ಶುಕ್ರವಾರ, ನವೆಂಬರ್ 26, 2010

ಗಜಲ್

ಅರ್ಧರಾತ್ರಿಯಲ್ಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು
ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು.

ಪ್ರೇಮವೆಂಬುದು ಎಂಥಾ ಮರುಳಾಟವೆಂದು ಭಾರವಾಯಿತು ಮನಸ್ಸು
ಬಿರುಗಾಳಿಯಲ್ಲಿ ದೀಪ ಉರಿಸಿದ್ದೇಕೆಂದು ಕಣ್ಣೆವೆಯು ಕೇಳಿತು

ನನ್ನೆರೆಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ
ಕೊನೆಗಳಿಗೆಯಲ್ಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು.

ಇರುಳ ತಂಪಿನಲಿ ನೆನಪಾಯಿತು ಬಿಸಿಯಪುಗೆಯ ಒಡನಾಟ ತಪ್ಪಿದ್ದು
ಇನ್ನೊಂದು ಬಟ್ಟಲನು ತುಂಬುವರಾರೆಂದು ಮಧುಪಾತ್ರೆಯು ಕೇಳಿತು.

ಯಾವುದೋ ನೋವೊಂದು ನಯನ ಹೂಗಳಲ್ಲಿ ಇಬ್ಬನಿಯ ಸುರಿಸುತಿಹುದು
ಕೊನೆಯಿಲ್ಲವೆ 'ಮುಕ್ತಾ' ಇದಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು.

                                                                - ಎಚ್.ಎಸ್. ಮುಕ್ತಾಯಕ್ಕ


4 ಕಾಮೆಂಟ್‌ಗಳು:

nagraj.harapanahalli ಹೇಳಿದರು...

ಈ ಗಜಲ್ ತುಂಬಾ ಇಷ್ಟವಾಯಿತು.
ನನ್ನೆರೆಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ
ಕೊನೆಗಳಿಗೆಯಲ್ಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು.
ಈ ಸಾಲುಗಳಂತೂ ಮರೆಯಲಾಗದು. ಮುಕ್ತಾಯಕ್ಕ ಕನ್ನಡ ಗಜಲ್ ಸಾಹಿತ್ಯದಲ್ಲಿ ಗಟ್ಟಿ ಹೆಜ್ಜೆ.

nagraj.harapanahalli ಹೇಳಿದರು...

ತುಂಬಾ ಇಷ್ಟವಾದ ಗಜಲ್ ಇದು.

Naniwritings ಹೇಳಿದರು...

ಆಪ್ತವಾದ ಗಜಲ್

Unknown ಹೇಳಿದರು...

ಸೂಪರ್ ಸರ್