ಧೋ ಎಂದು ಸುರಿಯುತಿದೆ ಭಾರಿ ಮಳೆ ಇಲ್ಲಿ,
ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.
ಹೇಗೆ ಬರಲಿ ನಿನ್ನ ಬಳಿಗೆ ಇನಿಯ?
ಕೇಳಬೇಕಿದೆ ನಿನ್ನ ಜೇನುದನಿಯ.
ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.
ಹೇಗೆ ಬರಲಿ ನಿನ್ನ ಬಳಿಗೆ ಇನಿಯ?
ಕೇಳಬೇಕಿದೆ ನಿನ್ನ ಜೇನುದನಿಯ.
ಇಂಗಿ ಹೋಯಿತು ಸಂಜೆ ಇರುಳ ಸೆರಗಲ್ಲಿ,
ಭಂಗ ಪಡುತಿವೆ ತಾರೆ ಮುಗಿಲ ಮರೆಯಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.
ಹೇಗೆ ತಲುಪಲಿ ಹೇಳು ನಿನ್ನ ಮನೆಯ?
ಹೇಗೆ ಸೇರಲಿ ಪ್ರೀತಿಪಥದ ಕೊನೆಯ?
ಭಂಗ ಪಡುತಿವೆ ತಾರೆ ಮುಗಿಲ ಮರೆಯಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.
ಹೇಗೆ ತಲುಪಲಿ ಹೇಳು ನಿನ್ನ ಮನೆಯ?
ಹೇಗೆ ಸೇರಲಿ ಪ್ರೀತಿಪಥದ ಕೊನೆಯ?
ಹಳ್ಳ ಕೂಗುತ್ತಲಿದೆ ತುಂಬಿ ಮಳೆಯಲ್ಲಿ,
ಮನವೊ ಕುದಿಯುತ್ತಲಿದೆ ನಿನ್ನ ನೆನಪಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.
ಹೇಗೆ ಬರಲಿ ಇನಿಯ ನಿನ್ನ ಬಳಿಗೆ?
ಕರಗಬೇಕೋ ನಿನ್ನ ಪ್ರೀತಿಯೊಳಗೆ!
ಮನವೊ ಕುದಿಯುತ್ತಲಿದೆ ನಿನ್ನ ನೆನಪಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.
ಹೇಗೆ ಬರಲಿ ಇನಿಯ ನಿನ್ನ ಬಳಿಗೆ?
ಕರಗಬೇಕೋ ನಿನ್ನ ಪ್ರೀತಿಯೊಳಗೆ!
- ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
' ಹಸಿರು ತುಂಬಿದ ಕಣಿವೆ '
' ಹಸಿರು ತುಂಬಿದ ಕಣಿವೆ '
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ