ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷ ಬಂದಂತೆ ಯಾರು ಬಂದಾರು?

ಹೊಸವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು?

ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೇ ಎಲ್ಲ!
ಹೊಸ ಬಯಕೆ, ಹೊಸ ಅಲೆ ರುಚಿರುಚಿಯ ಬೆಲ್ಲ!

ಏನಿದೆಯೋ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ,
ಕಪ್ಪಾದರೂ ಮುಗಿಲು ಜರಿ ಸೀರೆಯಣ್ಣ

ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ

                                                         - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

1 ಕಾಮೆಂಟ್‌:

tanuja.g.e ಹೇಳಿದರು...

sir, it seems that your poetic genius has no bound.i enjoyed this new poem, specially the last lines