ಶುಕ್ರವಾರ, ನವೆಂಬರ್ 26, 2010

ರೂಹಿಲ್ಲದ, ಕೇಡಿಲ್ಲದ

ಸಾವೇ ಓ ಸಾವೇ,
ನೀನು ರೂಹಿಲ್ಲದ ಕೇಡಿಲ್ಲದ
ಸಾವಿಲ್ಲದ ಚೆಲುವ ನನ್ನೊಲುಮೆ
ನಿನ್ನ ಮೇಲೆ ಹೆಚ್ಚಿದಷ್ಟೂ ನೀನು
ರಹಸ್ಯ. ಆದರೂ ರಹಸ್ಯವೇನಲ್ಲ
ಎಂಬ ಭ್ರಮೆಗಳ ಕೆದರಿ ಪ್ರಶ್ನೆಯೂ
ಗುತ್ತಿ, ಮುಖದಿರುವಿ ಹೋಗುವ
ಬದುಕಿಗೆ ಉತ್ತರವೂ ಕೂಡಾ
ನೀನಿರುವ ಜಗದಲಿ ಎಂಥ ಹೂ
ಹಣ್ಣು, ನಕ್ಷತ್ರ ಕನಸೊ ಎಂಬಂಥ
ಕುತೂಹಲ. ನಿನ್ನ ಹುಡುಕಿಕೊಂಡು
ನಾನೊಂದು ಬಾರಿ ರೈಲಿನಡಿ, ನೀರಿ
ನಾಳದಲಿ, ಗಣಿಯ ಎದೆಯೊಳು,
ಆಸ್ಪತ್ರೆಯ ಮೂಲೆಮೂಲೆಗಳಲಿ
ತುಂಬಿದ ಮನೆಗಳಲಿ, ನಗುವ
ಕಣ್ಣಿನಲಿ ಅಲೆದಾಡುತ್ತ ಸದ್ದಿಲ್ಲದೆ
ಅಡಗಿದ್ದೆ ನಿನ್ನನ್ನು ಕಂಡು
ಕೇಳಿದೆ; "ಸಾವೇ ನಿನಗೆ ಬಿಡು
ವಿರದ ಕೆಲಸ ಸರಿ ನನ್ನ ಮನೆಗೆಂದು
ಬರುವಿ? ನನ್ನ ಭಗ್ನ ಪ್ರೇಮಿಯಂತೆ
ನೋಡುವ ಈ ಬದುಕಿಗೆಂದು ವಿದಾಯ?"
ಸಾವು ನಗುನಗುತ್ತ ಉತ್ತರಿಸಿತು
"ಪ್ರಿಯೆ ನಿನ್ನಷ್ಟು ನನ್ನನ್ನು ಯಾರು 
ಪ್ರೀತಿಸುವರು? ಯಾರು ನೆನೆಯುವರು?
ಬೆಚ್ಚಗಿನ ಆ ಒಲವಿನಲಿ ನೆನೆಯಲಾಸೆ
ನನಗಿನ್ನೂ, ಆ ಪ್ರೀತಿ ಆ ಒಲವುಗಳ
ಸವಿ ಅನುಭವವಿರಲಿ ಇನ್ನೊಂದಿಷ್ಟು
ದಿನ, ನಿನ್ನ ಹೊರತು ನಾ ಇರಬಲ್ಲೆನೆ?
ಬದುಕಬಲ್ಲೆನೆ?" ನಗುನಗುತ್ತ
ಸಾವು ಹೊರಟು ಹೋಯಿತು - ನನಗೆ
ಬದುಕುವ ಹೊಸ ಉತ್ಸಾಹ ಹುಟ್ಟಿಸುತ್ತ!
ಹೌದು ನನಗೆ ಬದುಕುವ ಹೊಸ
ಉತ್ಸಾಹ ಹುಟ್ಟಿಸುತ್ತ.

                                      - ಎಚ್.ಎಸ್. ಮುಕ್ತಾಯಕ್ಕ

ಕಾಮೆಂಟ್‌ಗಳಿಲ್ಲ: