ಶುಕ್ರವಾರ, ನವೆಂಬರ್ 26, 2010


ನಮ್ಮ ಮುತ್ತಿನ ಹನಿಗಳು


ಎಂದು ನಾ ನಿನ್ನನು ಪಡಕೊಂಡೆನೋ
ಅಂದೇ ನಾ ನನ್ನ ಕಳಕೊಂಡೆನು
ಎಲ್ಲಿರುವೆ ನಾನೆಂದು ಹುಡುಕಿದಾಗ
ನಿನ್ನೊಳಗೆ ಬೆರೆತಿದ್ದ ನಾ ಕಂಡೆನು.

ಕತ್ತಲೆಯ ಆಳದಲ್ಲಿ ನಾ
ಕರಗಿ ಒಂದಾಗುತ್ತ
ನೂರಾರು ಕನಸುಗಳ
ಹೆಣೆ ಹೆಣೆಯುತ್ತಿರುವಂತೆ
ಅವು ಚೆಲ್ಲಾಪಿಲ್ಲಿ ಹರಡಿ
ನೋಡ ನೋಡುತ್ತಿದ್ದಂತೆ
ಪತಂಗಗಳಾಗಿ
ನನ್ನೆದುರೆ ಒಂದೊಂದಾಗಿ
ಸುಟ್ಟು ಬೀಳುವುವು.

ನಕ್ಷತ್ರಗಳಂತೆ
ಇಡೀ ರಾತ್ರಿ
ನಿದ್ದೆಗೆಟ್ಟು ಮಿನುಗುವ
ನನ್ನ ನಿನ್ನ ಕಣ್ಣುಗಳು
ಬೆಳಗು ಹರಿಯುತ್ತಿದ್ದಂತೆ
ರೆಪ್ಪೆ ಮುಚ್ಚುವುವು.

ನನ್ನ ಕಂಗಳು
ಕೆಂಡವಾಗಿ
ನಿನ್ನ ಸುಡುತ್ತಿರುವಾಗ
ಸುಡುವ ಬೆಂಕಿಯಲಿ
ನನಗೆ ಬೇಯುವ ಆಸೆ.

ಯುಗ ಯುಗಳಿಂದ
ಏಕಾಂಗಿಯಾಗಿ
ಬದುಕುತ್ತಿರುವ ಚಂದ್ರನ ಕಂಡು
ನನಗೆ
ಮರುಕ ಹುಟ್ಟುವುದು.

                                         - ಎಚ್.ಎಸ್. ಮುಕ್ತಾಯಕ್ಕ

ಕಾಮೆಂಟ್‌ಗಳಿಲ್ಲ: