ಶುಕ್ರವಾರ, ಡಿಸೆಂಬರ್ 31, 2010

ಹೊಸ ಆಸೆಗೆ ಕಾರಣವೇ

ಹೊಸ ಆಸೆಗೆ ಕಾರಣವೇ
ಹೊಸ ಕಾಲದ ತೋರಣವೇ
ಶುಭ ನಾಂದಿಗೆ ಪ್ರೇರಣವೇ
ಹೊಸ ವರ್ಷವೆ ಬಾ
ಬಣಗುಡುವಾ ಒಣಬಾಳಿಗೆ ತೆನೆ ಪಯಿರನು ತಾ

ಮಣ್ಣ ಸೀಳಿ ಏಳುವಂತೆ
ಥಣ್ಣಗಿರುವ ಚಿಲುಮೆ,
ಹಣ್ಣ ತುಂಬಿ ನಿಲ್ಲುವಂತೆ
ರಸರೂಪದ ಒಲುಮೆ,
ಹುಣ್ಣಿಮೆಯ ಶಾಂತಿಯನ್ನೆ   
ಹೃದಯದಲ್ಲಿ ಹರಿಸು
ಬಣ್ಣಗಳನು ದಾಟಿ ನಿಜವ ತಲುಪುವಂತೆ ಹರಸು

ಮರಮರವೂ ಮುಡಿದು ನಿಲಲಿ
ಬಂಗಾರದ ಚಿಗುರ
ನರನರನೂ ನೋವ ನುಂಗಿ
ಮೇಲೇಳಲಿ ಹಗುರ
ಹರಹರೆಗೂ ಹಾರಿಬರಲಿ
ಹಕ್ಕಿ ಮಾಲೆ ಮಾಲೆ,
ಕರೆ ನೀಡಲಿ ಎಲ್ಲರಿಗೂ ಶುಭ ಉಣಿಸುವ ನಾಳೆ

                                                - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಬಾಗಿಲ ಬಡಿದಿದೆ ಭಾವೀ ವರ್ಷ 

ಬಾಗಿಲ ಬಡಿದಿದೆ ಭಾವೀ ವರ್ಷ
ಬಗೆ ಬಗೆ ಭರವನೆ ನೀಡಿ
ಭ್ರಮೆ ನಮಗಿಲ್ಲ ನೋವೋ ನಲಿವೋ
ಬರುವುದ ಕರೆವೆವು ಹಾಡಿ

ಎಲ್ಲ ನಿರೀಕ್ಷೆ ಸಮಯ ಪರೀಕ್ಷೆಗೆ
ಕೂರದೆ ವಿಧಿಯೇ ಇಲ್ಲ
ಕೂತದ್ದೆಲ್ಲ ಪಾಸಾದೀತೆ?
ಜೊತೆ ಜೊತೆ ಬೇವೂ ಬೆಲ್ಲ

ಕಾಲದ ಚೀಲದೊಳೇನೆ ಇರಲಿ
ಕಾಣದ ಅನುಭವ ನೂರು
ಎಲ್ಲವು ಇರಲಿ ನಿಲ್ಲದೆ ಬರಲಿ
ಸರಿಗಮ ಪದನಿಸ ಅರಳಿ

ಸುಖವೊ ದುಃಖವೊ ಒಂದೇ ಬಂದರೆ
ಏನಿದೆ ಅದರಲಿ ಘನತೆ?
ಎರಡೂ ಬೆರೆದು, ಬಹುಸ್ವರ ನುಡಿದು
ಮೂಡುವುದೇ ನಿಜಗೀತೆ!

                                                         - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಗುರುವಾರ, ಡಿಸೆಂಬರ್ 30, 2010

ನರಸಿಂಹಸ್ವಾಮಿಯವರ ಒಂದಿಷ್ಟು ಕವಿತೆಗಳು.....

ನಿನ್ನೊಲವಿಗೂ ಮೇರೆ ಇಹುದು!

ನೆಲದ ಸುತ್ತ ಜಲದ ಕುಲುಕು;
ಹಗಲ ಸುತ್ತ ಇರುಳ ತುಳುಕು;
ಕಾಲದೊಳಗೆ ಉಸಿರ ಪಲುಕು : -
                 ನಿನ್ನೊಲವಿಗೂ ಮೇರೆ ಇಹುದು!

ನನ್ನ ಕಡೆ ನೀನು ಬಂದು
ಮಡದಿಯಾಗಿ ಮುತ್ತ ತಂದು
ಹಿಗ್ಗಬಹುದು ಗೆದ್ದೆವೆಂದು.
                 ನಿನ್ನೊಲವಿಗೂ ಮೇರೆ ಇಹುದು!

ನೀನೆ ಕಂಡ ಮೊದಲ ಹೆಣ್ಣು;
ಸಂಜೆತಾರಗೆ ನಿನ್ನ ಕಣ್ಣು.
ನಿನ್ನ ಕೆಳೆಯೇ ಪುಣ್ಯವೆನ್ನು.
                   ನಿನ್ನೊಲವಿಗೂ ಮೇರೆ ಇಹುದು!

ತುಂಬುಗಣ್ಣ ತೆರೆದೆದುರಿಸಿ
ಕೆನ್ನೆಯೊಳಗೆ ನಗೆಯ ಸುಳಿಸಿ
ಗೆಲ್ಲು ನೀನೆ ನನ್ನ ನಗಿಸಿ.
                   ನಿನ್ನೊಲವಿಗೂ ಮೇರೆ ಇಹುದು!

ನಿನ್ನ ಚೆಲುವಿಗಿ ಮೇರೆ ನೀನೆ ;
ಬಳಿಯಲಿದ್ದು ಬೇರೆ ನಾನೆ;
ಬಾನ ಮೇರೆ ಬಾನೆ ತಾನೆ!
                    ನಿನ್ನೊಲವಿಗೂ ಮೇರೆ ಇಹುದು!

ತುಂಬಿದರಳ ಬಂಡಿನೊಳಗೆ
ತುಟಿಯನಿಡುವ ತುಂಬಿಯಂತೆ
ಸಾವು ಎಂದೊ ಬರುವುದಂತೆ.
                   ನಿನ್ನೊಲವಿಗೂ ಮೇರೆ ಇಹುದು!

ಸಾವು ಬಹುದು ಸುಖದ ಹೊತ್ತೆ.
ಚೆಲುವು ಅದರ ಹೆಡೆಯ ಮುತ್ತೆ.
ಅದಕೆ ಮೇರೆ ಇಲ್ಲ ಗೊತ್ತೆ?
                  ನಿನ್ನೊಲವಿಗೂ ಮೇರೆ ಇಹುದು!

ಬಾಳಿಗಂತೂ ಸಾವೆ ಕೊನೆಯೆ?
ಅದರಾಚೆಗೂ ನಿನ್ನ ಒಲವೆ?
ಒಲವು ತಾನೆ ತನಗೆ ಮೇರೆ?
               ಒಲವಿಗಂತೂ ಮೇರೆ ಇರದು!

                             - ಕೆ.ಎಸ್. ನರಸಿಂಹಸ್ವಾಮಿ
                                 ' ಉಂಗುರ '
ಉಂಗುರ

ಗಾಳಿ ಆಡಿದರೆ ಬನವೂ ಆಡಿ
ಹೂವಿನುಂಗುರ;
ಮಳೆ ಮೂಡಿದರೆ ಕೆರೆಯೂ ಆಡಿ
ನೀರಿನುಂಗುರ;

ತಾರೆ ಧುಮುಕಿದರೆ ಬಾನಿಗೆ ಬಾನೆ
ಬೆಳಕಿನುಂಗುರ;
ಕಣ್ಣತುಂಬಿ ಬಹ ನಿದ್ದೆಯ ಬೆರಳಿಗೆ
ಕನಸಿನುಂಗುರ;

ತುಂಬದ ಒಡಲಿಗೆ ತಾಂಬೂಲದ ತುಟಿ 
ಬೆಂಕಿಯುಂಗುರ;
ಬಾಳ ಕಾಣದಿಹ ಕಲ್ಲ ಕಣ್ಣಿನಲಿ
ಮಣ್ಣಿನುಂಗುರ;

ಒಲ್ಲದ ಹೆಣ್ಣಿನ ಸಲ್ಲದ ಬಯಕೆಗೆ
ಎಲ್ಲೋ ದೂರದ
ಕನಸನೂಡಿಸುವ ಕೊರಗಿನ ಬೆರಳಿಗೆ
ಆಸೆಯುಂಗುರ;

ಎದೆಯ ಕತ್ತಲೆಯ ಪೊದೆಯಲಿ, ಕಮಲಾ,
ವಜ್ರದುಂಗುರ;
ನಿನ್ನ ಕೆನ್ನೆಯಲಿ ಮೆಲ್ಲಗೆ ನನ್ನಾ
ಪ್ರೇಮದುಂಗುರ.

                               - ಕೆ.ಎಸ್. ನರಸಿಂಹಸ್ವಾಮಿ
                                ' ಉಂಗುರ '
ಮನೆಗೆ ಬಂದ ಹೆಣ್ಣು

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ,
ಚಿಂತೆ, ಬಿಡಿಹೂವ ಮುಡಿದಂತೆ;
ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ;
ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿಮುಖವಿಲ್ಲ. ಇಷ್ಟು ನಗು -
ಮೂಗುತಿಯ ಮಿಂಚು ಒಳಹೊರಗೆ;
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು,
ಬೇಲಿಯಲಿ ಹಾವು ಸರಿದಂತೆ.

ಮೂರನೆಯ ಸಂಜೆ ಹೆರಳಿನ ತುಂಬ ದಂಡೆಹೂ.
ಹೂವಿಗೂ ಜೀವ ಬಂದಂತೆ;
ಸಂಜೆಯಲಿ ರಾತ್ರಿ ಇಳಿದಂತೆ, ಬಿರುಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ!

                              - ಕೆ.ಎಸ್. ನರಸಿಂಹಸ್ವಾಮಿ
                                ' ಉಂಗುರ '
ಪ್ರಥಮ ರಾಜನಿಗೆ

ದೀಪವೂ ನಿನ್ನದೆ, ಗಾಳಿಯೂ ನಿನ್ನದೆ,
- ಆರದಿರಲಿ ಬೆಳಕು!
ಕಡಲೂ ನಿನ್ನದೆ, ಹಡಗೂ ನಿನ್ನದೆ,
- ಮುಳುಗದಿರಲಿ ಬದುಕು!

ಬೆಟ್ಟವೂ ನಿನ್ನದೆ, ಬಯಲೂ ನಿನ್ನದೆ,
- ಹಬ್ಬಿ ನಗಲಿ ಪ್ರೀತಿ!
ನೆಳಲೋ ಬಿಸಿಲೋ, ಎಲ್ಲವೂ ನಿನ್ನವೇ
- ಇರಲಿ ಏಕರೀತಿ!

ಆಗೊಂದು ಸಿಡಿಲು, ಈಗೊಂದು ಮುಗಿಲು
- ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
- ನಿನಗೆ ನಮಸ್ಕಾರ.

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
- ನಿನ್ನ ಪ್ರತಿಧ್ವನಿ :
ಆ ಮಹಾಕಾವ್ಯ, ಈ ಭಾವಗೀತೆ
- ನಿನ್ನ ಪದಧ್ವನಿ.

ಅಲ್ಲೊಂದು ಯುದ್ಧ, ಇಲ್ಲೊಬ್ಬ ಬುದ್ಧ,
- ಕೀರ್ತಿ ಇವು ನಿನಗೆ.
ಆ ಮಧ್ಯರಾತ್ರಿ, ಈ ಉದಯಸೂರ್ಯ
- ಮೂರ್ತಿ ಇವು ನಿನಗೆ.

ಕ್ಷಾಮ, ತುಷ್ಟಿ, ನಿನ್ನದೆ ಈ ಸೃಷ್ಟಿ
- ಕಡೆಗೆ ಎಲ್ಲಾ ಒಂದೆ.
ಹಿಡಿವುದೆಲ್ಲವನು ನಿನ್ನ ತಾಯ್ - ದೃಷ್ಟಿ,
- ನಿನಗೆ ಎಲ್ಲಾ ಒಂದೆ.

ಈ ಸೃಷ್ಟಿಗೆಲ್ಲ ಕರ್ತಾರನಾಗಿ,
- ಅಧ್ಯಕ್ಷನಾಗಲೊಲ್ಲೆ!
ಈ ಸೃಷ್ಟಿಗೆಲ್ಲ ಅಧಿಕಾರಿಯಾಗಿ,
- ಕಣ್ಗಿಲ್ಲವಾದೆ, ಅಲ್ಲೆ!

ಪ್ರಜೆಗಳನು ಕರೆದು ಇದೊ ರಾಜ್ಯವಿಹುದು;
ಆಳಬಹುದೆಂದು ನುಡಿದೆ;
ಅರಮನೆಯ ತೊರೆದು ಬಾಗಿಲನು ತೆರೆದು
ತಿರುಗಿ ನೋಡದೆಯೆ ನಡೆದೆ.

ಸರ್ವಶಕ್ತಿಯೇ ಸರ್ವತ್ಯಾಗದ
ಗಂಗೆಯಾಗಿ ಹಾರಿದೆ;
ಮುತ್ತಿನ ಕಿರೀಟ, ಮುಳ್ಳಿನ ಕಿರೀಟ
- ಯಾವುದೂ ಇಲ್ಲ ನಡೆದೆ.

ನಿನ್ನಂಥ ರಾಜ ಒಳಗಿದ್ದು ದೂರ;
- ಇನ್ನೆಲ್ಲೋ ನೀನು!
ರಾಜರಹಿತ ರಾಜ್ಯಾಂಗ ಶಾಸನದ
ಪ್ರಾಣಶಕ್ತಿಯೇ ನೀನು!

                                   - ಕೆ.ಎಸ್. ನರಸಿಂಹಸ್ವಾಮಿ
                                   ' ಉಂಗುರ '


ಸೋಮವಾರ, ಡಿಸೆಂಬರ್ 27, 2010

ಅಕ್ಕಿಯಾರಿಸುವಾಗ

ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು :
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ
ಸಿಂಗಾರ ಕಾಣದ ಹೆರಳು ;

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು ;
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ, ಮುಂಗಾರಿನುರುಳು ;

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಜಲ್ಲೆನುವ ಬಳೆಯ ಸದ್ದು ; -
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿದ್ದು,

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು.
ಬೇಸಿರಿಯ ಕಿರುಮುತ್ತು ನುಚ್ಚಿನಲಿ ಮುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು!

                                        - ಕೆ.ಎಸ್. ನರಸಿಂಹಸ್ವಾಮಿ
                                           ' ಇರುವಂತಿಗೆ '
ಶ್ರೀ ಕೃಷ್ಣನಂತೊಂದು ಮುಗಿಲು

ಶ್ರೀ ಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಹೊಳೆದಾರಿ ಕಾಯುವ ಮುಗಿಲು
ಜರತಾರಿ ಸೆರಗಿನ ಮುಗಿಲು

ಬೆಣ್ಣೆಯ ಗಿರಿಯಂತೆ ಮುಗಿಲು ಅಲ್ಲೆ
ಬಳಸುವ ಯಮುನೆಯ ಮುಗಿಲು
ಗೋಪಿಯರ ತಂಡದ ಮುಗಿಲು ಬಲ್ಲೆ
ಹರಿಗೋಲು ಹುಣ್ಣಿಮೆ ಹೊನಲು

ಬಳ್ಳಿಯ ಮನೆಯಂತೆ ಮುಗಿಲು ಅಲ್ಲಿ
ಹಳ್ಳಿಯ ಹಾಡಿನ ಹುಯಿಲು
ಹೆಣ್ಣಿಗೆ ಎಷ್ಟೊಂದು ದಿಗಿಲು ನಿಲ್ಲಿ
ಕೆನ್ನೆಗೆ ಹೂವಿನ ನೆಳಲು

ಕಿರುತಾರೆ ಮುಡಿದೊಂದು ಮುಗಿಲು ತನ್ನ
ಚೆಲುವಿಗೆ ಬೆರಗಾದ ಮುಗಿಲು
ಕೊಳಲನು ತುಟಿಗಿಟ್ಟ ಮುಗಿಲು ನಿನ್ನ
ತುಟಿ ನನ್ನ ಕೊಳಲೆನುವ ಮುಗಿಲು

ಬಾ ಬಾರೆ ಎನ್ನುವ ಮುಗಿಲು ಅಲ್ಲಿ
ಬರಲಾರೆನೆನ್ನುವ ಮುಗಿಲು
ಕೆನ್ನೆ ಕೆಂಪಾದೊಂದು ಮುಗಿಲು ಎಲ್ಲಿ
ಇನ್ನೊಂದು ಮುತ್ತೆನುವ ಮುಗಿಲು

ಶ್ರೀ ಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಅಲ್ಲೊಂದು ಇಲ್ಲೊಂದು ಮುಗಿಲು
ಮುಗಿಲೆಲ್ಲ ಕೃಷ್ಣನ ಕೊಳಲು.

                                      - ಕೆ.ಎಸ್. ನರಸಿಂಹಸ್ವಾಮಿ
                                         ' ಇರುವಂತಿಗೆ '
ನಿನ್ನೊಲುಮೆ

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿಸೂಸುವ ಅಮೃತ ನೀನೇನೆ!
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ!

ನಿನ್ನ ಕಿರುನಗೆಯಿಂದ, ನಗೆಯಿಂದ, ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ!
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೆ!

                                            - ಕೆ.ಎಸ್. ನರಸಿಂಹಸ್ವಾಮಿ
                                               ' ಇರುವಂತಿಗೆ '
ನಿನ್ನ ಹೆಸರು

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು.
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು.

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು.
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ
ಹಾಲಲ್ಲಿ ನಿನ್ನ ಹೆಸರು.

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು.
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು.

ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ
ಬೆಳ್ದಿಂಗಳೋ ನಿನ್ನ ಹೆಸರು.
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು.

ನೀನೇ ಎದುರಿಗೆ ಬಂದಾಗ ನಿನ್ನಲ್ಲೆ
ಕರಗುವ ಬಲು ಚಿಕ್ಕ ಹೆಸರು.
ನೀನಿಲ್ಲದಾಗ ಈ ಮನೆಯಲ್ಲೆ ಮನದಲ್ಲೆ
ಹೊಳೆಗಾಳಿಯಂತಲೆವ ಹೆಸರು.

                                  - ಕೆ.ಎಸ್. ನರಸಿಂಹಸ್ವ್ವಾಮಿ
                                    ' ಇರುವಂತಿಗೆ '
ಬೆಳಗಿನ ತೋಟದಲ್ಲಿ

ಬಳ್ಳಿಯ ಬೆರಳಲಿ ಹೂವೊಂದಿತ್ತು
ಉಂಗುರವಿಟ್ಟಂತೆ.
ಹೂವಿನ ತುಟಿಯಲಿ ಹನಿಯೊಂದಿತ್ತು
ಮುತ್ತೊಂದಿಟ್ಟಂತೆ.

ನೀರಿನ ಹನಿಯೇ ಕಾಮನಬಿಲ್ಲಿನ
ಕಂಬನಿಯಾಗಿತ್ತು.
ಹೂವಿನ ಸುತ್ತಾ ಹರಡಿಹ ಹುಲ್ಲಿನ
ಹಸುರಿನ ಹಾಸಿತ್ತು.

ಹನಿಗಳ ಹಿಡಿಯುತ ಕುಡಿಯುತ ಕೋಗಿಲೆ
ಬಾಯನು ತೆರೆದಿತ್ತು.
ಬಳ್ಳಿಯ ಹೂವಿನ ಬೆಳ್ಳಿಯ ಬಾಗಿಲೆ
ಹಾಡಿಗೆ ತೆರೆದಿತ್ತು,

ಭೂಮಿಯ ಉದಯದ ಭವ್ಯಾನಂದದ
ಹೊಸಗಾಳಿ
ಮೊದಲಿನ ಮಕ್ಕಳ ತೊದಲಿನ ಕೇಕೆಯ
ಉಂಗುರ ದನಿಗಳಲಿ

ಕರೆದಿದೆ: 'ನೋವೇ ಇಲ್ಲದ ಊರಿಗೆ
ಎಲ್ಲಾ ಬರಬಹುದು.'
ಕನಸಿನ ಹಸುವಿನ ಹಾಲೂ ಮಧುರವೆ?
- ಹಾಗೂ ಇರಬಹುದು.

                                 - ಕೆ.ಎಸ್. ನರಸಿಂಹಸ್ವಾಮಿ
                                    ' ಇರುವಂತಿಗೆ '

ಬುಧವಾರ, ಡಿಸೆಂಬರ್ 22, 2010

ಬೇಂದ್ರೆಯವರ 'ನಾದಲೀಲೆ'ಯಿಂದ.......

     ಧಾರವಾಡದ ದೇಸೀ ಭಾಷೆಯನ್ನು ಬಳಸಿಕೊಂಡೇ, ಹೊಸ ಕಾವ್ಯ ಮಾರ್ಗವನ್ನು ಹುಟ್ಟು ಹಾಕಿದ, 'ಜ್ಞಾನಪೀಠ'ವನ್ನೂ ಗಳಿಸಿದ ಕವಿ ದ.ರಾ.ಬೇಂದ್ರೆಯವರು. ಅವರ  'ನಾದಲೀಲೆ' ಒಂದು ಅದ್ಭುತ ಕವನಸಂಕಲನ. ಪ್ರಾಸಬದ್ಧ ಸಾಲುಗಳ ನಡುವೆ ಬಚ್ಚಿಟ್ಟುಕೊಂಡಂತಿರುವ ವಿವಿಧ ಭಾವನೆಗಳು, ಮೊನಚಾದ ವ್ಯಂಗ್ಯ ಮನಸಿಗೆ ತಟ್ಟುವಷ್ಟು ಗಾಢವಾಗಿವೆ.

     ಅದೇ ಸಂಕಲನದ ಹಲವು ಕವನಗಳು ಗೀತೆಗಳಾಗಿ ಈ ಮೊದಲೇ ಚಿರಪರಿಚಿತವಾಗಿವೆ. ಅವುಗಳನ್ನೂ ಸೇರಿಸಿದಂತೆ ಕೆಲವು ಕವಿತೆಗಳು ಇಲ್ಲಿವೆ, ನಿಮ್ಮ ಓದಿಗಾಗಿ...

     ಅಕ್ಕರೆಯಿಂದ,
     ಕನಸು..
ಬೆಳುದಿಂಗಳ ನೋಡs


ಬೆಳುದಿಂಗಳ ನೋಡs
                     ಬೆಳುದಿಂಗಳ ನೋಡು             IIಪII

       ೧
ದನಕರದ ಕಾಲಿನ ಧೂಳಿ
ಸಂಜೆಯ ಹೂಳಿ
ಮುಗಿಲ ಮುಟ್ಟ್ಯsದ
 ಮುಗಿಲ ಮುಟ್ಟ್ಯದ II
ಗೋಧೂಳಿ ಲಗ್ನಕ ಇತ್ತ
ಕೈಯ ಹಿಡಿದಿತ್ತ
ಕೈಯ ಹಿಡಿದಿತ್ತs
ಚಂದ್ರಿಕಿ ಚಂದ್ರಮರ ಜೋsಡs
                                             ಬೆಳುದಿಂಗಳ ನೋಡ II


ಕಲಿ ಕಪ್ಪು ಎಲ್ಲಿನೂ ಇಲ್ಲ
ಒಂದೆ ಸವನೆಲ್ಲ
 ಎಲ್ಲನೂ ನುಣುಪs
 ಎಲ್ಲನೂ ನುಣುಪು II
ಇದು ಹಾಲಗಡಲಿನs ಸೀಮಿ
ಚಂದ್ರಮನೆ ಸ್ವಾಮಿ
    ಚಂದ್ರಮನೆ ಸ್ವಾsಮಿs
  ಏನೆಂಥ ಹಂದರದ ಈsಡs
                                             ಬೆಳುದಿಂಗಳ ನೋಡs II


ರೋಹಿಣಿಯು ಎದೆಯ ಕೆಂಪೆಳ್ಳು
ಗೆಳತಿ ಅವನವಳು
ನಲೀತಾಳ ಮುಂದs
ನಲೀತಾಳ ಮುಂದ II
ಹಾಕ್ಯಾರ ಚಿಕ್ಕಿಗೆಳತ್ಯಾರ
ಕೃತ್ತಿಕೀ ಹಾರ
ಕೃತ್ತಿಕೀ ಹಾsರs
ಕಳಿಲಾಕ ಇದ್ದ ಬಿದ್ದ ಕೇsಡs
                                            ಬೆಳುದಿಂಗಳ ನೋಡs II


ನೆರೆದವರು ಹರುಹಿದರು ಊದಿ
ಮಂತ್ರಿಸಿದ ಬೂದಿ 
ಮೆಚ್ಚು ಮಾಟಕ್ಕs
ಮೆಚ್ಚು ಮಾಟಕ್ಕ II
ನೆಲದವರು ನಿದ್ದಿಯ ಪಾಲು
ಮೂರು ಮುಕ್ಕಾಲು
ಮೂರು ಮುಕ್ಕಾsಲುs
ಅರಹುಚ್ಚು ಎಚ್ಚತ್ತರು ಕೂsಡs
                                             ಬೆಳುದಿಂಗಳ ನೋಡs II


ಮದುಮಗಳ ಕಣ್ಣಿನs ಬಗೀ
ಚಂದಿರನ ನಗಿ
ಸುತ್ತ ಹರಿದsದs
 ಸುತ್ತ ಹರಿದsದ II
  ಕಂಡವರ ಬಾಳು ಮರಿಸ್ಯsದ
ತಣ್ಣಗಿರಿಸ್ಯsದ
ತಣ್ಣಗಿರಿಸ್ಯsದ
ಇದು ಮಾಯಕಾರರ ಬೀsಡs
                                        ಬೆಳುದಿಂಗಳ ನೋಡs II


ಸೂಸಿರುವ ನಗಿಯು ಬಗಿಹೀರಿ
ಮದಾ ತಲಿಗೇರಿ -
ಧಾಂಗ ಟಿಂಹಕ್ಕಿ
 ಹಾಂಗ ಟಿಂಹಕ್ಕಿ II
ಚೀರ್ತsದ ಗಿಡಾ ಬಿಟ್ಟೋಡಿ
ಗಿಡಕ ಸುತ್ತಾಡಿ
 ಗಿಡಕ ಸುತ್ತಾsಡಿs
ಬೆಪ್ಪಾಗೆದ ಕಾಡೂಮೇsಡs
                                    ಬೆಳುದಿಂಗಳ ನೋಡs II


ಮರ ಮರದ ಗೊನೀಗೆ ಕೂತು
ಹಾರಿ ಮೈ ಸೋತು
ತೆಪ್ಪಗs ಗಾsಳಿs
ತೆಪ್ಪಗs ಗಾಳಿ II
ತೂಡಕಸತsದ ತಾನೀಗ
ಜಂಪು ಬಂಧಾಂಗ
ಜಂಪು ಬಂಧಾಂsಗs
ಇದು ಅದರ ತುಪ್ಪಳದ ಗೂsಡs
                                    ಬೆಳುದಿಂಗಳ ನೋಡs II


ಹೂತsದ ಸುಗಂಧಿ ಜಾಲಿ
ಗಮ ಗಮಾ ಬೇಲಿ
ತುಳಕತದ ಗಂಧs
ತುಳಕತದ ಗಂಧ II
ಶ್ಯಾವಂತಿ ಹೂವಿನ ಕಂಪು
ಇಡಿಗಿಸಿತು ತಂಪು
ಇಡಿಗಿಸಿತು ತಂಪು
ಇದು ಸಾಕು; ಬೇರೆ ಏನು ಬ್ಯಾsಡಾs
                                    ಬೆಳುದಿಂಗಳ ನೋಡs II


ದಣಿಸಿದಾ ಹಗಲು ಹಿಂಗ್ಯsದ
ಕತ್ತಲಿಂಗ್ಯsದ
ಬೇರೆ ಈ ಕಾsಲs
 ಬೇರೆ ಈ ಕಾಲ II
  ನಡು ನಿದ್ದಿಯೊಳಗೆ ಇದ್ಧಾಂಗ
 ಕನಸು ಬಿದ್ಧಾಂಗs
ಕನಸು ಬಿದ್ಧಾಂಗs
ತೆರೆದsದ ತಣವಿಕೀ ನಾsಡs
                                 ಬೆಳುದಿಂಗಳ ನೋಡs II

೧೦
 ಜಗ ಧವಳ ಗಂಗ್ಯಾಗ ಮುಳುಗಿ
ಮೈ ಮನಾ ಬೆಳಗಿ
ಸಮಾಧಿಯು ಹತ್ತಿs
ಸಮಾಧಿಯು ಹತ್ತಿ II
ಮೋಡನೂ ಬೆಳ್ಳಗಾಗ್ಯಾವ
ತೆನೀ ಮಾಗ್ಯಾsವs
ಹಾಲುಣಿಸು ಎಲ್ಲಕೂ ಪಾsಡs
                               ಬೆಳುದಿಂಗಳ ನೋಡs II

೧೧
ಅರೆ ಮರವು ಮಾಡುವೀ ಬಂಧ
ಯಾವುದೀ ಛಂದ
ಯಾವುದೀ ಧಾsಟಿs
 ಯಾವುದೀ ಧಾಟಿ? II
ಸವಿರಾಗ ಬೆರಸಿದs ಉಸಿರು
ಇದಕ ಯಾ ಹೆಸರು
ಇದಕ ಯಾ ಹೆಸsರs?
ಅಂಬಿಕಾತನಯನ ಹಾsಡs
                         ಬೆಳುದಿಂಗಳ ನೋಡ II

                              - ದ.ರಾ. ಬೇಂದ್ರೆ
                                 ' ನಾದಲೀಲೆ '

ಸೋಮವಾರ, ಡಿಸೆಂಬರ್ 20, 2010

ಶುಭ ನುಡಿಯೆ ಶಕುನದ ಹಕ್ಕಿ

ಶುಭ ನುಡಿಯೆ 
                   ಶುಭ ನುಡಿಯೆ ಶಕುನದ ಹಕ್ಕಿ I
                                                                ಶುಭ ನುಡಿಯೆ            II ಪ II        
ಮುಂಗಾಳು ಕವಿಯುವಾಗ
ಹಸುಗೂಸಿಗೆ ಕಸಿವಿಸಿಯಾಗಿ
ಕಕ್ಕಾವಿಕ್ಕಿಪಡುತ ಪಾಪ
ಕಿರಿ ಕಿರಿ ಅಳುತಲಿತ್ತ
ಶುಭ ನುಡಿಯೆ
                       ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ಇರುಳು ಗಾಳಿ ಬೀಸುವಾಗ
ಹಣತಿಸೊಡರು ಹೆದರಿದಂತೆ
ತಾನು ತಣ್ಣಗಾದೇನೆಂದು
ಚಿಳಿ ಚಿಳಿ ನಡುಗುತ್ತಲಿತ್ತ
ಶುಭ ನುಡಿಯೆ
                    ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ನಿದ್ದೆ ಬಳಲಿ ಬಳಿಯಲಿ ಬಂದು
ಕೂಡಿದೆವೆಗಳಾಸರೆಯಲ್ಲಿ
ಮೆಲ್ಲಗೆ, ಒರಗುವ ಅದನು
ಒಂಟಿ ಸೀನು ಹಾರಿಸುತಿತ್ತ
ಶುಭ ನುಡಿಯೆ
                  ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ಕತ್ತಲೆಯ ಕೆಸರಿನ ತಳಕೆ
ಮಿನಮಿನುಗುವ ಹರಳುಗಳಂತೆ
ಚಿಕ್ಕೆ ಕೆಲವು ತೊಳಗುತಲಿರಲು
ಗಳಕನೊಂದು ಉಳುಕುತಲಿತ್ತ
ಶುಭ ನುಡಿಯೆ
                  ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ಉಸಿರ ತೂಗು - ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಳಗಿನಾವ ಚಿಂತೆಯ ಎಸರೋ
ತಂತಾನೆ ಕನವರಿಸುತಿತ್ತ
ಶುಭ ನುಡಿಯೆ
                  ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ನಟ್ಟಿರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸನು ಕಾಣುವಾಗ
ಗೂಗೆಯೊಂದು ಘೂಕ್ಕೆನುತಿತ್ತು
ಶುಭ ನುಡಿಯೆ
                  ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ಎಚ್ಚರಾದ ಪೆಚ್ಚು ಮನವು
ಹುಚ್ಚೆದ್ದು ಹರಿಯುತಲಿರಲು
ನಿದ್ದೆಯಿಲ್ಲ ಆಕಳಿಸಿದರೂ
ಹಲ್ಲಿಯೊಂದು ಲೊಟಗುಡುತ್ತಿತ್ತ
ಶುಭ ನುಡಿಯೆ
                  ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ಬೆಳಗಿನ ತಂಗಾಳಿ ಬಂದು
ನಸುಕು ಮಸುಕು ಮೂಡುತಲಿರಲು
ಚಿಲೀ ಪಿಲೀ ಚಿಲಿಪಿಲಿ ಎಂದು
ಹಾಲಕ್ಕಿ ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

ನಿನ್ನ ಸೊಲ್ಲ ನಂಬಿ ಎದ್ದೆ
ಮೈಯೆಲ್ಲ ನಡುಕವಿದ್ದು
ನೀನೆ ಶುಭ ನುಡಿಯುವಾಗ
ಎನಿದ್ದೇನು? ಎಲ್ಲಾ ಶುಭವೇ!
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I

                                           - ದ.ರಾ. ಬೇಂದ್ರೆ
                                             ' ನಾದಲೀಲೆ '

ಬುಧವಾರ, ಡಿಸೆಂಬರ್ 15, 2010

ಭಾವಗೀತೆ

" ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ "
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                                                            ಭೃಂಗದ ಬೆನ್ನೇರಿ ಬಂತು.....

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಕನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
                                                                         ಭೃಂಗದ ಬೆನ್ನೇರಿ ಬಂತು.....

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಲಾ
                                                                       ಭೃಂಗದ ಬೆನ್ನೇರಿ ಬಂತು.....

ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭ ಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
                                                                       ಭೃಂಗದ ಬೆನ್ನೇರಿ ಬಂತು.....

ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು ಅರಳಲಿತ್ತು, ಪ್ರೇಮಾ
                                                                         ಭೃಂಗದ ಬೆನ್ನೇರಿ ಬಂತು.....

ವಜ್ರ ಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
                                                                           ಭೃಂಗದ ಬೆನ್ನೇರಿ ಬಂತು.....

ಗಾಳಿಯೊಡನೆ ತಿಳ್ಳಿಯಾಡುತಾಡುದರ ಓಟಾ
ದಿಕ್ತಟಗಳ ಹಾಯುತಿತ್ತು ಅದರ ಬಿದಿಗೆ ನೋಟಾ
ನಕ್ಕು ನಗುವ ಚಿಕ್ಕೆಯೊಡನೆ ಬೆಳೆಸುತಿತ್ತು ಕೂಟಾ
                                                                            ಭೃಂಗದ ಬೆನ್ನೇರಿ ಬಂತು.....

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
' ಬಂತೆಲ್ಲಿಗೆ? ' ಕೇಳುತಿದ್ದನೀಯನಂತ ಕಾಳಾ
                                                                            ಭೃಂಗದ ಬೆನ್ನೇರಿ ಬಂತು.....

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
                                                                             ಭೃಂಗದ ಬೆನ್ನೇರಿ ಬಂತು.....

೧೦
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                                                            ಭೃಂಗದ ಬೆನ್ನೇರಿ ಬಂತು.....

                                                                          - ದ.ರಾ. ಬೇಂದ್ರೆ
                                                                            ' ನಾದಲೀಲೆ '
          
ಇದೊ ಪಂಜರ

ಇದೊ ಪಂಜರ, ಅದೊ ಮುಗಿಲು!
ಒಂದು ಕಿರಿದು, ಒಂದಗಲು!

ಅಲ್ಲಿ ಇರುಳಿನಲ್ಲಿ ಬೆಳಗು,
ಕತ್ತಲಿಲ್ಲಿ ಒಳಗು ಹೊರಗು,
ನೊಣ ನೊರಜಿಗು ಸೊಳ್ಳೆಗಳಿಗು 
ಹಾರಲಿಂಬು ಎಲ್ಲ ಬಳಿಗು.

ಅಲ್ಲಿ; ಇಲ್ಲಿ ಒಂದೆ ಗೋಡೆ
ಸುತ್ತು ಮುತ್ತು ಎತ್ತ ನೋಡೆ
ಬರುವವರೆಗೆ ಒಳಗಡೆಗೆ
ಬೆಲೆಯು ಬರದು ಬಿಡುಗಡೆಗೆ ;

ಸಂಕಟಗಳದದು ಮಾಲೆ;
ಹರಿಯ ಕಲಿಸಲಿದು ಶಾಲೆ.
ಆ ತಿಳಿವಿಗೆ ಇಲ್ಲಿ ಹಗಲು
ಮುಗಿಲಿಗು ಪಂಜರ ಮಿಗಿಲೋ.
ಮುಗಿಲಿಗು ಪಂಜರ ಮಿಗಿಲಿಗು.

                                   - ದ.ರಾ. ಬೇಂದ್ರೆ
                                      ' ನಾದಲೀಲೆ '

ನಿದ್ದೆ

೧
ಕಾಣುವ ಕಣ್ಕಟ್ಟಿಲ್ಲ
ಕನಸಿನ ಕಣ್ಕಿಸುರಿಲ್ಲ -
ಇಲ್ಲಿ ಇನಿಸು ದಣಿವಿಲ್ಲ
ಮಣಿಹವಿಲ್ಲ ತಣಿವಿಲ್ಲ.

ಈ ಎಚ್ಚರದೀ ಹೆಚ್ಚಳ
ಈ ನೇರಿತು ಈ ನಿಚ್ಚಳ
ಮೂಡಲಿಲ್ಲಿ ಅರಸು ನಾನು,
ನಿಂತ ನೆಲೆಯೆ ಲೋಕ ತಾನು.

ಹೆಡೆ ಬೆಳಕಲಿ ಹಾದಿ ಕಂಡು
ಕೇಳಿಕೆ ಕಣ್ಣರಿಕೆಯಂದು  
ಹುಡುಕುವುದೇನಿನ್ನೆಲ್ಲಿ?
ಇದೆ ಅದು ಅಂಗೈನೆಲ್ಲಿ.

ಹಳೆಯೆಚ್ಚರ ಅರೆಹುಚ್ಚು
ಹಸುಬುದ್ಧಿಗು ತುಸು ಹೆಚ್ಚು
ಆ ಎಚ್ಚರ ಈ ನಿದ್ದೆ!
ಸತ್ತು ಹುಟ್ಟಿದಂತಿದ್ದೆ.

                                 - ದ.ರಾ. ಬೇಂದ್ರೆ
                                    ' ನಾದಲೀಲೆ '
ಅಷ್ಟು ಪ್ರೀತಿ ಇಷ್ಟು ಪ್ರೀತಿ

ಅಷ್ಟು ಪ್ರೀತಿ ಇಷ್ಟು ಪ್ರೀತಿ -
                                                             ಎಣಿಸಿ ಕಷ್ಟಪಡದಿರು
                                                                             ಒಲೆದು ಒಲಿಸಿ ಸುಖವಿರು
                                  ಎಷ್ಟೆಯಿರಲಿ ಅಷ್ಟೆ ಮಿಗಿಲು - ತಮ್ಮ ಕಿರಣ ತಮಗೆ ಹಗಲು;
                                                                  ಉಳಿದ ಬೆಳಕು ಕತ್ತಲು.
               ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
                                                                     ಉಳಿದ ಲೋಕ ಹಿತ್ತಲು.

 ಮುತ್ತಿನೆಕ್ಕಸರವನಿಕ್ಕೆ
                                                                 ಮುದ್ದಿಗೆ ಕಳೆಕಟ್ಟಿತೆ ?
        ತೊಯ್ದ ಎವೆಗೆ ಮುದ್ದನಿಡಲು
                                                                    ಮುದ್ದಿಗೆ ಅದು ತಟ್ಟಿತೆ?
       ಕುದಿದು ಬಂದ ಕಂಬನಿಯಲು
                                                                    ಕಂಪು ಬರದೆ ಬಿಟ್ಟಿತೆ?
     ಮುತ್ತು ರತುನ ಹೊನ್ನು ಎಲ್ಲ
                                                                  ಕಲ್ಲು ಮಣ್ಣ ವೈಭವಾ
                                                                           ಎಲವೊ ಹುಚ್ಚು ಮಾನವಾ.
           ಒಂದು ಷೋಕು  - ಬರಿಯ ಝೋಕು
                                                                          ಬದುಕಿನೊಂದು ಜಂಬವು
                                                                          ಒಲವೆ ಮೂಲ ಬಿಂಬವು.

ಸಪ್ತ ನಾಕ ಸಪ್ತ ನರಕ
                                                                     ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
                                                                       ಅದರ ಕೋಟೆಕೊತ್ತಲು
     ಸಿಂಹಾಸನವನೇರಿ ಕುಳಿತೆ;
                                                                             ತೊಡೆಗೆ ತೊಡೆಯ ಹಚ್ಚಿದೆ
       ಸರಿಯೆ, ಒಲಿದ ತೋಳಿಗಿಂತ
                                                                          ಅದರೊಳೇನು ಹೆಚ್ಚಿದೆ?
      ಎದೆಯ ಕಣ್ಣು ಮುಚಿಕೊಂಡು
                                                                        ಏಕೊ ಏನೊ ಮೆಚ್ಚಿದೆ
      ಮರದ ಅಡಿಗೆ ಗುಡಿಸಲಿರಲಿ
                                                                              ಅಲ್ಲೆ ಒಲವು ಮೆರೆಯದೇ  
                                                                              ನಲಿವು ಮೇರೆವರಿಯದೇ!

                                                                               - ದ.ರಾ ಬೇಂದ್ರೆ
                                                                                ' ನಾದಲೀಲೆ '
ಪೋರಿ ಪೋರ

ಪೋರಿ ನೀನು, ನಾನು ಪೋರಾ
ಮಾರಿ ಕಣ್ಣಿಗೆ ಮರುಳರಾಗಿ
ನೆಚ್ಚಿ ಮೆಚ್ಚಿ ಕೂಡಿದ್ದೇವs
                         ಬೇರೆ ಇಲ್ಲಾ I ಇದ್ದರೆ -
                                                ಶಿವನೆ ಬಲ್ಲಾ.

ಯಾಕ? ಏನು? ಎಲ್ಲಿಗಂತs
ನಾಕು ಮಾತು ಕೂಡಾ ನಾವು
ಒಬ್ಬರಿಗೊಬ್ಬರು ಆಗs
                           ಕೇಳಲಿಲ್ಲಾ I ಉತ್ತರಾ
                                               ಹೇಳಲಿಲ್ಲಾ.

ಹೆಣ್ಣು ಮಣ್ಣು ಹಾsಳಂತs
ಬಣ್ಣ ಕಡೆಬಾಳದಂತs
ಬಾಳುವೀ ಸುಳ್ಳಾಟಂತs
                             ಹೆದರಲಿಲ್ಲಾ I ಯಾರೂ
                                                       ಹೆದರಿಸಲಿಲ್ಲಾ.

ಆಡಿದ್ದೊಂದs ನೋಡಿದ್ದೊಂದs
ಹೂಡಿದ್ದೊಂದs ಕೂಡಿದ್ದೊಂದs
ಬೇರೆ ಮಾತು ನನಗ ನಿನಗs
                        ಗೊತ್ತs ಇಲ್ಲಾ I ಗುಟ್ಟು
                                           ಶಿವನೆ ಬಲ್ಲಾ.

                                - ದ.ರಾ ಬೇಂದ್ರೆ
                                   ' ನಾದಲೇಲೆ '
ನೀ ಹೀಂಗ ನೋಡಬ್ಯಾಡ  ನನ್ನ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? II ಪ II

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು  ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ  ನೋಡತೀ ಮತ್ತ ಮತ್ತ ನೀ ಇತ್ತ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ. ಕಣ್ಣು, ಕಂಡು ಮಾರೀಗೆ ಮಾರಿsಯ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

 ಧಾರಿಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ ಬೂದಿಮುಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs?
ಆ ಗಾದಿಮಾತು ನಂಬೀ ನಾನು ದೇವರಂತ ತಿಳಿದಿಯೇನ ನೀ ನನ್ನ?


ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!


ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ.
ಅತ್ತಾರೆ ಅತ್ತುಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.

                                                        - ದ.ರಾ. ಬೇಂದ್ರೆ
                                                          ' ನಾದಲೀಲೆ '


ಮಂಗಳವಾರ, ಡಿಸೆಂಬರ್ 14, 2010

ನಾನು ಬಡವಿ

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ.

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು.

                                               - ದ.ರಾ. ಬೇಂದ್ರೆ
                                                  ' ನಾದಲೀಲೆ '

ಕುರುಡು ಕಾಂಚಾಣ

ಕುರುಡು ಕಾಂಚಾಣ ಕುಣಿಯುತಲಿತ್ತು I
ಕಾಲಿಗೆ ಬಿದ್ದವರ ತುಳಿಯುತಲಿತ್ತೋ II
                            ಕುರುಡು ಕಾಂಚಾಣ II ಪಲ್ಲ II

ಬಾಣಂತಿಯೆಲುಬ ಸಾ -
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೊ ;

ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ ;

ಬಡವರ ಒಡಲಿನ
ಬಡಬಾsನಲದಲ್ಲಿ  
ಸುಡು ಸುಡು ಪಂಜು ಕೈಯೊಳಗಿತ್ತೊ;

ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ -
ದುಂಬಿದಂತುಧೊ ಉಧೊ ಎನ್ನುತಲಿತ್ತೊ ;

ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ ;

ಗುಡಿಯೊಳಗೆ ಗಣಣ, ಮಾ -
ಹಡಿಯೊಳಗೆ ತನನ, ಆಂ -
ಗಡಿಯೊಳಗ ಝಣಣಣ ನುಡಿಗೊಡುತಿತ್ತೋ ;


ಹ್ಯಾಂಗಾರ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

                                      - ದ.ರಾ. ಬೇಂದ್ರೆ
                                          ' ನಾದಲೀಲೆ '
ಚಿಗುರೆ

ಹೊಗರುಗಣ್ಣು, ನಿಗುರಿದ ಕಿವಿ
ಹಗುರ ಮೈಯ್ಯ ಚಿಗುರೆಯು
ಎರಡೆ ದಿವಸ ಕೂಡಿ, ಬೇಡಿ
ತಿಗುರಳಿದಿತು ಚಿಗುರೊಲು.

ಚಿಗುರೆ ಬಂತು ಚಿಗುರೆ ಹೋಯ್ತು
ಬೀಸು ಗಾಳಿ ಸುಳಿಯೊಲು ;
ಆಹಾ ಎನಿಸಿ, ಅಯ್ಯೊ ಅನಿಸಿ
'ಇತ್ತೊ ಇಲ್ಲೊ' ಎನುವೊಲು

ಮನೆಯೊಳೇನೋ ಬಂದಿತು
ಮನದೊಳೇನೋ ನಿಂದಿತು
ಚಿತ್ತದಲ್ಲಿಯು ಚಿತ್ರವಿದ್ದೂ
 'ಭಾವ ಭ್ರಮೆಯಿದು' ಎಂದಿತು
ಜೀವವೇಕೋ ನೊಂದಿತು.

                                                   - ದ.ರಾ. ಬೇಂದ್ರೆ
                                                      ' ನಾದಲೀಲೆ '
ತಾಯಿ - ಕೂಸು

ಹಸುಗೂಸು ಮಲಗಿಹುದು
ಹುಸಿನಗೆಯು ತೊಲಗಿಹುದು.
ಕನಸಿನಾಚೆಗಿರುವ ನಿದ್ದೆಯಲ್ಲಿ
ತನ್ನನ್ನೂ ಮರೆತಿಹುದೊ
ತನ್ನೊಳಗೆ ಬೆರೆತಿಹುದೊ
ಹಸಿವು ಭಯ ಮುದ್ದಾಟವಿಲ್ಲ ಅಲ್ಲಿ.

ಉಸಿರ ದಾರದ ತುದಿಗೆ
ಹಾರುಹಕ್ಕಿಯ ಬದಿಗೆ
ಜೀವಪಟ ಹೆಡೆಯಾಟವಾಡುತಿಹುದು
ಮೇಲ್ಮುಗಿಲ ಗಾಳಿಯಲಿ
ತನ್ನೊಂದು ಲೀಲೆಯಲಿ
ತೀರಲದು ತಾನೆ ಇಳೆಗಿಳಿಯಲಹುದು.

ಕೆಲಸದಲಿ ಬಿಡುವಿಲ್ಲ
ಕೂಸಿನಲಿ ಮನವೆಲ್ಲ
ತಾಯಿ ಯೋಗಿನಿ ಮೈಲಿ ದುಡಿಯುತಿಹಳು
ತನ್ನೆದೆಯ ತೊಟ್ಟಿಲಲಿ
ಕಂದನನು ಇಟ್ಟಲ್ಲಿ
ಕಂಠದಲಿ ಜೋಗುಳವ ನುಡಿಸುತಿಹಳು

ಇತ್ತ ಮರುಳಾಟದಲೊ
ಜೀವದೊಳತೋಟಿಯಲೊ
ಮುಖರಂಗಮಂಡಲದಿ ಭಾವ ಭಾವ!
ಹುಬ್ಬು ಗಂಟಿಕ್ಕುವುದು ;
ಎದೆ ಏಕೊ ಬಿಕ್ಕುವುದು ;
ತುಟಿಯು ನಗುವುದು ; ಅದನು ಕಂಡನಾವ?

                                                        - ದ.ರಾ. ಬೇಂದ್ರೆ
                                                            ' ನಾದಲೀಲೆ ' 
ಚೆನ್ನ

ನನ್ನ ನಿನ್ನ ಬೆನ್ನ ಬಳಿ ವಿಶಾಲವೃಕ್ಷ ಬೆಳೆದಿದೆ
ಮುಗಿಲ ತುಂಬಿ ಉಳಿದಿದೆ.
ಗಾಳಿಯಂತೆ ಸುಳಿದಿದೆ
ನನ್ನ ನಿನ್ನ ನೋಟ ಮಾತ್ರ ಎರಡು ದಿಕ್ಕಿಗೆಳೆದಿದೆ.
ಬೇರೆ ಹಾದಿ ತುಳಿದಿದೆ.

ಕೈಗೆ ಕೈಯು ಹತ್ತಿರಿದ್ದು, ಮೈಗೆ ಮೈಯು ಹತ್ತದು
ಕಣ್ಣು ಕಣ್ಗೆ ಮುತ್ತದು
ಎವೆಗಳನ್ನು ಎತ್ತದು.
ಮನದ ಮಾತು ಮಾತ್ರ, ಮನದವರೆಗೆ ಬರದೆ ಬತ್ತದು
ಸುಳ್ಳು ಹಾದಿ ಸುತ್ತದು.

ಕುಳಿತ ಹಾಗೆ ದೇಹವನ್ನು ಬೀಳಲುಗಳು ಬಿಗಿದಿವೆ.
ಮೈಯ ಕೆಲಸ ಮುಗಿದಿವೆ.
ಚಿತ್ತದೂಟೆ ನೆಗೆದಿವೆ ;
ಜೀವದಾಳದಲ್ಲಿ ಮಡಗಿದಂಥ ಮುತ್ತನೊಗೆದಿವೆ.
ಮೇಲು ಹಾದಿ ಬೆಳಗಿವೆ.

ಯಾವ ಜನುಮದೊಂದು ರಾಗ ಈ ವಿರಾಗವಾಗಿದೆ?
ಬಾಳಗೊನೆಯು ಬಾಗಿದೆ
ಕಾಯಿ ಪಾಡು ಮಾಗಿದೆ.
ಜೀವದೋಟ ನೋಟವಾಗಿ ಮುಂದೆ ಮುಂದೆ ಸಾಗಿದೆ
ಎಲ್ಲೊ ಲೀನವಾಗಿದೆ.

                                                    - ದ.ರಾ. ಬೇಂದ್ರೆ
                                                      ' ನಾದಲೀಲೆ '

ಗುರುವಾರ, ಡಿಸೆಂಬರ್ 9, 2010

ಯಾರಿಗೂ ಹೇಳೋಣು ಬ್ಯಾಡಾ

ಯಾರಿಗೂ ಹೇಳೋಣು ಬ್ಯಾಡಾ
                                        - ಯಾರಿಗೂ               II ಪ II


ಹಾರಗುದರೀ ಬೆನ್ನs ಏರಿ
ಸ್ವಾರರಾಗಿ ಕೂತುಹಾಂಗs
ದೂರ ದೂರಾ ಹೋಗೋಣಂತs I ಯಾರಿಗೂ


ಹೂವು ಹಣ್ಣು ತುಂಬಿದಂಥ
ಚೆನ್ನ ತೋಟ ಸೇರಿ ಒಂದs
ತಿನ್ನೋಣಂತs ಅದರ ಹೆಸರು I ಯಾರಿಗೂ


ಕುಣಿಯೋಣಂತs ಕೂಡಿ ಕೂಡಿ
ಮಣಿಯೋಣಂತs ಜಿಗಿದು ಹಾರಿ
ದುಣಿಯದನs ಆಡೋಣಂತ I ಯಾರಿಗೂ


ಮಲ್ಲಿಗೀ ಮಂಟsಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತs I ಯಾರಿಗೂ


ಹಾವಿನಾ ಮರಿಯಾಗಿ ಅಲ್ಲಿ
ನಾವುನೂ ಹೆಡೆಯಾಡಿಸೋಣು
ಹೂವೆ ಹೂವು ಹಸಿರೆ ಹಸಿರು I ಯಾರಿಗೂ


ನಿದ್ದೆ ಮಾಡಿ, ಮೈಯ ಬಿಟ್ಟು,
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣಂತs I ಯಾರಿಗೂ

                                                 - ದ.ರಾ. ಬೇಂದ್ರೆ
                                                   ' ನಾದಲೀಲೆ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Helkollakondooru.php
ಬನ್ನಿ ಬನ್ನಿ ಕನಸುಗಳೇ!

ಬನ್ನಿ ಬನ್ನಿ ಕನಸುಗಳೇ
              ಮರಳಿ ಮನೆಗೆ ಬನ್ನಿ     II ಪ II

೧ 
 ಹಸುಳೆತನದ ನಸುನಗೆಯಲಿ
ಹುಸಿಗತೆಗಳ ಹೊಸ ಜಗದಲಿ
ಬಣ್ಣಗೊಂಡು ಬಗೆಬಗೆಯಲಿ
ಕಣ್ಣು ಚಿವುಟಿ ಕಳೆದುಹೋದ
            ಕನಸುಗಳೇ ಬನ್ನಿ.

ಹೇ! ಮಾತಾಡುವ ಗಿಣಿಗಳಿರಾ
ಪೂತಿಹ ಪೆಣ್ಮಣಿಗಳಿರಾ
ಜ್ಯೋತಿಯುಳ್ಳ ಕಣಿಗಳಿರಾ
ಸಾಸದರಸುಕುವರರೇ
ಲೇಸಗಳಿಸಿದಮರರೇ
ಮುಚ್ಚಿಕೊಂಡ ಕನಸುಗಳೇ
                ಬಿಚ್ಚಿ ಬಿಡಿಸಿ ಬನ್ನಿ.

ಹುಡುಗರ ಹುಡುಗಾಟದಲ್ಲಿ
ಬೆಡಗಿನ ಗೆಳೆಮಾಟದಲ್ಲಿ
ಬೆಳೆಸಿದ ಕೈತೋಟದಲಿ
ಕೆಲೆದ ತುಂಬಿ ಚಿಟ್ಟೆಯಂಥ  
                ಕನಸುಗಳೇ ಬನ್ನಿ.

ಹೇ! ಮೀರಿದ ಬೆಳದಿಂಗಳವೇ
ತೀರದಾಟದಂಗಳವೇ  
ಕೋರಿದಂಥ ಮಂಗಳವೇ
ತಿರುಳುಗೊಂಡ ಮನಗಳೇ
ಕುರುಡುಗಳೆದ ದಿನಗಳೇ
ಜಾರಿಹೋದ ಕನಸುಗಳೇ
              ಹಾರಿ ತಿರುಗಿ ಬನ್ನಿ.

ಹರೆಯದ ತೆರೆ ತೆರೆಗಳಲ್ಲಿ
ಅರೆತೆರೆದಿಹ ಮರೆಗಳಲ್ಲಿ
ಎದೆಯ ಮುದದ ತೊರೆಗಳಲ್ಲಿ
ಸುಧೆಯ ಕುಡಿದ ಹಕ್ಕಿ ಜಿಂಕೆ
ಕನಸುಗಳೇ ಬನ್ನಿ.

ಹೇ! ಬಳ್ಳಿವಳ್ಳಿ ಇಹ ಬಲವೇ
ತಳ್ಳಂಕವ ತೊರೆದೊಲವೇ
ಮಿಳ್ಳನೊಲೆದ ಕಡು ಚಲವೆ
ಹಾರೈಸಿದ ಬಿಡುಗಡೆ
ಏರಾಟದ ನಿಲುಕಡೆ
ಮಿಂಚಿಹೋದ ಕನಸುಗಳೇ
ಹೊಂಚು ದಾಟಿ ಬನ್ನಿ.

                                     -ದ.ರಾ.ಬೇಂದ್ರೆ
                                      ' ನಾದಲೀಲೆ '
ನಾದಲೀಲೆ 

                             ಕೋಲುಸಖೀ, ಚಂದ್ರಮುಖೀ, ಕೋಲೆ ನಾದಲೀಲೆ                  IIಪII 
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
                                          ಕೋಲುಸಖೀ....

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
                                           ಕೋಲುಸಖೀ....

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ, ಬಹಳು, ಕಾದಲೆ ಹೂಮಾಲೆ!
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
                                     ಕೋಲುಸಖೀ....

ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಮುಗಿಲ ಬಾಯ ಗಾಳಿಕೊಳಲ ಬೆಳಕಹಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆನಾರಿ
                                 ಕೋಲುಸಖೀ....

                                                   - ದ.ರಾ. ಬೇಂದ್ರೆ
                                                    ' ನಾದಲೀಲೆ'
ಅನಂತ ಪ್ರಣಯ


ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.


ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.


ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.


ಅಕ್ಷಿನಿಮೀಲನ ಮಾಡದೆ ನಕ್ಷ
ತ್ರದ ಗಣ ಗಗನದಿ ಹಾರದಿದೆ.
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

                                          - ದ. ರಾ. ಬೇಂದ್ರೆ
                                            ' ನಾದಲೀಲೆ '

ಬುಧವಾರ, ಡಿಸೆಂಬರ್ 8, 2010

ಎಂಥ ಚೆಲುವೆ ನನ್ನ ಹುಡುಗಿ 

ಎಂಥ ಚೆಲುವೆ ನನ್ನ ಹುಡುಗಿ 
ಹೇಗೆ ಅದನು ಹೇಳಲಿ?
ಮಾತಿನಾಚೆ ನಗುವ ಮಿಂಚ
ಹೇಗೆ ಹಿಡಿದು ತೋರಲಿ?

ಕಾಲಿಗೊಂದು ಗೆಜ್ಜೆ ಕಟ್ಟಿ
ಹೊರಟಂತೆ ಪ್ರೀತಿ,
ಝಲ್ಲೆನಿಸಿ ಎದೆಯನು
ಬೆರಗಲ್ಲಿ ಕಣ್ಣನು
ಸೆರೆಹಿಡಿಯುವ ರೀತಿ.

ಬೆಳಕೊಂದು ಸೀರೆಯುಟ್ಟು
ತೇಲಿನಡೆವ ರೂಪ,
ಗರ್ಭಗುಡಿಯಲಿ
ದೇವರೆದುರಲಿ
ಉರಿವ ಶಾಂತದೀಪ.

ರಾಗದಲ್ಲಿ ಸೇರಿ ಕವಿತೆ
ಹಾಡು ಮೂಡುವಂತೆ,
ಸಂಜೆ ಸುಳಿವ ಗಾಳಿಗೆ
ಹೊನ್ನ ಬಿಸಿಲ ಲೀಲೆಗೆ
ಮುಗಿಲಾಡುವಂತೆ

                                                 - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಬಾರೆ ನನ್ನ ದೀಪಿಕಾ 

ಬಾರೆ ನನ್ನ ದೀಪಿಕಾ
ಮಧುರ ಕಾವ್ಯ ರೂಪಕ
ಕಣ್ಣ ಮುಂದೆಸುಳಿಯೆ ನೀನು
ಕಾಲದ ತೆರೆ ಸರಿದು ತಾನು
ಜನುಮ ಜನುಮ ಜ್ಞಾಪಕ!

ನಿನ್ನ ಬೊಗಸೆ ಕಣ್ಣಿಗೆ
ಕೆನ್ನೆ ಜೇನುದೊನ್ನೆಗೆ
ಸಮ ಯಾವುದೆ ಚೆನ್ನೆ ನಿನ್ನ
ಜಡೆ ಹರಡಿದ ಬೆನ್ನಿಗೆ?

ನಿನ್ನ ಕನಸು ಬಾಳಿಗೆ
ಧೂಪದಂತೆ ಗಾಳಿಗೆ ;
ಬೀಸಿ ಬರಲು, ಜೀವ ಹಿಗ್ಗಿ
ವಶವಾಯಿತೆ ಧಾಳಿಗೆ!

ಮುಗಿಲಮಾಲೆ ನಭದಲಿ
ಹಾಲುಪಯಿರು ಹೊಲದಲಿ
ರೂಪಿಸುತಿದೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ!

                                                                   - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಬುಧವಾರ, ಡಿಸೆಂಬರ್ 1, 2010

ಒಲವೋ ಹಗೆಯೋ


ಮಿಕ್ಕವರಲಿ ನಗೆಗೂಡುತ ಬೆರೆವೆ
ನನ್ನೊಂದಿಗೆ ಬರಿಗೋಳನೆ ಕರೆವೆ ;
ಒಲವೋ ಹಗೆಯೋ - ಯಾವುದಿದು?

ಹೆರರೇನೆನ್ನಲಿ, ಕೇಳುತ ನಲಿವೆ,
ಸರಸವನಾಡಲು ನನ್ನಲಿ ಮುನಿವೆ ;
ಒಲವೋ ಹಗೆಯೋ - ಯಾವುದಿದು?

ಕುಳಿತರೆ ನಿಂತರೆ ಹುಳಕನೆ ಬಗೆವೆ,
ತುಸು ತಪ್ಪಾದರು ಕಲಹವ ತೆಗೆವೆ ;
ಒಲವೋ ಹಗೆಯೋ - ಯಾವುದಿದು?

ಪ್ರಣಯವ ಬೀರಲು, ಕಪಟವಿದೆನುವೆ,
ಸುಮ್ಮನೆ ಸಾರಲು, ಒಲವಿಲ್ಲೆನುವೆ ;
ಒಲವೋ ಹಗೆಯೋ - ಯಾವುದಿದು?

                                                  - ತೀ. ನಂ. ಶ್ರೀಕಂಠಯ್ಯ 
ಎದೆಯು ಮರಳಿ ತೊಳಲುತಿದೆ


ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ ;
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿ ಬಾಳು ಚಾಚುತಿದೆ
ತನ್ನ ಕುಡಿಯನು.

ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡಿಯಲೆಳಸುತಿದೆ
ತನ್ನ ಗುಡಿಯನು.

ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟುತಲಿವೆ ಮನದಲಿ!

ನೀರದಗಳ ದೂರ ತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯ ಭಾರ
ತಾಳಲೆಂದು ನಾ?

ಯಾವ ಬಲವು ಯಾವ ಒಲವು
ಕಾಯಬೇಕು ಅದರ ಹೊಳವು  
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ?

                                            - ಎಂ. ಗೋಪಾಲಕೃಷ್ಣ ಅಡಿಗ
                                              ' ಕಟ್ಟುವೆವು ನಾವು '