ಮತ್ತದೇ ಬೇಸರ...
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ -
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ.
ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು ,
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ -
ಚಿನ್ನ, ನೀನಿಲ್ಲದೆ ಬಿಮ್ಮೆನುತಿದೆ ರಮ್ಯೋದ್ಯಾನ.
ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ :
ಬರುವೆಯೋ, ಬಾರೆಯೋ ನೀನೆನುತಿದೆ ಹಾ! ಸಂದೇಹ.
ಮುತ್ತಿದಾಲಸ್ಯವ, ಬಿಗಿಮೌನವ ಹೊಡೆದೋಡಿಸು ಬಾ!
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ!
ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ.
ನೋಡಗೊ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ.
ವೆಚ್ಚವಾಗುತ್ತಿದೆ ಸವಿಚಣಗಳ ಧನ ದುಂದಾಗಿ :
ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ.
- ಕೆ.ಎಸ್.ನಿಸಾರ್ ಅಹಮದ್
' ನಿತ್ಯೋತ್ಸವ '
ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kurigalu-Sir-KS-Nisar-Ahmad.php
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ