ಅವನು ಎದುರಿಗಿದ್ದರೂ ಅದೇಕೋ ನಾನು ನಂಬದೆ ಹೋದೆ.
ಜೀವನವು ಇಷ್ಟು ಕರುಣಾಳು ಎಂಬುದನು ನಚ್ಚದೆ ಹೋದೆ.
ಯಾರ ನೋವುಗಳನರಿಯುವುದು ಯಾರಿಗೂ ಬೇಕಾಗಿಲ್ಲ
ಎಲ್ಲರೂ ನನ್ನವರಲ್ಲವೆನ್ನುವುದನು ತಿಳಿಯದೆ ಹೋದೆ.
ಜನ್ಮಜನ್ಮಾಂತರದಿಂದಲೂ ಈ ಹೃದಯ ಒಬ್ಬಂಟಿಯೆ
ಯಾರು ಹೇಳಿದರೂ ಮುನ್ನವೀ ಸತ್ಯವ ಅರಿಯದೆ ಹೋದೆ.
ಇಂದು ಮಳೆಬಿಲ್ಲುಗಳ ಜಾತ್ರೆಯೇ ನೆರೆದಿದೆ ಇಳೆಯ ತುಂಬ
ಆ ಸೊಬಗನುಟ್ಟು ಬರುವಿಯೆಂಬ ಕಲ್ಪನೆಯು ಇರದೆ ಹೋದೆ.
ವಿಶ್ವಾಸವೆಂಬುದು ಬರಿ ಒಂದು ಸುಂದರ ಶಬ್ದ ಮಾತ್ರವು
ಆಣೆ ಭಾಷೆಯ ತಪ್ಪದವರನು ಎಲ್ಲೂ ಕಾಣದೆ ಹೋದೆ.
ಇಂಥ ಮಿಲನದಿರುಳು ವ್ಯರ್ಥ ಗತಿಸಿ ಹೋಗಿಹವು
ಈ ದಿನವೂ ಸಹ ಯಾಕೋ ಅವನ್ನೆಲ್ಲ ಮರೆಯದೆ ಹೋದೆ.
ನಿನ್ನ ದರ್ಶನದಿಂದ ಕತ್ತಲೆಯಲ್ಲೂ ಮನೆಯು ಬೆಳಗಿತು.
ನೋಡುತ್ತಲೇ ನಿಂತೆ ಒಳಗೆ ಬಾ ಎಂದು ಕರೆಯದೆ ಹೋದೆ.
- ಎಚ್ ಎಸ್. ಮುಕ್ತಾಯಕ್ಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ