ಶನಿವಾರ, ನವೆಂಬರ್ 6, 2010


ಎಂಥ ಮಾಟ


ನೋಡು ನೀನೆಂಥ ಮಾಟ ಮಾಡಿರುವೆ
ಕಣ್ಣಿನ ಮರೆಗೆ ಇದ್ದೂ ಕಾಡಿರುವೆ.

ಹೂಡಿ ನೀ ಬಂದು ಯಾವುದೊ ನೆವವ
ಅಂದು ಕಣ್ ಧಾರೆ ಸುರಿಸಿದನುಭವವ,
ಮತ್ತೆ ನಾ ಸವಿವ ಸಂಚು ಹೂಡಿರುವೆ
ಅತ್ತು ಕಾತರಿಸುವ ಆಟ ನೋಡಿರುವೆ.
                                         ನೋಡು ನೀನೆಂಥ ಮಾಟ ಮಾಡಿರುವೆ....
  
ನಿನ್ನ ಹಿಂದೊಮ್ಮೆ ಒಲಿಯಿತೀ ಹೃದಯ
ಸಂದಿದೆ ನಾವು ಅಗಲಿ ಬಲು ಸಮಯ 
ಆದರೂ ಇರಿಯುತಿರುವೆ ನೆನಪಾಗಿ
ಜನ್ಮ ಜನ್ಮಾಂತರದ ವೈರಿ ನೀನಾಗಿ
                                   ನೋಡು ನೀನೆಂಥ ಮಾಟ ಮಾಡಿರುವೆ....

ಚಿತ್ತ ಸಿಂಗಾರಗೊಳಿಸಿ ಒಳ ಕರೆದೆ
ಸಾಟಿಯೇ ಇರದ ಪ್ರೀತಿ ನಾನೆರಿದೆ
ಅಂದು ನಾನೊಲಿದ ಪರಿಗೆ ಈ ಫಲವೆ?
ನೋವಿನಿಂದೆದೆಯ ಕೊರೆವ ಹುಲು ಛಲವೆ?
                            ನೋಡು ನೀನೆಂಥ ಮಾಟ ಮಾಡಿರುವೆ....

                                          - ಕೆ.ಎಸ್. ನಿಸಾರ್ ಅಹಮದ್
                                          ' ಬಹಿರಂತರ '

ಕಾಮೆಂಟ್‌ಗಳಿಲ್ಲ: