ಸೋಮವಾರ, ಡಿಸೆಂಬರ್ 30, 2013

ಇಟ್ಟಿಗೆಯ ಪಟ್ಟಣ

ಹಸಿರನ್ನಲ್ಲ,
ಈ ಸಿಟಿಯಲ್ಲಿ ಬಿತ್ತಿ ಬೆಳೆಯುತ್ತಾರೆ
ಮಣ್ಣಿನಿಟ್ಟಿಗೆಯನ್ನ.
ಇಟ್ಟಿಗೆ ಬೆಳೆಯುತ್ತದೆ,
ಕಟ್ಟಡವಾಗುತ್ತದೆ.
ಕಟ್ಟಡ ಆಕಾಶದವಕಾಶವನ್ನ
ಚುಚ್ಚಿ ಬಿಸಿ ಮಾಡುತ್ತದೆ.
ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ
ಕಿಸಕ್ಕಂತ ಹಲ್ಲು ಕಿರಿದು ಹಳದಿ ನಗುತ್ತದೆ.

ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ
ಹಸಿರು ಇಣುಕಿದರೆ
ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ.
ಪಾಪಾತ್ಮ ಹಸಿರು ಹುತಾತ್ಮನಾಗದೆ
ಸಾಯುತ್ತದೆ.

ಗೊತ್ತೆ ನಿಮಗೆ? - ಈ ಸಿಟಿಯೊಳಗೆ
ಆತ್ಮದ ಮಾರ್ಕೆಟ್ಟಿದೆ.
ತಲೆಯ ಕೊಯ್ದು, ತೊಗಲ ಸುಲಿದು
ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ
ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ.
ತಲೆ ತಿಂಬವರಿಗೆ ಸೂಚನೆ:
ಅದು ಹಲ್ಕಿರಿದು ಅಣಕಿಸಿದರೆ
ಹೆದರಬೇಡಿರಿ.

                                  - ಡಾ. ಚಂದ್ರಶೇಖರ ಕಂಬಾರ

ಕಾಮೆಂಟ್‌ಗಳಿಲ್ಲ: