ಗುರುವಾರ, ನವೆಂಬರ್ 4, 2010

ನೆನಪು

ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ
ಗುಜರಾಯಿಸುತ ಪ್ರತಿಸಲವು, ಉತ್ತರಕೆ ತತ್ತರಿಸಿ
ಮುಖಭಂಗವಾಗಿರುವ, ಹಣೆಬರಹ ಚಿತ್ತಾದ
ನಿರ್ಭಾಗ್ಯ ; ನಿನ್ನಾಸೆಗೆಳ್ಳುನೀರನು ಬಿಟ್ಟು  
ವರ್ಷಗಳು ಕಳೆದಿವೆ, ಚಿಹ್ನೆಗಳು ಉಳಿದಿವೆ.

                     ನನ್ನೆದೆಯ ಹಸುರಲ್ಲಿ
ನಿನ್ನ ನೆನಪಿನ ಕಲ್ಲು ಬಿದ್ದೊಡನೆ ಸದ್ದಿರದೆ
ಹೂತು ಹೋಗುವುದರೊಳಗೆ ಕೆಸರಿನಲ್ಲಿ.

ನಮ್ಮ ಒಲವಿನ ಭೂತ ಕಂಕಾಲ ಹಿಡಿಯಾಗಿ
ಮನದ ಮೂಲೆಯೊಳೆಲ್ಲೊ ಹುಡಿಯಾಗಿದೆ ;
ಅದ ತಿವಿದು ಕೆಣಕುವುದು ನಿನ್ನ ನೆನಹ ಸಲಾಕಿ
ಜೀವವಿದ್ದರೆ ತಾನೆ ಭಾವ ಹೊರಹೊಮ್ಮೀತು?
ಹಳೆಯ ಗಾಯಗಳೆಲ್ಲ ಕಾಲವೈದ್ಯನ ಕುಶಲ
ಕರ್ಮದಿಂದೊಂದೆ ಮಾಯ್ದು, ಗರಿಗಳು ಬಿದ್ದ
ತೆಂಗಿನಂತೆದೆಯುದ್ದ ಗುರುತುಗಳು ಒತ್ತಿಹವು,
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು.

ನೋವುಗಳು, ಕೊರಗುಗಳು ಕದ್ದು ನನ್ನೆದೆ ಹೊಕ್ಕು
ತುಳಿದು ತೊತ್ತಳ ನಡೆದುದಕ್ಕೆ ರುಜುವಾತುಗಳು :
ಮುರಿದು ಜೋತಿರುವೆಳೆಯ ಕೊಂಬೆ ಒಡೆಯದ ಆಸೆ ;
ಬೇರುಗಳು ಬೇರಾಗಿ ಬುಡ ಮೇಲು ಉರುಳಿರುವ
ಹೊಚ್ಚ ಹೊಸ ಉತ್ಸಾಹ ; ಕಾಯಿತನದಲೆ ಉದುರಿ
ಮಣ್ಣುಗೂಡಿದ ಕನಸಿನೆಷ್ಟೊ ಜೊಂಪೆ ; ಸುಗಂಧ
ಬಿಡುವ ಮೊದಲೇ ಎವೆಯನೀಗಲೋ, ಆಗಲೋ
ಮುಚ್ಚುವೆನುವಾರೋಗ್ಯ -
ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹವು,
ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು.

                                                    - ಕೆ.ಎಸ್. ನಿಸಾರ್ ಅಹಮದ್
                                                       ' ಸುಮುಹೂರ್ತ '


ಕಾಮೆಂಟ್‌ಗಳಿಲ್ಲ: