ಗುರುವಾರ, ನವೆಂಬರ್ 11, 2010

'ಬಾಳ್ವುದು!'

ಬಾಳ ಬೇವು ಬೆಲ್ಲವಹುದೇ
ನಾವು ಮುನಿದ ಮಾತ್ರದಿ?
ಅಳೆಯಲಹುದೆ, ತೂಗಲಹುದೆ,
ಕಟ್ಟಲಹುದೆ ಬಹುಜೀವರ
ಜಗಜ್ಜೀವ ನಾಟಕವನ್ನು
ನಮ್ಮ ಸುಖದ ಸೂತ್ರದಿ!

ಔಷಧಿಯಹುದೆ ರುಜೆಗೆ ರುಜೆ?
ಮುನಿಸು ಮದ್ದೆ ನೋವಿಗೆ?
ಎಲ್ಲದಕೂ ಇಹುದು ಎಲ್ಲೆ ;
ಕವಿಯ ನುಡಿಯ ಕೇಳು, ನಲ್ಲೆ :
ಒಲುಮೆಯೊಂದೆ ಮಂತ್ರ, ಬಲ್ಲೆ,
ನೋವಿನ ಹೆಡೆಹಾವಿಗೆ!

ದುಃಖ ಸುಖದ ದಡದ ನಡುವೆ
ಹೊಳೆಹರಿವುದು ಬಾಳಿದು.
ಕುಳಿತು ಚೆಲುವಿನೋಡದಲ್ಲಿ,
ಒಲುಮೆ ಪಟವ ಬಿಚ್ಚಿ, ತಳ್ಳಿ,
ಕಳೆಯ ತೆಂಕಣೆಲರಿನಲ್ಲಿ
ಮುಂಬರಿವುದೆ  - 'ಬಾಳ್ವುದು!'

                          - ಕುವೆಂಪು
                              ' ಜೇನಾಗುವಾ '

ಕಾಮೆಂಟ್‌ಗಳಿಲ್ಲ: