ಶನಿವಾರ, ನವೆಂಬರ್ 6, 2010

ನಾದವಿರದ ಬದುಕು

ನಾದವಿರದ ಬದುಕೇ, ಉನ್ಮಾದ ಕೋರಬೇಡ ;
ಈ ನೆಲದ ಜಲವ ಸವಿದು, ರವಿ ಕರುಣೆ ಮರೆಯಬೇಡ.

ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು ;
ಸುಡುಬಾಳಿನಂಚಿನಲ್ಲಿ ಮೆರೆದಿರಲಿ ಕಲೆಯ ಸೆರಗು.

ಕಳೆ ಎಷ್ಟೇ ಇದ್ದರೇನು? ಕನಸಿರದ ಬಾಳು, ಬಾಳೆ?
ಮಳೆಬಿಲ್ಲು ಸಿಂಗರಿಸದ ಕರಿಮುಗಿಲಿನೊಂದು ಮಾಲೆ!

ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು ;
ಚೆಲುವೆದುರಿನಲ್ಲಿ ಸತತ ಹೊಸತಾಗಬೇಕು ಕಣ್ಣು.

ಚಣಚಣವು ಜೀವ ಮಾಗಿ, ಮರುಹುಟ್ಟು ಪಡೆಯುತಿರಲಿ ;
ಹೊಸ ನಲವ ನೆಲೆಗೆ ತಾನು ನಿಲದಂತೆ ನಡೆಯುತಿರಲಿ.

                                             -ಕೆ.ಎಸ್. ನಿಸಾರ್ ಅಹಮದ್
                                             ' ನಿತ್ಯೋತ್ಸವ '


ಕಾಮೆಂಟ್‌ಗಳಿಲ್ಲ: