ಎಚ್.ಎಸ್.ವಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಎಚ್.ಎಸ್.ವಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜನವರಿ 10, 2011

ಒಂದು ಮಳೆಯ ಸಂಜೆ

ಮೋಡ ಕೂಡಿದ ಬಾನು; ವಿಪರೀತ ಧಗೆ ಕೂಡ.
ಒಮ್ಮೆಗೇ ಬೀಸುತ್ತಿದೆ ಮೋಡಗಾಳಿ
ಬಸ್ಸು ಹಿಡಿಯಲು ನಾನು ಸ್ಟಾಪಿನಲ್ಲಿದ್ದೇನೆ
ಪಕ್ಕದಲ್ಲೇ ಒಂದು ದೀಪ ಕಂಭ

ಎಲ್ಲಿದ್ದವೋ ಏನೊ ಒಮ್ಮೆಗೇ ಮುಕುರಿದವು
ದೀಪಕ್ಕೆ ನೂರಾರು ದೀಪದ ಹುಳು
ಮತ್ತೆ ಮರುಕ್ಷಣದಲ್ಲೆ ರೆಕ್ಕೆ ಕಳಚುದುರುತಿವೆ 
ರಸ್ತೆಯಗಲಕ್ಕೂನು ಮುಲು ಮುಲು ಮುಲು

ಮೊದಲೆ ಸಂಜೆ ಹೊತ್ತು, ಜತೆಗೆ ಮಳೆ ಬರುವಂಥ
ಸೂಚನೆಗೆ ಧಾವಂತ ವಾಹಕರಿಗೆ
ಭರ್ರನೋಡಿಸುತ್ತಾರೆ ರಿಕ್ಷ ಸ್ಕೂಟರು ಕಾರು
ಹಾರಿಬೀಳುವ ಹುಳದ ರಾಶಿ ಮೇಲೆ

ಕರುಳು ಹಿಂಡಿದ ಹಾಗೆ ನುಲಿಯುತಿದೆ. ಈ ಪಾಟಿ
ರಣಹಿಂಸೆ ಅನಿವಾರ್ಯವೆನ್ನುವಂತೆ
ಮಂದಿ ನೋಡಿಯು ನೋಡದಂತೆ ನಿಂತಿದ್ದಾರೆ
ತಾವೂನು ಕಂಭಗಳೆ ಎನ್ನುವಂತೆ.

ಹುಟ್ಟು ಸಾವಿನ ಲೀಲೆ ಕಣ್ಮುಂದೆ ನಡೆಯುತ್ತಿದೆ
ಕೊಲೆ, ಸಾವು ಎರಡು ಸಹ ಒಂದೆ ಎನಿಸಿ
ನಿರ್ಭಾವ ಯಂತ್ರಗಳ ಒಳಗೆ ಜನಸಮ್ಮರ್ದ
ತಮ್ಮೆಲ್ಲ ಭಾರ ಗಾಲಿಗೆ ದಾಟಿಸಿ.

ನಮ್ಮ ಬಸ್ಸೂ ಬಂತು. ಕೂತೆ ಸೀಟಿನ ಮೇಲೆ.
ಏನೊ ಚಿಟಿ ಚಿಟಿ ಸದ್ದು ಕಿವಿಯ ಒಳಗೆ
ಗಂಟಲನ್ನೊತ್ತುತ್ತಿದೆ ಜೀವ ಬಾಯಿಗೆ ಬಂದು
ವಿಲಿಗುಟ್ಟುವುದು ಪಾದ ಬಸ್ಸಿನೊಳಗೆ.

                                                - ಎಚ್.ಎಸ್. ವೆಂಕಟೇಶ ಮೂರ್ತಿ
                                               ' ನದೀತೀರದಲ್ಲಿ '

ಗುರುವಾರ, ನವೆಂಬರ್ 25, 2010

ವೃದ್ಧಿ


ರಾತ್ರಿಯ ಹೊತ್ತು. ಮಳೆ ಬರುತಿತ್ತು.
ಒಮ್ಮೆಗೆ ಹೋದವು ದೀಪ.
ಕೊಡೆ ಹಿಡಿದದ್ದ ಮರದಡಿಯಲ್ಲಿ
ಯಾರೋ ಹುಡುಗಿಯು ಪಾಪ -

ನಿಂತಿದ್ದಾಳೆ ಸುರಿಯುವ ಸೋನೆ
ನಿಂತೀತೆಂದು ಬೇಗ
ಮಿಂಚಿತು ಮಿಂಚು. ಮರದಡಿ ಕಂಡನು :
ಒಬ್ಬ ಹುಡುಗ ಆವಾಗ!

ಝಲ್ಲೆಂದಿತು ಎದೆ. ಯಾರೋ ಸುಮ್ಮಗೆ
ಕಡ್ಡಿಯ ಗೀರಿದ ಹಾಗೆ
ಜುಂಜುಂ ಎನ್ನುವ ಏನೋ ಒಂದು
ಎದೆಯಲಿ ತಿರುಗಿದ ಹಾಗೆ.

"ರಾತ್ರಿಯ ಮಳೆ ಇದು ನಿಲ್ಲುವುದಿಲ್ಲ" -
ಎಂದನು ಪಕ್ಕದ ಹುಡುಗ.
ಏನು ಹೇಳುವುದೋ ತಿಳಿಯದೆ ಹುಡುಗಿ
ಸುಮ್ಮನೆ ನೋಡಿದಳಾಗ!

ಕತ್ತಲಿನಲ್ಲಿ ಎತ್ತರವಾಗಿ
ಕಪ್ಪಗೆ ನಿಂತಿದ್ದಾನೆ
ನಿಲ್ಲದ ಕಾರಿನ ಹಾಯುವ ಬೆಳಕು
'ಹುಡುಗನು ಹೇಗಿದ್ದಾನೆ?'

"ಎಲ್ಲಿ ನಿಮ್ಮ ಮನೆ? ಲೇಟಾದರೆ
ಆಟೋಗಳು ಸಿಗುವುದು ಕಷ್ಟ"
ಬಸವನಗುಡಿ ಎಂದಷ್ಟೆ ಹೇಳಿದಳು
ಹೆಣ್ಣೆ ಹಾಗೆ - ಅಸ್ಪಷ್ಟ.

ಒಬ್ಬಳೆ ಹುಡುಗಿ, ಚಾಲಕ ಹೇಗೋ!
ರಿಕ್ಷ ಹತ್ತುವುದು ಹೇಗೆ?
ಜೊತೆಗಿವನಿದ್ದರೆ ಎಷ್ಟೋ ಧೈರ್ಯ!
ಕುಳಿತಳು ರಿಕ್ಷಾದೊಳಗೆ.

ಸುರಿಯುವ ಮಳೆಯಲಿ ಓಡುವ ರಿಕ್ಷಾ
ಆಟೋದವನೂ ಹುಡುಗ!
ಹೀಗೇ ಕೇಳಿದ: "ಮಳೆಗೆ ಸಿಕ್ಕಿದಿರ
ಮದುವೆ ಮುಗಿಸಿ ಬರುವಾಗ?"

ಸುಮ್ಮನೆ ಇಳಿದರು ಹುಡುಗ ಹುಡುಗಿ
ಬಸವನ ಗುಡಿಯ ಬಳಿ
ಮತ್ತೆ ಸಿಕ್ಕೋಣ ಎಂದರು ನಿಲ್ಲದೆ
ಸುರಿಯುವ ಮಳೆಯಲ್ಲಿ.

ಹೀಗೆ ಒಂದಿರುಳು, ಒಂದು ಮಳೆ, ಆ
ಹಾದಿಯ ಒಂದು ಮರ
ಎರಡೆರಡಾದವು ಶಾಶ್ವತವಾಗಿ
ಅವರು ಅಗಲಿದಾಗ!

                                             - ಎಚ್.ಎಸ್. ವೆಂಕಟೇಶ ಮೂರ್ತಿ
                                           ' ಮೂವತ್ತು ಮಳೆಗಾಲ ' 

ಬುಧವಾರ, ನವೆಂಬರ್ 24, 2010

ಹಗಲಿರುಳು ಕಾಡಿದೆ ನೋವು


ಹಗಲಿರುಳು ಕಾಡಿದೆ ನೋವು ಅಗಲಿರಲು ಹೀಗೆ ನಾವು
ನನ್ನ ನಿನ್ನ ನಡುವೆ ಒಂದು ಕಣಿವೆ ಬಿದ್ದಿದೆ
ಆಚೆ ಕೋಟೆ ಎದ್ದಿದೆ II

ಬಿರುಬಿಸಿಲ ಹಗಲಲ್ಲಿ ಪಹರೆ ರಣಹದ್ದುಗಳು
ಕಾರಿರುಳ ಮರೆಯಲ್ಲಿ ಗೂಢಚಾರಿ ನೆರಳುಗಳು
ಎದ್ದ ಕೋಡುಗಲ್ಲುಗಳಲಿ ಬಂದೂಕಿನ ಕಣ್ಣುಗಳು
ಪ್ರಿಯತಮೆ ನಿನ್ನನು ಹೇಗೆ ಸೇರಲಿ? II

ಬೀಸುತಿರುವ ಗಾಳಿಯಲ್ಲಿ ಪಿಸುಮಾತಿನ ಸಂಚುಗಳು
ಚೂಪಾದ ಮುಳ್ಳಿನ ಮುಖಕೆ ಹೂವಿನ ಮುಖವಾಡಗಳು
ಮುರಿದು ಬಿದ್ದ ಸೇತುವೆ ಹಲವು ತಲೆ ಹೊಡೆದ ಕಂಭದ ಸಾಲು
ಪ್ರಿಯತಮೆ ನಿನ್ನನು ಹೇಗೆ ಸೇರಲಿ? II

                                                   - ಎಚ್.ಎಸ್. ವೆಂಕಟೇಶ ಮೂರ್ತಿ
                                                   ' ಗೀತ ಸಂಪದ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Vaasanti.php
ನನ್ನ ಹಳೆಯ ಹಾಡುಗಳೇ


ನನ್ನ ಹಳೆಯ ಹಾಡುಗಳೆ, ನನ್ನೊಳಿರಲಿ ನಿಮ್ಮ ದಯಾ
ನಾನು ಒಂಟಿ ನನ್ನೊಡನಿದೆ
ಚಡಪಡಿಸುವ ಒಂದು ಹೃದಯಾ II

ನೋಡಬೇಡಿ ತಿವಿಯುವಂತೆ
ಬಿಡದಿರಿ ಬಿಸಿಯುಸಿರು
ಕರೆಯಬೇಡಿ ಕಣ್ಣನೀರು
ಅಳಿಸುವಂತೆ ಹೆಸರು.

ಇರುಳಿನಲ್ಲಿ ಸುರಿವ ಮಳೆ
ಆಳದಲ್ಲಿ ಮೊರೆವ ಹೊಳೆ
ಇಳಿಸಬೇಡಿ ದೋಣಿ ಹೊಳೆಗೆ
ಉಕ್ಕುತಿರುವ ಇರುಳಿನೊಳಗೆ II

ನೀಡಬೇಡಿ ಭರವಸೆಗಳ
ಸೀಳಿದೆ ನಾ ನಿಂತ ನೆಲ
ನುಡಿಸಬೇಡಿ ಮತ್ತೆ ಕೊಳಲು
ಚಿಮ್ಮುವಂತೆ ಒಳಗಿನಳಲು II

                                             - ಎಚ್.ಎಸ್. ವೆಂಕಟೇಶ ಮೂರ್ತಿ
                                               ' ಗೀತ ಸಂಪದ '