ಮಂಗಳವಾರ, ಡಿಸೆಂಬರ್ 31, 2013

ಹೊಸ ವರ್ಷದ ಹಾಡು

ಇಂದು ನಡುರಾತ್ರಿ
ಗಡಿಯಾರ ತನ್ನೆರಡು ಕೈಗಳ
ಜೋಡಿಸಿ ನಮಗೆs ನಿಮಗೆs
ವಂದನೆ ಸಲಿಸಿದ ಗಳಿಗೆ
ಅಭಿನಂದನೆ ತಿಳಿಸಿದ ಗಳಿಗೆ
ಬರಲಿದೆ ಹೊಸ ವರ್ಷ ಈ ಇಳೆಗೆ.
ಚಪ್ಪಾಳೆ ತಟ್ಟಿ, ಪಟಾಕಿ ಹಚ್ಚಿ,
ಆರತಿ ಬೆಳಗಿ, ಸ್ವಾಗತ ಮೊಳಗಿ,
ಹರಡಲಿ ದೆಸೆದೆಸೆಗೆ,
ಹರ್ಷದ ಈ ಒಸಗೆ
ಬರಲಿದೆ ಹೊಸ ವರ್ಷ ನಮ್ಮ ಬಳಿಗೆ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

ತುಂಬಿಸಿ ಗಾಜಿನ ಬಟ್ಟಲಿಗೆ
ವ್ಹಿಸ್ಕಿ, ರಮ್ಮು, ಬೀರು
ಅಥವಾ ಶಾವಿಗೆ ಖೀರು,
ಅಥವಾ ಮೆಣಸಿನ ಸಾರು,
ಅಥವಾ ನಿಮ್ಮ ಕಣ್ಣೀರು
ತಾಕಿಸಿ ಬಟ್ಟಲ ಬಟ್ಟಲಿಗೆ-Cheers!
ಸೋಕಿಸಿ ತುಟಿಗಳಿಗೆ,
ಅಂಜದೆ ಬೆಲೆಗಳಿಗೆ,
ಬರಲಿದೆ ಹೊಸ ವರ್ಷ ಈ ಇಳೆಗೆ
ನಮ್ಮ ಬಳಿಗೆ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

ಯಾರಿವನೀ ಭೂಪ?
ಏನಿವನ ಪ್ರತಾಪ?
ಕಾಲನs ಬೇತಾಳನs
ಎಲ್ಲ ಸಮಸ್ಯೆಗೂ ಉತ್ತರಿಸಬಲ್ಲ
ವಿಕ್ರಮನಿವನಲ್ಲ.
ವಾಮನs ಈ ವಾಮನs
ಮೂರೇ ಹೆಜ್ಜೆಗೆ ಮೂಜಗ ಅಳೆವ
ತ್ರಿವಿಕ್ರಮ ತಾನಲ್ಲ.
ಇಲ್ಲ ಇವನಲ್ಲಿ, ಪಾಪ!
ಅಲ್ಲಾದೀನನ ಮಾಯಾದೀಪ,
ನಮ್ಮಂತೆಯೇ ಹುಂಬ,
ಇವ ನಮ್ಮೆಲ್ಲರ ಪ್ರತಿಬಿಂಬ,
ಏನು ಮಾಡುವನೊ, ಏನು ನೀಡುವನೊ,
ಕಾದು ನೋಡೋಣ ಕೊಂಚ,
ಆತುರ ತರವಲ್ಲ,
ಛೇಡಿಸುವುದು ಸಲ್ಲ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

                               - ಬಿ. ಆರ್. ಲಕ್ಷ್ಮಣರಾವ್

ಕಾಮೆಂಟ್‌ಗಳಿಲ್ಲ: