ಬುಧವಾರ, ನವೆಂಬರ್ 10, 2010

ತೂಗಿ ತೂಗಿ ಮರಗಳೇ

ತೂಗಿ ತೂಗಿ ಮರಗಳೇ
ಇಳೆಗೆ ಇಳಿದ ವರಗಳೇ
ನೆಲದ ಮಧುರ ಗಾನದಲ್ಲಿ
ಮೂಡಿ ಬಂದ ಸ್ವರಗಳೇ

ಮಾತಾಡದೆ ದುಡಿಯುವಾ ಪ್ರೀತಿ ಪಡೆದ ಕರಗಳೇ
ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವಾ ನೆಲೆಗಳೇ
ಸಾಲು ಹಸಿರ ಮಾಲೆಯೇ
ಜೀವ ರಸದ ನಾಲೆಯೇ
ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೇ!

ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ
ಮೈ ತುಂಬಾ ಚಿಗುರಿನ ರೋಮಾಂಚನ ತಳೆವಿರಿ ;
ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ
ಔದಾನ್ಯದ ಒಡಲಾಗಿ ಹೂವು ಹಣ್ಣ ಸುರಿವಿರಿ

ಆಕಾಶಕೆ ತುಡಿಯುವಾ ನೆಲದಾಳದ ಕನಸೇ
ನೀಡಲೆಂದೆ ಫಲಿಸುವಾ ಋಷಿ ಸಮಾನ ಮನಸೇ ;
ಕಡಿದರೂ ಕರುಣೆ ತೋರಿ ಚಿಗುರುವಾ ಗೆಲುವೆ
ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವೆ!

                                                                                - ಡಾll ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಕಾಮೆಂಟ್‌ಗಳಿಲ್ಲ: