ಗುರುವಾರ, ನವೆಂಬರ್ 4, 2010

ನೆನೆದೆ ನೆನೆಯುವೆ

ನೆನೆದೆ ನೆನೆಯುವೆ - ನೀನು
ನನ್ನ ನೆನೆದೆ ನೆನೆಯುವೆ.

ಮನದಲ್ಲಿ ಘನಿಸಿರುವ ಚಹರೆ ಇಬ್ಬನಿಯಾಗಿ
ನಿನ್ನ ಹೂಗೆನ್ನೆಗೆಳು ತೋಯುವಾಗ ;
ಒದ್ದೆಗಣ್ಣಿನ ಜೊತೆಗೆ ಗದ್ಗದಿತ ಕೊರಲೊಂದು
ನಿನ್ನ ನಿದ್ದೆಗೆ ಉರುಲು ಬೀಸುವಾಗ.

ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ
ನನ್ನ ದೈನ್ಯವನೊಂದು ಹೋಲಿದಾಗ ;
ಕಣ್ಣಂಚ ಹೆದೆಯಲ್ಲಿ ಬಿಗಿಗೊಂಡ ನೋವೊಂದು
ನೇರ ನಿನ್ನೆದೆಯತ್ತ ತೂರಿದಾಗ.

ನಿನ್ನ ಬಗೆ ಮಸಣದಲಿ ಮುರಿದೊಲವ ಹೆಣವೊಂದು
ವಿರಸತೆಯ ಚಿತೆಯಲ್ಲಿ ಬೇಯುವಾಗ ;
ಮಣ್ಣಾದ ನೆನಹೊಂದು ಹಣ್ಣಾದ ಮೈಯೆಳೆದು
ಚಳಿಯ ಕಾಯಿಸಲಲ್ಲಿ ಹಾಯುವಾಗ.

ನೆನೆದೆ ನೆನೆಯುವೆ - ನೀನು
ನನ್ನ ನೆನೆದೆ ನೆನೆಯುವೆ.

                                                - ಕೆ.ಎಸ್. ನಿಸಾರ್ ಅಹಮದ್
                                                ' ನಿತ್ಯೋತ್ಸವ '

ಕಾಮೆಂಟ್‌ಗಳಿಲ್ಲ: