ಶನಿವಾರ, ನವೆಂಬರ್ 6, 2010

ನಾ ನಿನ್ನ ಕಂಡಾಗ

ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ;
ಎಷ್ಟೊಂದು ಗೆಲವಿತ್ತು, ಅಷ್ಟೊಂದು ನಗುವಿತ್ತು.

ಹಗಲೆಲ್ಲ ನಿನ್ನ ಧ್ಯಾನ, ಇರುಳೆಲ್ಲ ನಿನ್ನ ಸ್ವಪ್ನ -
ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ.

ನೀ ಸುಳಿದರೆನ್ನ ಬಳಿಗೆ, ನೆರೆ ಬಂದ ಹಾಗೆ ಹೊಳೆಗೆ -
ಹೊಸ ಕಸುವಿನಿಂದ ನಲ್ಲೆ, ನಲವುಕ್ಕಿ ಹಾಡಬಲ್ಲೆ.

ಹಾಲ್ಗೆನ್ನೆ ಸುಳಿಗಳಲ್ಲಿ ನಸುಲಜ್ಜೆಯೆಂಬ ತೇರು ;
ಕಣ್ಣಂತು ಸಾಣೆ ಹಿಡಿದ ಸೆಳೆಮಿಂಚಿನೆರಡು ಚೂರು.

ನನ್ನೆದೆಯ ತೋಟದಲ್ಲಿ ಆಡಾಡು ಓ! ನವಿಲೇ -
ಇಹುದಲ್ಲಿ ಹಚ್ಚ ಹಸಿರು, ಇಳಿದಿಹುದು ಕಾರ್ಮುಗಿಲೇ.

ಹತ್ತಾರು ಚಿಂತೆಯಿರಲಿ, ಬಾಳೆಲ್ಲ ಗೋಳೆ ಇರಲಿ -
ನೀ ನಕ್ಕರೆಲ್ಲ ಮರೆವೆ ಸುಖಸ್ವಪ್ನದಲ್ಲಿ ತೇಲಿ.

ನೆನೆದಾಗ ನಿನ್ನ ರೂಪ, ಎದೆಗತ್ತಲಲ್ಲಿ ದೀಪ -
ಮನಬಿಚ್ಚಿ ಒಮ್ಮೆ ನಗಲು, ನನಗಾವ ಚಿಂತೆ ದಿಗಿಲು?

ಆ ಮೊದಲ ನೋಟದಂತೆ ಮಿಕ್ಕಿರಲಿ ನಿನ್ನ ಸೊಬಗು ;
ಅನುಗಾಲ ನನ್ನ ಮನಕೆ ನೀಡಿರಲಿ ತುಂಬು ಬೆರಗು.

                                                                 -ಕೆ.ಎಸ್. ನಿಸಾರ್ ಅಹಮದ್
                                                                  ' ನಿತ್ಯೋತ್ಸವ '

ಈ ಭಾವಗೀತೆಯನ್ನು ಆಲಿಸಲು:
 http://www.kannadaaudio.com/Songs/Bhaavageethe/home/Nityotsava.php

ಕಾಮೆಂಟ್‌ಗಳಿಲ್ಲ: