ಗುರುವಾರ, ನವೆಂಬರ್ 4, 2010

ನಿನ್ನ ಹಿರಿಮೆ

ನಿನ್ನ ಅನುರಾಗವೇ ಬೆಳಗಿರುವುದೆನ್ನೆದೆಯ
ಇರುಳು ಬಾನಿನ ತುಂಬು ಬಿಂಬವಾಗಿ ;

ನಿನ್ನ ಸಹವಾಸವೇ ಸತತವೂ ಕಾದಿಹುದು
ಬಾಳದಾರಿಯ ತೋರುಗಂಬವಾಗಿ.

ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೂ
ಸವಿನುಡಿಯ ನರುಗಂಪು ತೇಲಿರುವುದು ;

ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ
ನಸುನಗೆಯ  ಸವಿಯನ್ನೆ ಸೂಸಿರುವುದು.

ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ  ತೊರೆಗೆ
ನನ್ನ ಮನಸಿನ ನೆರೆಯ ಹರಿಸಿರುವುದು ;

ಯಾವ ಋಣವೊ ಏನೊ ನಿನ್ನ ನೆಮ್ಮದಿ ಕರೆಗೆ
ನನ್ನ ಬಾಳಿನ ಹೊರೆಯ ಸರಿಸಿರುವುದು.

                                                              - ಕೆ.ಎಸ್. ನಿಸಾರ್ ಅಹಮದ್
                                                                   ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kurigalu-Sir-KS-Nisar-Ahmad.php

ಕಾಮೆಂಟ್‌ಗಳಿಲ್ಲ: