ಕುವೆಂಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುವೆಂಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜನವರಿ 16, 2014

ತನುವು ನಿನ್ನದು

ತನುವು ನಿನ್ನದು, ಮನವು ನಿನ್ನದು,
ಎನ್ನ ಜೀವನ ಧನವು ನಿನ್ನದು:
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೆ ನನ್ನದು!

ನೀನು ಹೊಳೆದರೆ ನಾನು ಹೊಳೆವೆನು;
ನೀನು ಬೆಳೆದರೆ ನಾನು ಬೆಳೆವೆನು;
ನನ್ನ ಹರಣದ ಹರಣ ನೀನು,
ನನ್ನ ಮರಣದ ಮರಣವು!

ನನ್ನ ಮನದಲಿ ನೀನೆ ಯುಕ್ತಿ,
ನನ್ನ ಹೃದಯದಿ ನೀನೆ ಭಕ್ತಿ,
ನೀನೆ ಮಾಯಾಮೋಹ ಶಕ್ತಿಯು,
ನನ್ನ ಜೀವನ ಮುಕ್ತಿಯು!

                 - ಕುವೆಂಪು
                    'ಅಗ್ನಿಹಂಸ'

ಭಾನುವಾರ, ಡಿಸೆಂಬರ್ 29, 2013

ರಾಷ್ಟ್ರಕವಿಗೆ ಜನ್ಮದಿನದ ಶುಭಾಶಯಗಳು..

ಜನ್ಮೋತ್ಸವ



ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ,
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿನ್ನೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!
ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವ ಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!

                          - ಕುವೆಂಪು
                           ' ಅಗ್ನಿಹಂಸ

ಮಂಗಳವಾರ, ಡಿಸೆಂಬರ್ 24, 2013

ಮುಚ್ಚುಮರೆಯಿಲ್ಲದೆಯೆ

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ, ಓ ಗುರುವೆ, ಅಂತರಾತ್ಮಾ:
ನಾಕವಿದೆ, ನರಕವಿದೆ; ಪಾಪವಿದೆ, ಪುಣ್ಯವಿದೆ;
ಸ್ವೀಕರಿಸು, ಓ ಗುರುವೆ, ಅಂತರಾತ್ಮಾ!

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ?
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೆ ನರಕವಾಗಿ?

ಸಾಂತ ರೀತಿಯ ನೆಮ್ಮಿ ಕದಡಿರುವುದೆನ್ನಾತ್ಮ;
ನಾಂತ ರೀತಿಯದೆಂತೊ, ಓ ಅನಂತಾ?
ನನ್ನ ನೀತಿಯ ಕರುಡಿನಿಂದೆನ್ನ ರಕ್ಷಿಸಯ್;
ನಿನ್ನ ನೀತಿಯ ಬೆಳಕಿನಾನಂದಕೊಯ್!

                            - ಕುವೆಂಪು
                              ' ಅಗ್ನಿಹಂಸ '

ಸೋಮವಾರ, ಡಿಸೆಂಬರ್ 23, 2013

ಈ ಸುಂದರ ಸಂಜೆ ಬರಿ ಬಂಜೆ

ಈ ಸುಂದರ ಸಂಜೆ- 
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

ಹೊಲಗಳ ಸಿರಿಸೊಂಪು
ಕಣ್ಗಿಂಪು!
ಚೆಂಬಿಸಿಲಿನ ಶಾಂತಿ
ನಗೆ ಕಾಂತಿ!

ಕಣಿವೆಯ ತೋಪಿನಲಿ
ಪಸುರಿನಲಿ
ಕೋಗಿಲೆಯುಲಿಯುತಿದೆ;
ನಲಿಯುತಿದೆ!

ನೀಲಿಯ ದೂರದಲಿ
ಗಿರಿಪಂಕ್ತಿ
ಗಗನದ ತೀರದಲಿ
ದಿಗ್ದಂತಿ!

ದೆಸೆ ಏಳೂ ಸೊನ್ನೆ,
ಓ ರನ್ನೆ;
ಎಂಟನೆಯದು ಮಾತ್ರ
ಮಧುಪಾತ್ರ!

ಮನೆಯಿದೊ 'ಉದಯರವಿ'!
ವಿರಹಿ ಕವಿ!
ಪಶ್ಚಿಮದಸ್ತ ಛವಿ
ಪಾಳು ಗವಿ!

ಈ ಸುಂದರ ಸಂಜೆ-
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

                        - ಕುವೆಂಪು
                            ' ಪ್ರೇಮ ಕಾಶ್ಮೀರ '

ಸೋಮವಾರ, ಡಿಸೆಂಬರ್ 16, 2013

ಅನಾದಿಗಾನ  


 ಅನಾದಿಗಾನವು ನಾನು - ಹೇ
 ಅನಂತಗಾಯಕನೇ - ನಿನ್ನ ll ಪ ll 

ರಚಿಸಿದೈ ಈ ಗಾನಮಾಧುರ್ಯಕಾಗಿ ನೀಂ
ವಿಶ್ವವೆಂಬುವ ಮಹಾ ನಿನ್ನ ವೀಣೆಯನು;
ನಿನ್ನ ಸ್ವರ್ಶನಕೆ ಆದಿಯಲಿ ಆ ಜಡವೀಣೆ
ಹಾಡತೊಡಗಿತು ನನ್ನ ಜೀವಗಾನವನು! 

ಈ ಗಾನವನು ಕೇಳಿ ರವಿಚಂದ್ರತಾರಾಳಿ
ರಾಸಲೀಲೆಗೆ ತೊಡಗಿದವು ಹರ್ಷ ತಾಳಿ!
ಕಾಲದೇಶಾಕಾಶ ಸತ್ಯ ಮಿಥ್ಯೆಗಳೆಲ್ಲ
ಆನಂದ ಸ್ಫೂರ್ತಿಯಲಿ ಮೈತಿಳಿದುವೆಲ್ಲ!

ಗಾನವಾನಂದದಲಿ ಗಾಯಕನ ರಮಿಸುತಿದೆ;
ಚಿರಮಧುರ ನೂತ್ನವಾ ಗೀತರಸಪಾನ;
ಗಾನಗಾಯಕರೊಲ್ಮೆ ತೀರ್ಥದಲಿ ಲಭಿಸುತಿದೆ
ಕಲ್ಪಬುದ್ಭುದಗಳಿಗೆ ಸಂಸಾರಸ್ನಾನ!  

 
                                            - ಕುವೆಂಪು
                                              ' ಅಗ್ನಿಹಂಸ '

ಬುಧವಾರ, ಜೂನ್ 8, 2011

ಬಾ ಬೇಗನೆ!

ಬೇಸರಿನ ಸಂಜೆಯಿದು; ಬೇಕೆನಗೆ ನಿನ್ನ ಜೊತೆ;
ಎಲ್ಲಿ ಹೋದೆಯೊ, ಇನಿಯ? ಬಾ ಬೇಗನೆ.
ಮಬ್ಬು ಕವಿದಿದೆ ಮನಕೆ; ಮಂಕು ಕವಿದಿದೆ ಮನಕೆ
ವಿರಹದೆದೆ ಕರೆಯುತಿದೆ: ಬಾ ಬೇಗನೆ!

ಮುಳುಗಿದುದು ರವಿ; ಓಕುಳಿಯ ಚೆಲ್ಲಿದುದು ಸಂಧ್ಯೆ;
ಮತ್ತೆಯೊಯ್ಯನೆ ಬೂದಿಯಾಯ್ತು ಕಾಂತಿ.
ಕತ್ತಲೆಯ ಕರಿನೆಳಲೊಡನೆ ಮೂಡಿದುವು ತಾರೆ;
ಹಬ್ಬಿಹುದು ಮರುಭೂಮಿಯಂತೆ ಶಾಂತಿ!

ಮನೆಯ ಬಾಗಿಲೊಳೊಬ್ಬಳೆಯೆ ಕುಳಿತು ಹೊಸ್ತಿಲಲಿ
ಹಾದಿ ನೋಡುತಲಿಹೆನು, ಬಾ ಬೇಗನೆ.
ಹೃದಯ ಶೂನ್ಯತೆಯ ಪರಿಹರಿಸಿ ಪೂರ್ಣತೆಯಿತ್ತು
ಮುದಗೊಳಿಸು, ಹೃದಯೇಶ, ಬಾ ಬೇಗನೆ.

                            - ಕುವೆಂಪು
                            ' ಪ್ರೇಮ ಕಾಶ್ಮೀರ '

ತೆರೆದಿದೆ ಮನೆ, ಓ, ಬಾ ಅತಿಥಿ !

ತೆರೆದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸಗಾಳಿಯ ಹೊಸ ಬಾಳನು ತಾ, ಅತಿಥಿ!

ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರುಟಿದ ಬಳ್ಳಿ!
ದೈನಂದಿನದತಿಪರಿಚಯ ಮಂದತೆಯನು ತಳ್ಳಿ
ಬಾ, ಚಿರ ನೂತನತೆಯ ಕಿಡಿ ಚೆಲ್ಲಿ,
ಓ ನವಜೀವನ ಅತಿಥಿ!

ಆವ ರೂಪದಲಿ ಬಂದರು ಸರಿಯೆ
ಬಾ ಅತಿಥಿ!
ಆವ ವೇಷದಲಿ ನಿಂದರು ಸರಿಯೆ
ನೀನತಿಥಿ!
ನೇಸರುದಯದೊಲು  ಬಹೆಯ?
ಬಾ ಅತಿಥಿ!
ಇಷ್ಟ ಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!
ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ, ಅತಿಥಿ!

ಇಂತಾದರೂ ಬಾ; ಅಂತಾದರೂ ಬಾ;
ಎಂತಾದರು ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ ಅತಿಥಿ!

ಹಾಡುವ ಹಕ್ಕಿಯ ಗೆಲುವಾಗಿ,
ಬಾ ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ ಅತಿಥಿ!
ಕಡಲಾಗಿ,
             ಬಾನಾಗಿ,
                             ಗಿರಿಯಾಗಿ,
                                     ಕಾನಾಗಿ,
ಚಿರನವಚೇತನ ಝರಿಯಾಗಿ;
ಬೇಸರವನು ಕೊಚ್ಚುತೆ ಬಾ, ಅತಿಥಿ!
ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ,
ಮನಮಂದಿರದಲಿ ಮಧುರತಿಯಾರತಿಯೆತ್ತುತೆ  
ಬಾ, ಅತಿಥಿ!
ತೆರೆದಿದೆ ಮನೆ, ಓ  ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವನ ತಾ, ಅತಿಥಿ!

                                    - ಕುವೆಂಪು
                                        ' ಪ್ರೇಮ ಕಾಶ್ಮೀರ '

ಬುಧವಾರ, ಮೇ 11, 2011

ವೀಣಾಗಾನ

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
 ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.

ತಂತಿಯಿಂಚರದಿ ವಿಪಂಚಿ
ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ
ಪ್ರಾಣ ಪುಳಕಿಸೆ.

                    - ಕುವೆಂಪು
                     ' ಪ್ರೇಮ ಕಾಶ್ಮೀರ '
ನೀನೆನ್ನ ಬಳಿಯಿರಲು

ನೀನೆನ್ನ ಬಳಿಯಿರಲು ಜಗ ತುಂಬಿ ತುಳುಕುವುದು;
ನೀನು ಹೋದರೆ ದೂರ ಶೂನ್ಯವಾಗುವುದು.
ನೀನೆನ್ನ ಜೀವನದ ಸರ್ವಸ್ವವಾಗಿರುವೆ;
ಓ ನನ್ನ ಪ್ರಿಯ ಮೂರ್ತಿ, ಎದೆಗೆ ಬಾರೈ.

ಬಿಸಿಲುರಿವ ಮರುಭೂಮಿಯಂದದಲಿ ನನ್ನೆದೆಯು
ವಿರಹದಿಂದುರಿದುರಿದು ಯೋಗಕೆಳಸುವುದು;
ಮಳೆಗರೆದು, ತಂಪಿತ್ತು, ಪರಿಹರಿಸಿ ಬೇಗೆಯನು,
ಪ್ರೇಮತೋಯದ ಮೂರ್ತಿ, ಎದೆಗೆ ಬಾರೈ.

ಅಗಲಿಕೆಯ ಸಹಿಸಲಾರೆನು ನಾನು; ನಿನ್ನನ್ನೆ
ಹಗಲಿರುಳು ನೆನೆದು ಬಗೆ ಕುದಿದು ಬೇಯುವುದು.
ಓ ನನ್ನ ಆನಂದ ಸತ್ಯಸುಂದರ ಮೂರ್ತಿ,
ಶೂನ್ಯವನು ಪೂರ್ಣಗೈ! ಎದೆಗೆ ಬಾರೈ!

                                      - ಕುವೆಂಪು
                                    ' ಪ್ರೇಮ ಕಾಶ್ಮೀರ '
ಹೂವಿನ ಕೋರಿಕೆ

ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ,
ಅಧರ ಚುಂಬನದಿಂದೆ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೆ, ನಿನಗೆ?
ವಂಚನೆಯದಿನಿತಿಲ್ಲ; ಬಾ, ಬೇಗ ಬಾ!

ಇರುಳೆಲ್ಲ ತಪಗೈದು ಎದೆಯ ಹೊಂಬಟ್ಟಲಲಿ,
ಅರುಣನುದಯಕೆ ನೀನು ಬರುವೆಯೆಂದು,
ಪ್ರಣಯ ರಸವನೆ ಎರೆದು, ಕಾದಿಹೆನು ತುಟಿ ತೆರೆದು,
ಪಾನಗೈ, ಓ ನನ್ನ ಭ್ರಮರ ಬಂಧು!

                                    - ಕುವೆಂಪು
                                   ' ಪ್ರೇಮ ಕಾಶ್ಮೀರ '

ಶುಕ್ರವಾರ, ನವೆಂಬರ್ 12, 2010

'ಜೇನಾಗುವಾ' - ಕುವೆಂಪುರವರ ವಿಶಿಷ್ಟ ಕವನ ಸಂಕಲನ..

   'ರಸಿಕ ಕವಿ' ಎಂದೇ ಪ್ರಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಸತಿಯ ಕುರಿತಾಗಿ ಬರೆದ ಕವನಗಳು ಎಲ್ಲರಿಗೂ ಚಿರಪರಿಚಿತ. ಆದರೆ ಕುವೆಂಪುರವರು ತಮ್ಮ ಪ್ರಿಯ ಪತ್ನಿ ಹೇಮಾವತಿಯಿಂದ ಸ್ಪೂರ್ತಿಗೊಂಡು ಒಂದು ಕಾವ್ಯ ಸಂಕಲನವನ್ನೇ ಬರೆದಿರುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ! ಅವರ 'ಜೇನಾಗುವಾ' ಕವನ ಸಂಕಲನದಲ್ಲಿ ಅವರು ತಮ್ಮ ಮಡದಿಯ ಪ್ರೀತಿಯಿಂದ ರೋಮಾಂಚಿತರಾಗಿ ಬರೆದ ಸಾಲುಗಳಿವೆ ; ರಸಿಕ ಬಣ್ಣನೆಗಳಿವೆ; ವಿರಹ ಗೀತೆಗಳಿವೆ.. ಜೊತೆಗೆ, ತಮ್ಮ ಮುದ್ದಿನ ಮಗುವಿನ ತುಂಟಾಟಗಳ ಬಗೆಗೆ ಬರೆದ ಕವಿತೆಗಳೂ ಇವೆ.

   ಇಲ್ಲಿ, ಅದೇ ಸಂಕಲನದಿಂದಾಯ್ದ ಕೆಲವು ಕವನಗಳಿವೆ. ಚೆಲುವಿಗಿಂತ ಒಲವೆ ಮಿಗಿಲೆಂದು ಹೇಳುವ ಅದ್ಭುತ ಕವಿತೆಯಿದೆ. ಮಲಗಿರುವ ತನ್ನಾಕೆಯನೆಬ್ಬಿಸಲು ಬಂದ ಸೂರ್ಯನೆಡೆಗೆ ಹುಸಿ ಕೋಪ ತೋರಿ ಬರೆದಿರುವ ಕವಿತೆಯಂತೂ ಸೊಗಸಾಗಿದೆ.

  ಓದಿ, ಪ್ರತಿಕ್ರಿಯಿಸಿ..

  ಅಕ್ಕರೆಯಿಂದ,
  ಕನಸು..

ಗುರುವಾರ, ನವೆಂಬರ್ 11, 2010

ರವಿಗೆ ಕವಿಯ ಸರಸ ನಿಂದೆ


ಅದೊ ಬಂದನೊಂದಿನಿತು ತಡವಿಲ್ಲ! ಓ ರವಿ,
ಕೆಲಸವಲ್ಲದೆ ಬೇರೆ ಕೆಲಸವಿಲ್ಲವೆ ನಿನಗೆ?
ಅಥವಾ ಹಿಡಿದಿದೆಯೆ ಕರ್ತವ್ಯದ ಪಿಶಾಚಿ?
ಸ್ವಾತಂತ್ರವಿಲ್ಲದಾ ಯಂತ್ರ ಜೀವವ ಸುಡಲಿ!
ನೀನು ಬಾಹಿರನಲಾ ಸೋಮಾರಿತನವೆಂಬ
ರಸಿಕತೆಗೆ! - ರಸಿಕತೆಯೇ? ನಿನಗೆ ರಸಿಕತೆಯೆಲ್ಲಿ,
ಶ್ರಮಜೀವಿ? - ನಳಿ ತೋಳ್ ಸೆರೆಯೊಳಪ್ಪಿ, ತಡಮಾಡಿ
ಕಳುಹುವಾ ನಲ್ಲೆಯಿಲ್ಲವೆ ನಿನಗೆ? ಅಥವಾ
ಬರಿ ಬಣಗು ಬ್ರಹ್ಮಚಾರಿಯೊ ನೀನು? ಹಾಗಿದ್ದರೆ
ಬುದ್ಧಿ ಹೇಳುವೆ ಕೇಳು : ಬೇಗನೆ ಮದುವೆಯಾಗು!
ಉಷೆಯ ಊರೊಳು ಇನಿತು ತಳುವಿ ಬರಬಹುದಂತೆ! -

ಕವಿ, ಮೊದಲು, (ಮದುವೆಯಾಗುವ ಮೊದಲು), ನಿನ್ನನಾ
ಗಿರಿಶಿಖರದಲಿ ಇದಿರುಗೊಳುತಿದ್ದನ್ ; ಇಂದೇಕೆ
ತಳುವಿದನು? ಎಂದು ಕಿಟಕಿಯೊಳಿಣಿಕಿ ನೋಡುವೆಯಾ
ಕೋಣೆಯನು? ! ನಿನ್ನ ನಾಣಿಲಿತನಕೆ ಬೆಂಕಿ!
ಆವಾವ ವೇಷದಲಿ, ಆವಾವ ರೂಪದಲಿ,
ಆರಾರು ಆರಾರೊಡನೆ ಎಂತು ಎಂತಿಹರೆಂದು
ಆವುದನು ಲೆಕ್ಕಿಸದೆ ಕಂಡಿಯಲಿ ಬಂದಿಣಿಕಿ  
ನೋಡುವರೆ? - ನೋಡುವರೆ ನಿನ್ನಂಥ ದೊಡ್ಡವರು?
ನಿನ್ನ ಹಿರಿಮೆಗಿದು ತಕ್ಕುದೆ ಹೇಳು! - ಹೋಗಾಚೆ!
ಮುಚ್ಚಿದರವಿಂದದಲರನು ಬಿಚ್ಚು. ನಾನೊಲ್ಲೆ ;
ನಮ್ಮಪ್ಪುಗೆಯ ತಾವರೆಯ ಸಿರಿಯ ತೋಳ್ಸೆರೆಯ
ಮೊಗ್ಗನಲರಿಸಲೊಲ್ಲೆ! - ನಿದ್ದೆಯಿಲ್ಲದ ನಲ್ಲೆ
ಬಳಲಿ ಮಲಗಿಹಳೋ! ಎಚ್ಚರಿಸದಿರ್ ; ಎಚ್ಚರಿಕೆ!
ಮತ್ತೆಲ್ಲಿಯಾದರೂ ನನ್ನ ನಿನ್ನಯ ನೇಹ
ಕೆಟ್ಟೀತು! ಬಿರುಕು ಬಿಟ್ಟೀತು! ಸುಟ್ಟುರಿದೀತು!...

ಶುದ್ಧ ಭಂಡನೋ ನೀನು! ಎಷ್ಟು ಹೇಳಿದರೇನು?
ಮತ್ತೆ ಮತ್ತೆಯು ಹೊಳಪನುಕ್ಕಿಸಿ ನಗುವೆಯೇನು?

                                                         - ಕುವೆಂಪು
                                                            ' ಜೇನಾಗುವಾ '

'ಬಾಳ್ವುದು!'

ಬಾಳ ಬೇವು ಬೆಲ್ಲವಹುದೇ
ನಾವು ಮುನಿದ ಮಾತ್ರದಿ?
ಅಳೆಯಲಹುದೆ, ತೂಗಲಹುದೆ,
ಕಟ್ಟಲಹುದೆ ಬಹುಜೀವರ
ಜಗಜ್ಜೀವ ನಾಟಕವನ್ನು
ನಮ್ಮ ಸುಖದ ಸೂತ್ರದಿ!

ಔಷಧಿಯಹುದೆ ರುಜೆಗೆ ರುಜೆ?
ಮುನಿಸು ಮದ್ದೆ ನೋವಿಗೆ?
ಎಲ್ಲದಕೂ ಇಹುದು ಎಲ್ಲೆ ;
ಕವಿಯ ನುಡಿಯ ಕೇಳು, ನಲ್ಲೆ :
ಒಲುಮೆಯೊಂದೆ ಮಂತ್ರ, ಬಲ್ಲೆ,
ನೋವಿನ ಹೆಡೆಹಾವಿಗೆ!

ದುಃಖ ಸುಖದ ದಡದ ನಡುವೆ
ಹೊಳೆಹರಿವುದು ಬಾಳಿದು.
ಕುಳಿತು ಚೆಲುವಿನೋಡದಲ್ಲಿ,
ಒಲುಮೆ ಪಟವ ಬಿಚ್ಚಿ, ತಳ್ಳಿ,
ಕಳೆಯ ತೆಂಕಣೆಲರಿನಲ್ಲಿ
ಮುಂಬರಿವುದೆ  - 'ಬಾಳ್ವುದು!'

                          - ಕುವೆಂಪು
                              ' ಜೇನಾಗುವಾ '
ಪ್ರಿಯ ಸತಿಗೆ

ಸತಿ ಎಂಬ ಮಮತೆಯಲಿ ನಾ ನುತಿಸುವವನಲ್ಲ ;
ಮೇಣಲ್ಲವಿದು ಪತಿಯ ಮೋಹದ ಅತಿಶಯೋಕ್ತಿ.
ಅನುಭವವನಾಡುವೆನು : ನೀ ದೇವತಾ ವ್ಯಕ್ತಿ.
ಕಣ್ಣು ಕೊರೈಸುವಂತಹ ಮಿಂಚಿನಂತಲ್ಲ ;
ಧ್ರುವತಾರೆಯಂತೆ! ನಿಸ್ವಾರ್ಥೆ ಹೇ ಮಾ ಸತಿಯೇ,
ಧೀರೆ, ಸಂಯಮ ಶೀಲೆ, ರೂಪದಲಿ ಗುಣದಲ್ಲಿ
ನೀನೆ ದೇವತೆಯೆನಗೆ ; ತ್ಯಾಗ ಭೋಗಗಳಲ್ಲಿ
ನೀನೆ ದಿವ್ಯಾದರ್ಶವೆನಗೆ, ಓ ಪ್ರಿಯರತಿಯೆ!

ನೀನು ಮಾವನ ಮಗಳೇ? ಗುರುಕರುಣೆಯಿತ್ತ ಕೃಪೆ :
ಅವನ ಆಶೀರ್ವಚನವೀ ಚೆಲ್ವು ರೂಪದಿಂ
ಬಂದೆನ್ನನೆತ್ತುತಿದೆ ಕತ್ತಲೆಯ ಕೂಪದಿಂ
ಬೆಳಕಿನೆತ್ತರಕೆ - ಎಂದೆದೆಮುಟ್ಟಿ ನಂಬಿದಪೆ!

ದೇವಿ, ಪ್ರತಿಭೆಗೆ ನೀನೆ ಭಾವವಿದ್ಯುಚ್ಚಕ್ತಿ
ಕಲೆಗೆ ವಿದ್ಯಾಶಕ್ತಿ ; ಪ್ರಾಣಕೆ ಪ್ರೇಮಶಕ್ತಿ!

                                            - ಕುವೆಂಪು
                                             ' ಜೇನಾಗುವಾ '
ವಿರಹ ಚಿತೆ

ಕಣ್ಣಿನಲ್ಲಿಯೆ ಬೀಳುಕೊಟ್ಟು
ಮನಸಿನಲ್ಲಿಯೆ ಮುತ್ತು ಕೊಟ್ಟು
ತವರು ಮನೆಯೊಳಗವಳ ಬಿಟ್ಟು
ಮನಸಿಲ್ಲದ ಮನಸಿನಿಂದೆ
ಒಬ್ಬನೆ ಹಿಂತಿರುಗಿ ಬಂದೆ.
ಮರುಭೂಮಿಯ ಗಾಳಿಯಂತೆ
ಸುಯ್ದಲೆದಲೆದೂ
ಬಾಯಾರಿತು ವಿರಹ ಚಿಂತೆ
ದಾರಿಯುದ್ದಕೂ.

ನೆನಹಿನುರಿಯ ಬಯಲಿನಲ್ಲಿ
ಸಾಗಿತಿರುಳು ರೈಲಿನಲ್ಲಿ,
ನಿದ್ದೆಯೆಲ್ಲ ಬರಿಯ ಕನಸು
ಎದೆಯೊಳೇನೊ ಕಿಚ್ಚು, ಕಿನಿಸು.
ಯಾರ ಮೇಲೊ? ಏಕೊ? ಮುನಿಸು!
ಏನೊ ಇಲ್ಲ, ಏನೊ ಬೇಕು,
ಎಂಬ ಬಯಕೆ, ಕುದಿವು, ರೋಕು!
ಇಂತು ಸಾಗಿತು ಶನಿ ಇರುಳು ;
ಅರಿಲ ಬೆಳಕು ಬಾಡಿತು ;
ಚಿತೆಯಾಯಿತು ಕವಿಯ ಕರುಳು ;
ಹಗಲೋ ಹೆಣವೊ ಮೂಡಿತು!

ಪ್ರೇತದಂತೆ ನಡೆದೆ ಕೊನೆಗೆ,
'ಉದಯ ರವಿ'ಗೆ ನಮ್ಮ ಮನೆಗೆ.
ಮನೆಯೆ? ಅಯ್ಯೊ ಬರಿಯ ಸುಳ್ಳು :
ಗೋಡೆ ಸುತ್ತಿದೊಂದು ಟೊಳ್ಳು!
ಕಿಟಕಿ, ಬಾಗಿಲು, ಕಲ್ಲು, ಮಣ್ಣು ;
ಬುರುಡೆಯೆಲುಬಿಗೆ ತೂತುಗಣ್ಣು!
ಪ್ರೇಮ ಕುಣಪವಾಗಿ ನಿಂತೆ
ಚಿತೆಯಾಗಲ್ ವಿರಹ ಚಿಂತೆ!

ನಿನ್ನ ನೆನಪೊ ಮನೆ ತುಂಬಿದೆ ;
ಮನೆಯೆ ಮಾತ್ರ ನೀನಿಲ್ಲದೆ
ಸರ್ಪಶೂನ್ಯವಾಗಿದೆ :
ರಾಮಚಂದ್ರ, ಇಂತೆ ಕುದಿದೆ :
ಸೀತೆ ಕಳೆಯಲತ್ತು ಕರೆದೆ ;
ತಿಳಿಯಿತಿಂದು ನಿನ್ನೆದೆ!

ಹೇಮಲತೆ, ಪ್ರೇಮಲಕ್ಷ್ಮಿ,
ನನ್ನ ಪಂಚ ಪ್ರಾಣಲಕ್ಷ್ಮಿ,
ಗಾಳಿ ನೀನೆ ; ಬೆಳಕು ನೀನೆ ;
ಉಲ್ಲಾಸದ ಉಸಿರು ನೀನೆ ;
ನನಗೆ ಮನೆಗೆ ಎಲ್ಲ ನೀನೆ!
ನೀನೆ ಕವಿಗೆ ಹೃದಯ, ಭಾವ,
ಮೇಣಾತ್ಮಕೆ ರಸದ ಜೀವ!

ಗೃಹಿಣಿ, ನೀನೆ ಗೃಹದ ದೇವಿ ;
ನೀನು ದೂರ ಹೋದರೆ
ಮಸಣದೊಂದು ಹಾಳುಬಾವಿ
ಗೃಹವಿದು! ' ಮನೆ' ಎಂಬರೆ?

ತಪ್ಪಲು ಗೃಹಲಕ್ಷ್ಮಿಯ ಜೊತೆ
ಒಪ್ಪಿದ ಮನೆಯೆ ವಿರಹ ಚಿತೆ!
ಹೇಮಾಂಗಿನಿ, ಪ್ರೇಮಸತಿ,
ಕಾತರನತಿ ನಿನ್ನ ಪತಿ!
ಮರುಭೂಮಿಗೆ ಅಮೃತಧಾರೆ,
ಕಗ್ಗತ್ತಲೆಗೆಸೆವ ತಾರೆ,
ನನ್ನ ಹೃದಯ ತಾಪವಾರೆ
'ಉದಯ ರವಿ'ಗೆ ಬೇಗ ಬಾರೆ!
ಏದುತ್ತಿದೆ ಪ್ರಾಣಪಕ್ಷಿ
ವಿರಹಾತಪ ತಾಪಕೆ!
ಆಶೀರ್ವಾದವಾಗಿ ಬಾ
ವಿಯೋಗದೀ ಶಾಪಕೆ!

                               - ಕುವೆಂಪು
                                 ' ಜೇನಾಗುವಾ '

ನನ್ನವಳು

ಹೂಗೆಂಪಿನಂಚಿನಾ
          ಗಿಳಿಹಸುರು ಸೀರೆ
ತುಂಬು ಮೆಯ್ಯನು ತುಂಬಿ
          ಕಣ್ಗೊಸಗೆ ಬೀರೆ ;
ಬಿಲ್ಲೆದೆಯ ಬಾಗಿಂದೆ
                ಬಾಚು ಮುಡಿ ಸೋರೆ,
ಹೆಣೆ ಜಡೆಯ ಕೈಗಳಲಿ
             ಪೊನ್ಮಿಂಚು ತೋರೆ ;
ಮುದ್ದು ಮೊಗದಲಿ ಮಿನುಗೆ
         ಮೂಗಿನಾ ತಾರೆ,
ಚೆಲ್ವು ಚೆನ್ಜೇನ್ಗೆಳಸಿ
           ಬಾಳು ಬಾಯಾರೆ ;
ಎದೆ ನಲಿಯೆ ಮೆರೆದಳಾ
               ಹದಿನಾರು ಚೈತ್ರದಾ
ನನ್ನವಳು ನೀರೆ!

ನೋಡಿದೆನು ಕಣ್ ತಣಿಯೆ :
ಕಣ್ ದಣಿಯಲಿಲ್ಲ.
ಓ ಎನ್ನ ಪೆಣ್ ಮಣಿಯೆ,
 ನಿನಗೆಣೆಯೆ ಇಲ್ಲ! -
ರವಿಯುದಯ? ಶಶಿಯುದಯ?
 ಹೂದಿಂಗಳುದಯ?
ಕೃತಿಯ ಮಧುರಸದುದಯ? -
      ನೀನವಕೆ ಹೃದಯ!
ಕಲೆ, ಕೀರ್ತಿ, ಸಿರಿಯೆಲ್ಲ
ನೀನಿಲ್ಲದಿನ್ನಿಲ್ಲ ;
   ನೀನೆ ನನಗೆಲ್ಲ!
ಕಣ್ಗೆ ಸುಂದರಿಯಾಗಿ,
ಚೆಲ್ವು ಒಳ್ಪುಗಳೆರಡು
        ಬೆರೆಯುತೊಂದಾಗಿ
ಬಂದಿರುವೆ ನೀನೆನಗೆ
         ಪ್ರೇಮಸತಿಯಾಗಿ :
ನಿಂದಿರುವೆ ಕಣ್ ಮುಂದೆ
        ಹೇಮಲತೆಯಾಗಿ!

                              - ಕುವೆಂಪು
                                   ' ಜೇನಾಗುವಾ '
ಶೂನ್ಯ ಶೋಧನೆ

ನೀನು ತವರಿಗೆ ಹೋದೆ ;
ನಾನೊಬ್ಬನಾದೆ :
ಹೆಬ್ಬುಲಿಯ ಬಾಯಂತೆ
ಘೋರವಾಯ್ತು ;
ತಬ್ಬಲಿಯ ಕೈಯಂತೆ
ಶೂನ್ಯವಾಯ್ತು!

ನಿನ್ನ ಬಿಟ್ಟಿರಲಾರೆ
ನನ್ನೊಲುಮೆ ನೀರೆ :
ನೀರೊಳಗೆ ಬಿದ್ದಂತೆ
ಉಸಿರು ಕಟ್ಟಿ
ಪ್ರಾಣ ತುಡಿವುದು, ಕಾಂತೆ,
ಎದೆಯ ಮೆಟ್ಟಿ!

ಹಗಲು ಇರುಳೂ ನಿನ್ನ
ನೆನೆನೆನೆದು ನನ್ನ
ಪ್ರೇಮಶೀಲಾತ್ಮ ಶಿಶು
ರೋದಿಸುತಿದೆ ;
ಕೈಚಾಚಿ ಶೂನ್ಯವನೆ
ಶೋಧಿಸುತಿದೆ!

          - ಕುವೆಂಪು
            ' ಜೇನಾಗುವಾ '

ಬರಿಯ ಮೆಯ್ಯ ಹೆಮ್ಮೆ ತಪ್ಪು!

ಕಣ್ಣಿಗಲ್ಲ ಎದೆಗೆ ಚೆಲುವು,
ತರಳೆ, ತಿಳಿಯದೆ?
ಅಳಿಯಲೊಡನೆ ಹೃದಯದೊಲವು
ಚೆಲುವು ಉಳಿವುದೆ?
ಒಡಲ ಸೊಂಪು, ನುಡಿಯ ಇಂಪು,
ಕಣ್ಣು, ಮೂಗು, ಗಲ್ಲ, ಕೆನ್ನೆ,
ಒಡವೆ, ಸೀರೆ ಎಲ್ಲ, ನೀರೆ,
ಒಲುಮೆಯಿಲ್ಲದಿರಲು ಬರಿಯ
ಸಿಪ್ಪೆ! ಹೊಳ್ಳು! ಸಪ್ಪೆ! ಸೊನ್ನೆ!

ಅಡಿಯ ಸಿರಿಗೆ ಹೊನ್ನ ಗೆಜ್ಜೆ
ಸಿಂಗಾರದ ಕೃತಿ ;
ನುಡಿಯ ಸಿರಿಗೆ ಬಗೆಯ ಬಿಜ್ಜೆ
ಕಲೆಯ ಸಂಸ್ಕೃತಿ.
ಮೆಯ್ಯ ಸಿರಿಯ ಬಹಳ ನೆಚ್ಚಿ
ಎದೆಯ ಮರೆಯಬೇಡ, ಹುಚ್ಚಿ!
ಚೆಲುವನೆಲ್ಲ ಕದಿಯೆ ಮುಪ್ಪು
ಒಲುಮೆಯೊಂದೆ ಬದುಕಿಗುಪ್ಪು!
ಬರಿಯ ಮೆಯ್ಯ ಹೆಮ್ಮೆ ,- ತಪ್ಪು!

                      - ಕುವೆಂಪು
                         ' ಜೇನಾಗುವಾ '


ಲಲ್ಲೆ

ನನ್ನ ಚಿನ್ನದ ಚೆಲುವೆ,
ನನ್ನ ಹೂವಿನ ಒಲವೆ,
ನನ್ನ ಪುಣ್ಯದ ಫಲವೆ,
ದೂರವೇತಕೆ ನಿಲುವೆ?
        ಹತ್ತಿರಕೆ ಬಾ!

ರತಿಪತಿಯ ಹಣೆಗಣ್ಣೆ,
ರಸದ ಬಾಳೆಯ ಹಣ್ಣೆ,
ಹಾಲು ಜೇನಿನ ಬೆಣ್ಣೆ,
ಮಲೆಯ ಮೋಹದ ಹೆಣ್ಣೆ,
        ತೋಳ್ಸೆರೆಗೆ ಬಾ!

ತುಟಿಗೆ ತುಟಿ ಮುತ್ತಿಟ್ಟು,
ಎದೆಗೆ ಎದೆಯೊತ್ತಿಟ್ಟು,
ಆತ್ಮಕಾತ್ಮದ ಗುಟ್ಟು
ಹೊಳೆವಂತೆ ಬಿಗಿ ಕಟ್ಟು :
ಬಾ, ಬೇಗಬಾ!

                     - ಕುವೆಂಪು
                         ' ಜೇನಾಗುವಾ '

ಹೋಗಿ ಬರುವೆನು

ನನ್ನ ಜೀವನ ಕಲ್ಪತರುವೆ,
ನನ್ನ ತೃಷ್ಣೆಯ ಅಮೃತಸರವೆ,
ಹೋಗಿ ಬರುವೆ; ಬೇಗ ಬರುವೆ;
ಬೆಚ್ಚ ಮುತ್ತನಂತೆ ತರುವೆ!

ಕಣ್ಣ ತಾವರೆ ತೊಯ್ಯದಿರಲಿ ;
ಮುಡಿಯ ಮಲ್ಲಿಗೆ ಸೊರಗದಿರಲಿ ;
ತುಟಿಯ ಚೆಂಜೇನಾರದಿರಲಿ ;
ಬಂದೆ ಬರುವೆನು, ಏನೆಯಿರಲಿ!

ಮುಗಿಲನುಳಿಯುವ ಮಿಂಚು ಎಂತು
ಮರಳಿ ಸೇರ್ವುದು ಮುಗಿಲನಂತು
ಮತ್ತೆ ನಿನ್ನೆಡೆ ಬಂದು ನಿಂತು
ಮುತ್ತು ಕೊಡುವೆನು - ಇಂತು, ಇಂತು!

                         - ಕುವೆಂಪು
                                ' ಜೇನಾಗುವಾ '