ಸೋಮವಾರ, ಡಿಸೆಂಬರ್ 23, 2013

ಸಂಜೀವಿನಿ

ಈಗೇಕೆ ನೀ ಬಂದೆ ಬಳಲಿದ ಈ ಬಾಳಿಗೆ?
ಸೋತಿಹುದು ಈ ಜೀವ ಸೋಲುಗಳ ದಾಳಿಗೆ

ನಾ ಬಂದೆ ಹೊಸ ಹುರುಪು ತುಂಬಲು ಈ ತೋಳಿಗೆ
ನಂಬಿಸಲು ಹುರಿದುಂಬಿಸಲು ನಿನ್ನನ್ನು ನಾಳೆಗೆ

ಹೊಳಪಿಲ್ಲ ಕಣ್ಣಲ್ಲಿ, ಬಾಳಿಗಿಲ್ಲ ಬೆಳಗು
ನಡುಗಡಲ ಬಿರುಗಾಳಿಯಲಿ ಒಡೆದು ನಿಂತ ಹಡಗು
ಸ್ವಪ್ನ ಸೌಧಗಳ ಮೇಲೆ ಬೆದರುಗೊಂಬೆ ನಾನು

ನನ್ನ ಒಡಲಿನ ಮಿಂಚನು ನಿನ್ನಲ್ಲಿ ಹರಿಸುವೆ
ಈ ಗೆಜ್ಜೆ ಸಡಗರ ನಿನ್ನ ಹೆಜ್ಜೆಗೆ ನಾ ಕೊಡುವೆ
ನಿನಗೆ ಮರುಹುಟ್ಟು ನೀಡುವೆ ನಾನು ಸಂಜೀವಿನಿ

ಸರಿಯುವುದೇ ಕಾರಿರುಳು ತೆರೆದು ಹೊಸ ದಿಗಂತ?
ಚಿಗುರುವುದೇ ಜಡ ಹೃದಯ ಉಂಟೆ ಮರು ವಸಂತ?
ಕತ್ತಲ ಬಸಿರನು ನಾ ಸೀಳುವೆ ಹೊಸ ಹಗಲ ತೆರೆಯುವೆ

ನಿನ್ನಿಂದ ಹೊಸ ಹುರುಪು ಬಂದಿದೆ ಈ ಬಾಳಿಗೆ
ಸಾಗೋಣ ಜೊತೆಯಾಗಿ ಗೆಲುವಿಹುದು ನಾಳೆಗೆ

                                     - ಬಿ. ಆರ್. ಲಕ್ಷ್ಮಣರಾವ್