ಬುಧವಾರ, ಡಿಸೆಂಬರ್ 18, 2013

ನಾನು ಬರೆಯುತ್ತೇನೆ  

ನಾನು ಬರೆಯುತ್ತೇನೆ
ಕಾಳ ರಾತ್ರಿಗಳಲ್ಲಿ ಬಂದು ಕದ ತಟ್ಟುವ 
ಧ್ವನಿಗಳನ್ನು ಕುರಿತು. 
ನಾನು ಬರೆಯುತ್ತೇನೆ
ಬಿರುಗಾಳಿಯಲ್ಲಿ ಕಡಲಿನ ಮೇಲೆ
ಹೊಯ್ದಾಡುವ ದೋಣಿಗಳನ್ನು ಕುರಿತು. 

ನಾನು ಬರೆಯುತ್ತೇನೆ
ನೆಲದಾಳಗಳಲ್ಲಿ ಮಲಗಿರುವ ಮೂಳೆಗಳ
ನಿಟ್ಟುಸಿರನ್ನು ಕುರಿತು. 

ನಾನು ಬರೆಯುತ್ತೇನೆ
ಸಂಜೆಗತ್ತಲಿನಲ್ಲಿ ಕರಗುತ್ತಿರುವ
ಉಜ್ವಲವಾದ ಹಗಲುಗಳನ್ನು ಕುರಿತು.

ನಾನು ಬರೆಯುತ್ತೇನೆ
ಶತಮಾನಗಳ ಕತ್ತಲನ್ನೊಡೆದು
ಮೆತ್ತಗೆ ತಲೆಯೆತ್ತುವ ಮೊಳಕೆಗಳನ್ನು ಕುರಿತು.

ನಾನು ಬರೆಯುತ್ತೇನೆ
ಕೊನೆಯಿರದ ಬೀದಿಗಳ ಮೇಲೆ
ಕೀರ್ತಿಗೆ ಕಚ್ಚಾಡುವವರನ್ನು ಕುರಿತು.
ಅರಳುವ ಕನಸುಗಳನ್ನು ಕುರಿತು
 ಉರುಳುವ ಚಕ್ರಗಳನ್ನು ಕುರಿತು  
ನಾನು ಬರೆಯುತ್ತೇನೆ, ನನ್ನ 
ಒಂದೊಂದೇ ಎಲೆಯುದುರಿ
ನಾನು ಬೋಳಾಗುವುದನ್ನು ಕುರಿತು. 

                                  - ಜಿ. ಎಸ್. ಶಿವರುದ್ರಪ್ಪ
                                    ' ಚಕ್ರಗತಿ ' (೧೯೯೨)

2 ಕಾಮೆಂಟ್‌ಗಳು:

Ananda_KMR ಹೇಳಿದರು...

neevu yaavdaadru bareddeera ?

ಕನಸು.. ಹೇಳಿದರು...

ಹೌದು, ಅಪರೂಪಕ್ಕೆ ಮನಸಿಗೆ ಬಂದಿದ್ದನ್ನ ಗೀಚೋ ಅಭ್ಯಾಸ ಇದೆ.. :)