ಸೋಮವಾರ, ಡಿಸೆಂಬರ್ 30, 2013

ನೀನು-ನಾನು

ಆಣೆಯಲಿ ಮಾತಾಡಿ ಭರವಸೆಯನುಸಿರಾಡಿ
ತೆಕ್ಕೆಗೆಟುಕದ ತೆರೆಯ ನೆರಳು ನೀನು;
ನಂಬಿರುವ ಬರಿ ತೋಳ ಹುಂಬ ನಾನು.
ಗೀಸಿ ಅಗಲಿಸಿದ ತುಟಿ, ಅದರೊಳಚ್ಚೇರು ಬೆಳ-
ದಿಂಗಳನು ಸುರಿವ ಹುಸಿನಗೆಯು ನೀನು;
ಎರಡು ಕಣ್ಣುಳ್ಳ ಬಿಕನೇಸಿ ನಾನು.
ಮಲೆನಾಡ ಸಿರಿಮೈಗೆ ಹಸಿರೊರಸಿ, ಹೂ ಮೆತ್ತಿ
ಮುದ್ದಿಡುವ ಮನ್ಸೂನ ಮಳೆಯು ನೀನು;
ಬೆಳೆವಲದ ಉಸುಬಿನ ಮಸಾರಿ ನಾನು.
ಬ್ರಹ್ಮ ಮಗುವಿದ್ದಾಗ ಥೇಟು ಹೆಣ್ಣಿನ ಹಾಗೆ
ಪಾಟಿಯಲಿ ಬರೆದ ಹುಸಿ ಚಿತ್ರ ನೀನು;
ಅಂಕಲಿಪಿ ಓದಿರುವ ಜ್ಞಾನಿ ನಾನು.
ಇದ್ದಿಲ್ಲ, ಈಗಿಲ್ಲ, ಹಗಲೆಲ್ಲ ವರ್ಣಿಸಿದ
ಹಳೆಯ ಕಾವ್ಯಗಳ ಕವಿ ಸಮಯ ನೀನು;
ಏನೆ ಆದರು ಹೌದು ರಸಿಕ ನಾನು.
ಈಗಿದ್ದ ನದಿ ಮತ್ತೆ ಇನ್ನೊಂದು ಕ್ಷಣಕುಂಟೆ?
ಓ ಅದರ ಜೀವಂತ ವ್ಯಾಖ್ಯೆ ನೀನು;
ಅದ ಬರೆದ ಇಷ್ಟಗಲ ಹಾಳೆ ನಾನು.
ತುಟಿ ನೀಡಿ, ಮೈಸವರಿ, ನವಿರು ನವಿರಿಗೆ ಹೊಸದು,
ಮಾತಾಡಿ, ಮಟಾಮಾಯ-ಕನಸು ನೀನು;
ತುಟಿನೆಕ್ಕಿ ತುರುಸುತಿಹ ಪ್ರಾಯ ನಾನು.
ನೀ ಯಾರೊ, ಎಂತೊ, ಹೆಸರೇನೊ, ಸರಿ ಇತ್ತೀಚೆ
ನಾನೂನು ಅರಿತೆ; ಮೃತ ಸ್ಮರಣೆ ನೀನು;
ಅದ ಹುಗಿದು ಕಟ್ಟಿರುವ ಗೋರಿ ನಾನು.

                                           - ಡಾ. ಚಂದ್ರಶೇಖರ ಕಂಬಾರ

ಕಾಮೆಂಟ್‌ಗಳಿಲ್ಲ: