ಗುರುವಾರ, ನವೆಂಬರ್ 11, 2010

ಪ್ರಥಮ ವಿರಹ

ನೀನು ಬಳಿಯಿರೆ ಹೊತ್ತು ಹರಿಯುವುದು ಹೊನಲಾಗಿ
ಕುಣಿಕುಣಿದು ನಲಿನಲಿದು ನೊರೆನಗೆಯ ಬೀರಿ ;
ನೀನಿಲ್ಲದಿರೆ ಕಾಲ ನಿಲ್ಲುವುದು ಕಲ್ಲಾಗಿ
ಭಾರದಿಂದೆದೆಯ ಜೀವವ ಹಿಂಡಿ ಹೀರಿ!

ನೀನು ಬಳಿಯಿರೆ ಬಾಳ ಕೊಳ ತುಳುಕುವುದು ತುಂಬಿ
ನಲ್ ಸೊಗದ ತಾವರೆಯ ನೂರು ಹೂವರಳಿ ;
ನೀನಿಲ್ಲದಿರೆ ಬದುಕು ಶೂನ್ಯತೆಯ ಸುಳಿಯಲ್ಲಿ
ಹೊರಳುರುಳಿ ಕಂತುವುದುಸಿರ್ ಕಟ್ಟಿ ಕೆರಳಿ!

ನೀನೆನ್ನ ಬಳಿಯಿರಲು ರವಿಯುದಯ ಬಲುಸೊಗಸು ;
ನಿನ್ನ ಸೋಂಕಿರೆ ಸೊಗಸು ಕಾಂತಾರವೀಚಿ ;
ನಿನ್ನ ಜೇನ್ದನಿ ಸೇರೆ ಹಕ್ಕಿಗೊರಲಿನಿಂಚರಕೆ
ನಂದನದ ಗಾನ ಮೈಗರೆಯುವುದು ನಾಚಿ.

ನೀನು ಬಳಿಯಿಲ್ಲದಿರೆ, ಓ ನಲ್ಲೆ ಹೇಮಾಕ್ಷಿ,
ಜಗವೆಲ್ಲ ಜಡಬಂಡೆ, ಬೇಸರದ ಬೀಡು!
ನೀನಗಲಿದೀ ಕವಿಗೆ ಇಂದು ಈ ಮಲೆನಾಡು,
(ಹೇಳೆ ನಾಚಿಗೆಗೇಡು) ಹಿರಿಮರಳುಗಾಡು!

                                               - ಕುವೆಂಪು
                                                   ' ಜೇನಾಗುವಾ '


1 ಕಾಮೆಂಟ್‌:

Unknown ಹೇಳಿದರು...

ನಮಸ್ಕಾರ ಕನಸು.

ನಿಮ್ಮ ಕವನ ಪ್ರೀತಿಗೆ ನಮನಗಳು. ನಿಮ್ಮ ಕಾರ್ಯಕ್ಕೆ ಅತ್ಯಂತ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆ ಇರಲಿ.

ಅಂಜನ್