ಇತರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಇತರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 10, 2014

ಅವ್ವ

ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟುಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ.

                                                 - ಪಿ. ಲಂಕೇಶ್

ಮಂಗಳವಾರ, ಜನವರಿ 7, 2014

ಸಾವಿರಾರು ನದಿಗಳು

ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು

ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ
ಇರುವೆಯಂತೆ ಹರಿದಸಾಲು ಹುಲಿಸಿಂಹದ ದನಿಗಳು
ಧಿಕ್ಕಾರ ಧಿಕ್ಕಾರ ಅಸಮಾನತೆಗೆ
ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ
ಲಕ್ಶಾಂತರ ನಾಗರಗಳು ಹುತ್ತಬಿಟ್ಟು ಬಂದಂತೆ
ಊರತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು
ಬೀದಿಯಲ್ಲಿ ಗಲ್ಲಿಯಲ್ಲಿ
ಬೇಲಿಮೆಳೆಯ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು

ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂಠ ಕೇಳಿದೊಡನೆ
ಅವರ ದನಿ ಇಂಗಿತು
ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ
ಛಡಿಯ ಏಟು ಹೊಡೆದವರ
ಕುತ್ತಿಗೆಗಳ ಹಿಡಿದರು.

ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರಪುರಾಣ ಬಂದೂಕದ ಗುಡಾಣ
ತರೆಗೆಲೆ ಕಸಕಡ್ಡಿಯಾಗಿ
ತೇಲಿತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು

                         - ಸಿದ್ಧಲಿಂಗಯ್ಯ

ಗುರುವಾರ, ಜನವರಿ 19, 2012

ಮತ್ತಷ್ಟು ಕವನಗಳೊಂದಿಗೆ..


ಕಾವ್ಯ ಪ್ರೇಮಿಗಳೇ,

     ಮನಸಿನ ಅರ್ಥವಿಲ್ಲದ ಅಸಹನೆ, ಕಾರಣವಿಲ್ಲದ ಜಡತ್ವಕ್ಕೆ ಕಾರಣ ಹುಡುಕುತ್ತಿರುವಾಗ ನನಗೆ ಇತ್ತೀಚಿನ ಪುಸ್ತಕ ಮೇಳವೊಂದರಲ್ಲಿ ಉತ್ತರ ದೊರೆಯಿತು. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರ ಕವನ ಸಂಕಲನಗಳು ಕಣ್ಣಿಗೆ ಬಿದ್ದಾಗ ಇಷ್ಟು ದಿನ  ಕಳೆದುಕೊಂಡಿದ್ದೇನೆಂಬುದರ ಅರಿವಾಯ್ತು ..

    'ಕಣಜ'ದಲ್ಲಿ ಹೊಸ ಕವಿತೆಗಳನ್ನು ತುಂಬದೆ, ಯಾಂತ್ರಿಕ ಜೀವನದಲ್ಲಿ ಮುಳುಗಿದ್ದ ನಾನು ಮತ್ತೆ ಕಾವ್ಯ ಪ್ರಪಂಚಕ್ಕೆ ಹಿಂದಿರುಗಿದ್ದೇನೆ. 'ಎಲ್ಲಿ ಹೋದಿರಿ?, 'ಕವನಗಳನ್ನು ಪ್ರಕಟಿಸಿ' ಎಂಬೆಲ್ಲ ಸಂದೇಶಗಳ ಮೂಲಕ ನೀವು ತೋರಿದ ಅಕ್ಕರೆಗೆ ಧನ್ಯವಾದ ಹೇಳುತ್ತ, ಇಷ್ಟು ದಿನ ನಿಮ್ಮನ್ನು ಕಾಯಿಸಿದ ತಪ್ಪಿಗೆ ಕ್ಷಮೆ ಕೇಳುತ್ತ, ಮತ್ತಷ್ಟು ಕವಿತೆಗಳು ನಿಮಗಾಗಿ..


    ಅಕ್ಕರೆಯಿಂದ,
    ಕನಸು..

ಗುರುವಾರ, ಜನವರಿ 13, 2011

ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ!
ಮಳೆ ಗಾಳಿಗೆ ನೆನೆನೆನೆದು
                  ಸೋರುತಿಹುದು ಮನೆಯ ಮಾಳಿಗಿ                ಪ

ಸೋರುತಿಹುದು ಮನೆಯ ಮಾಳಿಗಿ
ದಾರು ಗಾಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
                        ಮೇಲಕೇರಿ ಮೆಟ್ಟಲಾರದೇ                        

ಮುರಕ ತೊಲೆಯು ಹುಳಕ ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರಗಿಂಡಿ
                  ಮರೆತು ನಾನು ಮುಚ್ಚಲಾರದೇ                  

ಕರಿಕಿ ಕಸವು ಹುಲ್ಲ ಹತ್ತಿ
ದುರಿತ ಭವದ ಇರುವಿ ಮುತ್ತಿ
ಜಲದ ಭರದಿ ತಿಳಿಯ ಮಣ್ಣು
      ಒಳಗೆ ಹೊರಗೆ ಏಕವಾಗೀ    
             
ಕಾಂತೆ ಕೇಳ ಕರುಣದಿಂದ
ಬಂತು ಕಾಣೆ ಹುಬ್ಬೀ ಮಳೆಯು
ಈಗ ಶಿಶುವಿನಾಳ ಗ್ರಾಮಕ
                             ಮೇಘರಾಜ ಇಳಿದ ಮೇಲೆ                             

                                    - ಶಿಶುನಾಳ ಶರೀಫ ಸಾಹೇಬ

ಮಂಗಳವಾರ, ಜನವರಿ 4, 2011

ನಾವು ಹುಡುಗಿಯರೇ ಹೀಗೆ...

-೧-
ಹೌದು ಕಣೆ ಉಷಾ
ನಾವು ಹುಡುಗಿಯರೇ ಹೀಗೆ...
ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
ಹೇಳಲೇಬೇಕು ಎನಿಸಿದ್ದನ್ನು
ಹೇಳಹೋಗಿ ಹೆದರಿ ಏನೇನೋ ತೊದಳುತ್ತೇವೆ
'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು
ಬೇರೆ ಏನೇನೋ ದಾರಿ ಹುಡುಕಿ
ಸಂದೇಶ ಮುಟ್ಟಿಸಲು ಹೆಣಗುತ್ತೇವೆ.
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗರು ಕೈ ತಪ್ಪಿದಾಗ
ಮುಸು ಮುಸು ಅಳುತ್ತೇವೆ.
ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
ನಾವೇ ದುರಂತ ನಾಯಕಿಯರೆಂದು
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.
ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.
ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.
ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
ಅರಳುವುದೇ ಇಲ್ಲ ಉಷಾ...

-೨-
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಕೈಗೊಂದು ಕಾಲಿಗೊಂದು ಮಕ್ಕಳಾಗಿ
ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ
'ಅವನು' ಸಿಗುತ್ತಾನೆ.
ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ
ಅಂತ ರೋಷ ತಾಳುತ್ತೇವೆ.
ಆದರೆ ಮೇಲೆ ನಗುನಗುತ್ತಾ 'ಅವನ'
ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.
ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?
ನಾವು ಹುಡುಗಿಯರೇ ಹೀಗೆ...

                                       - ಪ್ರತಿಭಾ ನಂದಕುಮಾರ್

ಶನಿವಾರ, ಅಕ್ಟೋಬರ್ 30, 2010

ಪ್ರಾರಂಭಕ್ಕೆ ಮುನ್ನ....

 ಕನ್ನಡ ಕಾವ್ಯ ಪ್ರೇಮಿಗಳೆಲ್ಲರಿಗೂ ಆತ್ಮೀಯ ಸ್ವಾಗತ...

        ಯಾವುದೋ ಸಮಯದಲ್ಲಿ ನೆನಪಾಗಿಯೂ ನೆನಪಾಗದೆ ಕವನಗಳು ಕಾಡುವಾಗೆಲ್ಲ, ಬರಿ ಕವನಗಳೇ ತುಂಬಿರುವ, ಬೇಕೆಂದಾಗ ದೊರಕುವ ತಾಣವೊಂದಿದ್ದರೆ ಎಷ್ಟು ಚೆಂದ ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತಿದ್ದೆ. ಹೀಗಾಗಿ ಎಲ್ಲೇ ಉತ್ತಮ ಕವನಗಳು ಕಣ್ಣಿಗೆ ಬಿದ್ದರೂ, ಮನಸ್ಸಿಗೆ ಮುದ ನೀಡಿದರೂ ಬರೆದಿಟ್ಟುಕೊಳ್ಳುವ ಹುಚ್ಚು ಅಭ್ಯಾಸವನ್ನೂ ಬೆಳೆಸಿಕೊಂಡೆ. ಅವೆಲ್ಲವನ್ನೂ ಒಂದೆಡೆ ಸಂಗ್ರಹಿಸಿ, ಇತರರೂ ಓದುವಂತಾಗಬೇಕೆಂಬ  ಬಹುದಿನದ ಕನಸು ಇಂದು ನನಸಾಗಿದೆ..

         ಮನದ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು, ಹೋಲಿಕೆ, ಪ್ರತಿಮೆ, ಛಂದಸ್ಸುಗಳಿಂದ ಸಿಂಗರಿಸಿ ಕಾವ್ಯವನ್ನಾಗಿಸುವ ಪ್ರತಿ ಕವಿ ಹೃದಯದೆಡೆಗೂ ನನಗೇಕೊ ಮೊದಲಿಂದಲೂ ಬೆರಗು ತುಂಬಿದ ಅಸೂಯೆ..

      ಯಾವುದೋ ಹಳೆಯ ಸಂಬಂಧ, ಕಳೆದುಹೋದ ವ್ಯಕ್ತಿ, ಮಣ್ಣಾದ ಆಸೆಗಳು, ಕಾಡುವ ಕಹಿ-ಸಿಹಿ ನೆನಪುಗಳು, ಕಹಿ ನಿರಾಶೆ-ಹತಾಶೆಗಳು... ಇವುಗಳ ಜೊತೆಗೂ ಮತ್ತೆ ಚಿಗುರುವ, ಹೊಸ ಗಮ್ಯದೆಡೆಗೆ ಸಾಗುವ ಭರವಸೆ, ಛಲ, ಆತ್ಮವಿಶ್ವಾಸ... ಇವೆಲ್ಲದಕೂ ಮೌನ ಧ್ವನಿಯಾಗುವ ಕವನಗಳೆಂದರೆ ಎಂಥದ್ದೋ ಸೆಳೆತ..

       ಅರೆ! ಇದು  ನನ್ನ ಮನದ ಭಾವನೆಯೇ ಅಲ್ಲವೇ?! ಎಂದು ಅಚ್ಚರಿ ಮೂಡಿಸುತ್ತಲೇ ಹೃದಯಕ್ಕೆ ಆಪ್ತವಾಗುವ, ಏಕಾಂತದಲ್ಲಿ ಜೊತೆಯಾಗುವ, ಮನದ ತುಮುಲಗಳನ್ನು ಹೊರಹಾಕುವ ಪರಿಣಾಮಕಾರಿ ಮಾಧ್ಯಮವೂ ಆಗುವ ಕವನಗಳ ಭಾವತೀವ್ರತೆ, ದೊರಕುವ ಭಾವಾನಂದವನ್ನು ಅನುಭವಿಸಿಯೇ ತೀರಬೇಕು..

       ಕನ್ನಡ ಸಾಹಿತ್ಯವನ್ನೋದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ನನ್ನ ಓದಿಗೆ ನಿಲುಕಿದ ಹಳೆ, ಹೊಸ ಕವಿಗಳ ಕವನಗಳು , ನಾನು ಗುನುಗುತ್ತಿದ್ದ ಭಾವಗೀತೆಗಳು ನಿಮ್ಮನ್ನೂ ಕಾಡಲಿ ಎಂಬ ಉದ್ದೇಶದಿಂದ ಈ ಬ್ಲಾಗನ್ನು ಪ್ರಾರಂಭಿಸುತ್ತಿದ್ದೇನೆ. ಜೊತೆಗೆ, ಕನ್ನಡ ಕಾವ್ಯ ಕಂಪನ್ನು ಪಸರಿಸುವಲ್ಲಿ ನಾನೂ ಕೊಂಚ ಅಳಿಲು ಸೇವೆ ಮಾಡೋಣವೆಂದಿದ್ದೇನೆ. ಮರೆತ ಕವನವನ್ನು ನೆನಪಿಸುವ, ಸಿಕ್ಕವುಗಳನ್ನು ರವಾನಿಸುವ ಮೂಲಕ ನನ್ನ ಪ್ರಯತ್ನಕ್ಕೆ ನಿಮ್ಮ ಸಹಾಯವೂ ದೊರೆತರೆ ನಾನು ತುಂಬಾ ಋಣಿ..

      ಕೋರಿಕೆಯಿಷ್ಟೇ: ದಯವಿಟ್ಟು ಈ ಬ್ಲಾಗನ್ನು ನಿಮ್ಮ ಆತ್ಮಿಯರಿಗೂ ಪರಿಚಯಿಸಿ. ಇಲ್ಲಿನ ಕವಿತೆಗಳು ಯುವ  ಕವಿಗಳಿಗೆ ದಾರಿ ದೀವಿಗೆಯಾಗಲಿ, ಹೊಸ ಸ್ಪೂರ್ತಿ ತುಂಬಲಿ.. ಕಾವ್ಯಪ್ರೇಮಿಗಳ ಹಂಬಲ ತುಸುವಾದರೂ ತಣಿಯಲಿ..

      ಮತ್ತೇನಿಲ್ಲ,
     ನಿಮ್ಮೆಲ್ಲರನ್ನೂ ಕವಿತೆಗಳು ಮತ್ತೆ ಮತ್ತೆ ಕಾಡಲಿ!!

     ಅಕ್ಕರೆಯಿಂದ,
     ಕನಸು..