ಕೆ.ಎಸ್.ನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೆ.ಎಸ್.ನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜನವರಿ 16, 2014

ಕುಶಲ ಪ್ರಶ್ನೆ

ಈ ವಾರದುದ್ದಕೂ ಇವನು ದಿನವೂ ಸಿಕ್ಕಿ
ಬಿಸಿಲಿಲ್ಲದಿದ್ದರೂ ನನಗೆ ಚತ್ರಿಯ ಹಿಡಿದು
ಜೇಬಿನಲ್ಲಿರದ ಕನ್ನಡಕವನ್ನು ಹುಡುಕುತ್ತ,
'ಕ್ಷೇಮವೇ?' ಎಂದು ಮೃದುವಾಗಿ ಕೇಳಿದ್ದಾನೆ.

ತಾನು ಯಾರೆಂದೆಲ್ಲ ತಿಳಿಸದಿದ್ದರೆ ಕೂಡ
(ನನ್ನ ತಪ್ಪೂ ಉಂಟು: ನಾನೂ ಕೇಳಲಿಲ್ಲ!)
ಅನೇಕ ವಿಷಯಗಳನ್ನು ನನಗೆ ಹೇಳಿದ್ದಾನೆ.
ನಾನು ಕಂಬದ ಹಾಗೆ ನಿಂತು ಕೇಳಿದ್ದೇನೆ.

ಇವನು ಹೇಳಿದ್ದಲ್ಲ ನನ್ನ ಸದ್ಯದ ಪ್ರಶ್ನೆ;
ಇವನು ಕೇಳಿದ್ದು, ಕುಶಲಪ್ರಶ್ನೆ, ನನ್ನನ್ನು
'ಕ್ಷೇಮವೇ?' ಎಂದು ಕೇಳಿದ್ದೆ ತಪ್ಪೆಂದೆಲ್ಲ,
ವಾರಕ್ಕೆ ಎರಡು ಸಲ ಬಹಳ ಸಾಕಾಗಿತ್ತು!

(ಕಂಡಾಗಲೆಲ್ಲ ಹೀಗೇಕೆ ಕೇಳುತ್ತಾನೆ?);
ಬಂತು ಸಂಶಯ ನನಗೆ ವಾರಾಂತ್ಯದಲ್ಲಿ
ಮನೆಯವರಿಗೀ ವಿಷಯ ಅರ್ಥವಾಗುವುದಿಲ್ಲ:
ಗೆಳೆಯರನ್ನೀಗ ಮಾತಾಡಿಸುವ ಹಾಗಿಲ್ಲ!

ಈ ಸಲದ ಆಷಾಢವೆಲ್ಲ ಹೀಗೆಯೆ ನನಗೆ:
ಮುಟ್ಟಿದರೆ ಮುಳ್ಳು. ಪರಿಹಾರಕ್ಕೆ ಇವನನ್ನೇ
ಕಾಣಬೇಕೆಂದು ಎದ್ದವನೆ ಬಂದಿದ್ದೇನೆ
ಹೂಮಾಲೆ ಹಿಡಿದು. ಕಣ್ಣಲ್ಲೆ ಅಳೆದಿದ್ದೇನೆ

ಒಂದಂಗಡಿಯ ಬಿಡದೆ. ಇವನಿಲ್ಲ, ಬಂದಿಲ್ಲ.
ಯಾರಿಲ್ಲವೆಂದು ಯಾರನ್ನು ಕೇಳುವುದಿಲ್ಲಿ?
ನನ್ನ ಕ್ಷೇಮದ ಕಡೆಗೆ ನನ್ನ ಗಮನವ ಸೆಳೆದ 
ಕರುಣಾಳುವಿಲ್ಲದೆಯು ಪೂರ್ತಿಯಾಗಿದೆ ಪೇಟೆ.

                                                   - ಕೆ. ಎಸ್. ನರಸಿಂಹಸ್ವಾಮಿ
                                                     'ತೆರೆದ ಬಾಗಿಲು'

ಶುಕ್ರವಾರ, ಡಿಸೆಂಬರ್ 27, 2013

ನೀರಿಗೆ ಬಿದ್ದ ಹೆಣ್ಣು

ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ
ಹೂವಾಗಲಿಲ್ಲ ಕೆಂಪಾಗಿ.
ಸಾವಿನಲ್ಲಿ ಶಾಂತಿ ಉರುಳಿತ್ತು ತಲೆಕೆಳಕಾಗಿ
ಆ ಎಲ್ಲ ನೋವು ತಂಪಾಗಿ.

ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ
ಕಂಡಿತ್ತು ಸಾವಿನ ಯುಗಾದಿ.
ಸುತ್ತೆಲ್ಲ ಕಿತ್ತು ಬಿದ್ದಿತ್ತು ಆಸೆಯ ಜೋಲಿ
ತೆರದಿತ್ತು ಹುಡಿಮಣ್ಣ ಹಾದಿ.

ನೀರಿಗೆ ಬಿದ್ದ ಹೆಣ್ಣು ಯಾರಿಗೂ ಹೇಳದೆಯೆ
ಆಗಿತ್ತು ಕೆರೆಗೆ ಆಹುತಿ.
ಹಾಲ ಕಾಣದ ಬದುಕು ಕುಡಿದಿತ್ತು ಕೆರೆಯನೆ;
ಅಲ್ಲಿತ್ತು ಅದರ ಸದ್ಗತಿ.

ಗಂಡ ಬಂದನು ಕಡೆಗೆ ನಡೆಬಂದ ಕಂಬದೊಲು;
ಹತ್ತು ಜನ ಅಲ್ಲೆ ಒದಗಿದರು.
ಬೆಂಕಿ ಹೆಣವನು ನುಂಗಿ ಬೆಂಬೂದಿಯಾಗಿರಲು,
ಉಳಿದವರು ಊರ ಸೇರಿದರು.

ನೀರು ಮುಗಿಸಿದ ಕಥೆಗೆ ಬೆಂಕಿ ಮಂಗಳ ಹಾಡಿ
ನಡೆದಿತ್ತು ದೈವ ಸಂಕಲ್ಪ.
ಇಂಥ ಬಾಳಿಗೆ ಸಾವೆ ನಂದನದ ಕೆರೆ-ಕೋಡಿ;
ಮಸಣದಲಿ ಮಾತ್ರ ಸುಖತಲ್ಪ.

ಹೆಣ್ಣು ಸತ್ತಳು ಏಕೆ? ನೆರೆಯ ನಿರ್ಭಾಗ್ಯರಿಗೆ
ಸಂಶಯದ ಮೇಲೆ ಸಂಶಯ.
ಕಾರಣವೆ ಬಂಗಾರ ಬೇಟೆ ಫಲಿಸದೆ ಕಡೆಗೆ
ಸತ್ತವಳ ಮೇಲೆ ಸಂಶಯ.

ಕೈಯಾರ ಕೆರೆಗೆ ತಳ್ಳಿದನೆ ಮಡದಿಯನಿವನು?
ನ್ಯಾಯದಲಿ ತೀರ್ಪು: ನಿರ್ದೋಷಿ.
ಗದ್ದಲದ ಗಡಸು ನಾಲಗೆಯ ಗಂಡಲ್ಲಿವನು;
ಊರು ಕಂಡಂತೆ ಮಿತಭಾಷಿ.

ಸತ್ತವಳ ಮೇಲೆ ಸಂಶಯ-ಊರಿಗಿವನಂಥ
ಮಾದರಿಯ ಗಂಡ ಆಭರಣ.
ಸತ್ತವಳು ಇಳಿದು ಸತ್ಯವನೊದುರುವಂತಿಲ್ಲ;
ಸಂಗತಿಗೆ ಮೌನದಾವರಣ.

ನೀರಿಗೆ ಬಿದ್ದ ಹೆಣ್ಣ ಗಂಡನ ಹಣೆಯ ಮೇಲೆ
ಬಿಡುಗಡೆಯೆ ನಿರ್ಭಯದ ತಿಲಕ.
ಎದೆಯಲಿ ಏನೊ ಎಂತೊ, ತೋರುವ ಮುಖದ ಮೇಲೆ
ಎಷ್ಟೊಂದು ನೋವು, ನಾಟಕ!

ಸತ್ತಳು ಏಕ ಹೆಣ್ಣು (ಊರಿಗೆ ಇಲ್ಲ ಕಣ್ಣು);
ಅಂತು ಕೇಳಿದನೊಬ್ಬ ಕುಂಟ.
ಸತ್ತರೆ ಏನು ನಷ್ಟ? ಕಾದಿದೆ ಬೇರೆ ಹೆಣ್ಣು;
ಇಂತು ಹೇಳಿದನೊಬ್ಬ ನಂಟ.

ಕನಿಕರದಿಂದ ಬಂದ ಕುರಿಯೊಂದು ನುಡಿದಿತ್ತು:
ಮುಗಿದಿತ್ತು ಹೆಣ್ಣ ಹಣೆಬರಹ.
ಮಾನವ ಜನ್ಮಧಾರಿ ನರಿಯೊಂದು ನಕ್ಕಿತ್ತು!
ನೀರಿಗೆ ಜಾರಿ ಬಿದ್ದ ವಿಷಯ.

                            - ಕೆ. ಎಸ್. ನರಸಿಂಹಸ್ವಾಮಿ
                              ' ಇರುವಂತಿಗೆ '

ಭಾನುವಾರ, ಡಿಸೆಂಬರ್ 22, 2013

ಕೋಗಿಲೆ!

ತುಂಬುತಿಂಗಳಿನ ಮಲ್ಲಿಗೆ ಹಂಬಿನ
ನಂಬದ ಬೆಳಕಿನ ಸೆರಗಿನಲಿ.
ತುಂಬಿ ತುಂಬಿಬಹ ನಾಡಿನ ಪಾಡಿನ
ತುಂಬದಾಸೆಗಳ ಕೊರಗಿನಲಿ-
ಅಕ್ಕ ಓ ಕೋಗಿಲೆ!
ಚಿಕ್ಕ ಹೂ ಕೋಗಿಲೆ,

ಮರದ ಮೇಲೆ ತೂಗಾಡುವ ಹಾಡಿಗೆ
ಹೆಸರು ಬಂದಿತೆ ಕೋಗಿಲೆ?
ಸೊಕ್ಕಿಬರುವ ಸುಮ್ಮಾನದ ಕೂಗಿಗೆ
ಸುಖದ ಊರ ಹೆಬ್ಬಾಗಿಲೆ
ತೆರೆದುದೇ, ಈಗಲೆ?
-ಕಾಣದೇ ಕೋಗಿಲೆ!

ಅಲ್ಲೆ ಇರು ನೀನಿಲ್ಲೆ ಇರು ನೀ
ನೆಲ್ಲೆ ಇರು ನೀ ಬರಿಯದನಿ!
ಎಲ್ಲೂ ನಾದದ ತುಷಾರ ವಾಹಿನಿ;
ಎತ್ತರದುತ್ತರ ನಿನ್ನ ದನಿ!
-ಬಾನಹೂ ಕೋಗಿಲೆ:
ಮುಗಿಲ ಮುತ್ತಾಗಲೆ!

ಹೂವು ಅಲ್ಲದ ಎಲೆಯೂ ಅಲ್ಲದ
ಬನದ ಹುಟ್ಟು ಈ ಕೋಗಿಲೆ;
ಎದೆಯ ಗಾಯನದಲಿ ಮೆಲ್ಲಗೆ ಸುಳಿಯುವ
ದನಿ ನೇಗಿಲೆ ಕೋಗಿಲೆ?
-ಹಾಡಿತೆ, ಕೋಗಿಲೆ;
ಇಲ್ಲವೆ, ಹಸುರೆಲೆ.

                                          - ಕೆ. ಎಸ್. ನರಸಿಂಹಸ್ವಾಮಿ
                                             ' ಉಂಗುರ '

ಬುಧವಾರ, ಡಿಸೆಂಬರ್ 18, 2013

ಕಾರಣ ಯಾರಿಗೆ ಗೊತ್ತು?

ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ
ಮೂಲೆಯ ಹಿಡಿದು ಮಲಗಿಹಳು?
ಬಿಳಿವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರಳಲ್ಲಿ; ಮಾತಿಲ್ಲ; ಉಸಿರು.

ಥಳಥಳಿಸುವ ಕಣ್ಣ ಮುಚ್ಚಿ, ಕೆದರಿದ ಕುರುಳ
ಹತ್ತಾರು ದಿಕ್ಕಿಗೆ ಹರಿಸಿ,
ಹೊದಿಕೆಯ ಹೊರಗೆ ಮುಂಗೈ ಬೀಸಿ, ನಡುಬೆರಳ
ಉಂಗುರುವ ನಡುಹರಳ ಜ್ವಲಿಸಿ,

ಬೆನ್ನ ಸೆರಗಿನ ಮೇಲೆ ಅರಿಯದೆ ತಂಗಿದ
ಜರತಾರಿ ಹೂವನು ಮರೆತು,
ತಲೆಯಿಟ್ಟ ತುಂಬುದಿಂಬಿನ ಮೇಲೆ ಹಣೆಗಿಟ್ಟ
ಕುಂಕುಮದ ಒತ್ತನು ಕುರಿತು,

ಏನೇನೊ ಮಾತು-ದೇವರು ಬಲ್ಲ!-ಮಾತೆಲ್ಲ
ಹೊಂದದೆ ಒಡೆದ ಕಿರುಮುತ್ತು;
ಮನಸಿನ ಮೇಲುಮಾಳಿಗೆಯಲ್ಲಿ ಬೆಳಕಿಲ್ಲ.
ಕಾರಣ ಯಾರಿಗೆ ಗೊತ್ತು?

                                - ಕೆ. ಎಸ್. ನರಸಿಂಹಸ್ವಾಮಿ
                                                                                     ' ಇರುವಂತಿಗೆ '

ಮಂಗಳವಾರ, ಮಾರ್ಚ್ 13, 2012

- -  ಗೆ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ  ನನ್ನ ಮನಸು.

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ.

ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ.

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನಪುರಿಗೆ.

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ -
ಯೊಳಗುಡಿಯ ಮೂರ್ತಿಮಹಿಮೆ.

ನಿನ್ನ ಪ್ರೇಮದ ಪರಿಯ ನಾನರಿಯೆ, ಕನಕಾಂಗಿ
ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ?

                                 - ಕೆ. ಎಸ್. ನರಸಿಂಹಸ್ವಾಮಿ
                                    ' ಮೈಸೂರು ಮಲ್ಲಿಗೆ '

ಗುರುವಾರ, ಡಿಸೆಂಬರ್ 30, 2010

ನರಸಿಂಹಸ್ವಾಮಿಯವರ ಒಂದಿಷ್ಟು ಕವಿತೆಗಳು.....

ನಿನ್ನೊಲವಿಗೂ ಮೇರೆ ಇಹುದು!

ನೆಲದ ಸುತ್ತ ಜಲದ ಕುಲುಕು;
ಹಗಲ ಸುತ್ತ ಇರುಳ ತುಳುಕು;
ಕಾಲದೊಳಗೆ ಉಸಿರ ಪಲುಕು : -
                 ನಿನ್ನೊಲವಿಗೂ ಮೇರೆ ಇಹುದು!

ನನ್ನ ಕಡೆ ನೀನು ಬಂದು
ಮಡದಿಯಾಗಿ ಮುತ್ತ ತಂದು
ಹಿಗ್ಗಬಹುದು ಗೆದ್ದೆವೆಂದು.
                 ನಿನ್ನೊಲವಿಗೂ ಮೇರೆ ಇಹುದು!

ನೀನೆ ಕಂಡ ಮೊದಲ ಹೆಣ್ಣು;
ಸಂಜೆತಾರಗೆ ನಿನ್ನ ಕಣ್ಣು.
ನಿನ್ನ ಕೆಳೆಯೇ ಪುಣ್ಯವೆನ್ನು.
                   ನಿನ್ನೊಲವಿಗೂ ಮೇರೆ ಇಹುದು!

ತುಂಬುಗಣ್ಣ ತೆರೆದೆದುರಿಸಿ
ಕೆನ್ನೆಯೊಳಗೆ ನಗೆಯ ಸುಳಿಸಿ
ಗೆಲ್ಲು ನೀನೆ ನನ್ನ ನಗಿಸಿ.
                   ನಿನ್ನೊಲವಿಗೂ ಮೇರೆ ಇಹುದು!

ನಿನ್ನ ಚೆಲುವಿಗಿ ಮೇರೆ ನೀನೆ ;
ಬಳಿಯಲಿದ್ದು ಬೇರೆ ನಾನೆ;
ಬಾನ ಮೇರೆ ಬಾನೆ ತಾನೆ!
                    ನಿನ್ನೊಲವಿಗೂ ಮೇರೆ ಇಹುದು!

ತುಂಬಿದರಳ ಬಂಡಿನೊಳಗೆ
ತುಟಿಯನಿಡುವ ತುಂಬಿಯಂತೆ
ಸಾವು ಎಂದೊ ಬರುವುದಂತೆ.
                   ನಿನ್ನೊಲವಿಗೂ ಮೇರೆ ಇಹುದು!

ಸಾವು ಬಹುದು ಸುಖದ ಹೊತ್ತೆ.
ಚೆಲುವು ಅದರ ಹೆಡೆಯ ಮುತ್ತೆ.
ಅದಕೆ ಮೇರೆ ಇಲ್ಲ ಗೊತ್ತೆ?
                  ನಿನ್ನೊಲವಿಗೂ ಮೇರೆ ಇಹುದು!

ಬಾಳಿಗಂತೂ ಸಾವೆ ಕೊನೆಯೆ?
ಅದರಾಚೆಗೂ ನಿನ್ನ ಒಲವೆ?
ಒಲವು ತಾನೆ ತನಗೆ ಮೇರೆ?
               ಒಲವಿಗಂತೂ ಮೇರೆ ಇರದು!

                             - ಕೆ.ಎಸ್. ನರಸಿಂಹಸ್ವಾಮಿ
                                 ' ಉಂಗುರ '
ಉಂಗುರ

ಗಾಳಿ ಆಡಿದರೆ ಬನವೂ ಆಡಿ
ಹೂವಿನುಂಗುರ;
ಮಳೆ ಮೂಡಿದರೆ ಕೆರೆಯೂ ಆಡಿ
ನೀರಿನುಂಗುರ;

ತಾರೆ ಧುಮುಕಿದರೆ ಬಾನಿಗೆ ಬಾನೆ
ಬೆಳಕಿನುಂಗುರ;
ಕಣ್ಣತುಂಬಿ ಬಹ ನಿದ್ದೆಯ ಬೆರಳಿಗೆ
ಕನಸಿನುಂಗುರ;

ತುಂಬದ ಒಡಲಿಗೆ ತಾಂಬೂಲದ ತುಟಿ 
ಬೆಂಕಿಯುಂಗುರ;
ಬಾಳ ಕಾಣದಿಹ ಕಲ್ಲ ಕಣ್ಣಿನಲಿ
ಮಣ್ಣಿನುಂಗುರ;

ಒಲ್ಲದ ಹೆಣ್ಣಿನ ಸಲ್ಲದ ಬಯಕೆಗೆ
ಎಲ್ಲೋ ದೂರದ
ಕನಸನೂಡಿಸುವ ಕೊರಗಿನ ಬೆರಳಿಗೆ
ಆಸೆಯುಂಗುರ;

ಎದೆಯ ಕತ್ತಲೆಯ ಪೊದೆಯಲಿ, ಕಮಲಾ,
ವಜ್ರದುಂಗುರ;
ನಿನ್ನ ಕೆನ್ನೆಯಲಿ ಮೆಲ್ಲಗೆ ನನ್ನಾ
ಪ್ರೇಮದುಂಗುರ.

                               - ಕೆ.ಎಸ್. ನರಸಿಂಹಸ್ವಾಮಿ
                                ' ಉಂಗುರ '
ಮನೆಗೆ ಬಂದ ಹೆಣ್ಣು

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ,
ಚಿಂತೆ, ಬಿಡಿಹೂವ ಮುಡಿದಂತೆ;
ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ;
ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿಮುಖವಿಲ್ಲ. ಇಷ್ಟು ನಗು -
ಮೂಗುತಿಯ ಮಿಂಚು ಒಳಹೊರಗೆ;
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು,
ಬೇಲಿಯಲಿ ಹಾವು ಸರಿದಂತೆ.

ಮೂರನೆಯ ಸಂಜೆ ಹೆರಳಿನ ತುಂಬ ದಂಡೆಹೂ.
ಹೂವಿಗೂ ಜೀವ ಬಂದಂತೆ;
ಸಂಜೆಯಲಿ ರಾತ್ರಿ ಇಳಿದಂತೆ, ಬಿರುಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ!

                              - ಕೆ.ಎಸ್. ನರಸಿಂಹಸ್ವಾಮಿ
                                ' ಉಂಗುರ '
ಪ್ರಥಮ ರಾಜನಿಗೆ

ದೀಪವೂ ನಿನ್ನದೆ, ಗಾಳಿಯೂ ನಿನ್ನದೆ,
- ಆರದಿರಲಿ ಬೆಳಕು!
ಕಡಲೂ ನಿನ್ನದೆ, ಹಡಗೂ ನಿನ್ನದೆ,
- ಮುಳುಗದಿರಲಿ ಬದುಕು!

ಬೆಟ್ಟವೂ ನಿನ್ನದೆ, ಬಯಲೂ ನಿನ್ನದೆ,
- ಹಬ್ಬಿ ನಗಲಿ ಪ್ರೀತಿ!
ನೆಳಲೋ ಬಿಸಿಲೋ, ಎಲ್ಲವೂ ನಿನ್ನವೇ
- ಇರಲಿ ಏಕರೀತಿ!

ಆಗೊಂದು ಸಿಡಿಲು, ಈಗೊಂದು ಮುಗಿಲು
- ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
- ನಿನಗೆ ನಮಸ್ಕಾರ.

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
- ನಿನ್ನ ಪ್ರತಿಧ್ವನಿ :
ಆ ಮಹಾಕಾವ್ಯ, ಈ ಭಾವಗೀತೆ
- ನಿನ್ನ ಪದಧ್ವನಿ.

ಅಲ್ಲೊಂದು ಯುದ್ಧ, ಇಲ್ಲೊಬ್ಬ ಬುದ್ಧ,
- ಕೀರ್ತಿ ಇವು ನಿನಗೆ.
ಆ ಮಧ್ಯರಾತ್ರಿ, ಈ ಉದಯಸೂರ್ಯ
- ಮೂರ್ತಿ ಇವು ನಿನಗೆ.

ಕ್ಷಾಮ, ತುಷ್ಟಿ, ನಿನ್ನದೆ ಈ ಸೃಷ್ಟಿ
- ಕಡೆಗೆ ಎಲ್ಲಾ ಒಂದೆ.
ಹಿಡಿವುದೆಲ್ಲವನು ನಿನ್ನ ತಾಯ್ - ದೃಷ್ಟಿ,
- ನಿನಗೆ ಎಲ್ಲಾ ಒಂದೆ.

ಈ ಸೃಷ್ಟಿಗೆಲ್ಲ ಕರ್ತಾರನಾಗಿ,
- ಅಧ್ಯಕ್ಷನಾಗಲೊಲ್ಲೆ!
ಈ ಸೃಷ್ಟಿಗೆಲ್ಲ ಅಧಿಕಾರಿಯಾಗಿ,
- ಕಣ್ಗಿಲ್ಲವಾದೆ, ಅಲ್ಲೆ!

ಪ್ರಜೆಗಳನು ಕರೆದು ಇದೊ ರಾಜ್ಯವಿಹುದು;
ಆಳಬಹುದೆಂದು ನುಡಿದೆ;
ಅರಮನೆಯ ತೊರೆದು ಬಾಗಿಲನು ತೆರೆದು
ತಿರುಗಿ ನೋಡದೆಯೆ ನಡೆದೆ.

ಸರ್ವಶಕ್ತಿಯೇ ಸರ್ವತ್ಯಾಗದ
ಗಂಗೆಯಾಗಿ ಹಾರಿದೆ;
ಮುತ್ತಿನ ಕಿರೀಟ, ಮುಳ್ಳಿನ ಕಿರೀಟ
- ಯಾವುದೂ ಇಲ್ಲ ನಡೆದೆ.

ನಿನ್ನಂಥ ರಾಜ ಒಳಗಿದ್ದು ದೂರ;
- ಇನ್ನೆಲ್ಲೋ ನೀನು!
ರಾಜರಹಿತ ರಾಜ್ಯಾಂಗ ಶಾಸನದ
ಪ್ರಾಣಶಕ್ತಿಯೇ ನೀನು!

                                   - ಕೆ.ಎಸ್. ನರಸಿಂಹಸ್ವಾಮಿ
                                   ' ಉಂಗುರ '


ಸೋಮವಾರ, ಡಿಸೆಂಬರ್ 27, 2010

ಅಕ್ಕಿಯಾರಿಸುವಾಗ

ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು :
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ
ಸಿಂಗಾರ ಕಾಣದ ಹೆರಳು ;

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು ;
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ, ಮುಂಗಾರಿನುರುಳು ;

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಜಲ್ಲೆನುವ ಬಳೆಯ ಸದ್ದು ; -
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿದ್ದು,

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು.
ಬೇಸಿರಿಯ ಕಿರುಮುತ್ತು ನುಚ್ಚಿನಲಿ ಮುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು!

                                        - ಕೆ.ಎಸ್. ನರಸಿಂಹಸ್ವಾಮಿ
                                           ' ಇರುವಂತಿಗೆ '
ಶ್ರೀ ಕೃಷ್ಣನಂತೊಂದು ಮುಗಿಲು

ಶ್ರೀ ಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಹೊಳೆದಾರಿ ಕಾಯುವ ಮುಗಿಲು
ಜರತಾರಿ ಸೆರಗಿನ ಮುಗಿಲು

ಬೆಣ್ಣೆಯ ಗಿರಿಯಂತೆ ಮುಗಿಲು ಅಲ್ಲೆ
ಬಳಸುವ ಯಮುನೆಯ ಮುಗಿಲು
ಗೋಪಿಯರ ತಂಡದ ಮುಗಿಲು ಬಲ್ಲೆ
ಹರಿಗೋಲು ಹುಣ್ಣಿಮೆ ಹೊನಲು

ಬಳ್ಳಿಯ ಮನೆಯಂತೆ ಮುಗಿಲು ಅಲ್ಲಿ
ಹಳ್ಳಿಯ ಹಾಡಿನ ಹುಯಿಲು
ಹೆಣ್ಣಿಗೆ ಎಷ್ಟೊಂದು ದಿಗಿಲು ನಿಲ್ಲಿ
ಕೆನ್ನೆಗೆ ಹೂವಿನ ನೆಳಲು

ಕಿರುತಾರೆ ಮುಡಿದೊಂದು ಮುಗಿಲು ತನ್ನ
ಚೆಲುವಿಗೆ ಬೆರಗಾದ ಮುಗಿಲು
ಕೊಳಲನು ತುಟಿಗಿಟ್ಟ ಮುಗಿಲು ನಿನ್ನ
ತುಟಿ ನನ್ನ ಕೊಳಲೆನುವ ಮುಗಿಲು

ಬಾ ಬಾರೆ ಎನ್ನುವ ಮುಗಿಲು ಅಲ್ಲಿ
ಬರಲಾರೆನೆನ್ನುವ ಮುಗಿಲು
ಕೆನ್ನೆ ಕೆಂಪಾದೊಂದು ಮುಗಿಲು ಎಲ್ಲಿ
ಇನ್ನೊಂದು ಮುತ್ತೆನುವ ಮುಗಿಲು

ಶ್ರೀ ಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಅಲ್ಲೊಂದು ಇಲ್ಲೊಂದು ಮುಗಿಲು
ಮುಗಿಲೆಲ್ಲ ಕೃಷ್ಣನ ಕೊಳಲು.

                                      - ಕೆ.ಎಸ್. ನರಸಿಂಹಸ್ವಾಮಿ
                                         ' ಇರುವಂತಿಗೆ '
ನಿನ್ನೊಲುಮೆ

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿಸೂಸುವ ಅಮೃತ ನೀನೇನೆ!
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ!

ನಿನ್ನ ಕಿರುನಗೆಯಿಂದ, ನಗೆಯಿಂದ, ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ!
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೆ!

                                            - ಕೆ.ಎಸ್. ನರಸಿಂಹಸ್ವಾಮಿ
                                               ' ಇರುವಂತಿಗೆ '
ನಿನ್ನ ಹೆಸರು

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು.
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು.

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು.
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ
ಹಾಲಲ್ಲಿ ನಿನ್ನ ಹೆಸರು.

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು.
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು.

ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ
ಬೆಳ್ದಿಂಗಳೋ ನಿನ್ನ ಹೆಸರು.
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು.

ನೀನೇ ಎದುರಿಗೆ ಬಂದಾಗ ನಿನ್ನಲ್ಲೆ
ಕರಗುವ ಬಲು ಚಿಕ್ಕ ಹೆಸರು.
ನೀನಿಲ್ಲದಾಗ ಈ ಮನೆಯಲ್ಲೆ ಮನದಲ್ಲೆ
ಹೊಳೆಗಾಳಿಯಂತಲೆವ ಹೆಸರು.

                                  - ಕೆ.ಎಸ್. ನರಸಿಂಹಸ್ವ್ವಾಮಿ
                                    ' ಇರುವಂತಿಗೆ '
ಬೆಳಗಿನ ತೋಟದಲ್ಲಿ

ಬಳ್ಳಿಯ ಬೆರಳಲಿ ಹೂವೊಂದಿತ್ತು
ಉಂಗುರವಿಟ್ಟಂತೆ.
ಹೂವಿನ ತುಟಿಯಲಿ ಹನಿಯೊಂದಿತ್ತು
ಮುತ್ತೊಂದಿಟ್ಟಂತೆ.

ನೀರಿನ ಹನಿಯೇ ಕಾಮನಬಿಲ್ಲಿನ
ಕಂಬನಿಯಾಗಿತ್ತು.
ಹೂವಿನ ಸುತ್ತಾ ಹರಡಿಹ ಹುಲ್ಲಿನ
ಹಸುರಿನ ಹಾಸಿತ್ತು.

ಹನಿಗಳ ಹಿಡಿಯುತ ಕುಡಿಯುತ ಕೋಗಿಲೆ
ಬಾಯನು ತೆರೆದಿತ್ತು.
ಬಳ್ಳಿಯ ಹೂವಿನ ಬೆಳ್ಳಿಯ ಬಾಗಿಲೆ
ಹಾಡಿಗೆ ತೆರೆದಿತ್ತು,

ಭೂಮಿಯ ಉದಯದ ಭವ್ಯಾನಂದದ
ಹೊಸಗಾಳಿ
ಮೊದಲಿನ ಮಕ್ಕಳ ತೊದಲಿನ ಕೇಕೆಯ
ಉಂಗುರ ದನಿಗಳಲಿ

ಕರೆದಿದೆ: 'ನೋವೇ ಇಲ್ಲದ ಊರಿಗೆ
ಎಲ್ಲಾ ಬರಬಹುದು.'
ಕನಸಿನ ಹಸುವಿನ ಹಾಲೂ ಮಧುರವೆ?
- ಹಾಗೂ ಇರಬಹುದು.

                                 - ಕೆ.ಎಸ್. ನರಸಿಂಹಸ್ವಾಮಿ
                                    ' ಇರುವಂತಿಗೆ '

ಸೋಮವಾರ, ನವೆಂಬರ್ 8, 2010

ಗೆಳೆಯನಿಗೆ

ನೂರು ಕನಸುಗಳಲ್ಲಿ ನಿನ್ನ ಕಂಡೆನು ನಾನು
ನನ್ನೆದೆಯೊಳಚ್ಚಾಯ್ತು ನಿನ್ನಹೆಸರು
ನನ್ನೆಲ್ಲ ಒಲವು ಹೂವಾಗಿ ಅರಳಿತು, ನಕ್ಕೆ -
ಆರಿ ಹೋಯಿತು ದೂರ ದೂರ ದೀಪ!

ಓ ಗೆಳೆಯ, ನಾ ನಿನ್ನ ಹುಡುಕುತ್ತಲಿದ್ದೇನೆ
ಎಲ್ಲ ಅನುಭವಗಳಲಿ ಒಂಟಿಯಾಗಿ
ಹೋದುದೆಲ್ಲಿಗೆ ನೀನು ತುಂಬಿದ ಜಗತ್ತಿನಲಿ
ಹೂಗಳಲಿ ಹಣ್ಗಳಲಿ ಹಾಡಿನಲ್ಲಿ?

ದೂರದರ್ಶನದಲ್ಲಿ ಕೇಳಿ ಬಂದಿತು ಹಾಡು
ತಂಪಾಗಿ ಇಂಪಾಗಿ ಮಧುರವಾಗಿ ;
ಕೆಲವರು ಬಂದರು ಸಭೆಗೆ, ಎದ್ದು ಹೋದರು  ಕೆಲವರು
ಈ ಜಗತ್ತಿನ ಚೆಲುವು ಕಣ್ತುಂಬಿತು.

ನೀನೆಂದು ಬರುವೆ, ಓ ಗೆಳೆಯ, ಉದ್ಯಾನದಲಿ
ನೀ ಬರುವ ತನಕ ನಾ ಕಾಯುವೆನು.

                               - ಕೆ.ಎಸ್. ನರಸಿಂಹಸ್ವಾಮಿ
                                   'ಸಂಜೆ ಹಾಡು'

ಶನಿವಾರ, ಅಕ್ಟೋಬರ್ 30, 2010

ಕವಿತೆ

ಬಿಡುವು ಒಂದೇ ಸಾಕೆ ಪದ್ಯ ಬರೆಯುವುದಕ್ಕೆ
ಅದಕೆ ಕಾಗದ ಬೇಕು, ಕಪ್ಪುಮಸಿಯೂ ಬೇಕು.
ಭಾವಗಳು ತಾವಾಗಿ ಲೇಖನಿಗಿಳಿಯಬೇಕು
ಹೃತ್ಕಮಲದಿಂದ. ಬಾಳಿನ ನೋವು ನಲಿವುಗಳು
ಮಾತಿಗೆ ಒಲಿಯಬೇಕು. ಚೆಲುವು ಒಲವುಗಳು
ತಾನಾಗಿ ಅರಳಿರಬೇಕು. ದುಃಖ ಸೇತುವೆಯ
ದಾಟಿದ ಒಳದನಿಯ ಆಹ್ವಾನವೂ ಕವಿಗೆ
ಇರಬೇಕು. ನಡುಹೊಳೆಯಲ್ಲಿ ಬಂಡೆಯ ಮೇಲೆ
ಹಿಂದೊಮ್ಮೆ ಸ್ವಪ್ನದಲಿ ಕಂಡ ರಾಜಕುಮಾರಿ
ವೀಣೆಯನು ಮಿಡಿಯುತ್ತ ಹಾಡುತ್ತಲಿರಬೇಕು.
ಛಂದಸ್ಸು ಇರಬೇಕು ಕುದುರೆಗಳ ನಡೆಯಂತೆ.
ಕವಿತೆ ಆಲೋಚನಾಮೃತ; ರಸಿಕರೆದೆಯಲ್ಲಿ
ಹುಣ್ಣಿಮೆಯ ಹೊಂಬೆಳಕು; ಹನಿಯಲ್ಲಿ ಒಂದು ಹೊಳೆ.
ಕವಿತೆ ಮೂಡುವ ತನಕ ನಾವು ಕಾದಿರಬೇಕು.

                                                                         - ಕೆ. ಎಸ್. ನರಸಿಂಹ ಸ್ವಾಮಿ