ಶುಕ್ರವಾರ, ನವೆಂಬರ್ 26, 2010

ನಿನ್ನ ಸಂಗಾತಿ ಆಗಲಾರದ್ದಕ್ಕೆ

ಎಲ್ಲೆಡೆ ಚೈತ್ರ ಮುಂಗುರುಳ ಸರಿಸುತ್ತಾನೆ
ನನ್ನ ಮೊಗದಲ್ಲಿ ಮಾತ್ರ ಹಿಮಮಾರುತ!
ಮನೆಯ ತುಂಬೆಲ್ಲ ಎಂದೆಂದಿಗೂ ಪರಿಚಯ
ವಾಗಲೊಲ್ಲದ  ಅಪರಿಚಿತ ಮುಖಗಳು
ಭೂಕಂಪದಲಿ ಕುಸಿದ ಮನೆಯ ಅವಶೇ
ಷದಡಿ ಬದುಕಿರುವೆನೇನೋ ಎಂಬಂತೆ
ಗೆಳೆಯ ಮರುಗುತ್ತೇನೆ ನಿನ್ನವಳಾಗಲಾರದ್ದಕ್ಕೆ
ಹಕ್ಕಿಯಾಗಿ ಹಾರುತ್ತವೆ ನಿನ್ನ ಕವಿತೆಗಳು
ಬಾನ ತುಂಬೆಲ್ಲ ತೇಲುತ್ತವೆ - ನಾನು
ಮೋಡವಾಗಿದ್ದರೆ! ಹಂಬಲಿಸುತ್ತೇನೆ
ವಧುವಿನಂತೆ ಶೃಂಗಾರಗೊಂಡ ರಾತ್ರಿ
ಅವ್ಯಕ್ತ ಯಾತನೆಯ ಹೆಚ್ಚಿಸುತ್ತದೆ. ದಾರಿ
ತಪ್ಪಿದ ಯಾತ್ರಿಕನಂತೆ ಮನ ಬಂದಂತೆ
ಅಲೆದಾಡುತ್ತೇನೆ ನಿನ್ನ ಪಡೆಯಲಾರದ್ದಕ್ಕೆ.
ಈ ದುರಂತವನ್ನೇ ವೈಭವದಿಂದ ಬಾಳ
ಬೇಕಾದ ದೌರ್ಭಾಗ್ಯಕ್ಕೆ, ಆಕಾಶವೂ
ದುಃಖದಿಂದ ನೀಲಿಗಟ್ಟಿದೆ, ಬೆಳಗೂ ಕ್ಷಯ
ಗೊಂಡಿದೆ. ಸಾವು ಕೂಡಾ ದುಗುಡಗೊಂಡಿದೆ
ಇನಿಯ ಪರಿತಪಿಸುತ್ತೇನೆ ನಿನ್ನವಳಾಗದುದಕ್ಕೆ
ಮಳೆಗಾಲದಲ್ಲಿ ಹಳ್ಳಕೊಳ್ಳ ತುಂಬಿ ಹರಿಯುತ್ತವೆ
ಯಾವ ಎಲ್ಲೆ ಕಟ್ಟುಗಳಿಲ್ಲದೆಯೆ, ನಾನು ಸರಳು
ಗಳ ಹಿಂದೆ ಬಂದಿಯಾಗಿದ್ದೇನೆ. ನಾವಿಬ್ಬರೂ
ಎಂದಿಗೂ ಕೂಡೆವೆಂಬ ಬಿಕ್ಕಳಿಕೆ ಎದೆಯಲ್ಲಿ
ಪ್ರಿಯ, ಕಂಗೆಟ್ಟಿದ್ದೇನೆ ನಿನ್ನ ಪಡೆಯಲಾರದ್ದಕ್ಕೆ
ನಿನ್ನ ನೆನಪಿನಿಂದ ಮನೆಯನ್ನು ಶೃಂಗರಿಸುತ್ತೇನೆ
ನೀನಿರದ ನೋವನ್ನು ಕವಿತೆಗಳಲ್ಲಿ ತೋಡಿ
ಕೊಳ್ಳುವೆನು. ಬಲವಂತದ ನಗೆ ತುಟಿಯಂಚಿ
ನಲಿ, ಕಣ್ಣಿನಲಿ ಸಾವಿರ ನೋವಿನಲೆಗಳು
ನೀನಿಲ್ಲದೆ ಹಸಿರಿಲ್ಲ, ಉಸಿರಿಲ್ಲ ಒಳಗೇ
ಕೊರಗುತ್ತೇನೆ ಮುಖವಾಡಗಳ ಧರಿಸುತ್ತ,
ನನ್ನರಸ ಸಾವಬಯಸುತ್ತೇನೆ ಪ್ರತಿಕ್ಷಣ
ನಿನ್ನ ಸಂಗಾತಿ ಆಗಲಾರದ್ದಕ್ಕೆ.

                                              - ಎಚ್.ಎಸ್. ಮುಕ್ತಾಯಕ್ಕ

1 ಕಾಮೆಂಟ್‌:

Ananda_KMR ಹೇಳಿದರು...

ಆಕಾಶವೂ
ದುಃಖದಿಂದ ನೀಲಿಗಟ್ಟಿದೆ, ಬೆಳಗೂ ಕ್ಷಯ
ಗೊಂಡಿದೆ


I loved this sentence...simply superb