ಮಂಗಳವಾರ, ಡಿಸೆಂಬರ್ 24, 2013

ಮುಚ್ಚುಮರೆಯಿಲ್ಲದೆಯೆ

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ, ಓ ಗುರುವೆ, ಅಂತರಾತ್ಮಾ:
ನಾಕವಿದೆ, ನರಕವಿದೆ; ಪಾಪವಿದೆ, ಪುಣ್ಯವಿದೆ;
ಸ್ವೀಕರಿಸು, ಓ ಗುರುವೆ, ಅಂತರಾತ್ಮಾ!

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ?
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೆ ನರಕವಾಗಿ?

ಸಾಂತ ರೀತಿಯ ನೆಮ್ಮಿ ಕದಡಿರುವುದೆನ್ನಾತ್ಮ;
ನಾಂತ ರೀತಿಯದೆಂತೊ, ಓ ಅನಂತಾ?
ನನ್ನ ನೀತಿಯ ಕರುಡಿನಿಂದೆನ್ನ ರಕ್ಷಿಸಯ್;
ನಿನ್ನ ನೀತಿಯ ಬೆಳಕಿನಾನಂದಕೊಯ್!

                            - ಕುವೆಂಪು
                              ' ಅಗ್ನಿಹಂಸ '

ಕಾಮೆಂಟ್‌ಗಳಿಲ್ಲ: