ಮಂಗಳವಾರ, ನವೆಂಬರ್ 30, 2010

ಗೆಳೆತನ


ಕೊನೆಗಾಣದೆ ಬಿಗಿಮಾಣದೆ ತಳುವಬೇಕು - ಗೆಳೆತನ.
ತಳುವಬೇಕು - ನನಗೆ ನಿನಗೆ ಬರುವ ತನಕ ಕೊನೆದಿನ.
ತಳಿರ ತಳಿರ ತಳ್ಕೆಯಂತೆ ಮೃದುಲ ಮಧುರ ಜೀವನ.
ಮಲರ ಮಲರ ಮಾಳ್ಕೆಯಂತೆ ಮನದ ಮನದ ಮಿದುತನ.

ಒಂದೆ ಗಾನತಾನ ನನ್ನ ನಿನ್ನ ಹೃದಯ ಮಿಲನಕೆ.
ಒಂದೆ ಅಚ್ಚುಮೆಚ್ಚು ನಮ್ಮ ಭಾವ ಜೀವ ವಲನಕೆ.
ಒಂದೆ ಅಂಕೆಸಂಖ್ಯೆ ನಮ್ಮ ಸೌಖ್ಯದ ಸಂಕಲನಕೆ.
ಒಂದೆ ಗಮ್ಯಗತಿಯು ನಮ್ಮ ಜೀವನ ಸಂಚಲನಕೆ.

ಗುಡುಗು ಮಿಂಚಿನಂತೆ ಒಂದುಗೂಡಿ ಮೊಳಗಿ ಬೆಳಗುವಾ!
ಕಡಲುತಡಿಗಳಂತೆ ಒಂದನೊಂದು ತಡೆದು ತಡೆಹುವಾ
ಗಾಳಿ ಕಿಚ್ಚಿನಂತೆ ಕೂಡಿಯಾಡಿ ತಿರೆಯ ಬೆಳಗುವಾ!
ಬಾನುಬುವಿಗಳಂತೆ ಒಂದಕೊಂದು ಸೀಮೆ ಎನಿಸುವ!

ಮುಗಿಲ ಯುಗಲದಂತೆ ಬಂದು ಸೇರಿ ಸಾರಿ ಅಗಲದೆ,
ಹಗಲ ಮೊಗದ, ರಾಗದಂತೆ ಸಂಜೆಯೊಡನೆ ಜಗುಳದೆ
ಗಾಳಿಗೈಯ ತರಗಲಂತೆ ಕಲೆತು ತಿರುಗಿ ಕದಲದೆ
ಬಾಳಬೇಕು, ಬೆಳೆಯಬೇಕು ಸಖ್ಯ ಕ್ಷಣಿಕವೆನಿಸದೆ.

ನಿನ್ನೊಳೊಂದೆ ಭಿಕ್ಷೆ ಗೆಳತಿ, ಅದುವೆ ಹೃದಯದಾನವು!
ಜನ್ಮಮೃತ್ಯುಗಳಲು ನಗುವ ಪ್ರೇಮದಮೃತ ಪಾನವು.
ದುಃಖ ಸುಖಗಳನ್ನು ಮಿಗುವ ತ್ಯಾಗದ ಮರಗಾನವು
ಹೊಂದುವಳಿಕೆ ತವದ ಸೌಖ್ಯಯೋಗದ ಭ್ರಯಾನವು.

ನನ್ನ ನಿನ್ನ ಜೀವ, ಗೆಳತಿ, ಒಂದಕೊಂದು ಪೂರಕ,
ನನ್ನ ನಿನ್ನ ಭಾವ ಒಂದಕೊಂದು ಕಾಂತಿದಾಯಕ.
ಒಂದು ಹೃದಯ ಧನುವು, ಮೆಣದೊಂದು ನಿಶಿತ ಸಾಯಕ
ಒಂದು ಗಂಗೆ, ಒಂದು ಯಮುನೆ - ಏಕ ಮಾರ್ಗವಾಹಕ.

ಹೀಗೆ ಬಾಳ್ವೆನೆಂಬೆ ಬಯಕೆಯೊಂದದೇಕೆ ಹಿರಿದಿದೆ?
ಯೋಗವಿದು ನಿರರ್ಥ, ನಿನ್ನ ಹೃದಯ ಯೋಗ ಬರದಿರೆ.
ಬರಿಯ ಕೆಂಡ ಗಳಿಗೆಯೊಳಗೆ ನಂದಿ ಕಾಂತಿಯುಳಿಯದೆ?
ನೆರವು ಬರಲು ಗಾಳಿಯಿಂದ ಅದರ ಬಾಳು ಬೆಳಗದೆ?

                                                            - ಎಂ. ಗೋಪಾಲಕೃಷ್ಣ ಅಡಿಗ
                                                              ' ಕಟ್ಟುವೆವು ನಾವು '

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಇದು ಯಾವ ಕವನ ಸಂಕಲನದ್ದು. ಬಹುಶಃ ಅಡಿಗರು ಪಾ್ರರಂಭದಲ್ಲಿ(ನವ್ಯ ಪೂರ್ವ) ಬರೆದ ಕವಿತೆಯ ತರಹ ಕಾಣುತ್ತದೆ.
--
ರವಿಪ್ರಕಾಶ

ಕನಸು.. ಹೇಳಿದರು...

ಕ್ಷಮಿಸಿ ಸಂಕಲನದ ಹೆಸರು ಗೊತ್ತಿಲ್ಲ. ಹುಡುಕಲು ಪ್ರಯತ್ನಿಸ್ತೀನಿ..

ಕನಸು.. ಹೇಳಿದರು...

ಈ ಕವನ ಅಡಿಗರ 'ಕಟ್ಟುವೆವು ನಾವು' ಕವನ ಸಂಕಲನದಲ್ಲಿದೆ.

nagendra ಹೇಳಿದರು...

ಕಿವಿಯಿ೦ದ ಕಳೆದುಹೋದ ಕವಿತೆಗಳು ಸಿಕ್ಕಿದುವು….