ್ತರಕೆ - ಎಂದೆದೆಮುಟ್ಟಿ ನಂಬಿದಪೆ!

ದೇವಿ, ಪ್ರತಿಭೆಗೆ ನೀನೆ ಭಾವವಿದ್ಯುಚ್ಚಕ್ತಿ
ಕಲೆಗೆ ವಿದ್ಯಾಶಕ್ತಿ ; ಪ್ರಾಣಕೆ ಪ್ರೇಮಶಕ್ತಿ!

                                            - ಕುವೆಂಪು
                                             ' ಜೇನಾಗುವಾ '
ವಿರಹ ಚಿತೆ

ಕಣ್ಣಿನಲ್ಲಿಯೆ ಬೀಳುಕೊಟ್ಟು
ಮನಸಿನಲ್ಲಿಯೆ ಮುತ್ತು ಕೊಟ್ಟು
ತವರು ಮನೆಯೊಳಗವಳ ಬಿಟ್ಟು
ಮನಸಿಲ್ಲದ ಮನಸಿನಿಂದೆ
ಒಬ್ಬನೆ ಹಿಂತಿರುಗಿ ಬಂದೆ.
ಮರುಭೂಮಿಯ ಗಾಳಿಯಂತೆ
ಸುಯ್ದಲೆದಲೆದೂ
ಬಾಯಾರಿತು ವಿರಹ ಚಿಂತೆ
ದಾರಿಯುದ್ದಕೂ.

ನೆನಹಿನುರಿಯ ಬಯಲಿನಲ್ಲಿ
ಸಾಗಿತಿರುಳು ರೈಲಿನಲ್ಲಿ,
ನಿದ್ದೆಯೆಲ್ಲ ಬರಿಯ ಕನಸು
ಎದೆಯೊಳೇನೊ ಕಿಚ್ಚು, ಕಿನಿಸು.
ಯಾರ ಮೇಲೊ? ಏಕೊ? ಮುನಿಸು!
ಏನೊ ಇಲ್ಲ, ಏನೊ ಬೇಕು,
ಎಂಬ ಬಯಕೆ, ಕುದಿವು, ರೋಕು!
ಇಂತು ಸಾಗಿತು ಶನಿ ಇರುಳು ;
ಅರಿಲ ಬೆಳಕು ಬಾಡಿತು ;
ಚಿತೆಯಾಯಿತು ಕವಿಯ ಕರುಳು ;
ಹಗಲೋ ಹೆಣವೊ ಮೂಡಿತು!

ಪ್ರೇತದಂತೆ ನಡೆದೆ ಕೊನೆಗೆ,
'ಉದಯ ರವಿ'ಗೆ ನಮ್ಮ ಮನೆಗೆ.
ಮನೆಯೆ? ಅಯ್ಯೊ ಬರಿಯ ಸುಳ್ಳು :
ಗೋಡೆ ಸುತ್ತಿದೊಂದು ಟೊಳ್ಳು!
ಕಿಟಕಿ, ಬಾಗಿಲು, ಕಲ್ಲು, ಮಣ್ಣು ;
ಬುರುಡೆಯೆಲುಬಿಗೆ ತೂತುಗಣ್ಣು!
ಪ್ರೇಮ ಕುಣಪವಾಗಿ ನಿಂತೆ
ಚಿತೆಯಾಗಲ್ ವಿರಹ ಚಿಂತೆ!

ನಿನ್ನ ನೆನಪೊ ಮನೆ ತುಂಬಿದೆ ;
ಮನೆಯೆ ಮಾತ್ರ ನೀನಿಲ್ಲದೆ
ಸರ್ಪಶೂನ್ಯವಾಗಿದೆ :
ರಾಮಚಂದ್ರ, ಇಂತೆ ಕುದಿದೆ :
ಸೀತೆ ಕಳೆಯಲತ್ತು ಕರೆದೆ ;
ತಿಳಿಯಿತಿಂದು ನಿನ್ನೆದೆ!

ಹೇಮಲತೆ, ಪ್ರೇಮಲಕ್ಷ್ಮಿ,
ನನ್ನ ಪಂಚ ಪ್ರಾಣಲಕ್ಷ್ಮಿ,
ಗಾಳಿ ನೀನೆ ; ಬೆಳಕು ನೀನೆ ;
ಉಲ್ಲಾಸದ ಉಸಿರು ನೀನೆ ;
ನನಗೆ ಮನೆಗೆ ಎಲ್ಲ ನೀನೆ!
ನೀನೆ ಕವಿಗೆ ಹೃದಯ, ಭಾವ,
ಮೇಣಾತ್ಮಕೆ ರಸದ ಜೀವ!

ಗೃಹಿಣಿ, ನೀನೆ ಗೃಹದ ದೇವಿ ;
ನೀನು ದೂರ ಹೋದರೆ
ಮಸಣದೊಂದು ಹಾಳುಬಾವಿ
ಗೃಹವಿದು! ' ಮನೆ' ಎಂಬರೆ?

ತಪ್ಪಲು ಗೃಹಲಕ್ಷ್ಮಿಯ ಜೊತೆ
ಒಪ್ಪಿದ ಮನೆಯೆ ವಿರಹ ಚಿತೆ!
ಹೇಮಾಂಗಿನಿ, ಪ್ರೇಮಸತಿ,
ಕಾತರನತಿ ನಿನ್ನ ಪತಿ!
ಮರುಭೂಮಿಗೆ ಅಮೃತಧಾರೆ,
ಕಗ್ಗತ್ತಲೆಗೆಸೆವ ತಾರೆ,
ನನ್ನ ಹೃದಯ ತಾಪವಾರೆ
'ಉದಯ ರವಿ'ಗೆ ಬೇಗ ಬಾರೆ!
ಏದುತ್ತಿದೆ ಪ್ರಾಣಪಕ್ಷಿ
ವಿರಹಾತಪ ತಾಪಕೆ!
ಆಶೀರ್ವಾದವಾಗಿ ಬಾ
ವಿಯೋಗದೀ ಶಾಪಕೆ!

                               - ಕುವೆಂಪು
                                 ' ಜೇನಾಗುವಾ '

ನನ್ನವಳು

ಹೂಗೆಂಪಿನಂಚಿನಾ
          ಗಿಳಿಹಸುರು ಸೀರೆ
ತುಂಬು ಮೆಯ್ಯನು ತುಂಬಿ
          ಕಣ್ಗೊಸಗೆ ಬೀರೆ ;
ಬಿಲ್ಲೆದೆಯ ಬಾಗಿಂದೆ
                ಬಾಚು ಮುಡಿ ಸೋರೆ,
ಹೆಣೆ ಜಡೆಯ ಕೈಗಳಲಿ
             ಪೊನ್ಮಿಂಚು ತೋರೆ ;
ಮುದ್ದು ಮೊಗದಲಿ ಮಿನುಗೆ
         ಮೂಗಿನಾ ತಾರೆ,
ಚೆಲ್ವು ಚೆನ್ಜೇನ್ಗೆಳಸಿ
           ಬಾಳು ಬಾಯಾರೆ ;
ಎದೆ ನಲಿಯೆ ಮೆರೆದಳಾ
               ಹದಿನಾರು ಚೈತ್ರದಾ
ನನ್ನವಳು ನೀರೆ!

ನೋಡಿದೆನು ಕಣ್ ತಣಿಯೆ :
ಕಣ್ ದಣಿಯಲಿಲ್ಲ.
ಓ ಎನ್ನ ಪೆಣ್ ಮಣಿಯೆ,
 ನಿನಗೆಣೆಯೆ ಇಲ್ಲ! -
ರವಿಯುದಯ? ಶಶಿಯುದಯ?
 ಹೂದಿಂಗಳುದಯ?
ಕೃತಿಯ ಮಧುರಸದುದಯ? -
      ನೀನವಕೆ ಹೃದಯ!
ಕಲೆ, ಕೀರ್ತಿ, ಸಿರಿಯೆಲ್ಲ
ನೀನಿಲ್ಲದಿನ್ನಿಲ್ಲ ;
   ನೀನೆ ನನಗೆಲ್ಲ!
ಕಣ್ಗೆ ಸುಂದರಿಯಾಗಿ,
ಚೆಲ್ವು ಒಳ್ಪುಗಳೆರಡು
        ಬೆರೆಯುತೊಂದಾಗಿ
ಬಂದಿರುವೆ ನೀನೆನಗೆ
         ಪ್ರೇಮಸತಿಯಾಗಿ :
ನಿಂದಿರುವೆ ಕಣ್ ಮುಂದೆ
        ಹೇಮಲತೆಯಾಗಿ!

                              - ಕುವೆಂಪು
                                   ' ಜೇನಾಗುವಾ '
ಶೂನ್ಯ ಶೋಧನೆ

ನೀನು ತವರಿಗೆ ಹೋದೆ ;
ನಾನೊಬ್ಬನಾದೆ :
ಹೆಬ್ಬುಲಿಯ ಬಾಯಂತೆ
ಘೋರವಾಯ್ತು ;
ತಬ್ಬಲಿಯ ಕೈಯಂತೆ
ಶೂನ್ಯವಾಯ್ತು!

ನಿನ್ನ ಬಿಟ್ಟಿರಲಾರೆ
ನನ್ನೊಲುಮೆ ನೀರೆ :
ನೀರೊಳಗೆ ಬಿದ್ದಂತೆ
ಉಸಿರು ಕಟ್ಟಿ
ಪ್ರಾಣ ತುಡಿವುದು, ಕಾಂತೆ,
ಎದೆಯ ಮೆಟ್ಟಿ!

ಹಗಲು ಇರುಳೂ ನಿನ್ನ
ನೆನೆನೆನೆದು ನನ್ನ
ಪ್ರೇಮಶೀಲಾತ್ಮ ಶಿಶು
ರೋದಿಸುತಿದೆ ;
ಕೈಚಾಚಿ ಶೂನ್ಯವನೆ
ಶೋಧಿಸುತಿದೆ!

          - ಕುವೆಂಪು
            ' ಜೇನಾಗುವಾ '

ಬರಿಯ ಮೆಯ್ಯ ಹೆಮ್ಮೆ ತಪ್ಪು!

ಕಣ್ಣಿಗಲ್ಲ ಎದೆಗೆ ಚೆಲುವು,
ತರಳೆ, ತಿಳಿಯದೆ?
ಅಳಿಯಲೊಡನೆ ಹೃದಯದೊಲವು
ಚೆಲುವು ಉಳಿವುದೆ?
ಒಡಲ ಸೊಂಪು, ನುಡಿಯ ಇಂಪು,
ಕಣ್ಣು, ಮೂಗು, ಗಲ್ಲ, ಕೆನ್ನೆ,
ಒಡವೆ, ಸೀರೆ ಎಲ್ಲ, ನೀರೆ,
ಒಲುಮೆಯಿಲ್ಲದಿರಲು ಬರಿಯ
ಸಿಪ್ಪೆ! ಹೊಳ್ಳು! ಸಪ್ಪೆ! ಸೊನ್ನೆ!

ಅಡಿಯ ಸಿರಿಗೆ ಹೊನ್ನ ಗೆಜ್ಜೆ
ಸಿಂಗಾರದ ಕೃತಿ ;
ನುಡಿಯ ಸಿರಿಗೆ ಬಗೆಯ ಬಿಜ್ಜೆ
ಕಲೆಯ ಸಂಸ್ಕೃತಿ.
ಮೆಯ್ಯ ಸಿರಿಯ ಬಹಳ ನೆಚ್ಚಿ
ಎದೆಯ ಮರೆಯಬೇಡ, ಹುಚ್ಚಿ!
ಚೆಲುವನೆಲ್ಲ ಕದಿಯೆ ಮುಪ್ಪು
ಒಲುಮೆಯೊಂದೆ ಬದುಕಿಗುಪ್ಪು!
ಬರಿಯ ಮೆಯ್ಯ ಹೆಮ್ಮೆ ,- ತಪ್ಪು!

                      - ಕುವೆಂಪು
                         ' ಜೇನಾಗುವಾ '


ಲಲ್ಲೆ

ನನ್ನ ಚಿನ್ನದ ಚೆಲುವೆ,
ನನ್ನ ಹೂವಿನ ಒಲವೆ,
ನನ್ನ ಪುಣ್ಯದ ಫಲವೆ,
ದೂರವೇತಕೆ ನಿಲುವೆ?
        ಹತ್ತಿರಕೆ ಬಾ!

ರತಿಪತಿಯ ಹಣೆಗಣ್ಣೆ,
ರಸದ ಬಾಳೆಯ ಹಣ್ಣೆ,
ಹಾಲು ಜೇನಿನ ಬೆಣ್ಣೆ,
ಮಲೆಯ ಮೋಹದ ಹೆಣ್ಣೆ,
        ತೋಳ್ಸೆರೆಗೆ ಬಾ!

ತುಟಿಗೆ ತುಟಿ ಮುತ್ತಿಟ್ಟು,
ಎದೆಗೆ ಎದೆಯೊತ್ತಿಟ್ಟು,
ಆತ್ಮಕಾತ್ಮದ ಗುಟ್ಟು
ಹೊಳೆವಂತೆ ಬಿಗಿ ಕಟ್ಟು :
ಬಾ, ಬೇಗಬಾ!

                     - ಕುವೆಂಪು
                         ' ಜೇನಾಗುವಾ '

ಹೋಗಿ ಬರುವೆನು

ನನ್ನ ಜೀವನ ಕಲ್ಪತರುವೆ,
ನನ್ನ ತೃಷ್ಣೆಯ ಅಮೃತಸರವೆ,
ಹೋಗಿ ಬರುವೆ; ಬೇಗ ಬರುವೆ;
ಬೆಚ್ಚ ಮುತ್ತನಂತೆ ತರುವೆ!

ಕಣ್ಣ ತಾವರೆ ತೊಯ್ಯದಿರಲಿ ;
ಮುಡಿಯ ಮಲ್ಲಿಗೆ ಸೊರಗದಿರಲಿ ;
ತುಟಿಯ ಚೆಂಜೇನಾರದಿರಲಿ ;
ಬಂದೆ ಬರುವೆನು, ಏನೆಯಿರಲಿ!

ಮುಗಿಲನುಳಿಯುವ ಮಿಂಚು ಎಂತು
ಮರಳಿ ಸೇರ್ವುದು ಮುಗಿಲನಂತು
ಮತ್ತೆ ನಿನ್ನೆಡೆ ಬಂದು ನಿಂತು
ಮುತ್ತು ಕೊಡುವೆನು - ಇಂತು, ಇಂತು!

                         - ಕುವೆಂಪು
                                ' ಜೇನಾಗುವಾ '   
                 
ಪ್ರಥಮ ವಿರಹ

ನೀನು ಬಳಿಯಿರೆ ಹೊತ್ತು ಹರಿಯುವುದು ಹೊನಲಾಗಿ
ಕುಣಿಕುಣಿದು ನಲಿನಲಿದು ನೊರೆನಗೆಯ ಬೀರಿ ;
ನೀನಿಲ್ಲದಿರೆ ಕಾಲ ನಿಲ್ಲುವುದು ಕಲ್ಲಾಗಿ
ಭಾರದಿಂದೆದೆಯ ಜೀವವ ಹಿಂಡಿ ಹೀರಿ!

ನೀನು ಬಳಿಯಿರೆ ಬಾಳ ಕೊಳ ತುಳುಕುವುದು ತುಂಬಿ
ನಲ್ ಸೊಗದ ತಾವರೆಯ ನೂರು ಹೂವರಳಿ ;
ನೀನಿಲ್ಲದಿರೆ ಬದುಕು ಶೂನ್ಯತೆಯ ಸುಳಿಯಲ್ಲಿ
ಹೊರಳುರುಳಿ ಕಂತುವುದುಸಿರ್ ಕಟ್ಟಿ ಕೆರಳಿ!

ನೀನೆನ್ನ ಬಳಿಯಿರಲು ರವಿಯುದಯ ಬಲುಸೊಗಸು ;
ನಿನ್ನ ಸೋಂಕಿರೆ ಸೊಗಸು ಕಾಂತಾರವೀಚಿ ;
ನಿನ್ನ ಜೇನ್ದನಿ ಸೇರೆ ಹಕ್ಕಿಗೊರಲಿನಿಂಚರಕೆ
ನಂದನದ ಗಾನ ಮೈಗರೆಯುವುದು ನಾಚಿ.

ನೀನು ಬಳಿಯಿಲ್ಲದಿರೆ, ಓ ನಲ್ಲೆ ಹೇಮಾಕ್ಷಿ,
ಜಗವೆಲ್ಲ ಜಡಬಂಡೆ, ಬೇಸರದ ಬೀಡು!
ನೀನಗಲಿದೀ ಕವಿಗೆ ಇಂದು ಈ ಮಲೆನಾಡು,
(ಹೇಳೆ ನಾಚಿಗೆಗೇಡು) ಹಿರಿಮರಳುಗಾಡು!

                                               - ಕುವೆಂಪು
                                                   ' ಜೇನಾಗುವಾ '


ಬುಧವಾರ, ನವೆಂಬರ್ 10, 2010

ತೂಗಿ ತೂಗಿ ಮರಗಳೇ

ತೂಗಿ ತೂಗಿ ಮರಗಳೇ
ಇಳೆಗೆ ಇಳಿದ ವರಗಳೇ
ನೆಲದ ಮಧುರ ಗಾನದಲ್ಲಿ
ಮೂಡಿ ಬಂದ ಸ್ವರಗಳೇ

ಮಾತಾಡದೆ ದುಡಿಯುವಾ ಪ್ರೀತಿ ಪಡೆದ ಕರಗಳೇ
ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವಾ ನೆಲೆಗಳೇ
ಸಾಲು ಹಸಿರ ಮಾಲೆಯೇ
ಜೀವ ರಸದ ನಾಲೆಯೇ
ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೇ!

ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ
ಮೈ ತುಂಬಾ ಚಿಗುರಿನ ರೋಮಾಂಚನ ತಳೆವಿರಿ ;
ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ
ಔದಾನ್ಯದ ಒಡಲಾಗಿ ಹೂವು ಹಣ್ಣ ಸುರಿವಿರಿ

ಆಕಾಶಕೆ ತುಡಿಯುವಾ ನೆಲದಾಳದ ಕನಸೇ
ನೀಡಲೆಂದೆ ಫಲಿಸುವಾ ಋಷಿ ಸಮಾನ ಮನಸೇ ;
ಕಡಿದರೂ ಕರುಣೆ ತೋರಿ ಚಿಗುರುವಾ ಗೆಲುವೆ
ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವೆ!

                                                                                - ಡಾll ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಮಂಗಳವಾರ, ನವೆಂಬರ್ 9, 2010

ನೀ ಸಿಗದೆ ಬಾಳೊಂದು ಬಾಳೆ?

ನೀ ಸಿಗದೆ ಬಾಳೊಂದು ಬಾಳೆ ಕೃಷ್ಣಾ
ನಾ ತಾಳಲಾರೆ ಈ ವಿರಹತೃಷ್ಣಾ

ಕಮಲವಿಲ್ಲದ ಕೆರೆ ನನ್ನ ಬಾಳು ;
ಚಂದ್ರ ಇಲ್ಲದ ರಾತ್ರಿ ಬೀಳು ಬೀಳು ;
ನೀ ಸಿಗದೆ ಉರಿ ಉರಿ ಕಳೆದೆ ಇರುಳ
ಮಾತಿಲ್ಲ, ಬಿಗಿದಿದೆ ದುಃಖ ಕೊರಳ

ಅನ್ನ ಸೇರದು, ನಿದ್ದೆ ಬಂದುದೆಂದು?
ಕುದಿವೆ ಒಂದೇ ಸಮ ಕೃಷ್ಣಾ ಎಂದು ;
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ

ಒಳಗಿರುವ ಗಿರಿಧರನೆ ಹೊರಗೆ ಬಾರೊ,
ಕಣ್ಣೆದುರು ನಿಂತು ಆ ರೂಪ ತೋರೊ ;
ಜನುಮ ಜನುಮದ ರಾಗ ನನ್ನ ಪ್ರೀತಿ,
ನಿನ್ನೊಳಗೆ ಹರಿವುದೇ ಅದರ ರೀತಿ.

                                                                  - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ


ಸೋಮವಾರ, ನವೆಂಬರ್ 8, 2010

ಗೆಳೆಯನಿಗೆ

ನೂರು ಕನಸುಗಳಲ್ಲಿ ನಿನ್ನ ಕಂಡೆನು ನಾನು
ನನ್ನೆದೆಯೊಳಚ್ಚಾಯ್ತು ನಿನ್ನಹೆಸರು
ನನ್ನೆಲ್ಲ ಒಲವು ಹೂವಾಗಿ ಅರಳಿತು, ನಕ್ಕೆ -
ಆರಿ ಹೋಯಿತು ದೂರ ದೂರ ದೀಪ!

ಓ ಗೆಳೆಯ, ನಾ ನಿನ್ನ ಹುಡುಕುತ್ತಲಿದ್ದೇನೆ
ಎಲ್ಲ ಅನುಭವಗಳಲಿ ಒಂಟಿಯಾಗಿ
ಹೋದುದೆಲ್ಲಿಗೆ ನೀನು ತುಂಬಿದ ಜಗತ್ತಿನಲಿ
ಹೂಗಳಲಿ ಹಣ್ಗಳಲಿ ಹಾಡಿನಲ್ಲಿ?

ದೂರದರ್ಶನದಲ್ಲಿ ಕೇಳಿ ಬಂದಿತು ಹಾಡು
ತಂಪಾಗಿ ಇಂಪಾಗಿ ಮಧುರವಾಗಿ ;
ಕೆಲವರು ಬಂದರು ಸಭೆಗೆ, ಎದ್ದು ಹೋದರು  ಕೆಲವರು
ಈ ಜಗತ್ತಿನ ಚೆಲುವು ಕಣ್ತುಂಬಿತು.

ನೀನೆಂದು ಬರುವೆ, ಓ ಗೆಳೆಯ, ಉದ್ಯಾನದಲಿ
ನೀ ಬರುವ ತನಕ ನಾ ಕಾಯುವೆನು.

                               - ಕೆ.ಎಸ್. ನರಸಿಂಹಸ್ವಾಮಿ
                                   'ಸಂಜೆ ಹಾಡು'
ಯಾಕೆ ಹರಿಯುತಿದೆ ಈ ನದಿ ಹೀಗೆ?

ಯಾಕೆ ಹರಿಯುತಿದೆ ಈ ನದಿ ಹೀಗೆ
ದಡಗಳನ್ನೆ ದೂಡಿ?
ತನ್ನನು ಕಾಯುವ ಎಲ್ಲೆಗಳನ್ನೆ
ಇಲ್ಲದಂತೆ ಮಾಡಿ?

ಹೀಗೆ ಹಾಯುವುದೆ ಮಲ್ಲಿಗೆ ಕಂಪು
ಗಡಿಗಳನ್ನೆ ಮೀರಿ?
ತನ್ನಿರವನ್ನೆ ಬಯಲು ಮಾಡುವುದೆ
ವನದ ಆಚೆ ಸಾರಿ?

ಯಾರು ನುಡಿಸುವರು ಎಲ್ಲೋ ದೂರದಿ
ಮತ್ತೆ ಮತ್ತೆ ಕೊಳಲ?
ಯಾಕೆ ಮೀಟುವುದು ಆ ದನಿ ಹೀಗೆ
ನನ್ನ ಆಳದಳಲ?

ತುಂಬಿದ ಜೇನಿನ ಗಡಿಗೆಯ ಯಾರು
ಹೀಗೆ ಬಾಗಿಸಿದರು?
ಒಳಗಿನ ಸವಿಯು ಹೊರಗೆ ಸುರಿವ ಥರ
ತಂತ್ರವ ಹೂಡಿದರು?

                                      - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ
ಏಕೆ ಹೀಗೆ


ಏಕೆ ಹೀಗೆ
ನಮ್ಮ ನಡುವೆ
ಮಾತು ಬೆಳೆದಿದೆ?
ಕುರುಡು ಹಮ್ಮು
 ಬೇಟೆಯಾಡಿ
ಪ್ರೀತಿ ನರಳಿದೆ?

ಭೂಮಿ ಬಾಯ
ತೆರೆಯುತಿದೆ
ಬಾನು ಬೆಂಕಿ
ಸುರಿಯುತಿದೆ
ಧಾರೆ ಒಣಗಿ
ಚೀರುತಿದೆ
ಚಿಲುಮೆ ಎದೆಯಲಿ

ಮುಗಿಲ ಬರುವ
ಕಾಯುತಿದೆ
ಮಳೆಯ ಕನಸ
ನೇಯುತಿದೆ
ನಿನ್ನ ಬಯಸಿ
ಬೇಯುತಿದೆ
ನನ್ನ ಹೃದಯವು

                                               - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ


ಶನಿವಾರ, ನವೆಂಬರ್ 6, 2010

ನಿಸಾರರ ಕವನಗಳು........

ನನ್ನ ಅತ್ಯಂತ ಇಷ್ಟದ ಕವಿ ನಿಸಾರ್.

ಅವರ ಕವನಗಳು ಕಂಠಪಾಠವಾಗುವಷ್ಟರ ಮಟ್ಟಿಗೆ ನನ್ನನ್ನು ಕಾಡಿವೆ! ಹತಾಶೆಯ ಮಡಿಲಿನಲ್ಲೇ ಮರುಹುಟ್ಟು ಅರಸುವ ಅವರ ಕಾವ್ಯ ಸದಾ ಜೀವನ್ಮುಖಿ. ಆಡುಮಾತಿನಲ್ಲಿ ಬಳಕೆಯಾಗುವ ವಸ್ತು-ವಿಷಯಗಳೂ ಕಾವ್ಯದಲ್ಲಿ ಹೋಲಿಕೆಗಳಾಗಿ ಪ್ರಬಲ ಪಾತ್ರ ವಹಿಸಬಲ್ಲವು ಎಂಬುದಕ್ಕೆ ನಿಸಾರರು ಬಳಸುವ ಉಪಮೆ, ರೂಪಕಗಳೇ ಸಾಕ್ಷಿ. ಅವು ಜನ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳವಾಗಿ, ಮುಗ್ಧವಾಗಿರುವಂತೆಯೇ, ಅವರ ತೀವ್ರ ಭಾವನೆಗಳ ಆಳಕ್ಕೂ ಕೊಂಡೊಯ್ಯುವಷ್ಟು ಪ್ರಬುದ್ಧವಾಗಿವೆ. 

ಅವರ ಕಾವ್ಯಧಾರೆಯ ಕೆಲವು ಹನಿಗಳು ಇಲ್ಲಿವೆ.. ಓದಿ ಆನಂದಿಸಿ.

ಅಕ್ಕರೆಯಿಂದ,
ಕನಸು..
ನಾದವಿರದ ಬದುಕು

ನಾದವಿರದ ಬದುಕೇ, ಉನ್ಮಾದ ಕೋರಬೇಡ ;
ಈ ನೆಲದ ಜಲವ ಸವಿದು, ರವಿ ಕರುಣೆ ಮರೆಯಬೇಡ.

ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು ;
ಸುಡುಬಾಳಿನಂಚಿನಲ್ಲಿ ಮೆರೆದಿರಲಿ ಕಲೆಯ ಸೆರಗು.

ಕಳೆ ಎಷ್ಟೇ ಇದ್ದರೇನು? ಕನಸಿರದ ಬಾಳು, ಬಾಳೆ?
ಮಳೆಬಿಲ್ಲು ಸಿಂಗರಿಸದ ಕರಿಮುಗಿಲಿನೊಂದು ಮಾಲೆ!

ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು ;
ಚೆಲುವೆದುರಿನಲ್ಲಿ ಸತತ ಹೊಸತಾಗಬೇಕು ಕಣ್ಣು.

ಚಣಚಣವು ಜೀವ ಮಾಗಿ, ಮರುಹುಟ್ಟು ಪಡೆಯುತಿರಲಿ ;
ಹೊಸ ನಲವ ನೆಲೆಗೆ ತಾನು ನಿಲದಂತೆ ನಡೆಯುತಿರಲಿ.

                                             -ಕೆ.ಎಸ್. ನಿಸಾರ್ ಅಹಮದ್
                                             ' ನಿತ್ಯೋತ್ಸವ '

ನೀನು ಜೊತೆಯೊಳಿರುವ ವೇಳೆ


ನೀನು ಜೊತೆಯೊಳಿರುವ ವೇಳೆ
ಬಿಗಿದು ನಿಲುವುದೆನ್ನ ಮನಸು.
ಯಾಕೊ ನಿನ್ನ ನಲಿವಿನಲ್ಲಿ
ಪಾಲುಗೊಳ್ಳದೆನ್ನ ಮನಸು.

ಅಗಲಿದೊಡನೆ ಅಂಗಲಾಚಿ
ಕೂಗಿ ಕರೆವುದೆನ್ನ ಮನಸು.
ನಿನ್ನ ದನಿಯ ಜೇನ ಹನಿಗೆ
ಚಡಪಡಿಸುವುದೆನ್ನ ಮನಸು.

ನೀನು ಪರರ ಒಡವೆಯೆಂದು
ಎಚ್ಚರಿಸುವುದೆನ್ನ ಮನಸು.
ಏನೊ ಪಾಪವೆಸಗಿದಂತೆ
ಪರಿತಪಿಸುವುದೆನ್ನ ಮನಸು.

ಇಷ್ಟು ದೂರ ಬಂದ ಬಳಿಕ
ತಿರುಗಲೊಪ್ಪದೆನ್ನ ಮನಸು.
ನಿನ್ನ ಸಂಗ ತೊರೆಯೆನೆಂಬ
ಪಣವ ತೊಡುತಲಿಹುದು ಮನಸು.

ಪಾಪ ಪುಣ್ಯ, ಒಳಿತು ಕೆಡುಕು -
ಗಣಿಸಲಾರದೆನ್ನ ಮನಸು.
ನಿನ್ನ ಪ್ರೇಮ ಕಲ್ಲೋಲದಿ
ಮುಳುಗಲೆಳಸುತಿಹುದು ಮನಸು.

                                - ಕೆ.ಎಸ್. ನಿಸಾರ್ ಅಹಮದ್.
                                ' ಬಹಿರಂತರ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kavanotsava.php

ಎಂಥ ಮಾಟ


ನೋಡು ನೀನೆಂಥ ಮಾಟ ಮಾಡಿರುವೆ
ಕಣ್ಣಿನ ಮರೆಗೆ ಇದ್ದೂ ಕಾಡಿರುವೆ.

ಹೂಡಿ ನೀ ಬಂದು ಯಾವುದೊ ನೆವವ
ಅಂದು ಕಣ್ ಧಾರೆ ಸುರಿಸಿದನುಭವವ,
ಮತ್ತೆ ನಾ ಸವಿವ ಸಂಚು ಹೂಡಿರುವೆ
ಅತ್ತು ಕಾತರಿಸುವ ಆಟ ನೋಡಿರುವೆ.
                                         ನೋಡು ನೀನೆಂಥ ಮಾಟ ಮಾಡಿರುವೆ....
  
ನಿನ್ನ ಹಿಂದೊಮ್ಮೆ ಒಲಿಯಿತೀ ಹೃದಯ
ಸಂದಿದೆ ನಾವು ಅಗಲಿ ಬಲು ಸಮಯ 
ಆದರೂ ಇರಿಯುತಿರುವೆ ನೆನಪಾಗಿ
ಜನ್ಮ ಜನ್ಮಾಂತರದ ವೈರಿ ನೀನಾಗಿ
                                   ನೋಡು ನೀನೆಂಥ ಮಾಟ ಮಾಡಿರುವೆ....

ಚಿತ್ತ ಸಿಂಗಾರಗೊಳಿಸಿ ಒಳ ಕರೆದೆ
ಸಾಟಿಯೇ ಇರದ ಪ್ರೀತಿ ನಾನೆರಿದೆ
ಅಂದು ನಾನೊಲಿದ ಪರಿಗೆ ಈ ಫಲವೆ?
ನೋವಿನಿಂದೆದೆಯ ಕೊರೆವ ಹುಲು ಛಲವೆ?
                            ನೋಡು ನೀನೆಂಥ ಮಾಟ ಮಾಡಿರುವೆ....

                                          - ಕೆ.ಎಸ್. ನಿಸಾರ್ ಅಹಮದ್
                                          ' ಬಹಿರಂತರ '
ಆ ರೂಪ


ಮತ್ತೆ ಆ ರೂಪ ಎದೆಗೆ ಹಾಯುತಿದೆ
ಚಿತ್ತ ಸಂತಾಪದಲ್ಲಿ ಬೇಯುತಿದೆ.
ಎಂದೊ ಹುಗಿದಂಥ ನೆನಹ ಕೆದಕುತಿದೆ
ಮೌನದುತ್ತಾಪದಲ್ಲಿ ಹೊಗೆಯುತಿದೆ.

ಇದ್ದಕಿದ್ದಂತೆ ಹೃದಯ ಹೌಹಾರಿ
ಸದ್ದೆ ಇರದಂತೆ ರೋದಿಸಿದೆ ಚೀರಿ.
ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ;
ಜೀವ ಏನನ್ನೊ ಬೇಡಿ ದುಡುಕುತಿದೆ.
                                  ಮತ್ತೆ ಆ ರೂಪ....

ಅಂದಿನಾಮೋದವನ್ನೆ ಕನವರಿಸಿ
ಬಾರದ ಕಾಲಕಾಗಿ ಚಡಪಡಿಸಿ
ಒಲವಿನ ಕತೆಯ ಮರಳಿ ನೆನೆಯುತಿದೆ
ತೀರದ ಬಯಕೆ ಕಣ್ಣ ಹನಿಸುತಿದೆ.
                                 ಮತ್ತೆ ಆ ರೂಪ....

ಭಾವದಾವೇಗ ಕೊರಳ ಬಿಗಿಸುತಿರೆ
ಜೀವ ಜೀವಾಳವನ್ನೆ ಕಲಕುತಿರೆ
ಫಲಿಸದ ಬಯಕೆಗಾಗಿ ಯಾಚಿಸಿದೆ
ದೀನತಾಭಂಗಿ ಬದುಕ ನಾಚಿಸಿದೆ.
                              ಮತ್ತೆ ಆ ರೂಪ....

                                       - ಕೆ.ಎಸ್. ನಿಸಾರ್ ಅಹಮದ್
                                       ' ಬಹಿರಂತರ '

ನಾ ನಿನ್ನ ಕಂಡಾಗ

ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ;
ಎಷ್ಟೊಂದು ಗೆಲವಿತ್ತು, ಅಷ್ಟೊಂದು ನಗುವಿತ್ತು.

ಹಗಲೆಲ್ಲ ನಿನ್ನ ಧ್ಯಾನ, ಇರುಳೆಲ್ಲ ನಿನ್ನ ಸ್ವಪ್ನ -
ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ.

ನೀ ಸುಳಿದರೆನ್ನ ಬಳಿಗೆ, ನೆರೆ ಬಂದ ಹಾಗೆ ಹೊಳೆಗೆ -
ಹೊಸ ಕಸುವಿನಿಂದ ನಲ್ಲೆ, ನಲವುಕ್ಕಿ ಹಾಡಬಲ್ಲೆ.

ಹಾಲ್ಗೆನ್ನೆ ಸುಳಿಗಳಲ್ಲಿ ನಸುಲಜ್ಜೆಯೆಂಬ ತೇರು ;
ಕಣ್ಣಂತು ಸಾಣೆ ಹಿಡಿದ ಸೆಳೆಮಿಂಚಿನೆರಡು ಚೂರು.

ನನ್ನೆದೆಯ ತೋಟದಲ್ಲಿ ಆಡಾಡು ಓ! ನವಿಲೇ -
ಇಹುದಲ್ಲಿ ಹಚ್ಚ ಹಸಿರು, ಇಳಿದಿಹುದು ಕಾರ್ಮುಗಿಲೇ.

ಹತ್ತಾರು ಚಿಂತೆಯಿರಲಿ, ಬಾಳೆಲ್ಲ ಗೋಳೆ ಇರಲಿ -
ನೀ ನಕ್ಕರೆಲ್ಲ ಮರೆವೆ ಸುಖಸ್ವಪ್ನದಲ್ಲಿ ತೇಲಿ.

ನೆನೆದಾಗ ನಿನ್ನ ರೂಪ, ಎದೆಗತ್ತಲಲ್ಲಿ ದೀಪ -
ಮನಬಿಚ್ಚಿ ಒಮ್ಮೆ ನಗಲು, ನನಗಾವ ಚಿಂತೆ ದಿಗಿಲು?

ಆ ಮೊದಲ ನೋಟದಂತೆ ಮಿಕ್ಕಿರಲಿ ನಿನ್ನ ಸೊಬಗು ;
ಅನುಗಾಲ ನನ್ನ ಮನಕೆ ನೀಡಿರಲಿ ತುಂಬು ಬೆರಗು.

                                                                 -ಕೆ.ಎಸ್. ನಿಸಾರ್ ಅಹಮದ್
                                                                  ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
 http://www.kannadaaudio.com/Songs/Bhaavageethe/home/Nityotsava.php

ಗುರುವಾರ, ನವೆಂಬರ್ 4, 2010

ನೆನಪು

ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ
ಗುಜರಾಯಿಸುತ ಪ್ರತಿಸಲವು, ಉತ್ತರಕೆ ತತ್ತರಿಸಿ
ಮುಖಭಂಗವಾಗಿರುವ, ಹಣೆಬರಹ ಚಿತ್ತಾದ
ನಿರ್ಭಾಗ್ಯ ; ನಿನ್ನಾಸೆಗೆಳ್ಳುನೀರನು ಬಿಟ್ಟು  
ವರ್ಷಗಳು ಕಳೆದಿವೆ, ಚಿಹ್ನೆಗಳು ಉಳಿದಿವೆ.

                     ನನ್ನೆದೆಯ ಹಸುರಲ್ಲಿ
ನಿನ್ನ ನೆನಪಿನ ಕಲ್ಲು ಬಿದ್ದೊಡನೆ ಸದ್ದಿರದೆ
ಹೂತು ಹೋಗುವುದರೊಳಗೆ ಕೆಸರಿನಲ್ಲಿ.

ನಮ್ಮ ಒಲವಿನ ಭೂತ ಕಂಕಾಲ ಹಿಡಿಯಾಗಿ
ಮನದ ಮೂಲೆಯೊಳೆಲ್ಲೊ ಹುಡಿಯಾಗಿದೆ ;
ಅದ ತಿವಿದು ಕೆಣಕುವುದು ನಿನ್ನ ನೆನಹ ಸಲಾಕಿ
ಜೀವವಿದ್ದರೆ ತಾನೆ ಭಾವ ಹೊರಹೊಮ್ಮೀತು?
ಹಳೆಯ ಗಾಯಗಳೆಲ್ಲ ಕಾಲವೈದ್ಯನ ಕುಶಲ
ಕರ್ಮದಿಂದೊಂದೆ ಮಾಯ್ದು, ಗರಿಗಳು ಬಿದ್ದ
ತೆಂಗಿನಂತೆದೆಯುದ್ದ ಗುರುತುಗಳು ಒತ್ತಿಹವು,
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು.

ನೋವುಗಳು, ಕೊರಗುಗಳು ಕದ್ದು ನನ್ನೆದೆ ಹೊಕ್ಕು
ತುಳಿದು ತೊತ್ತಳ ನಡೆದುದಕ್ಕೆ ರುಜುವಾತುಗಳು :
ಮುರಿದು ಜೋತಿರುವೆಳೆಯ ಕೊಂಬೆ ಒಡೆಯದ ಆಸೆ ;
ಬೇರುಗಳು ಬೇರಾಗಿ ಬುಡ ಮೇಲು ಉರುಳಿರುವ
ಹೊಚ್ಚ ಹೊಸ ಉತ್ಸಾಹ ; ಕಾಯಿತನದಲೆ ಉದುರಿ
ಮಣ್ಣುಗೂಡಿದ ಕನಸಿನೆಷ್ಟೊ ಜೊಂಪೆ ; ಸುಗಂಧ
ಬಿಡುವ ಮೊದಲೇ ಎವೆಯನೀಗಲೋ, ಆಗಲೋ
ಮುಚ್ಚುವೆನುವಾರೋಗ್ಯ -
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು,
ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು.

                                                    - ಕೆ.ಎಸ್. ನಿಸಾರ್ ಅಹಮದ್
                                                       ' ಸುಮುಹೂರ್ತ '