ಗುರುವಾರ, ನವೆಂಬರ್ 25, 2010

ವೃದ್ಧಿ


ರಾತ್ರಿಯ ಹೊತ್ತು. ಮಳೆ ಬರುತಿತ್ತು.
ಒಮ್ಮೆಗೆ ಹೋದವು ದೀಪ.
ಕೊಡೆ ಹಿಡಿದದ್ದ ಮರದಡಿಯಲ್ಲಿ
ಯಾರೋ ಹುಡುಗಿಯು ಪಾಪ -

ನಿಂತಿದ್ದಾಳೆ ಸುರಿಯುವ ಸೋನೆ
ನಿಂತೀತೆಂದು ಬೇಗ
ಮಿಂಚಿತು ಮಿಂಚು. ಮರದಡಿ ಕಂಡನು :
ಒಬ್ಬ ಹುಡುಗ ಆವಾಗ!

ಝಲ್ಲೆಂದಿತು ಎದೆ. ಯಾರೋ ಸುಮ್ಮಗೆ
ಕಡ್ಡಿಯ ಗೀರಿದ ಹಾಗೆ
ಜುಂಜುಂ ಎನ್ನುವ ಏನೋ ಒಂದು
ಎದೆಯಲಿ ತಿರುಗಿದ ಹಾಗೆ.

"ರಾತ್ರಿಯ ಮಳೆ ಇದು ನಿಲ್ಲುವುದಿಲ್ಲ" -
ಎಂದನು ಪಕ್ಕದ ಹುಡುಗ.
ಏನು ಹೇಳುವುದೋ ತಿಳಿಯದೆ ಹುಡುಗಿ
ಸುಮ್ಮನೆ ನೋಡಿದಳಾಗ!

ಕತ್ತಲಿನಲ್ಲಿ ಎತ್ತರವಾಗಿ
ಕಪ್ಪಗೆ ನಿಂತಿದ್ದಾನೆ
ನಿಲ್ಲದ ಕಾರಿನ ಹಾಯುವ ಬೆಳಕು
'ಹುಡುಗನು ಹೇಗಿದ್ದಾನೆ?'

"ಎಲ್ಲಿ ನಿಮ್ಮ ಮನೆ? ಲೇಟಾದರೆ
ಆಟೋಗಳು ಸಿಗುವುದು ಕಷ್ಟ"
ಬಸವನಗುಡಿ ಎಂದಷ್ಟೆ ಹೇಳಿದಳು
ಹೆಣ್ಣೆ ಹಾಗೆ - ಅಸ್ಪಷ್ಟ.

ಒಬ್ಬಳೆ ಹುಡುಗಿ, ಚಾಲಕ ಹೇಗೋ!
ರಿಕ್ಷ ಹತ್ತುವುದು ಹೇಗೆ?
ಜೊತೆಗಿವನಿದ್ದರೆ ಎಷ್ಟೋ ಧೈರ್ಯ!
ಕುಳಿತಳು ರಿಕ್ಷಾದೊಳಗೆ.

ಸುರಿಯುವ ಮಳೆಯಲಿ ಓಡುವ ರಿಕ್ಷಾ
ಆಟೋದವನೂ ಹುಡುಗ!
ಹೀಗೇ ಕೇಳಿದ: "ಮಳೆಗೆ ಸಿಕ್ಕಿದಿರ
ಮದುವೆ ಮುಗಿಸಿ ಬರುವಾಗ?"

ಸುಮ್ಮನೆ ಇಳಿದರು ಹುಡುಗ ಹುಡುಗಿ
ಬಸವನ ಗುಡಿಯ ಬಳಿ
ಮತ್ತೆ ಸಿಕ್ಕೋಣ ಎಂದರು ನಿಲ್ಲದೆ
ಸುರಿಯುವ ಮಳೆಯಲ್ಲಿ.

ಹೀಗೆ ಒಂದಿರುಳು, ಒಂದು ಮಳೆ, ಆ
ಹಾದಿಯ ಒಂದು ಮರ
ಎರಡೆರಡಾದವು ಶಾಶ್ವತವಾಗಿ
ಅವರು ಅಗಲಿದಾಗ!

                                             - ಎಚ್.ಎಸ್. ವೆಂಕಟೇಶ ಮೂರ್ತಿ
                                           ' ಮೂವತ್ತು ಮಳೆಗಾಲ ' 

ಕಾಮೆಂಟ್‌ಗಳಿಲ್ಲ: