ಶುಕ್ರವಾರ, ಜನವರಿ 10, 2014

ನಿಲ್ಲಿಸದಿರು ವನಮಾಲಿ

ನಿಲ್ಲಿಸದಿರು ವನಮಾಲೀ
ಕೊಳಲ ಗಾನವ IIಪII
ನಿಲ್ಲಿಸೆ ನೀ ಕಳೆವುದೆಂತೊ
ಭವಭೀತಿಯ ಕೇಶವ IIಅ.ಪII

ಕ್ರೂರದೈವ ಬಲಿಗೆ ಎಂತು
ಕಾಯುತಿಹುದೊ ದೂರ ನಿಂತು
ಅಂತೆ ನಮ್ಮ ತುತ್ತುಗೊಳ್ಳೆ
ಹೊಂಚುತಿಹುದು ಭೀತಿಯಿಂತು - ನಿಲ್ಲಿಸದಿರು

ಊರಿದಲ್ಲ ಹಳುವು ಎಂಬ
ಹಗಲಿದಲ್ಲ ಇರುಳು ಎಂಬ
ಇಂತುಗೈದುದೊಳಿತೇ ಎಂಬ
ಭಯವಪ್ಪುದೊ ಬಗೆಯ ತುಂಬ - ನಿಲ್ಲಿಸದಿರು

ನಾನು ಸತಿ ಆತ ಪತಿ
ಅಣ್ಣ ಅಕ್ಕ ಏನು ಗತಿ
ಇಂತು ನಂಟತನವಿವೆಲ್ಲ
ಮರುಕೊಳಿಪವೊ ಮನದಿ ನಲ್ಲ - ನಿಲ್ಲಿಸದಿರು

ಹಿರಿಯರಿಟ್ಟ ನಯದ ನಡೆಯ
ಮೀರಿಹೆವೆಂದಹುದುರುಭಯ
ನಿನ್ನ ಕೊಳಲು ನೀಡಲಭಯ
ನಟ್ಟಿರುಳೊಳೆ ಬಂದೆವಯ್ಯ - ನಿಲ್ಲಿಸದಿರು

ನಮ್ಮ ಬಾಳಿನಾಳದಿಂದ
ಮತ್ಸ್ಯನಂತೆ ಮೇಲೆ ತಂದ
ಕೃಷ್ಣ ಈ ಚಿದಾನಂದ
ಮರಳಿ ಮುಳುಗಿ ಹೋಹುದಯ್ಯ - ನಿಲ್ಲಿಸದಿರು

ನೀರು ನಿಂತು ಕೊಳೆಯುವಂತೆ
ನಮಗಹುದೋ ನೂರು ಚಿಂತೆ
ಕೊಳಲುಲುಹಿನ ನೆರೆಯು ನುಗ್ಗಿ
ಜೀವ ಹರಿಯಲೆಂಥ ಸುಗ್ಗಿ - ನಿಲ್ಲಿಸದಿರು

ಭವದ ಮಾಯೆ ಅಡಗುವಂತೆ
ಅಹಂಕಾರ ಕರಗುವಂತೆ
ನಿನ್ನ ಗಾನದನುರಾಗವು
ಬದುಕ ತುಂಬಲನುಗಾಲವು
ನಿಲ್ಲಿಸದಿರು ವನಮಾಲೀ
ಕೊಳಲ ಗಾನವ

                                    - ಪು. ತಿ. ನರಸಿಂಹಾಚಾರ್
                                      ' ಗೋಕುಲ ನಿರ್ಗಮನ '

ಕಾಮೆಂಟ್‌ಗಳಿಲ್ಲ: