ಗುರುವಾರ, ನವೆಂಬರ್ 4, 2010

ಬೇಸರಾಗಿದೆ ಮಾತು

ಬೇಸರಾಗಿದೆ ಮಾತು, ಭಾರವಾಗಿದೆ ಮೌನ ;
ನೋವು ಕರಗಿದೆ ಕಣ್ಣಲಿ ;
ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ ;
ಮಳೆಗೆ ಆಸರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ,
ಜೀವ ರೆಕ್ಕೆಯ ಬಿಚ್ಚಿತೊ ;
ಯಾವ ಗವಿಗತ್ತಲಿನ ಮೌನಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ. 

                                                              - ಕೆ.ಎಸ್. ನಿಸಾರ್ ಅಹಮದ್
                                                                    ' ನಿತ್ಯೋತ್ಸವ '

ಕಾಮೆಂಟ್‌ಗಳಿಲ್ಲ: